Siddaramaiah: ಫಿರೋಜ್, ಸೋನಿಯಾ, ರಾಹುಲ್ ಗಾಂಧಿ ಹೆಸರಿನ ಮೂಲ ನಿಮಗೆ ಗೊತ್ತಿಲ್ಲವೇ?; ಸಿದ್ದರಾಮಯ್ಯನವರಿಗೆ ಬಿಜೆಪಿ ತಿರುಗೇಟು
ಆರ್‌ಎಸ್‌ಎಸ್‌ನವರು ಮೂಲ ಭಾರತೀಯರಾ? ಅವರು ದ್ರಾವಿಡರಾ ಅಥವಾ ಆರ್ಯನ್ನರಾ? ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯನವರಿಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕರ ಹೆಸರಿನ ಮೂಲವನ್ನು ಬಿಜೆಪಿ ಕೆದಕಿದೆ.

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆರ್‌ಎಸ್‌ಎಸ್‌ನವರು ಆರ್ಯರಾ? ಅಥವಾ ದ್ರಾವಿಡರಾ? ಎಂದು ಕೇಳುವ ಮೂಲಕ ಶುಕ್ರವಾರ ಆರ್‌ಎಸ್‌ಎಸ್ (RSS) ಮೂಲವನ್ನು ಕೆದಕಿದ್ದರು. ಈ ಮೂಲಕ ಅವರು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ( ಆರ್‌ಎಸ್‌ಎಸ್) ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಣಕಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಬುರುಡೆರಾಮಯ್ಯ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ ಕೂ (KOO) ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಆರ್‌ಎಸ್‌ಎಸ್ ಮೂಲವನ್ನು ಕೆಣಕಿರುವ ಸಿದ್ದರಾಮಯ್ಯ ಅವರಿಗೆ ಅವರೇ ಕಾಂಗ್ರೆಸ್ ಪಕ್ಷದ ನಾಯಕರ ಹೆಸರಿನ ಮೂಲವೇನೆಂದು ಕೇಳುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ, 1959ರಲ್ಲಿ ನೆಹರೂ, 1968ರಲ್ಲಿ ಇಂದಿರಾ ಗಾಂಧಿ, 2005ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ! ಭೇಟಿಯ ಬಳಿಕ “ಮೈ ಟ್ರೂ ಹೋಮ್ ಕಮಿಂಗ್” ಎಂದು ಉದ್ಘರಿಸಿದ್ದರು ಇಂದಿರಾ!!! ಹಾಗಾದರೆ, ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಎಂದು ಅರ್ಥವೇ? ಎಂದು #ಬುರುಡೆರಾಮಯ್ಯ ಹ್ಯಾಷ್ಟ್ಯಾಗ್ ಮೂಲಕ ಬಿಜೆಪಿ ಕೂ ಮಾಡಿದೆ.
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ. ಅಂದಹಾಗೆ ಸಿದ್ದರಾಮಯ್ಯನವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕೆ ಬಂದವರಲ್ಲವೇ? ಎಂದು ಬಿಜೆಪಿ ಲೇವಡಿ ಮಾಡಿದೆ.
ಇದನ್ನೂ ಓದಿ: ಶಿವಕುಮಾರ ಹೇಳಿದ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡರು ಸಿದ್ದರಾಮಯ್ಯ
ಸಿದ್ದರಾಮಯ್ಯನವರೇ, ನೀವು ಯಾರ ವಿಶ್ವಾಸಕ್ಕಾಗಿ ಹೇಳಿಕೆ ನೀಡುತ್ತಿದ್ದೀರೋ, ಅವರ ಮೂಲ ನಿಮಗೆ ತಿಳಿದಿಲ್ಲವೇ? ಫಿರೋಜ್ ಗಾಂಧಿ – ಫಿರೋಜ್ ಜೆಹಾಂಗೀರ್ ಗ್ಯಾಂಡಿ (ಪರ್ಷಿಯನ್ ಮೂಲ) ಸೋನಿಯಾ ಗಾಂಧಿ – ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ (ಇಟಲಿ ಮೂಲ), ರಾಹುಲ್ ಗಾಂಧಿ – ರೌಲ್ ವಿನ್ಸಿ ಇದರ ಬಗ್ಗೆ ನಿಮಗೆ ಗೊತ್ತಿಲ್ಲವೇ? ಎಂದು ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ಅವರೇ, ಇಂದಿರಾ ಕಾಂಗ್ರೆಸ್ ಎಂಬುದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿದ್ದು ಹೇಗೆ? ಇಂದಿರಾ ಪ್ರಿಯದರ್ಶಿನಿ ಗ್ಯಾಂಡಿ ಎಂಬುದು ಇಂದಿರಾ ಗಾಂಧಿ ಆಗಿದ್ದು ಹೇಗೆ? ಎಂದು ಬಿಜೆಪಿ ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದೆ.
ಶಾಲಾ ಪಠ್ಯಪುಸ್ತಕಗಳಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಪಾಠ ಕುರಿತು ಉಂಟಾಗಿರುವ ವಿವಾದ ಬಗ್ಗೆ ಶುಕ್ರವಾರ ಮಾತನಾಡಿದ್ದ ಸಿದ್ದರಾಮಯ್ಯ, ಈ ಆರ್‌ಎಸ್‌ಎಸ್‌ನವರು ಸ್ಥಳೀಯ ಭಾರತೀಯರೇ? ಅನಗತ್ಯವಾಗಿ ನಾವು ಅದರ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಆರ್ಯರು ಈ ದೇಶದವರೇ? ಅವರು ದ್ರಾವಿಡರೇ? ನಾವು ಆರ್ಎಸ್ಎಸ್ನವರ ಮೂಲಕ್ಕೆ ಹೋಗಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sat, 28 May 22