SSLC Exam: ತುಮಕೂರಿನ ಅವಳಿ ಸಹೋದರಿಯರಿಬ್ಬರು ರಾಜ್ಯಕ್ಕೆ ಟಾಪರ್; 625 ಅಂಕ ಗಳಿಸಿದ ಧನಶ್ರೀ ಹಾಗೂ ಧನ್ಯಶ್ರೀ
Tumakur: SSLC ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯ ಸಹೋದರಿಯಬ್ಬರು ರಾಜ್ಯಕ್ಕೇ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಈ ಕುರಿತು ಅವರು ಟಿವಿ9ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ತುಮಕೂರು: SSLC ಫಲಿತಾಂಶವು ಹಲವು ಅಚ್ಚರಿಗಳನ್ನು ತೆರೆದಿಡುತ್ತಿದೆ. ಅಂಥದ್ದೇ ಒಂದು ಅಚ್ಚರಿಯ ಪ್ರಕರಣದಲ್ಲಿ, ತುಮಕೂರು ಜಿಲ್ಲೆಯ ಅವಳಿ ಸಹೋದರಿಯರಿಬ್ಬರೂ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ಯಳನಾಡು ಗ್ರಾಮದ ಧನ್ಯಶ್ರೀ ಹಾಗೂ ಧನಶ್ರೀ ತಲಾ 625 ಅಂಕ ಪಡೆದು ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ. ಸಹೋದರಿಯರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ದಯಾನಂದ್ ಮತ್ತು ಸುಜಾತ ದಂಪತಿಗಳ ಪುತ್ರಿಯರಾದ ಇವರು, ರಾಜ್ಯಕ್ಕೇ ಟಾಪರ್ ಆಗುವ ಮೂಲಕ ಗ್ರಾಮಕ್ಕೆ, ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರ ಸಾಧನೆಗೆ ಶಿಕ್ಷಕರು, ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಟಿವಿ9ನೊಂದಿಗೆ ಮಾತನಾಡಿರುವ ಸಹೋದರಿಯರು, ಕೊರೊನಾ ಕಷ್ಟಕಾಲದ ನಡುವೆಯೂ ಪಾಠ ಹೇಳಿಕೊಟ್ಟು, ಅನುಮಾನಗಳನ್ನು ಬಗೆಹರಿಸಿದ ಶಾಲೆ ಹಾಗೂ ಶಿಕ್ಷಕ ವೃಂದಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಕುಟುಂಬಸ್ಥರು ಹಾಗೂ ಪೋಷಕರ ಸಹಾಯದಿಂದಲೇ ಈ ಸಾಧನೆ ಸಾಧ್ಯವಾಯಿತು. ತಮ್ಮ ಓದಿಗೆ ಸಹೋದರನೇ ಸ್ಪೂರ್ತಿ ಎಂದು ಸಹೋದರಿಯರು ಸಂತಸ ಹಂಚಿಕೊಂಡಿದ್ದಾರೆ.
ತಮ್ಮ ಮುಂದಿನ ಗುರಿಯನ್ನು ತಿಳಿಸಿದ ಧನ್ಯಶ್ರೀ ಹಾಗೂ ಧನಶ್ರೀ, ವೈದ್ಯರಾಗಿ ಸೇವೆಯನ್ನು ಸಲ್ಲಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸಿದ ಬಗೆಯನ್ನು ವಿವರಿಸಿದ ಅವರು, ಬೆಳಗಿನ ಜಾವ ಬೇಗ ಎದ್ದು ಓದುತ್ತಿದ್ದೆವು. ನಾವಿಬ್ಬರು ಇರುವುದರಿಂದ ಸಂವಾದ ನಡೆಸುತ್ತಿದ್ದೆವು. ಇದರಿಂದಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಯಿತು. ಬದಲಾದ ಪರೀಕ್ಷಾ ಮಾದರಿಗೆ ಅನುಗುಣವಾಗಿ ನಮ್ಮ ಓದನ್ನು ಬದಲಿಸಿಕೊಂಡೆವು. ಇದು ಪರೀಕ್ಷೆಯಲ್ಲಿ ಸಹಕಾರಿಯಾಯಿತು ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಕೊರೊನಾ ಕಷ್ಟಕಾಲದಲ್ಲೂ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತೆ ಮಾಡಿದ ಶಿಕ್ಷಣ ಇಲಾಖೆಗೆ ಸಹೋದರಿಯರು ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಕೊನೆ ಅರ್ಧ ಗಂಟೆ ಪರೀಕ್ಷೆ ಆಕ್ಸಿಜನ್ ಸಪೋರ್ಟ್ ಮೇಲಿದ್ದು ಬರೆದ ಈ ತಾಂಡಾ ಹುಡುಗಿ ಎಲ್ಲ 625 ಅಂಕ ಬಾಚಿಕೊಂಡಳು!
ಎಸ್ಎಸ್ಎಲ್ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ
(Twin sisters Dhanyashree and Dhanashree from Tumkur district got first place in Karnataka SSLC Examination)