ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪವರೆಗೂ ವಿಸ್ತರಣೆ: ಯಾವಾಗಿನಿಂದ? ಇಲ್ಲಿದೆ ಡಿಟೇಲ್ಸ್
ಶಿವಮೊಗ್ಗ ಭಾಗದ ಪ್ರಯಾಣಿಕರಿಗೆ ನೈರುತ್ಯ ರೈಲ್ವೇ ಇಲಾಖೆಯು ದಸರಾ ಹಾಗೂ ದೀಪಾವಳಿ ಹಬ್ಬದ ಸಿಹಿ ಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಯಶವಂತಪುರ- ಶಿವಮೊಗ್ಗ ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೂ ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ, ಯಾವ ರೈಲು? ಎಷ್ಟು ದಿನ? ಎನ್ನುವ ಮಾಹಿತಿ ಇಲ್ಲಿದೆ.

ಶಿವಮೊಗ್ಗ/ಬೆಂಗಳೂರು, (ಅಕ್ಟೋಬರ್ 16): ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆಯು ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಸಂಚರಿಸುವ ರೈಲನ್ನು ತಾಳಗುಪ್ಪವರೆಗೆ ವಿಸ್ತರಣೆ ಮಾಡಿದೆ. ಈ ತಾತ್ಕಾಲಿಕ ವಿಸ್ತರಣಾ ಸೇವೆಯು ಅಕ್ಟೋಬರ್ 18ರಿಂದ ನವೆಂಬರ್ 12ರ ಜಾರಿಯಲ್ಲಿರಲಿದೆ. ಇದರೊಂದಿಗೆ ಕೆಲವು ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸಾಗರ, ಆನಂದಪುರಂ ಹಾಗೂ ತಾಳಗುಪ್ಪ ಭಾಗದ ಜನರಿಗೆ ಅನುಕೂಲವಾಗಲಿದೆ. ಇನ್ನು ಇದಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಯಾವಾಗ ವಿಸ್ತರಣೆ?
ರಾಜಧಾನಿಯಿಂದ ಶಿವಮೊಗ್ಗಕ್ಕೆ ವಾರಕ್ಕೆ ಮೂರು ಬಾರಿ (Tri-Weekly) ಓಡುವ ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್ಪ್ರೆಸ್ ರೈಲುಗಳನ್ನು (16581/16582) ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲು ನಿರ್ಧರಿಸಲಾಗಿದೆ. ಪ್ರತಿಯೊಂದು ದಿಕ್ಕಿನಲ್ಲಿಯೂ ಒಟ್ಟು 11 ಟ್ರಿಪ್ಗಳ ಸೇವೆ ಲಭ್ಯ ಇವೆ. ರೈಲಿನ ಸಂಯೋಜನೆ (ಬೋಗಿಗಳ ಸಂಖ್ಯೆ ಮತ್ತು ವಿಧ) ಹಾಗೂ ಸಂಚರಿಸುವ ದಿನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಇನ್ನು ಅಕ್ಟೋಬರ್ 18, 20, 22, 25, 27, 29 ಹಾಗೂ ನವೆಂಬರ್ 3, 5, 8, 10, 12ರಂದು ಸೇವೆ ಲಭ್ಯ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವ 2026: ಬೆಂಗಳೂರು, ಅರಸೀಕೆರೆಯಿಂದ ಹಾಸನಕ್ಕೆ ವಿಶೇಷ ರೈಲು ಸೇವೆ! ವೇಳಾಪಟ್ಟಿ ಇಲ್ಲಿದೆ
ವೇಳಾಪಟ್ಟಿ
- ಯಶವಂತಪುರ-ಶಿವಮೊಗ್ಗ ಟೌನ್ ರೈಲು (16581) ಯಶವಂತಪುರದಿಂದ ರಾತ್ರಿ 00:15 ಗಂಟೆಗೆ ಹೊರಡುತ್ತದೆ. ಅದೇ ದಿನ ಬೆಳಗ್ಗೆ 09 ಗಂಟೆಗೆ ತಾಳಗುಪ್ಪ ನಿಲ್ದಾಣವನ್ನು ತಲುಪುತ್ತದೆ.
- ಶಿವಮೊಗ್ಗ ಟೌನ್-ಯಶವಂತಪುರ ರೈಲು (16582) ತಾಳಗುಪ್ಪದಿಂದ ರಾತ್ರಿ 10 ಗಂಟೆಗೆ ಹೊರಟು, ಮಾರನೇ ದಿನ ಯಶವಂತಪುರವನ್ನು ತಲುಪುತ್ತದೆ.
ಇನ್ನು ಪ್ರಾದೇಶಿಕ ರೈಲ್ವೆ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಮೈಸೂರು-ತಳಗುಪ್ಪ-ಮೈಸೂರು ಎಕ್ಸ್ಪ್ರೆಸ್ (16227/16228) ಹಾಗೂ ತಳಗುಪ್ಪ-ಶಿವಮೊಗ್ಗ ಟೌನ್-ತಳಗುಪ್ಪ (56217/56218) ರೈಲುಗಳಲ್ಲಿನ ಸಾಂಪ್ರದಾಯಿಕ ಐಸಿಎಫ್ (ICF) ಬೋಗಿಗಳನ್ನು ಬದಲಾಯಿಸಿ, ಅವುಗಳ ಜಾಗದಲ್ಲಿ ಅತ್ಯಾಧುನಿಕ ಮತ್ತು ಅತ್ಯಂತ ಸುರಕ್ಷಿತವಾದ ‘ಲಿಂಕೆ ಹಾಫ್ಮನ್ ಬುಷ್’ (LHB) ಬೋಗಿಗಳನ್ನು ಅಳವಡಿಸುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.



