ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸರ್ಕಾರಿ ಬಸ್ ಇಲ್ಲ, ಬೇಡಿಕೆಗೆ ಸ್ಪಂದಿಸುವುದೇ ರಾಜ್ಯ ಸರ್ಕಾರ?
ಹಲವು ದಶಕಗಳಿಂದ ಮುಜರಾಯಿ ಇಲಾಖೆಯ 'ಎ' ಗ್ರೇಡ್ ದೇವಾಲಯ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಗೆ ತೆರಳುವ ಭಕ್ತರು ಖಾಸಗಿ ಬಸ್ಗಳಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ದೇವಾಲಯದ ಆಡಳಿತ ಮಂಡಳಿ ಮನವಿಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ.

ಉಡುಪಿ: ರಾಜ್ಯ ಸರಕಾರ ಮಹಿಳೆಯರಿಗೆ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದೆ. ಸದ್ಯ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಹಿಳೆಯರು ಈ ಸರಕಾರಿ ಸೇವೆಯನ್ನ ಬಳಸಿಕೊಳ್ಳುತ್ತಿದ್ದಾರೆ. ಉಡುಪಿ ಜಿಲ್ಲೆಯ ಮಟ್ಟಿಗೆ ಸರಕಾರಿ ಬಸ್ಗಳ ಸೇವೆ ಬಹಳ ಕಡಿಮೆ. ಆದರೂ ಈ ಬಾರಿ ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಜಿಲ್ಲೆಯ ಧಾರ್ಮಿಕ ಕೇಂದ್ರಗಳಿಗೆ ಸರಕಾರಿ ಬಸ್ ಸೇವೆ ನೀಡುವಂತೆ ಹೊಸ ಕೂಗು ಎದ್ದಿದೆ.
ಬಹುತೇಕ ಹೊರ ಜಿಲ್ಲೆಯವರು ಕರಾವಳಿಯ ಜಿಲ್ಲೆಗಳಿಗೆ ಧಾರ್ಮಿಕ ಕೇಂದ್ರದ ದರ್ಶನಕ್ಕಾಗಿ ಆಗಮಿಸುವುದು ಸಹಜ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ್ನನು ಹೆಚ್ಚಿನ ಮಹಿಳೆಯರು ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಸಂದರ್ಶನಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಗಮನಾರ್ಹ ವಿಚಾರ. ಉಡುಪಿ ಜಿಲ್ಲೆಯ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಹೀಗೆ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ.
ಆದರೆ, ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರುವಾಸಿ ಕ್ಷೇತ್ರವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ರಾಜ್ಯ ಹೊರ ರಾಜ್ಯದಿಂದಲೂ ಕೂಡ ಭಕ್ತರು ಆಗಮಿಸುತ್ತಾರೆ. ಆದರೆ ಭಕ್ತರು ಕೊಲ್ಲೂರಿಗೆ ಭೇಟಿ ನೀಡುವ ಸಲುವಾಗಿ ಬಹುತೇಕ ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದಾರೆ. ಕೇವಲ ಬೆರಳೆಣಿಕೆಯ ಸರಕಾರಿ ಬಸ್ಗಳು ಮಾತ್ರ ಕೊಲ್ಲೂರಿನಲ್ಲಿ ಭಕ್ತರ ಸೇವೆಗೆ ಲಭ್ಯವಿದೆ.
ಇದನ್ನೂ ಓದಿ: Shakti Scheme: ಪ್ರಯಾಣಿಕರ ಸಂದಣಿ ಅನುಗುಣವಾಗಿ ಹೆಚ್ಚುವರಿ KSRTC ಬಸ್ಗಳ ಕಾರ್ಯಾಚರಣೆಗೆ ಸೂಚನೆ
ರಾಜ್ಯ ಸರ್ಕಾರ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕೊಲ್ಲೂರಿಗೆ ಸರಕಾರಿ ಬಸ್ಗಳ ಸಂಖ್ಯೆ ಹೆಚ್ಚಿಸುವಂತೆ ಬೇಡಿಕೆ ಕೇಳಿಬಂದಿದೆ. ಸರಕಾರದ ಯೋಜನೆಯನ್ನು ಬಳಸಿಕೊಂಡು ದೇವಳಕ್ಕೆ ಆಗಮಿಸುವ ಭಕ್ತರ ಮೂಲಕ ದೇವಳದ ಆದಾಯ ವೃದ್ಧಿಯ ಜೊತೆಗೆ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ವ್ಯವಹಾರಿಕ ಕೇಂದ್ರಗಳಿಗೂ ಒಂದಿಷ್ಟು ಆದಾಯವು ಒದಗುತ್ತದೆ ಎನ್ನುವುದು ಅಷ್ಟೇ ಸತ್ಯ.
ಸರ್ಕಾರಿ ಬಸ್ ವ್ಯವಸ್ಥೆ ಮಾಡಿದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಹಿಳೆಯರು ಆಗಮಿಸಬಹುದು. ದುಬಾರಿ ವೆಚ್ಚ ಬರಿಸಿ ಖಾಸಗಿ ವಾಹನದಲ್ಲಿ ಆಗಮಿಸಲು ಸಾಧ್ಯವಾಗದೆ ದೇವಿಯ ದರ್ಶನ ಭಾಗ್ಯದಿಂದ ಲಕ್ಷಾಂತರ ಮಹಿಳೆಯರು ಚಿತರಾಗುತ್ತಿದ್ದಾರೆ. ಸರ್ಕಾರಿ ಬಸ್ ಇದ್ದಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಜೊತೆ ಕೊಲ್ಲೂರಿಗೂ ಭೇಟಿ ನೀಡಬಹುದು. ಸರ್ಕಾರ ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಪ್ರತೀ ನಿತ್ಯ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ದೇವಾಲಯದಿಂದ ಕಳುಹಿಸಿದ ನಿರ್ಣಯಕ್ಕೆ ಸರ್ಕಾರ ಸ್ಪಂದಿಸಲಿ ಎಂದು ದೇವಾಲಯದ ಟ್ರಸ್ಟಿ ಸಂಧ್ಯಾ ರಮೇಶ್ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಹೊಸ ಯೋಜನೆಯ ಸಂಪೂರ್ಣ ಲಾಭ ಪಡೆಯುವುದು ಮಹಿಳೆಯರ ಉದ್ದೇಶವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಉಡುಪಿಯಲ್ಲಿ ಬಹುತೇಕ ಖಾಸಗಿ ಬಸ್ಗಳ ಲಾಭ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರಕಾರ ಮಹಿಳೆಯರ ಈ ಬೇಡಿಕೆಯ ಕುರಿತಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Tue, 20 June 23




