ಜಮೀನಿಗಾಗಿ ಬುಡುಕಟ್ಟು ಜನಾಂಗದವರ ಹೋರಾಟ: ಅರಣ್ಯ ಪ್ರದೇಶದಲ್ಲಿಯೇ ಅಹೋರಾತ್ರಿ ಪ್ರತಿಭಟನೆ

ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಸಮುದಾಯದ ಕುಟುಂಬಗಳು ಹೋರಾಟ ಮಾಡುತ್ತಿದ್ದಾರೆ.

  • ಪ್ರಶಾಂತ್ ಹುಲಿಕೆರೆ
  • Published On - 16:24 PM, 20 Apr 2021
ಜಮೀನಿಗಾಗಿ ಬುಡುಕಟ್ಟು ಜನಾಂಗದವರ ಹೋರಾಟ: ಅರಣ್ಯ ಪ್ರದೇಶದಲ್ಲಿಯೇ ಅಹೋರಾತ್ರಿ ಪ್ರತಿಭಟನೆ
ಜಮೀನಿಗಾಗಿ ಬುಡುಕಟ್ಟು ಜನಾಂಗದವರ ಹೋರಾಟ

ರಾಮನಗರ: ನೂರಾರು ವರ್ಷಗಳಿಂದ ಒಂದೇ ಜಾಗದಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಜನಾಂಗದವರು ಇದೀಗ ಜಮೀನು ಪತ್ರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ವರ್ಷಾನುಗಟ್ಟಲೆಯಿಂದ ವಾಸ ಮಾಡಿಕೊಂಡಿರುವ ಬುಡಕಟ್ಟು ಜನರಿಗೆ ಜಮೀನಿನ ಹಕ್ಕು ಪತ್ರಗಳೇ ಸಿಕ್ಕಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರ ಬಳಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ನಮಗೆ ಜಮೀನು ನೀಡಿ ಎಂದು ಅರಣ್ಯ ಪ್ರದೇಶದಲ್ಲಿಯೇ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.

ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಸಮುದಾಯದ ಕುಟುಂಬಗಳು ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿ ರಾಜಕಾರಣಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಭೂಮಿಯನ್ನ ಬಿಟ್ಟುಕೊಡುವ ಭರವಸೆಯನ್ನು ಕೊಟ್ಟಿದ್ದಾರೆ. ಆದರೆ ಇದು ಭರವಸೆಯಾಗಿಯೇ ಉಳಿದುಬಿಟ್ಟಿದೆ. ಈ ನಿಟ್ಟಿನಲ್ಲಿ ತಮ್ಮ ಅರಣ್ಯ ಭೂಮಿಯಲ್ಲೇ ಕಳೆದ 52 ದಿನಗಳಿಂದ ಅಡುಗೆ ಮಾಡಿ ನ್ಯಾಯಕ್ಕಾಗಿ ದಿನ ದೂಡುತ್ತಿದ್ದಾರೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಬೇರೆ ಕಡೆ ಭೂಮಿ ಕೊಟ್ಟು ಸ್ಥಳಾಂತರಿಸಬೇಕೆಂಬ ಆದೇಶವಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಅರಣ್ಯ ಇಲಾಖೆ, ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬಿಸಲಾಗಿತ್ತು. ಇನ್ನು ಅರಣ್ಯ ಹಕ್ಕು ಕಾಯ್ದೆ 2006 ಜಾರಿಗೆ ಬಂದಿದೆ. ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್‌ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿರುವ ಜಾಗದಲ್ಲಿಯೇ, ಅರಣ್ಯ ಭೂಮಿ ಒಳಗೊಂಡಂತೆ ಅಲ್ಲಿಯೇ, ಪುನರ್ವಸತಿ ಕಲ್ಪಿಸಲು ಅವಕಾಶವಿದ್ದರೂ, ಬುಡಕಟ್ಟು ಸಮುದಾಯಕ್ಕೆ ಸ್ಪಂದಿಸುತ್ತಿಲ್ಲ ಎಂದು ಇರುಳಿಗ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದ್ದಾರೆ.

2019ರಲ್ಲಿ ಸರ್ವೋಚ್ಛ ನ್ಯಾಯಾಲಯವೂ ಬುಡಕಟ್ಟು ಜನಾಂಗಕ್ಕೆ ಕಾಯ್ದೆಯನ್ವಯ ಹಕ್ಕು ಪತ್ರ ಕೊಡುವಂತೆ ಸೂಚಿಸಿದೆ. ಅದಕ್ಕೂ ಅಧಿಕಾರಿಗಳು ಮನಣೆ ನೀಡುತ್ತಿಲ್ಲ. ಹೀಗಾಗಿ ಜಮೀನು ನೀಡುವಂತೆ ಹೋರಾಟ ನಡೆಸುತ್ತಿದ್ದೇವೆ ಎಂದು ಇರುಳಿಗ ಕ್ಷೇಮಾಭಿವೃದ್ದಿ ಸಂಘದ ಗೌರವಧ್ಯಕ್ಷ ಮಹದೇವಯ್ಯ ಹೇಳಿದ್ದಾರೆ.

ಒಟ್ಟಾರೆಯಾಗಿ, ಹಲವು ದಿನಗಳಿಂದಲೂ ಹಕ್ಕು ಪತ್ರಕ್ಕಾಗಿ ಇರುಳಿಗರು ಹೋರಾಟ ನಡೆಯುತ್ತಲೇ ಇದ್ದಾರೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇರುಳಿಗರ ಬೇಡಿಕೆಯನ್ನ ಈಡೇರಿಸಬೇಕಿದೆ.

ಇದನ್ನೂ ಓದಿ:

ವಿಜ್ಞಾನಿಗಳ ಕೈಯಲ್ಲಿ ಆಗದ್ದನ್ನ ಸಾಧಿಸಿ ತೋರಿಸಿದ ಚಾಮರಾಜನಗರ ಬುಡಕಟ್ಟು ಜನರು

ರೈತರ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ: ಜೆ.ಪಿ. ನಡ್ಡಾ