ದೆಹಲಿಯ ಕರ್ನಾಟಕ ಭವನದ ಆಯುಕ್ತೆ ವಿರುದ್ಧ ಕೇಳಿಬಂತು ಗಂಭೀರ ಆರೋಪ: ಮುಖ್ಯಕಾರ್ಯದರ್ಶಿಗೆ ದೂರು
ಇಬ್ಬರು ಐಎಎಸ್ ಅಧಿಕಾರಿಗಳ ವಿರುದ್ಧ ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಮುಖ್ಯವಾಗಿ ದೆಹಲಿಯ ಕರ್ನಾಟಕ ಭವನದ ಆಯುಕ್ತೆ ಆಕೃತಿ ಬನ್ಸಾಲ್ ವಿರುದ್ಧ ಆರೋಪ ಕೇಳಿಬಂದಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಶ್ರೀನಿವಾಸ್ ಎಲ್ ಎಂಬುವವರು ದೂರು ನೀಡಿದ್ದಾರೆ.

ದೆಹಲಿ, ಆಗಸ್ಟ್ 28: ಐಎಎಸ್ ಅಧಿಕಾರಿಗಳಾದ ಎಂ. ಇಂಕೋಗ್ಲ ಜಮೀರ್ ಹಾಗೂ ಆಕೃತಿ ಬನ್ಸಾಲ್ (Akriti Bansal) ಅವರ ವಿರುದ್ಧ ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಅವರಿಗೆ ಶ್ರೀನಿವಾಸ. ಎಲ್ ಎಂಬುವವರು ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಾದ ಶ್ರೀಯುತ ಸಿ.ಮೋಹನ್ ಕುಮಾರ್, ಎಆರ್‌ಸಿ ಹಾಗೂ ನನ್ನ ಸ್ನೇಹಿತ ಹೆಚ್. ಆಂಜನೇಯ, ಡಿಎಲ್‌ಓ ರವರುಗಳು ಭವನದ ಇತರೆ ಸದಸ್ಯರು ವಾಟ್‌ಸಪ್ ಗ್ರೂಪ್‌ನಲ್ಲಿ ಬೈದಾಡಿಕೊಂಡಿರುವ ಬಗ್ಗೆ ವಿಚಾರಿಸಲು ಹೋಗಿ, ತಾವುಗಳೇ ಹೊಡೆದಾಡಿಕೊಂಡಿರುವ ಸಂದರ್ಭ ಸೃಷ್ಟಿಯಾಗಿದೆ.
ಇದನ್ನೂ ಓದಿ: ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಎಂಎಲ್ಸಿ ಎನ್ ರವಿಕುಮಾರ್ಗೆ ಮಧ್ಯಂತರ ರಿಲೀಫ್
ಇಂತಹ ಘಟನೆಗಳು ಭವನದಲ್ಲಿ ಇತ್ತೀಚೆಗೆ ಸರ್ವೆಸಾಮಾನ್ಯವಾಗಿದೆ. ಇದಕ್ಕೆ ಮೂಲ ಕಾರಣ ಭವನದಲ್ಲಿ ಅವರ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಇರುವ ಇಬ್ಬರು ಐಎಎಸ್ ಅಧಿಕಾರಿಗಳಾದ ಶ್ರೀಮತಿ. ಎಂ. ಇಂಕೋಂಗ್ಲ ಜಮೀರ್ ಹಾಗೂ ಶ್ರೀಮತಿ ಆಕೃತಿ ಬನ್ಸಾಲ್. ಈ ಇಬ್ಬರು ಮಹಿಳಾ ಅಧಿಕಾರಿಗಳು ಮೂಲತಃ ಕನ್ನಡದವರಲ್ಲ. ಕನ್ನಡದ ಸಂಸ್ಕೃತಿ ಗೊತ್ತಿಲ್ಲ. ಕನ್ನಡದ ಸುಗಂಧ ಗೊತ್ತಿಲ್ಲ, ಕನ್ನಡ ಭಾಷೆಯ ಬಗ್ಗೆ ಗೌರವವಿಲ್ಲ. ಕನ್ನಡವನ್ನು ಕಲಿಯಬೇಕೆಂಬ ಇಚ್ಛೆಯೂ ಇಲ್ಲ. ಕನ್ನಡದ ರಾಜಕಾರಣಿಗಳ ಬಗ್ಗೆ ಗೌರವವಿಲ್ಲ, ಕರ್ನಾಟಕ ಭವನದ ಸಿಬ್ಬಂದಿಗಳ ಬಗ್ಗೆ ಅಸಹನೆ.
ಆಕೃತಿ ಬನ್ಸಾಲ್ ವಿರುದ್ಧ ಮುಖ್ಯವಾಗಿ ಆರೋಪಗಳು ಕೇಳಿಬಂದಿವೆ. ಇವರು ಪ್ರಸ್ತುತ ಕರ್ನಾಟಕ ಭವನದ ಹೆಚ್ಚುವರಿ ನಿವಾಸಿ ಆಯುಕ್ತರಾಗಿ ಕಳೆದ 3 ವರ್ಷಗಳಿಗೂ ಹೆಚ್ಚು ದಿನಗಳಿಂದ ಸೇವೆಯಲ್ಲಿರುತ್ತಾರೆ. ಇವರು ಬಂದ ವರ್ಷದಲ್ಲಿಯೇ ತಾವು ಹಿಂದೆ ಎ.ಸಿ ಹುದ್ದೆಯಲ್ಲಿ ಶಿರಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಬರಬೇಕಾಗಿದ್ದ ಕೆಲವು ಗಳಿಕೆ ಹಣವನ್ನು ಕರ್ನಾಟಕ ಭವನದ ಅಕೌಂಟ್ಸ್ ಡಿಪಾರ್ಟ್‌ಮೆಂಟಿನಿಂದ ಸುಮಾರು ರೂ.6 ಲಕ್ಷ ರೂ. ಗಳನ್ನು ಪಡೆದಿರುತ್ತಾರೆ. ಇದಕ್ಕೆ ನನ್ನ ಸ್ನೇಹಿತ ಹೆಚ್. ಆಂಜನೇಯ ಸಾಕ್ಷಿ ಎಂದಿದ್ದಾರೆ.
ತದನಂತರ ಆಕೃತಿ ಬನ್ಸಾಲ್ ರವರು ಹೆರಿಗೆ ಭತ್ಯೆಗಾಗಿ ಸುಮಾರು ರೂ.27 ಲಕ್ಷ ರೂ ಗಳಷ್ಟು ಕರ್ನಾಟಕ ಭವನದ ಅಕೌಂಟ್ಸ್. ಡಿಪಾರ್ಟ್ ಮೆಂಟ್‌ನಿಂದ ಈ ಮೇಲಿನ ಮೊತ್ತವನ್ನು ಪಡೆದಿರುತ್ತಾರೆ. ಸದರಿಯವರ ದಾಖಲಾದ ಹೆರಿಗೆ ಆಸ್ಪತ್ರೆ ಕರ್ನಾಟಕ ಭವನದ ಪ್ಯಾನಲ್‌ನಲ್ಲಿರುವುದಿಲ್ಲ. ಆದರೂ ಇವರು ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಇವರಿಗೆ 27 ಲಕ್ಷ. ರೂ ಗಳನ್ನು ಒಂದು ತಿಂಗಳಲ್ಲಿಯೇ ಬಿಡುಗಡೆ ಮಾಡಲಾಗಿದೆ. ದೊರೆಸ್ವಾಮಿ ಎಂಬ ಗ್ರೇಡ್-1 ಕುಕ್ ಸತತ ಮೂರು ವರ್ಷಗಳಿಂದ ತನಗಾದ ಕಿಡ್ನಿ ಶಸ್ತ್ರ ಚಿಕಿತ್ಸೆಗಾಗಿ ಸುಮಾರು 17 ಲಕ್ಷ ರೂ. ಗಳನ್ನು ಪ್ಯಾನಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಪಾವತಿಸಿರುತ್ತಾರೆ. ಆದರೆ ಇಲ್ಲಿಯತನಕ ಇವರಿಗೆ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ
ಆಕೃತಿ ಬನ್ಸಾಲ್ ಅವರಿಗೆ ಕರ್ನಾಟಕ ಭವನದ ಸಮೀಪವೇ ಸರ್ಕಾರಿ ನಿವಾಸ ನೀಡಲಾಗಿದೆ. ಸರ್ಕಾರಿ ಮನೆ ಸಂಬಂಧಿಕರಿಗೆ ನೀಡಿ, ದೂರದ ತಂದೆ-ತಾಯಿ ಮನೆಗೆ ಪ್ರಯಾಣಿಸಲು ನಿತ್ಯ ಕರ್ನಾಟಕ ಭವನದ ಸರ್ಕಾರಿ ವಾಹನ ಬಳಕೆಯಾಗುತ್ತಿದೆ. ಇವರನ್ನು ಕರೆತರಲು ಹಾಗೂ ಹೋಗಿ ಬಿಟ್ಟು ಬರಲು ಸುಮಾರು 150 ರಿಂದ 160 ಕಿ.ಮೀಗಳು ವ್ಯಯವಾಗುತ್ತಿದ್ದು, ಇದರಿಂದ ತಿಂಗಳಿಗೆ ಹೆಚ್ಚು ಕಡಿಮೆ 35 ಸಾವಿರ ರೂ. ದಿಂದ 40 ಸಾವಿರ ರೂ ರೂ. ಪೆಟ್ರೋಲ್ ಅಥವಾ ಡೀಸೆಲ್ ಖರ್ಚಾಗುತ್ತಿದೆ. ಇದನ್ನು ಪ್ರಶ್ನೆ ಮಾಡಬೇಕಿದ್ದ ನಿವಾಸಿ ಆಯುಕ್ತೆ ಇಂಕೋಂಗ್ಲ ಜಮೀರ್ ಮೌನವಾಗಿದ್ದಾರೆ. ಇಂಕೋಂಗ್ಲ ಜಮೀರ್ ತಿಂಗಳಿಗೊಮ್ಮೆ ಕರ್ನಾಟಕ ಭವನದಲ್ಲಿ ಐಎಎಸ್‌ಗಳ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಶಾಲಿನಿ ರಜನೀಶ್ಗೆ ಶ್ರೀನಿವಾಸ. ಎಲ್ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



