ಕುಮಾರಸ್ವಾಮಿಗೆ ಕೈಬಲಪಡಿಸಬೇಕಿದೆ: ಭದ್ರಾವತಿಯಲ್ಲಿ ಸಿಎಂ ಇಬ್ರಾಹಿಂ ಹೇಳಿಕೆ
ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಹೊಗಳಿರುವುದು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ.
ಶಿವಮೊಗ್ಗ: ಕರ್ನಾಟಕದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಬೇಕಿದೆ. ಇಂದಿನಿಂದ ಶುಭಕಾಲ ಆರಂಭವಾಗಿದೆ ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು. ಭದ್ರಾವತಿ ತಾಲ್ಲೂಕು ಗೋಣಿಬೀಡಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಉತ್ತಮ ಕಾಲ ಕಾಣುತ್ತೇವೆ ಎಂದು ಭವಿಷ್ಯ ನುಡಿದರು.
ಎಚ್.ಡಿ.ದೇವೇಗೌಡರು 11 ತಿಂಗಳು ಪ್ರಧಾನಿ ಆಗಿ ಒಳ್ಳೆಯ ಕೆಲಸ ಮಾಡಿದ್ದರು. ಅವರು ಅಪ್ಪಿತಪ್ಪಿ ಒಕ್ಕಲಿಗರ ಜಾತಿಯಲ್ಲಿ ಹುಟ್ಟಿದರು. ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಅವರ ಪ್ರತಿಮೆ ಅನಾವರಣವಾಗುತ್ತಿತ್ತು. ಹಳ್ಳಿಹಳ್ಳಿಗಳಲ್ಲಿ ಜನರು ಅವರ ಪ್ರತಿಮೆ ಇರಿಸುತ್ತಿದ್ದರು ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಹಾಡಿ ಹೊಗಳಿದರು. ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ. ಅಂತಹ ಕೆಲಸವನ್ನು ನಾವು ಮಾಡುತ್ತೇವೆ ಎಂದು ಘೋಷಿಸಿದರು.
ಕಾಂಗ್ರೆಸ್ ಬೆಂಬಲದೊಂದಿಗೆ ರಚಿಸಿದ್ದ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಈಚಿನ ದಿನಗಳಲ್ಲಿ ಎರಡೂ ಪಕ್ಷಗಳ ನಡುವೆ ಸಂಬಂಧ ಹಳಸಿದೆ. ಕಾಂಗ್ರೆಸ್ನ ಮುಂಚೂಣಿ ನಾಯಕರಾದ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ದೇವೇಗೌಡ ಮತ್ತು ಜೆಡಿಎಸ್ ವಿರುದ್ಧ ಕಠಿಣವಾಗಿ ಮಾತನಾಡಲು ಆರಂಭಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿಯೂ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವಣೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಹೊಗಳಿರುವುದು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ.
ಭದ್ರಾವತಿ ಕ್ಷೇತ್ರಕ್ಕೆ ಶಾರದಾ ಜೆಡಿಎಸ್ ಅಭ್ಯರ್ಥಿ ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಪ್ಪಾಜಿ ಗೌಡರ ಪತ್ನಿ ಶಾರದಾ ಅವರಿಗೆ ಅವಕಾಶ ನೀಡುವುದಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಅಪ್ಪಾಜಿ ಗೌಡರ ಪ್ರಥಮ ಪುಣ್ಯ ಸ್ಮರಣೆ ಪ್ರಯುಕ್ತ ಮಾಜಿ ಶಾಸಕರ ಪುತ್ಥಳಿಯನ್ನು ಕುಮಾರಸ್ವಾಮಿ ಅನಾವಣಗೊಳಿಸಿದರು. ಭದ್ರಾವತಿ ಕ್ಷೇತ್ರದ ಅಭ್ಯರ್ಥಿಯಾಗಿ ಮೃತ ಮಾಜಿ ಶಾಸಕರ ಪತ್ನಿ ಶಾರದಾ ಅವರ ಹೆಸರು ಘೋಷಿಸಿದರು. ಕಳೆದ ವರ್ಷ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿ ಗೌಡ ಕೊರೊನಾ ಸೋಂಕಿನಿಂತ ಮೃತಪಟ್ಟಿದ್ದರು. ಉಪಚುನಾವಣೆಗೆ ಜೆಡಿಎಸ್ ಇತರ ಪಕ್ಷಗಳಿಗಿಂತ ಮೊದಲು ಹೆಸರು ಘೋಷಿಸಿದೆ.
(We Have to Strengthen HD Kumaraswamy Hands Says CM Ibrahim in Bhadravati)
ಇದನ್ನೂ ಓದಿ: ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ಪಕ್ಷ ತೊರೆಯುವ ಮುನ್ಸೂಚನೆ ಹಿನ್ನೆಲೆ ಹೊಸ ಅಭ್ಯರ್ಥಿಯನ್ನು ಹುಟ್ಟುಹಾಕಿದ ಕುಮಾರಸ್ವಾಮಿ
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಆರ್ಎಸ್ಎಸ್ ಆರ್ಥಿಕವಾಗಿ ಸದೃಢವಾಗಿದೆ: ಕುಮಾರಸ್ವಾಮಿ ಆರೋಪ