ಕೇರಳದವರು ಬಟ್ಟೆ ಬಿಚ್ಚಿ ಕುಣೀತಿದ್ದಾರೆ, ತಲೆಕೆಡಿಸಿಕೊಳ್ಳಲ್ಲ: ಮಂಗಳೂರು ರೈಲ್ವೆ ವಿಭಾಗ ಸಂಬಂಧ ಸೋಮಣ್ಣ ಖಡಕ್ ತಿರುಗೇಟು
ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಲಯಕ್ಕೆ ಸೇರಿಸಿದ ವಿಚಾರ ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಖಡಕ್ ತಿರುಗೇಟು ನೀಡಿದ್ದಾರೆ. ಯಾವುದೇ ತಪ್ಪು ಮಾಡಿಲ್ಲ, ನಮ್ಮ ನಿರ್ಧಾರ ತಾಂತ್ರಿಕ ಪರಿಶೀಲನೆಯ ಆಧಾರದಲ್ಲಿದೆ. ಕೇರಳದವರು ಬಟ್ಟೆಬಿಚ್ಚಿಕೊಂಡು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ, ಏನೂ ಮಾಡಲಾಗದು ಎಂದು ಸೋಮಣ್ಣ ತಿರುಗೇಟು ನೀಡಿದ್ದಾರೆ.

ಮುಖ್ಯಾಂಶಗಳು
- ಕೇರಳದ ಪ್ರತಿಭಟನೆಗೆ ಸೋಮಣ್ಣ ಖಡಕ್ ತಿರುಗೇಟು
- 25 ವರ್ಷಗಳ ಬೇಡಿಕೆಗೆ ಪರಿಹಾರ ಕಂಡುಕೊಂಡೆವು ಎಂದ ಸಚಿವ
- ಮೈಸೂರು-ಪಾಲಕ್ಕಾಡ್ ಅಂತರ ಕಡಿಮೆಯಾಗಲಿದೆ ಎಂದ ಸೋಮಣ್ಣ
ತುಮಕೂರು, ಆಗಸ್ಟ್ 31: ಮಂಗಳೂರು (Mangaluru) ರೈಲ್ವೆ ಘಟಕವನ್ನು ಮೈಸೂರು ವಲಯಕ್ಕೆ ಸೇರಿಸಿರುವ ವಿಚಾರ ಕೇರಳದಲ್ಲಿ ರಾಜಕೀಯ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿರುವ ನಡುವೆಯೇ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಕೇರಳದ ರಾಜಕೀಯ ಪಕ್ಷಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಕೇರಳಕ್ಕೆ ಸಂಬಂಧಿಸಿದಂತೆ ಯಾವುದೇ ಅಪಚಾರ ಮಾಡಿಲ್ಲ. ನಿಮ್ಮ (ಕೇರಳ) ರಾಜ್ಯದಲ್ಲಿ ಏನು ಬೇಕಾದರೂ ನೀವು ನೋಡಿಕೊಳ್ಳಿ’ ಎಂದು ಹೇಳಿದ್ದಾರೆ. ದಕ್ಷಿಣದ ರಾಜ್ಯಗಳೆಲ್ಲ ಒಟ್ಟಾಗಿ ಹೋಗಬೇಕು ಎಂಬರ್ಥದ ಮಾತು ಕರ್ನಾಟಕ ಸರ್ಕಾರದ ಕಡೆಯಿಂದಲೂ ವ್ಯಕ್ತವಾಗಿರುವ ಸಂದರ್ಭದಲ್ಲೇ ಸೋಮಣ್ಣ ಈ ಹೇಳಿಕೆ ನೀಡಿರುವುದು ಗಮನಾರ್ಹ.
ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿ ಇಲ್ಲ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಚಾರಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
25 ವರ್ಷಗಳ ಹೋರಾಟಕ್ಕೆ ಪರಿಹಾರ
ಮಂಗಳೂರು ಭಾಗವನ್ನು ಪ್ರತ್ಯೇಕ ರೈಲ್ವೆ ವಿಭಾಗವನ್ನಾಗಿ ಮಾಡಬೇಕು ಎಂಬ ಬೇಡಿಕೆ ಸುಮಾರು 25 ವರ್ಷಗಳಿಂದ ಇತ್ತು. ಈ ಹಿಂದೆ ಹಲವು ರೈಲ್ವೆ ಸಚಿವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಪ್ರಯತ್ನಿಸಿದ್ದರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮನ್ನು ಭೇಟಿ ಮಾಡಿ ಈ ವಿಚಾರಕ್ಕೆ ಒಂದು ರೂಪ ನೀಡುವಂತೆ ಮನವಿ ಮಾಡಿದ್ದರು ಎಂದು ಸೋಮಣ್ಣ ತಿಳಿಸಿದರು.
‘ನಾನು ಸಚಿವನಾಗಿರುವುದರಿಂದ ಈ ವಿಚಾರದ ಸಂಪೂರ್ಣ ಮಾಹಿತಿ ಇತ್ತು. ಮೂರು ಜನರಲ್ ಮ್ಯಾನೇಜರ್‌ಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ ಏಕೈಕ ಸಚಿವ ನಾನು. ಅಧಿಕಾರಿಗಳು ತಾಂತ್ರಿಕವಾಗಿ ಪರಿಶೀಲಿಸಿ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಪೇವರಿಸಂ ಇಲ್ಲ’ ಎಂದು ಅವರು ಹೇಳಿದರು.
350 ಕಿ.ಮೀ. ಬದಲು 80-100 ಕಿ.ಮೀ.
ಮಂಗಳೂರು ಹಾಗೂ ಪಾಲಕ್ಕಾಡ್ ನಡುವಿನ ಅಂತರ ಸುಮಾರು 350 ಕಿ.ಮೀ. ಇದ್ದರೆ, ಮಂಗಳೂರು ಘಟಕವನ್ನು ಮೈಸೂರು ವಲಯಕ್ಕೆ ಸೇರಿಸಿದ ಬಳಿಕ ಮೈಸೂರು ಮತ್ತು ಪಾಲಕ್ಕಾಡ್ ನಡುವಿನ ಅಂತರ ಸುಮಾರು 80ರಿಂದ 100 ಕಿ.ಮೀ.ಗೆ ಇಳಿಯುತ್ತದೆ. ಆಡಳಿತಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಇದು ಹೆಚ್ಚು ಅನುಕೂಲಕರವಾಗಿರುವುದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೋಮಣ್ಣ ವಿವರಿಸಿದರು.
ಮಂಗಳೂರು ವಿಭಾಗ ರಚನೆಯ ಬೇಡಿಕೆ ಇದ್ದರೂ, ಸದ್ಯ ಮೈಸೂರು ವಲಯಕ್ಕೆ ಸೇರ್ಪಡೆ ಮಾಡುವ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದರ ಲಾಭ-ನಷ್ಟಗಳ ಕುರಿತು ಒಂದು ವರ್ಷದ ಬಳಿಕ ಪರಿಶೀಲನೆ ನಡೆಸಬಹುದು ಎಂದರು.
ಕೇರಳದ ಪ್ರತಿಭಟನೆಗೆ ಸೋಮಣ್ಣ ತಿರುಗೇಟು
ಮಂಗಳೂರು ರೈಲ್ವೆ ಘಟಕದ ವಿಚಾರವಾಗಿ ಕೇರಳದಲ್ಲಿ ಯುಡಿಎಫ್, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳು ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ‘ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ತಪ್ಪು ಮಾಡಿಲ್ಲ’ ಎಂದು ಹೇಳಿದರು.
‘ಭಾರತ ಸರ್ಕಾರದ ಸಚಿವನಾಗಿ ರೈಲ್ವೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಇದ್ದ ಅಡಚಣೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇನೆ. ಕೇರಳಕ್ಕೆ ಯಾವುದೇ ಅಪಚಾರ ಮಾಡಿಲ್ಲ. ನಾನು ಕೇವಲ ನಿಮಿತ್ತ ಮಾತ್ರ’ ಎಂದು ಅವರು ಹೇಳಿದರು.
ಮಂಗಳೂರು ಭಾಗಕ್ಕೆ ರೈಲ್ವೆ ಆಡಳಿತಾತ್ಮಕ ವ್ಯವಸ್ಥೆ ಮತ್ತಷ್ಟು ಹತ್ತಿರವಾಗುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಮಂಗಳೂರು ಕರ್ನಾಟಕದ ಪ್ರಮುಖ ಬಂದರು ನಗರವಾಗಿದ್ದು, ಸರಕು ಸಾಗಣೆ, ಆಮದು-ರಫ್ತು ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಪ್ರಮುಖ ಸ್ಥಾನ ಹೊಂದಿದೆ ಎಂದು ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: ನೈಋತ್ಯ ವಲಯಕ್ಕೆ ಮಂಗಳೂರು ರೈಲ್ವೆ ಸೇರ್ಪಡೆ: ಕರಾವಳಿಗೆ ಮಾತ್ರವಲ್ಲ ಕರ್ನಾಟಕಕ್ಕೆ ಎಷ್ಟು ಲಾಭ ಗೊತ್ತಾ?
ಕೇರಳದಲ್ಲಿ ಹಲವು ಮೀನುಗಾರಿಕಾ ಬಂದರುಗಳಿವೆ. ಕೇರಳ ಸರ್ಕಾರವೂ ಬಂದರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಮಂಗಳೂರು ಬಂದರು ಪ್ರಮುಖವಾಗಿದ್ದು, ಅದರ ಸರಕು ಸಾಗಣೆ ಮತ್ತು ಆಮದು-ರಫ್ತು ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




