ಕಾಪು ಲೈಟ್ ಹೌಸ್ಗೆ 120 ವರ್ಷ ತುಂಬಿದ ಸಂಭ್ರಮ; ರಾಷ್ಟ್ರಮಟ್ಟದ ಮಾನ್ಯತೆಗೆ ಸಾಕ್ಷಿಯಾಗಲಿದೆ ಬ್ರಿಟಿಷರ ಕಾಲದ ದೀಪ ಸ್ತಂಬ
ಕಾಪು ಲೈಟ್ ಹೌಸ್ ಹಿರಿಮೆಗೆ ಈಗ ಮತ್ತೊಂದು ಗರಿ ಕೂಡ ಸೇರಿಕೊಂಡಿದೆ. ಲೈಟ್ ಹೌಸ್ಗೆ ಲಾಂಛನ ಲಕೋಟೆಯನ್ನು ಅಂಚೆ ಇಲಾಖೆ ಮುದ್ರಿಸುವ ಮೂಲಕ ಲೈಟ್ ಹೌಸ್ ರಾಷ್ಟ್ರ ಮಟ್ಟದ ಮಾನ್ಯತೆ ಪಡೆದುಕೊಂಡಿದೆ ಎಂದು ಬೀಚ್ ಅಭಿವೃದ್ಧಿ ಸಮಿತಿ ಸದಸ್ಯ ಮುರಳಿ ಹೇಳಿದ್ದಾರೆ.
ಉಡುಪಿ: ಕರವಾಳಿ ಪ್ರವಾಸ ಅಂದರೆ ಯಾರು ಖುಷಿ ಪಡೊಲ್ಲ ಹೇಳಿ? ಊರು ತುಂಬಾ ದೇವಾಲಯಗಳು, ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಇವಕ್ಕೆ ಕಲಶವಿಟ್ಟಂತೆ ಕಡಲ ಕಿನಾರೆಗಳು. ಸಮುದ್ರದ ಅಲೆಗಳ ಸಪ್ಪಳ. ಇಂತಹ ವಾತಾವರಣದಲ್ಲಿ ಒಂದಷ್ಟು ಸಮಯ ಕಳೆಯುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಇದರ ಜೊತೆಗೆ ಕಾಪು ಸಮುದ್ರದ ಲೈಟ್ ಹೌಸ್ ಮೇಲೆ ಏರಿ ಸಮುದ್ರ ವೀಕ್ಷಣೆ ಮಾಡುವುದು ಕೂಡ ಒಂದು ಅದ್ಭುತ ಅನುಭವ.
ಪ್ರವಾಸಿಗರ ಅಚ್ಚುಮೆಚ್ಚಿನ ಊರು ಕರಾವಳಿ. ಅದರಲ್ಲೂ ಸಮುದ್ರ ತೀರದಲ್ಲಿ ಮುಸ್ಸಂಜೆ ಕಳೆಯುವುದು, ಅಲೆಗಳ ಜೊತೆಗೆ ಕಾಲಕಳೆಯುವುದು ಎಂಥವರನ್ನೂ ಶಾಂತರನ್ನಾಗಿಸುತ್ತದೆ. ಅದರಲ್ಲೂ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಇರುವ ಕಾಪು ಕಡಲ ಕಿನಾರೆ ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತದೆ. ಇಂತಹ ಆರ್ಕಷಣೆ ಅಲ್ಲಿ ಏನಿದೆ ಅಂದ್ರೆ ಇಲ್ಲಿರುವ ಲೈಟ್ ಹೌಸ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಲೈಟ್ ಹೌಸ್ ಏರಿ ಸುತ್ತ ದೃಷ್ಟಿ ಹಾಯಿಸಿ ಆ ಸೌಂದರ್ಯವನ್ನು ಕಣ್ಣ್ಮನಗಳಲ್ಲಿ ತುಂಬಿಕೊಳ್ಳುವುದೇ ಅವಿಸ್ಮರಣೀಯ ಆನಂದವನ್ನು ನೀಡುತ್ತದೆ. ಇಂತಹ ಲೈಟ್ ಹೌಸ್ ಗೆ ಈಗ ಶತಮಾನದ ಸಂಭ್ರಮ.
ಕಾಪು ಲೈಟ್ ಹೌಸ್ ಹಿರಿಮೆಗೆ ಈಗ ಮತ್ತೊಂದು ಗರಿ ಕೂಡ ಸೇರಿಕೊಂಡಿದೆ. ಲೈಟ್ ಹೌಸ್ಗೆ ಲಾಂಛನ ಲಕೋಟೆಯನ್ನು ಅಂಚೆ ಇಲಾಖೆ ಮುದ್ರಿಸುವ ಮೂಲಕ ಲೈಟ್ ಹೌಸ್ ರಾಷ್ಟ್ರ ಮಟ್ಟದ ಮಾನ್ಯತೆ ಪಡೆದುಕೊಂಡಿದೆ ಎಂದು ಬೀಚ್ ಅಭಿವೃದ್ಧಿ ಸಮಿತಿ ಸದಸ್ಯ ಮುರಳಿ ಹೇಳಿದ್ದಾರೆ.
ಕಾಪು ಕಡಲ ತೀರದಲ್ಲಿ ಇರುವ ಲೈಟ್ ಹೌಸ್ ಬ್ರಿಟಿಷ್ ಆಡಳಿತ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಸೀಮೆ ಎಣ್ಣೆಯಿಂದ ಬೆಳಗುವ ಪಿಸ್ ಹೊಳಪಿನ ದೀಪ ಆರಂಭದಲ್ಲಿತ್ತು. ಪ್ರಸ್ತುತ ವಿದ್ಯುತ್ ದೀಪಕ್ಕೆ ಭಡ್ತಿ ಪಡೆದಿದೆ. ಸಮುದ್ರ ಮಟ್ಟದಿಂದ 21 ಮೀ ಎತ್ತರದ ಏಕ ಶಿಲೆಯ ಮೇಲೆ ನಿರ್ಮಾಣಗೊಂಡಿರುವ 34 ಮೀ ಎತ್ತರದಲ್ಲಿರುವ ಲೈಟ್ ಹೌಸ್ ಮೀನುಗಾರರು ಮತ್ತು ಸಮುದ್ರಯಾನಿಗಳನ್ನು ದಡದತ್ತ ತಲುಪಿಸುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಪ್ರವಾಸಿಗರು ಲೈಟ್ ಹೌಸ್ ಮೇಲೆ ಏರಿ ಸುತ್ತ ವೀಕ್ಷಣೆಗೆ ಅನುಕೂಲವಾಗಿದೆ.
ಲೈಟ್ ಹೌಸ್ ಒಳಗಿನ ಪ್ರವೇಶ ಮತ್ತು ತುದಿಗೆ ಹೋಗುವುದನ್ನು ಸದ್ಯ ನಿಷೇಧಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಹೊಸದಾಗಿ ಅಗಲವಾದ ಮೆಟ್ಟಿಲುಗಳನ್ನು ಜೋಡಿಸಲಾಗಿದೆ. ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಬಂಡೆಯ ಮೇಲೆ ಸುತ್ತಲೂ ಕಬ್ಬಿಣದ ಬೇಲಿ ಹಾಕಾಲಾಗಿದೆ. ಕಾಪು ದೀಪ ಸ್ತಂಭಕ್ಕೆ 120 ವರುಷ ತುಂಬಿದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಅಂಚೆ ಮೊಹರು ಬಿಡಗಡೆಗೊಳಿಸಿದೆ. ಈ ಮೂಲಕ ಕಾಪು ಸಮುದ್ರ ಲೈಟ್ ಹೌಸ್ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಉಳಿಯುವುದರ ಜೊತೆಗೆ ದೇಶದಲ್ಲಿ ಇನ್ನಷ್ಟು ಜನಪ್ರಿಯತೆ ಪಡೆಯುವುದಕ್ಕೆ ಅನುಕೂಲವಾಗಿದೆ.
ಒಟ್ಟಿನಲ್ಲಿ ಕಾಪು ಬೀಚ್ ಅಭಿವೃದ್ಧಿಯಲ್ಲಿ ಇನ್ನಷ್ಟು ಆಸಕ್ತಿ ತೋರಿಸಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾರ್ಯ ಮಾಡಿದರೆ ಪ್ರವಾಸಿಗರನ್ನು ಸೆಳೆಯುವ ನಂಬರ್ ವನ್ ಬೀಚ್ ಅಗುವುದರಲ್ಲಿ ಸಂಶಯವಿಲ್ಲ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ, ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ, ಮುಂದಿನ 1ತಿಂಗಳು ಬೀಚ್ ಪ್ರವೇಶಕ್ಕೆ ನಿರ್ಬಂಧ
ಶಾರ್ಕ್ ದೇಹ, ಹಂದಿ ಮುಖ; ಸಮುದ್ರದಲ್ಲಿ ಸಿಕ್ಕ ಈ ಮೀನಿನ ಫೋಟೋಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್