TV9 Kannada Live: ವಂಡರ್ಲಾ ರೆಸಾರ್ಟ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯ
Karnataka News Today Live Updates: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಅಡ್ಡ ಮತದಾನ ಹಿನ್ನೆಲೆ ಕಾಂಗ್ರೆಸ್ ಸಾಸಕರು ರೆಸಾರ್ಟ್ನತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಹಲವು ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂ ಬೆಳಿಗ್ಗೆ ಶಾಕ್ ಕೊಟ್ಟಿದೆ. ಈ ದಿನದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.

ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಲೋಕಾಯುಕ್ತ ಭರ್ಜರಿ ಶಾಕ್ ಕೊಟ್ಟಿದ್ದು ಕಲಬುರಗಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ದಾಳಿ ನಡೆದಿದೆ. ಮನೆ ಮತ್ತು ಕಚೇರಿಗಳು ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್ ಚುನಾವಣಾ ಕಣ ರಾಜ್ಯದಲ್ಲಿ ರಂಗೇರಿದ್ದು, ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇಂದು ‘ಕೈ’ ಶಾಸಕರಿಂದ ರೆಸಾರ್ಟ್ ವಾಸ್ತವ್ಯ ಶುರುವಾಗಿದ್ದರೆ, ನಾಳೆ JDSನವರ ಸರದಿ ನಿಗದಿಯಾಗಿದೆ. ಐದಾರು ಜೆಡಿಎಸ್ ಶಾಸಕರನ್ನು ಸೆಳೆಯಲು ಕೈ ಪಾಳಯದಲ್ಲಿ ಭಾರಿ ಕಸರತ್ತು ನಡೆಯುತ್ತಿದ್ದರೆ, ಕಾಂಗ್ರೆಸ್ ತಂತ್ರಕ್ಕೆ ಕೌಂಟರ್ ಕೊಡಲು JDS ನಾಯಕರ ಪ್ರತಿತಂತ್ರ ರೂಪಿಸಿರೋದು ಕುತೂಹಲ ಹೆಚ್ಚಿಸಿದೆ. ರಾಜ್ಯ, ದೇಶ, ಸಿನಿಮಾ, ಕ್ರೀಡೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.
LIVE NEWS & UPDATES
-
ಬೆಂಗಳೂರಿನ UPSC ಪರೀಕ್ಷಾ ಕೇಂದ್ರಗಳ ಬಳಿ ನಿಷೇಧಾಜ್ಞೆ
ಇದೇ ಜೂ.19ರಿಂದ 21ವರೆಗೆ UPSC ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ ನಿಷೇದಾಜ್ಞೆ ಹೊರಡಿಸಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ ಇರುವ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಸೆಂಟರ್ ಮುಚ್ಚಲು ಆದೇಶಿಸಿದ್ದಾರೆ.
-
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯ
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯವಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಿಎಲ್‌ಪಿ ಮೀಟಿಂಗ್ ಮುಗಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಆಚೆ ಬಂದಿದ್ದಾರೆ.
-
-
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ
ಜೂನ್ 18ರಂದು ವಿಧಾನಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಶಿಫ್ಟ್ ಆಗಿದ್ದು, ಬಿಡಿದಿ ಬಳಿಯ ವಂಡರ್ಲಾ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಿಎಲ್‌ಪಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದಾರೆ. ಇನ್ನು ಸಭೆಯಲ್ಲಿ ಮಾದರಿ ಮತಪತ್ರ ಪ್ರದರ್ಶಿಸಿ ಮತದಾನ ಮಾಡುವುದು ಹೇಗೆ ಎಂದು ಮಾಹಿತಿ ನೀಡಲಾಗುತ್ತಿದೆ.
-
ಪ್ರತಿ ವರ್ಷದಂತೆ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ
ಪ್ರತಿ ವರ್ಷದಂತೆ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ. ಈ ಸಂಬಂಧ ಇಂದು (ಜೂನ್ 16) ವಿಧಾನಸೌಧದಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಕೆಂಪೇಗೌಡ ಜಯಂತಿ ಸಂಬಂಧ ಸಲಹೆ ಪಡೆಯಲು ಸಭೆ ಮಾಡಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ. ಇನ್ನು 15 ಲಕ್ಷ ಸಸಿ ನೆಡಲು ತೀರ್ಮಾನ ಮಾಡಲಾಗಿದೆ. ಕೆಂಪೇಗೌಡರ ಹೆಸರಲ್ಲಿ ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಕಾರ್ಯಕ್ರಮ ಮಾಡಲು ಪ್ರತಿ ವಾರ್ಡ್ಗೆ 1 ಲಕ್ಷ ರೂ. ನೀಡುತ್ತೇವೆ. ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತೀರ್ಮಾನ ಮಾಡ್ತಾರೆ. ಜಾತಿ ಧರ್ಮವನ್ನು ಮೀರಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
-
ಟೆಸ್ಟ್ ಡ್ರೈವ್ ಮಾಡ್ತೀನೆಂದು ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ
ಟೆಸ್ಟ್ ಡ್ರೈವ್ ಮಾಡ್ತೀನೆಂದು ಬೈಕ್ ಕಳ್ಳತನ ಮಾಡುತ್ತಿದ್ದವರನ್ನು ಬೆಂಗಳೂರಿನ ಸಂಪಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಉಮರ್ ಹಾಗೂ ಸಾಧಿಕ್ ಬಂಧಿತ ಆರೋಪಿಗಳು. ಸಾಧಿಕ್ ಬೈಕ್ ತೆಗೆದುಕೊಳ್ಳುವ ನೆಪದಲ್ಲಿ ಶೋರೂಮ್ ಹೋಗುತ್ತಿದ್ದ. ಬಳಿಕ ಟೆಸ್ಟ್ ಡ್ರೈವ್ ಮಾಡ್ತೇನೆಂದು ಬೈಕ್ ತೆಗೆದುಕೊಂಡು ಆಕಡೆ ಪರಾರಿಯಾಗುತ್ತಿದ್ದ. ಸದ್ಯ ಇಬ್ಬರು ಆರೋಪಿಗಳಿಂದ 15 ಲಕ್ಷ ಮೌಲ್ಯದ 23 ಬೈಕ್ಗಳು ಜಪ್ತಿ ಮಾಡಲಾಗಿದೆ.
-
-
ಎಸ್ಐಟಿ ಎಸ್ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಧರ್ಮಸ್ಥಳ ಬುರುಡೆ ಪ್ರಕರಣದ ಎಸ್ಐಟಿ ಎಸ್ಪಿ ಪ್ರಯಾಣಿಸುತ್ತಿದ್ದ ಕಾರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿ ಪಲ್ಟಿಯಾಗಿದೆ. ಕೇಸ್ ಬಗ್ಗೆ ಚರ್ಚೆ ನಡೆಸಲು SIT ಎಸ್ಐಟಿ ಎಸ್ಪಿ ಸಿ.ಎ.ಸೈಮನ್ ಹಾಗೂ ಇತರೆ ಅಧಿಕಾರಿಗಳು ಚಿಕ್ಕಮಗಳೂರು ಎಸ್ಪಿ ದಯಾಮ ಭೇಟಿಯಾಗಲು ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಎಸ್ಐಟಿ ಎಸ್ಪಿ ಸಿ.ಎ.ಸೈಮನ್, ಇನ್ಸ್ಪೆಕ್ಟರ್ ಕುಸುಮಾಧರ್, ಓರ್ವ ಪೊಲೀಸ್ ಸಿಬ್ಬಂದಿ, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
-
ಸೋಲು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಮಮತಾ ಬ್ಯಾನರ್ಜಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಎಂ ಸುವೇಂದು ಅಧಿಕಾರಿ ವಿರುದ್ಧ ಸೋತಿರುವ ಮಮತಾ ಬ್ಯಾನರ್ಜಿ, ತಮ್ಮ ಸೋಲು ಪ್ರಶ್ನಿಸಿಕೋಲ್ಕತ್ತಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
-
ಬೆಂಗಳೂರಿನ ಆರ್ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರಿನ ಆರ್ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೆಂಗಳೂರಿನ ಆರ್ಟಿಒ ಕಚೇರಿಗಳನ್ನು ಸ್ಫೋಟಿಸುವುದಾಗಿ ಕಸ್ತೂರಿ ನಗರ, ಜ್ಞಾನ ಭಾರತಿ, ತಲಘಟ್ಟಪುರ, HSR ಲೇಔಟ್ ಸೇರಿ ಬೆಂಗಳೂರು ನಗರದ ಹಲವು RTO ಕಚೇರಿಗಳಿಗೆ ಇ-ಮೇಲ್ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು, ಆರ್ಟಿಒ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದು, ಯಾವ ಆರ್ಟಿಒ ಕಚೇರಿಗಳಲ್ಲೂ ಬಾಂಬ್ ಪತ್ತೆಯಾಗಿಲ್ಲ.
-
ಅಧಿಕಾರಿಗಳ ಚಳಿಬಿಡಿಸಿದ ಕೃಷ್ಣಭೈರೇಗೌಡ
ಮೊದಲ ಸಭೆಯಲ್ಲೇ ಸಚಿವ ಕೃಷ್ಣಭೈರೇಗೌಡ ಸಭೆ ಜಿಬಿಎ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ತರಾಟೆ ಪಡೆದ ಬೆಂಗಳೂರು ನಗರಾಭಿವೃದ್ಧಿ ಸಚಿವರು, ಬೆಂಗಳೂರಿನಲ್ಲಿ ಯಾವಾಗ ಕೇಳಿದ್ರು ಪಾಟ್ ಹೋಲ್ ಅಂತೀರ. ಪಾಟ್ ಹೋಲ್ ಆಗದಂತ ರಸ್ತೆ ಮಾಡೋದಕ್ಕೆ ಆಗೋದಿಲ್ವಾ. ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ ಎಂದು ಗರಂ ಆಗಿದ್ದಾರೆ. ನೆರೆ ರಾಜ್ಯಗಳಲ್ಲಿ ಪಾಟ್ ಹೋಲ್ ಇಲ್ಲದ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದವರು ಜಿಬಿಎ ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
-
ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ
ಬೆಳಗಾವಿ ನಗರದ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿನ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆಯಾಗಿವೆ. ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡುವೆ ವೇಳೆಯಲ್ಲಿ ಗುಂಡುಗಳು ಕಂಡುಬಂದಿದ್ದು, ಉದ್ಯಮಬಾಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಮುಂದುವರಿದ ಕರ್ಮಕಾಂಡ
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕರ್ಮಕಾಂಡ ಮುಂದುವರಿದಿದ್ದು, ಕೈದಿಗಳಿಗೆ ರಾಜಾತಿಥ್ಯದ ಫೋಟೋ ವೈರಲ್ ಆಗಿದೆ. ಜೈಲಿನೊಳಗೆ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವು ಕಂಡುಬಂದಿದ್ದು, ಕೈದಿಗಳು ರಾಜಾರೋಷವಾಗಿ ಬದುಕುತ್ತಿದ್ದಾರೆ. ಜೈಲಿನಲ್ಲಿ ತಮಗೆ ಇಷ್ಟವಾದ ಅಡುಗೆಯನ್ನೂ ತಯಾರಿಸಿ ತಿನ್ನುತ್ತಿದ್ದಾರೆ ಎನ್ನಲಾಗಿದೆ.
-
ಟಿಪ್ಪರ್- ಬಸ್ ಡಿಕ್ಕಿಯಾಗಿ ಮೂವರು ಸಾವು
ಟಿಪ್ಪರ್, ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ನಡೆದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿದ್ದರೆ, 10 ಜನರಿಗೆ ಗಂಭೀರ ಗಾಯಗಳಾಗಿವೆ. ಟಿಪ್ಪರ್ ಟೈರ್ ಬ್ಲಾಸ್ಟ್ ಆದ ಕಾರಣ ಅಪಘಾತ ಸಂಭವಿಸಿದ್ದು, ಟಿಪ್ಪರ್ ಚಾಲಕ ಅಶೋಕ್ ಉಟಗಿ, ಆತನ ಪತ್ನಿ ರಾಧಾಬಾಯಿ ಮತ್ತು ಸರ್ಕಾರಿ ಬಸ್ ಚಾಲಕ ಹನುಮಂತ ಛಲವಾದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಚಡಚಣ ಪಿಎಸ್ಐ ಸೊಮೇಶ ಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
ಸಂಘ ಸಂಸ್ಥೆಗಳು ಕಾನೂನಿನಡಿ ಬರಬೇಕು: ಪ್ರಿಯಾಂಕ್ ಖರ್ಗೆ
RSS ಮುಖ್ಯಸ್ಥ ಭಾಗವತ್ಗೆ ಪತ್ರ ಸಂಬಂಧ ಬಿಜೆಪಿಗರ ಆಕ್ರೋಶದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಪಾರದರ್ಶಕತೆ ಕೇಳುವುದು ತಪ್ಪಾ? ಸಂವಿಧಾನದ ಅಡಿಯಲ್ಲಿ ಬನ್ನಿ ಅಂತಾ ಹೇಳುವುದು ತಪ್ಪಾ? ಇದು ನನ್ನ ರಿಫೊರ್ಟ್ ಅಲ್ಲ, ಆರ್ಎಸ್ಎಸ್ನ ವರದಿ.ಲಕ್ಷಾಂತರ ಜನರನ್ನು ಸೇರಿಸಿ ಪಥಸಂಚಲನ ಮಾಡುತ್ತಿದ್ದಾರೆ. 4120 ಶಾಖೆಗಳಿವೆ, 5 ಸಾವಿರ ಪಥಸಂಚಲನ ಮಾಡಲಾಗಿದೆ. ಯಾವುದೇ ಸಂಘ ಸಂಸ್ಥೆಗಳು ಕಾನೂನಿನಡಿ ಬರಬೇಕು. ಹೇಗೆ 20 ಲಕ್ಷ ಜನರನ್ನು ಸೇರಿಸ್ತೀರಿ ಅಂತಾ ಗೊತ್ತಾಗಬಾರದಾ? ಎಂದವರು ನವದೆಹಲಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
-
ಜೂ.23 ಅಥವಾ 25ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ?
ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಮುಂದಿನ ವಾರವೇ ನಡೆಯುವ ಸಾಧ್ಯತೆ ಇದೆ. ಈ ನಡುವೆ ಜೂ.23 ಅಥವಾ 25ಕ್ಕೆ ಸಂಪುಟ ವಿಸ್ತರಣೆ ಆಗುವ ವಿಶ್ವಾಸವಿದೆ ಎಂದು ತುಮಕೂರಿನಲ್ಲಿ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿಯಾಗಿ ಅನೇಕ ಸಭೆಗಳನ್ನು ಮಾಡಿದ್ದೇನೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಅವರು ತಿಳಿಸಿದ್ದಾರೆ. ಎಲ್ಲೋ ಒಂದು ಕಡೆ ಸಚಿವ ಸ್ಥಾನ ಸಿಗುತ್ತೆ ಎಂಬ ವಿಶ್ವಾಸವಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದವರು ತಿಳಿಸಿದ್ದಾರೆ.
-
2.77 ಕೋಟಿ ಮೌಲ್ಯದ ಗಾಂಜಾ ವಶ
ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ 7.92 ಕೆಜಿ ಹೈಡ್ರೋಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 2.77 ಕೋಟಿ ಎನ್ನಲಾಗಿದೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಪ್ರಯಾಣಿಕನೋರ್ವ ಗಾಂಜಾ ಸಾಗಿಸುತ್ತಿದ್ದ. ಪ್ರಯಾಣಿಕನ ಬ್ಯಾಗ್ ತಪಾಸಣೆ ವೇಳೆ ಮಾದಕ ವಸ್ತು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಎನ್ಡಿಪಿಎಸ್ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತಷ್ಟು ಓದಿ.
-
ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿದ್ದ ಪಿಐಎಲ್ ವಜಾ
ಮುಖ್ಯಮಂತ್ರಿ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಧಾರವಾಡದ ಮಂಗಳಪ್ಪ ಎಂಬುವರು ಸಲ್ಲಿಸಿದ್ದ ಪಿಐಎಲ್ನ ವಜಾಗೊಳಿಸಿದ ಹೈಕೋರ್ಟ್ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅರ್ಜಿದಾರ ಸಂವಿಧಾನದ 164(1A) ತಪ್ಪಾಗಿ ಅರ್ಥೈಸಿ ಪಿಐಎಲ್ ಸಲ್ಲಿಸಿದ್ದು, ಸಚಿವರ ಗರಿಷ್ಟ ಸಂಖ್ಯೆ ಸದನ ಬಲದ ಶೇ.15 ಮೀರಬಾರದೆಂದು ಸಂವಿಧಾನದ ನಿಯಮವಿದೆ. ಆದರೆ ಶೇ.12ರಷ್ಟು ಸಚಿವರ ನೇಮಕವಾಗಿಲ್ಲದಿರುವುದರಿಂದ ಪದಗ್ರಹಣ ಕಾನೂನುಬಾಹಿರ ಎಂದು ಅರ್ಜೀದಾರರು ಉಲ್ಲೇಖಿಸಿದ್ದರು. ನಿಯಮವನ್ನು ತಪ್ಪಾಗಿ ವ್ಯಾಖ್ಯಾನಿಸಿ ಪಬ್ಲಿಸಿಟಿಗಾಗಿ ಪಿಐಎಲ್ ಸಲ್ಲಿಕೆ ಹಿನ್ನೆಲೆ ಕೋರ್ಟ್ ದಂಡ ವಿಧಿಸಿದೆ.
-
ಟೆಲಿಗ್ರಾಮ್ ಬಳಕೆಗೆ ತಾತ್ಕಾಲಿಕ ಬ್ರೇಕ್
ನೀಟ್ ಪರೀಕ್ಷೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಬಳಕೆ ನಿಷೇಧಿಸಲಾಗಿದೆ. ಜೂನ್ 30ರವರೆಗೆ ಟೆಲಿಗ್ರಾಮ್ ಎಡಿಟ್ ಆಯ್ಕೆಗೂ ಅವಕಾಶ ಇರುವುದಿಲ್ಲ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಮನವಿ ಮೇರೆಗೆ ತಾತ್ಕಾಲಿಕವಾಗಿ ಟೆಲಿಗ್ರಾಮ್ ನಿಷೇಧ ಮಾಡಲಾಗಿದೆ. ಮತ್ತಷ್ಟು ಓದಿ.
-
ಶಾಲೆಯ ಮೇಲ್ಚಾವಣಿ ಪ್ಲಾಸ್ಟಿಂಗ್ ಕುಸಿದು ಶಿಕ್ಷಕಿಗೆ ಗಾಯ
ಸರ್ಕಾರಿ ಶಾಲೆಯ ಮೇಲ್ಚಾವಣಿ ಪ್ಲಾಸ್ಟಿಂಗ್ ಕುಸಿದು ಶಿಕ್ಷಕಿ ಗಾಯಗೊಂಡಿರುವ ಘಟನೆ ಕೋಲಾರ ನಗರದ ಹಳೆಯ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿ ಯಶೋಧಾಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಠ ಮಾಡುವಾಗ ಶಿಕ್ಷಕಿ ಮೇಲೆ ಪ್ಲಾಸ್ಟಿಂಗ್ ಸಿಮೆಂಟ್ ಕುಸಿದುಬಿದ್ದಿದ್ದು, ಇತ್ತೀಚಿಗಷ್ಟೇ 25 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ದುರಸ್ತಿ ಮಾಡಲಾಗಿತ್ತು. ಆದರೂ ಶಾಲಾ ಕೊಠಡಿಯ ಮೇಲ್ಚಾವಣಿಯ ಪ್ಲಾಸ್ಟಿಂಗ್ ಕುಸಿತವಾಗಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಾಗಿದ್ದಾರೆ.
-
ಬೆಂಗಳೂರಲ್ಲೂ ಇಬ್ಬರು ಅಧಿಕಾರಿಗಳಿಗೆ ‘ಲೋಕಾ’ ಶಾಕ್
ಬೆಂಗಳೂರಿನ ಎರಡು ಕಡೆಯೂ ಲೋಕಾಯುಕ್ತ ದಾಳಿ ನಡೆದಿದ್ದು, ಕರ್ನಾಟಕ ಹೌಸಿಂಗ್ ಬೋರ್ಡ್ ಅಡಿಷನಲ್ ಡೈರೆಕ್ಟರ್ ರಾಜಣ್ಣ ಮತ್ತು ಬೆಸ್ಕಾಂ ಯಲಹಂಕ ವಲಯದ ಎಇಇ ಉದಯ್ ಕುಮಾರ್ ನಿವಾಸಗಳ ಮೇಲೆ ರೇಡ್ ನಡೆದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿರುವ ಮಾಹಿತಿ ಇದೆ.
-
ಸ್ಯಾಂಡಲ್ವುಡ್ ನಟ ಶ್ರೀಮುರುಳಿಗೆ ಮಾತೃ ವಿಯೋಗ
ಸ್ಯಾಂಡಲ್ವುಡ್ ನಟ ಶ್ರೀಮುರುಳಿ ತಾಯಿ ಜಯಮ್ಮ ಚಿನ್ನೇಗೌಡ ವಿಧಿವಶರಾಗಿದ್ದಾರೆ. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೇಗೌಡ ಪತ್ನಿ ಜಯಮ್ಮ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ವಿಧಿವಶರಾಗಿದ್ದಾರೆ. ಮತ್ತಷ್ಟು ಓದಿ.
-
ಕಲಬುರಗಿಯಲ್ಲೂ ಲೋಕಾಯುಕ್ತ ದಾಳಿ
ಕಲಬುರಗಿಯಲ್ಲೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪಂಚಾಯತ್ರಾಜ್ ನಿವೃತ್ತ ಸೂಪರಿಡೆಂಟ್ ಇಂಜಿನಿಯರ್ ಎಸ್.ಇ.ಮಾಣಿಕ್ ಕನಕಟ್ಟಿ ನಿವಾಸದ ಮೇಲೆ ರೇಡ್ ನಡೆದಿದೆ. ಗೋದುತಾಯಿ ನಗರದ ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ನಿವಾಸ, ತೋಟದ ಮನೆ, ಹುಮ್ನಾಬಾದ್ನ ಎರಡು ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆ,ಸಿ ಪರಿಶೀಲನೆ ನಡೆಸಲಾಗ್ತಿದೆ.
-
ದಾವಣಗೆರೆ ಹಲವೆಡೆಯೂ ಲೋಕಾಯುಕ್ತ ರೇಡ್
ದಾವಣಗೆರೆಯ ಹಲವೆಡೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂವರು ಅಧಿಕಾರಿಗಳ ಮನೆ, ಕಚೇರಿಗಳು ಸೇರಿ 12 ಕಡೆ ದಾವಣಗೆರೆ ಲೋಕಾ SP ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ರೇಡ್ ನಡೆದಿದೆ. ಹುಬ್ಬಳ್ಳಿಯ KSRTC(ವಾಯವ್ಯ) ಚೀಫ್ ಮೆಕ್ಯಾನಿಕ್ ಸಿದ್ದೇಶ್ವರ ಅವರ ಆಂಜನೇಯ ಬಡಾವಣೆಯ ಮನೆ, ಹುಬ್ಬಳ್ಳಿ ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆದಿದೆ. ದಾಳಿ ವೇಳೆ ಸಿದ್ದೇಶ್ವರ ಮನೆಯಲ್ಲಿ 40 ಲಕ್ಷ ರೂ. ಪತ್ತೆಯಾದ ಮಾಹಿತಿ ಇದೆ. ಚಿತ್ರದುರ್ಗ ಬಯಲು ಸೀಮೆ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯ ಕೃಷ್ಣನಾಯ್ಕ್ ಮನೆ, ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆದಿದ್ದು, ಬೆಳಗಾವಿ KRIDL ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪಗೆ ಸೇರಿದ ಮನೆ ಸೇರಿದಂತೆ ಐದು ಕಡೆಯೂ ದಾಳಿ ನಡೆದಿದೆ.
-
ಚಿಕ್ಕಮಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ
ಚಿಕ್ಕಮಗಳೂರು ACF ಮೋಹನ್ಗೆ ಸೇರಿದ ಮನೆ, ಕಚೇರಿ, ನಿರ್ಮಾಣ ಹಂತದ ಮನೆ ಸೇರಿದಂತೆ 5 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಲ್ಯಾಣನಗರದ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿದ್ದು, ACF ಮೋಹನ್ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ DySP ತಿರುಮಲೇಶ್ ನೇತೃತ್ವದಲ್ಲಿ ರೇಡ್ ನಡೆದಿದೆ.
-
ಪರಿಷತ್ ಚುನಾವಣೆ: ಜೆಡಿಎಸ್, ಕಾಂಗ್ರೆಸ್ಗೆ ಅಡ್ಡಮತದಾನ ಭೀತಿ
ಇಂದಿನಿಂದ ವಿಧಾನಪರಿಷತ್ ಅಖಾಡ ಮತ್ತಷ್ಟು ರಂಗೇರಲಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಜೆಡಿಎಸ್ ಶಾಸಕರ ಮೇಲೆ ಕಾಂಗ್ರೆಸ್ ಕಣ್ಣಿಟ್ಟು ನಿರಂತರ ಸಂಪರ್ಕದಲ್ಲಿದ್ದು, ಐದಾರು ಶಾಸಕರನ್ನು ಸೆಳೆಯಲು ಭಾರಿ ಕಸರತ್ತು ನಡೆಸುತ್ತಿದೆ. ಹೀಗಾಗಿ ಕಾಂಗ್ರೆಸ್ ಜೊತೆಗೆ ಅಡ್ಡ ಮತದಾನದ ಭೀತಿಯಲ್ಲಿರುವ ಜೆಡಿಎಸ್ ಕೂಡ ರೆಸಾರ್ಟ್ ಪಾಲಿಟಿಕ್ಸ್ ಶುರುಮಾಡಿದೆ. ಕಾಂಗ್ರೆಸ್ ತಂತ್ರಕ್ಕೆ ಕೌಂಟರ್ ಕೊಡಲು JDS ನಾಯಕರು ಪ್ರತಿತಂತ್ರ ರೂಪಿಸಿದ್ದು, ಕಾಂಗ್ರೆಸ್ನ 10ರಿಂದ 15 ಶಾಸಕರ ಸಂಪರ್ಕಕ್ಕೆ ದಳ ಪಡೆ ಮುಂದಾಗಿದೆ. ಜೆಡಿಎಸ್ ಶಾಸಕರಿಗೆ ಅತ್ಯಾಪ್ತರಾಗಿರುವ ಶಾಸಕರ ಸಂಪರ್ಕಕ್ಕೆ ಪ್ರಯತ್ನ ನಡೆಯುತ್ತಿದ್ದು, ಮಂತ್ರಿಗಿರಿ ಕೈತಪ್ಪಿರುವ ಮತ್ತು ಅಸಮಾಧಾನಿತ ಶಾಸಕರ ಸೆಳೆಯಲು ಕಸರತ್ತು ನಡೆಸಲಾಗ್ತಿದೆ. ವಿಶೇಷವಾಗಿ 2028ರ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಲು ಒಲವು ಹೊಂದಿರುವ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ಶುರುವಾಗಿದೆ.
Published On - Jun 16,2026 8:58 AM




