AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಸಚಿವರ ಪಟ್ಟಿಗೆ ಸಿದ್ದರಾಮಯ್ಯ ಅಸಮಾಧಾನ? ಮಾಜಿ ಸಿಎಂ ಬೇಸರಕ್ಕೆ ಕಾರಣವಾದ ಅಂಶಗಳು ಇಲ್ಲಿವೆ

ನೂತನ ಸಚಿವರ ಪ್ರಮಾಣವಚನ ಸ್ವೀಕಾರದ ಬೆನ್ನಲ್ಲೇ, ಆಯ್ಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ತೀವ್ರವಾಗಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರ ಗೈರುಹಾಜರಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಮಧ್ಯೆ, ಸಿದ್ದರಾಮಯ್ಯಗೆ ಅಸಮಾಧಾನವಿಲ್ಲ ಎಂದು ಅವರ ಪುತ್ರ ಯತೀಂದ್ರ ಸ್ಪಷ್ಟಪಡಿಸಿದ್ದಾರೆ.

ನೂತನ ಸಚಿವರ ಪಟ್ಟಿಗೆ ಸಿದ್ದರಾಮಯ್ಯ ಅಸಮಾಧಾನ? ಮಾಜಿ ಸಿಎಂ ಬೇಸರಕ್ಕೆ ಕಾರಣವಾದ ಅಂಶಗಳು ಇಲ್ಲಿವೆ
ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Edited By: |

Updated on: Aug 04, 2026 | 2:53 PM

Share

ಮುಖ್ಯಾಂಶಗಳು

  • ಸಿದ್ದರಾಮಯ್ಯ ಅಸಮಾಧಾನದ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ
  • ಸಂಪುಟ ವಿಸ್ತರಣೆ ಬೆನ್ನಲ್ಲೇ ಆಂತರಿಕ ಬೇಗುದಿ ಹೆಚ್ಚಳ
  • ಸಿದ್ದರಾಮಯ್ಯಗೆ ಅಸಮಾಧಾನವಿಲ್ಲ ಎಂದ ಯತೀಂದ್ರ

ಬೆಂಗಳೂರು, ಆಗಸ್ಟ್ 4: ಒಂದೆಡೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕರು ಹಾಗೂ ಅವರ ಬೆಂಬಲಿಗರ ಅಸಮಾಧಾನ ಸ್ಫೋಟಗೊಂಡಿರುವ ಬೆನ್ನಲ್ಲೇ, ಮತ್ತೊಂದೆಡೆ ನೂತನ ಸಚಿವರ ಪಟ್ಟಿಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ಅಸಮಾಧಾನ ಉಂಟಾಗಿದೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರವಾಗಿದೆ. ತಮ್ಮ ಶಿಫಾರಸುಗಳಿಗೆ ಹೈಕಮಾಂಡ್ ಸೂಕ್ತ ಮನ್ನಣೆ ನೀಡಿಲ್ಲ ಎಂಬ ಬೇಸರ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗುತ್ತಿದ್ದು, ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರು ಗೈರಾಗಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಸಿದ್ದರಾಮಯ್ಯ ಅಸಮಾಧಾನಕ್ಕೆ ಕಾರಣಗಳೇನು?

ಕಾಂಗ್ರೆಸ್​ನ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿರುವಂತೆ, ಸಿದ್ದರಾಮಯ್ಯ ಅಸಮಾಧಾನಕ್ಕೆ ಕಾರಣವಾಗಿರುವ ಅಂಶಗಳು ಇಲ್ಲಿವೆ;

  1. ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ ನೀಡಿರುವುದು
  2. ತಮ್ಮದೇ ಸಮುದಾಯದ ಇನ್ನೊಬ್ಬ MLC ಸಚಿವರಾಗಿದ್ದು
  3. ಸಭಾಪತಿ, ಉಪಸಭಾಪತಿ ಆಯ್ಕೆ ಬಗ್ಗೆ ಹೈಕಮಾಂಡ್ ಚರ್ಚಿಸಿಲ್ಲ
  4. ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ ಉಮಾಶ್ರೀಗೆ ಉಪ ಸಭಾಪತಿ
  5. ತನ್ನ ಶಿಫಾರಸುಗಳಿಗೆ ಹೈಕಮಾಂಡ್ ಸೂಕ್ತ ಮನ್ನಣೆ ನೀಡಿಲ್ಲ
  6. ಹೆಚ್.ಸಿ ಮಹದೇವಪ್ಪ ಸೇರಿ ಉಳಿದವರನ್ನು ಪರಿಗಣಿಸಿಲ್ಲ
  7. ವಿರೋಧದ ನಡುವೆಯೂ ಜಮೀರ್ಗೆ ಸಚಿವ ಸ್ಥಾನ

ನೂತನ ಸಚಿವರ ಪಟ್ಟಿ ಅಂತಿಮಗೊಂಡ ಬಳಿಕ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ. ತಮ್ಮ ಶಿಫಾರಸಿಗೆ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಅಸಮಾಧಾನ ಅವರಲ್ಲಿದೆ ಎನ್ನಲಾಗಿದೆ. ಸೋಮವಾರ ಇಡೀ ದಿನ ಸಿದ್ದರಾಮಯ್ಯ ಗರಂ ಆಗಿದ್ದರು ಎನ್ನಲಾಗಿದ್ದು, ತಮ್ಮ ಭೇಟಿಗೆ ಬಂದ ನಾಯಕರ ವಿರುದ್ಧವೂ ಸಿಟ್ಟು ಹೊರಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದರ ಬೆನ್ನಲ್ಲೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯ ಗೈರಾಗಿದ್ದರು. ಹೀಗಾಗಿ ಅವರ ಗೈರುಹಾಜರಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಈ ನಡುವೆ ಸಿದ್ದರಾಮಯ್ಯ ಅವರ ಅಸಮಾಧಾನದ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ಹಾಗೂ ಬ್ಯಾಡಗಿ ಶಾಸಕ ಶಿವಣ್ಣನವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೇಸರವಾಗಿರುವ ಸಾಧ್ಯತೆಯ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಇದೇ ಬೆಳವಣಿಗೆಗಳ ನಡುವೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆಗಳನ್ನು ಬಿಜೆಪಿ ಕೂಡ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಅವರ ಸ್ವಾಭಿಮಾನವನ್ನು ಉಲ್ಲೇಖಿಸಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಪ್ರಶ್ನೆ ಎತ್ತಿದ್ದಾರೆ.

ಆದರೆ, ಸಿದ್ದರಾಮಯ್ಯ ಅವರ ಅಸಮಾಧಾನದ ಕುರಿತ ಚರ್ಚೆಯ ನಡುವೆಯೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ತಮ್ಮ ತಂದೆಗೆ ಯಾವುದೇ ಬೇಸರ ಅಥವಾ ಅಸಮಾಧಾನ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಸಿಎಂ ಬದಲಿಸಿದಾಗಲೆಲ್ಲ ಪಕ್ಷಕ್ಕೆ ಡ್ಯಾಮೇಜ್ ಆಗಿದೆ’: ಸಂಪುಟ ವಿಸ್ತರಣೆ ಬೆನ್ನಲ್ಲೇ ಮಾಜಿ ಸಚಿವ ಕೆಎನ್ ರಾಜಣ್ಣ ಅಚ್ಚರಿಯ ಮಾತು

ಹೀಗಾಗಿ ಹೊರಗಡೆ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದರೂ, ಪಕ್ಷದೊಳಗೆ ಆಂತರಿಕ ಬೇಗುದಿ ಇದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಈ ಅಸಮಾಧಾನದ ಚರ್ಚೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us