AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತವಾಗಿದ್ದ ಕರಾವಳಿಯಲ್ಲಿ ಗುಂಡಿನ ಸದ್ದು: ಹರಿಯಿತು ಉದ್ಯಮಿಯ ನೆತ್ತರ ಕೋಡಿ

Kundapura Shooting: ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದ ಶೂಟೌಟ್ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದೆ. ಹಣಕಾಸಿನ ವಿಚಾರವಾಗಿ ಉದ್ಯಮಿ ಗುಂಡೇಟಿಗೆ ಬಲಿಯಾಗಿದ್ದಾನೆ. ಸದ್ಯ ಕುಂದಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಶಾಂತವಾಗಿದ್ದ ಕರಾವಳಿಯಲ್ಲಿ ಗುಂಡಿನ ಸದ್ದು: ಹರಿಯಿತು ಉದ್ಯಮಿಯ ನೆತ್ತರ ಕೋಡಿ
ಗುಂಡುಹಾರಿಸಿ ವ್ಯಕ್ತಿ ಹತ್ಯೆImage Credit source: tv9 kannada
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jul 31, 2026 | 6:57 PM

Share

ಉಡುಪಿ, ಜುಲೈ 31: ಶಾಂತವಾಗಿದ್ದ ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು (shot dead) ಮೊಳಗಿದೆ. ಕುಂದಾಪುರದ ಚರ್ಚ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕೇಳಿ ಬಂದ ಗುಂಡಿನ ಸದ್ದಿಗೆ ಇಡೀ ಕರಾವಳಿ ಬೆಚ್ಚಿಬಿದ್ದಿದೆ. ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಎಂಬುವವರು ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣ ಹಲವಾರು ಆಯಾಮದಲ್ಲಿ ಗಮನ ಸೆಳೆದಿದ್ದು, ಕರಾವಳಿಗರಿಗೆ ಮತ್ತಷ್ಟು ಆತಂಕ ತಂದಿದೆ.

ನಡೆದಿದ್ದೇನು?

ಶುಕ್ರವಾರ ಮುಂಜಾನೆ 3:15 ಸುಮಾರಿಗೆ ಹೋಲಿ ರೋಜಾರಿಯೋ ಚರ್ಚ್ ಪಕ್ಕದಲ್ಲಿ ಗುಂಡಿನ ಸದ್ದಿಗೆ ನೆತ್ತರ ಕೋಡಿ ಹರಿದಿದೆ.‌ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಹೆಣವಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹಣಕಾಸಿನ ವಿಚಾರವಾಗಿ ಐವನ್ ಮತ್ತು ಡೆರಿಕ್ ಎನ್ನುವಾತನ ಮಧ್ಯೆ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು. ಆದರೆ ಗುರುವಾರ ರಾತ್ರಿ ಸುಮಾರು 11.45ಕ್ಕೆ ಡೆರಿಕ್, ಐವನ್‌ಗೆ ಕರೆ ಮಾಡಿ ಬಾಕಿ ಹಣ ನೀಡುವಂತೆ ಒತ್ತಾಯಿಸಿದ್ದು, ಮಾತಿನ ಚಕಮಕಿ ತಾರಕಕ್ಕೇರಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಡೆರಿಕ್, ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾನೆ.

ಇದನ್ನೂ ಓದಿ: 40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್​​​ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ!

ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯ ಲೊಕೇಶನ್ ಅನ್ನು ಡೆರಿಕ್ ಐವನ್‌ಗೆ ಕಳುಹಿಸಿದ್ದಾನೆ. ಸವಾಲು ಸ್ವೀಕರಿಸಿದ ಐವನ್, ಹೆಂಡತಿ ಎಂದು ಕರೆಯಿಸಿಕೊಳ್ಳುವ ಮಹಿಳೆಯೊಂದಿಗೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದಾನೆ. ಸುಮಾರು 3.15ರ ವೇಳೆಗೆ ನಿರ್ಜನ ರಸ್ತೆಯಲ್ಲಿ ಇಬ್ಬರ ಮುಖಾಮುಖಿಯಾಗಿದೆ. ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ಡೆರಿಕ್, ಐವನ್ ಕಾರಿನ ಎದುರು ವಾಹನ ನಿಲ್ಲಿಸಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಐವನ್ ಕಾರಿನಿಂದ ಕೆಳಗಿಳಿದ ತಕ್ಷಣ ಡೆರಿಕ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಐವನ್ ಸೊಂಟದ ಕೆಳಭಾಗಕ್ಕೆ ತಗುಲಿದ್ದು, ಅವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಕುಸಿದುಬಿದ್ದಿದ್ದಾರೆ. ಅತ್ತ ಡೆರಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಐವನ್ ಅಧಿಕ ರಕ್ತ ಸ್ರಾವದಿಂದ ಚರ್ಚ್ ರಸ್ತೆಯಲ್ಲಿಯೇ ಹೆಣವಾಗಿದ್ದಾನೆ.

ಕೊಲೆಗೆ ಕಾರಣವಾಯ್ತಾ ಕೇವಲ 1.5 ಲಕ್ಷ ರೂ?

ಇನ್ನು ಈ ಕೊಲೆಗೆ ಕಾರಣ ಕೇವಲ 1.5 ಲಕ್ಷ ರೂ ಎನ್ನುವ ಮಾಹಿತಿ ಅಚ್ಚರಿ ಮೂಡಿಸಿದೆ. ಕೆಲವು ತಿಂಗಳುಗಳ ಹಿಂದೆ ಡೈರಿಕ್ ಸ್ನೇಹಿತರವರ ಪತ್ನಿಗೆ ಸಂಬಂಧಿಸಿ ವಿದೇಶಕ್ಕೆ ತೆರಳುವ ವಿಚಾರವಾಗಿ ಏಜೆಂಟ್ ಓರ್ವ 27 ಲಕ್ಷ ರೂ ವಂಚಿಸಿದ್ದ. ಈ ಹಿನ್ನಲೆಯಲ್ಲಿ ಡೆರಿಕ್ 27 ಲಕ್ಷ ರೂ ವಸೂಲಿ ಮಾಡಿಕೊಡುವ ಜವಾಬ್ದಾರಿಯನ್ನ ಐವನ್ ಗೆ ವಹಿಸಿದ್ದ. ಈ ಹಿನ್ನಲೆಯಲ್ಲಿ ಪತ್ನಿ ಎಂದು ಕರೆಯುವ ಮಹಿಳೆ ಲಲಿತ ಜೊತೆ ಐವನ್ ಬೆಂಗಳೂರಿಗೆ ತೆರಳಿದ್ದಾನೆ. ಕ್ಯಾನ್ಸರ್ ಪೀಡಿತೆ ಆಗಿರುವ ಲಲಿತಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿ ಮೋಸ ಮಾಡಿರುವ ಏಜೆಂಟ್ ನನ್ನ ಪತ್ತೆ ಹಚ್ಚಿ 27 ಲಕ್ಷ ರೂ ವಸೂಲಿ ಮಾಡಿದ್ದ ಐವನ್.

ಆರೋಪಿಯ ಗುರುತು ಪತ್ತೆ: ಮೂರು ವಿಶೇಷ ಪೊಲೀಸ್​ ತಂಡಗಳ ರಚನೆ

27 ಲಕ್ಷದ ವಸೂಲಿಗೆ 3 ಲಕ್ಷ ರೂ ನೀಡಬೇಕು ಎನ್ನುವ ಕರಾರು ಹಾಕಿದ್ದ ಐವನ್​ಗೆ ಡೆರಿಕ್ ಅಷ್ಟು ಹಣ ನೀಡಿರಲಿಲ್ಲ. ಇದೇ ವಿಚಾರವಾಗಿ ಆಗಾಗ ಜಗಳಗಳು ನಡೆಯುತ್ತಿದ್ದವು. ಇನ್ನು 1ರಿಂದ 1.5 ಲಕ್ಷ ರೂ ಮಾತ್ರ ನೀಡುವುದು ಬಾಕಿ ಇರುವಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿ ಶುಕ್ರವಾರ ಮುಂಜಾನೆ ಚರ್ಚ್ ರಸ್ತೆಯಲ್ಲಿ ಡೆರಿಕ್ ನಾಡ ಬಂದೂಕಿನಿಂದ ಐವನ್​ಗೆ ಗುಂಡಿಕ್ಕಿ ಪರಾರಿಯಾಗಿದ್ದಾನೆ. ಘಟನೆ ನಡೆದ ವೇಳೆ ಐವನ್ ಜೊತೆಗಿದ್ದ ಮಹಿಳೆ ಲಲಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಕ್ಯಾನ್ಸರ್ ಪೀಡಿತ ಮಹಿಳೆಯೊಂದಿಗೆ ಐವನ್ ವಾಸ

ತನಿಖೆಯಲ್ಲಿ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದ್ದು, ಮೃತಪಟ್ಟ ಐವನ್ ಮಸ್ಕರೇಸ್ ಗಂಭೀರ ಕ್ರಿಮಿನಲ್ ಹಿನ್ನೆಲೆ ಇದ್ದು, 2014ರ ಸೆಪ್ಟೆಂಬರ್ 11ರಂದು ಉಡುಪಿಯಲ್ಲಿ ನಡೆದ ರೌಡಿಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಐವನ್ ಅವರ ವೈಯಕ್ತಿಕ ಬದುಕು ಕೂಡ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಭಾರತ ಮೂಲದ ಮಹಿಳೆಯನ್ನು ವಿವಾಹವಾಗಿದ್ದ ಐವನ್, ಬಳಿಕ ಕ್ಯಾನ್ಸರ್ ಪೀಡಿತ ಮತ್ತೋರ್ವ ಮಹಿಳೆ ಲಲಿತಳೊಂದಿಗೆ ವಾಸಿಸುತ್ತಿದ್ದರು. ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಮೊದಲ ಪತ್ನಿಯ ಮಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಒಟ್ಟಾರೆ ಶೂಟ್ ಔಟ್ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಘಟನೆ ನಡೆದ ಸ್ಪಲ್ಪ ದೂರದಲ್ಲಿ ಆಸ್ಪತ್ರೆ ಇದ್ದರೂ ಐವನ್​ಗೆ ಏಕೆ ಚಿಕಿತ್ಸೆ ನೀಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us