ಹುಬ್ಬಳ್ಳಿ-ವಾಸ್ಕೋ-ಡ-ಗಾಮ ಟ್ರೈನಿಗೆ ವಿಸ್ಟಾಡೋಮ್ ಕೋಚ್ ಅಳವಡಿಕೆಯ ಸುಳ್ಳು ಸುದ್ದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ಬೇಸ್ತು ಬಿದ್ದರು!

ಸುಳ್ಳು ಸುದ್ದಿಯ ಮೂಲ ಪತ್ತೆಹೆಚ್ಚಲು ಎಸ್ ಡಬ್ಲ್ಯೂ ಅರ್ ಒಂದು ಆಂತರಿಕ ತನಿಖೆಯನ್ನು ಆರಂಭಿಸಿದೆ. ಕಿಡಿಗೇಡಿತನವನ್ನು ಬೇಧಿಸಲು ಸೈಬರ್ ಕ್ರೈಮ್ ವಿಭಾಗವನ್ನು ಸಂಪರ್ಕಿಸುವುದಾಗಿ ಸಹ ಒಬ್ಬ ಅಧಿಕಾರಿ ಹೇಳಿದರು.

ಹುಬ್ಬಳ್ಳಿ-ವಾಸ್ಕೋ-ಡ-ಗಾಮ ಟ್ರೈನಿಗೆ ವಿಸ್ಟಾಡೋಮ್ ಕೋಚ್ ಅಳವಡಿಕೆಯ ಸುಳ್ಳು ಸುದ್ದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ಬೇಸ್ತು ಬಿದ್ದರು!
ಸುಳ್ಳು ಸುದ್ದಿ ಇದೇ!
TV9kannada Web Team

| Edited By: Arun Belly

Jul 15, 2022 | 4:40 PM

ಹುಬ್ಬಳ್ಳಿ: ವಿಸ್ಟಾಡೋಮ್ ಕೋಚ್ನೊಂದಿಗೆ ಹುಬ್ಬಳ್ಳಿ-ವಾಸ್ಕೊ ಡ ಗಾಮ ಟ್ರೇನ್ ಜುಲೈ 16ರಿಂದ ಸಂಚಾರ ಆರಂಭಿಸಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು (fake news) ಎಂದು ನೈರುತ್ಯ ರೇಲ್ವೇ (ಎಸ್ ಡಬ್ಲ್ಯೂ ಆರ್) (SWR) ಅಧಿಕಾರಿಗಳು ತಿಳಿಸಿದ್ದಾರೆ. ವಿಸ್ಟಾಡೋಮ್ (Vistadome) ಕೋಚ್ನೊಂದಿಗೆ ಟ್ರೈನ್ ಸಂಚಾರ ಆರಂಭಿಸಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಯಾರೋ ಕಿಡಿಗೇಡಿಗಳು ಆಧಾರರಹಿತ ಸುದ್ದಿಯನ್ನು ಹರಿಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕೂಡ ಈ ಸುದ್ದಿ ಓದಿ ಬೇಸ್ತು ಬಿದ್ದಿದ್ದಾರೆ. ತಮ್ಮ ವೈಯಕ್ತಿಕ ಅಕೌಂಟ್ ನಿಂದ ಟ್ವೀಟ್ ಜೋಶಿ ಟ್ವೀಟ್ ಮಾಡಿ ಹುಬ್ಬಳಿ-ವಾಸ್ಕೊ ಡ ಗಾಮ ಟ್ರೈನಲ್ಲಿ ಇನ್ನು ಮುಂದೆ ಪ್ರಯಾಣಿಸುವ ಜನರು ವಿಸ್ಟಾಡೋಮ್ ಕೋಚ್ ಮೂಲಕ ಪ್ರಕೃತಿ ಸೌಂದರ್ಯದ ಆನಂದ ಸವಿಯುತ್ತಾ ಪಯಣಿಸಬಹುದು ಎಂದಿದ್ದಾರೆ. ಅಲ್ಪಾವಧಿಯಲ್ಲೇ ಜನ ಅವರ ಟ್ವೀಟ್ ಶೇರ್ ಮಾಡಿದ್ದಾರಾದರೂ ಅದನ್ನು ನಂತರ ಡಿಲೀಟ್ ಮಾಡಲಾಯಿತು.

ಎಸ್ ಡಬ್ಲ್ಯೂ ಆರ್ ಪ್ರೆಸ್ ನೋಟ್ ರೀತಿಯಲ್ಲೇ ಯಾರೋ ಕಿಡಿಗೇಡಿಗಳು ಪ್ರಕಟಣೆಯನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ನಂಬಿದ ಧಾರವಾಡ, ಹುಬ್ಬಳ್ಳಿ ಮತ್ತು ಬೆಳಗಾವಿಯ ಜನ ಸಂಭ್ರಮಿಸಿ ವ್ಯಾಪಕವಾಗಿ ಅದನ್ನು ಶೇರ್ ಮಾಡಿದ್ದಾರೆ. ಬೆಳಗಾವಿಯ ಜನ ಸದರಿ ಟ್ರೈನನ್ನು ತಮ್ಮ ನಗರದಿಂದ ಆರಂಭಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಆಶ್ಚರ್ಯವಾಗಬಹುದು. ಎಸ್ ಡಬ್ಲ್ಯೂ ಆರ್ ಕೇಂದ್ರ ಕಚೇರಿಯ ಅಧಿಕಾರಿಗಳು ಕೂಡ ಮೊದಲಿಗೆ ಈ ಸಂಗತಿಯನ್ನು ನಂಬಿದ್ದಾರೆ. ಬಹಳಷ್ಟು ಜನರಿಗೆ ಈ ಟ್ರೈನಿನ ಬಗ್ಗೆ ಗೊತ್ತೇ ಇರಲಿಲ್ಲ. ಅಮೇಲೆ ಅವರು ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಿದಾಗ ಸುದ್ದಿ ಕಿಡಿಗೇಡಿಗಳ ಸೃಷ್ಟಿ ಅಂತ ಗೊತ್ತಾಗಿದೆ.

ಬುಧವಾರ ಮಧ್ಯಾಹ್ನ ಎಸ್ ಡಬ್ಲ್ಯೂ ಅರ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ವಿಷಯವನ್ನು ಸ್ಪಷ್ಟಪಡಿಸಿತು. ‘ಕೆಲ ಅನಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್ ಗಳು ಹುಬ್ಬಳ್ಳಿ-ವಾಸ್ಕೊ ಡ ಗಾಮ ರೂಟ್ನಲ್ಲಿ ವಿಸ್ಟಾಡೋಮ್ ಕೋಚ್ ನೊಂದಿಗೆ ಟ್ರೈನು ಓಡಾಡುವ ಬಗ್ಗೆ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಹರಿಬಿಡುತ್ತಿದ್ದಾರೆ. ಈ ತೆರನಾದ ರೈಲು ಸಂಚಾರ ಆರಂಭವಾಗುವ ಬಗ್ಗೆ ಎಸ್ ಡಬ್ಲ್ಯೂ ಆರ್ ತನ್ನ ಅಧಿಕೃತ ವೆಬ್ ಸೈಟ್ ಮತ್ತು ಟ್ವಿಟರ್ ಹ್ಯಾಂಡಲ್ ಮೂಲಕ ಸೂಚನೆ ನೀಡುತ್ತದೆ. ಸುಳ್ಳು ಮತ್ತು ಅನಧಿಕೃತ ಮೂಲದ ಸುದ್ದಿಗಳನ್ನು ಜನ ನಂಬಿ ಬೇಸ್ತು ಬೀಳಬಾರದೆಂದು ಮನವಿ ಮಾಡಿಕೊಳ್ಳುತ್ತೇವೆ,’ ಎಂದು ಟ್ವೀಟ್ ಮಾಡಿದೆ.

ಸುಳ್ಳು ಸುದ್ದಿಯ ಮೂಲ ಪತ್ತೆಹೆಚ್ಚಲು ಎಸ್ ಡಬ್ಲ್ಯೂ ಅರ್ ಒಂದು ಆಂತರಿಕ ತನಿಖೆಯನ್ನು ಆರಂಭಿಸಿದೆ. ಕಿಡಿಗೇಡಿತನವನ್ನು ಬೇಧಿಸಲು ಸೈಬರ್ ಕ್ರೈಮ್ ವಿಭಾಗವನ್ನು ಸಂಪರ್ಕಿಸುವುದಾಗಿ ಸಹ ಒಬ್ಬ ಅಧಿಕಾರಿ ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada