AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದ ಯುವಕರ ಹೊಸ ಆವಿಷ್ಕಾರ; ಕಾಡಿನಲ್ಲೂ ಸಿಗಲಿದೆ ಪಕ್ಕಾ 4G ನೆಟ್‌ವರ್ಕ್

ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ಕಾಡುವ ನೆಟ್‌ವರ್ಕ್ ಸಮಸ್ಯೆಗೆ ಶಿರಸಿಯ ಮೂವರು ಯುವಕರು ಮೇಡ್ ಇನ್ ಇಂಡಿಯಾ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಮೈಕ್ರೋ ಸೆಲ್ ಹಾಗೂ ಫೆಮ್ಟೋಸೆಲ್ ಸಾಧನಗಳ ನೆರವಿನಿಂದ ಟವರ್ ಇಲ್ಲದ ದಟ್ಟ ಕಾಡಿನಲ್ಲೂ ಬಿಎಸ್ಎನ್‌ಎಲ್ 4G ಸೇವೆ ಪಡೆಯುವ ಈ ಪ್ರಯೋಗ ಯಲ್ಲಾಪುರದಲ್ಲಿ ಯಶಸ್ವಿಯಾಗಿದೆ.

ಉತ್ತರ ಕನ್ನಡದ ಯುವಕರ ಹೊಸ ಆವಿಷ್ಕಾರ; ಕಾಡಿನಲ್ಲೂ ಸಿಗಲಿದೆ ಪಕ್ಕಾ 4G ನೆಟ್‌ವರ್ಕ್
ಉತ್ತರ ಕನ್ನಡದ ಯುವಕರ ತಂಡ
ರಾಜೇಶ್ ದುಗ್ಗುಮನೆ
|

Updated on: Oct 29, 2026 | 11:21 AM

Share

ಮುಖ್ಯಾಂಶಗಳು

  • ಕೊರೊನಾ ಲಾಕ್‌ಡೌನ್ ವೇಳೆ ಹುಟ್ಟಿದ ಸವಾಲು
  • ನೆಟ್‌ವರ್ಕ್ ಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಂಡ ಶಿರಸಿ ಯುವಕರು
  • ಕುಗ್ರಾಮಗಳಲ್ಲೂ 4G ಇಂಟರ್ನೆಟ್ ನೀಡಲಿದೆ ಈ ಸಾಧನ

ಪಶ್ಚಿಮ ಘಟ್ಟದ ದಟ್ಟ ಕಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೊಸದೇನಲ್ಲ. ಹಳ್ಳಿಗಳ ಭಾಗದಲ್ಲಿ ಏನೇ ಮಾಡಿದರೂ ನೆಟ್ವರ್ಕ್ ಸಿಗೋದಿಲ್ಲ. ಕಂಪನಿಯವರು ವರ್ಕ್​ ಫ್ರಮ್ ಹೋಂ ಕೊಟ್ಟರೂ ಊರಿಗೆ ಬಂದು ಕೆಲಸ ಮಾಡಲಾಗದ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ನೆಟ್ವರ್ಕ್ ಕೊರತೆ. ಒಂದು ಕಾಲ್ ಮಾಡಲು ಗುಡ್ಡ-ಬೆಟ್ಟ, ಮರ ಹತ್ತುವ ಅನಿವಾರ್ಯತೆ ಇದೆ. ಆದರೆ, ಈ ದೀರ್ಘಕಾಲದ ತೊಂದರೆಗೆ ಶಿರಸಿಯ ಮೂವರು ಪ್ರತಿಭಾವಂತ ಯುವಕರು ತಾಂತ್ರಿಕ ಪರಿಹಾರ ಕಂಡು ಹಿಡಿದಿದ್ದಾರೆ. ತಮ್ಮ ಊರಿನ ನೆಟ್‌ವರ್ಕ್ ಕಷ್ಟವನ್ನು ಸವಾಲಾಗಿ ಸ್ವೀಕರಿಸಿದ ಈ ಯುವಕರು ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಕುಗ್ರಾಮಗಳಿಗೂ ನೆಟ್‌ವರ್ಕ್ ಭಾಗ್ಯ ಸಿಗಲಿದೆ. ಆ ಬಗ್ಗೆ ಇಲ್ಲಿದೆ ವಿವರ.

ಕೋವಿಡ್ ವೇಳೆ ಹುಟ್ಟಿದ ಕನಸು

ಶಿರಸಿಯ ಅಭಯ್, ಸುದರ್ಶನ್ ಮತ್ತು ಸಮರ್ಥ್ ಎಂಬ ಮೂವರು ಯುವಕರು ಟೆಲಿಕಾಂ ಟೆಕ್ನಾಲಜಿ ಅಭ್ಯಾಸ ಮಾಡಿ, ಉತ್ತಮ ಸಂಬಳದ ಉದ್ಯೋಗದಲ್ಲಿದ್ದರು. ಕೊರೊನಾ ಇವರ ಬದುಕನ್ನು ಬದಲಿಸಿತು. ಲಾಕ್‌ಡೌನ್ ಸಮಯದಲ್ಲಿ ಊರಿಗೆ ಬಂದಾಗ ಇಲ್ಲಿನ ನೆಟ್‌ವರ್ಕ್ ಸಮಸ್ಯೆಯನ್ನು ಗಮನಿಸಿದರು. ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿದೆ. ನೆಕ್ಸಸ್ ಸ್ಪೆರಿಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಇವರು ಹುಟ್ಟುಹಾಕಿದರು.

ಈ ತಂಡಕ್ಕೆ ತಂತ್ರಜ್ಞಾನ ಮತ್ತು ಉಪಕರಣ ಬೆಂಬಲವನ್ನು ಬೆಂಗಳೂರಿನ ‘ಲೇಖಾ ವೈರ್‌ಲೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ನೀಡಿದೆ. ಈ ಕಂಪನಿಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ 4G ಹಾಗೂ 5G ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ನೀಡಿದೆ. ವಿಶೇಷ ಎಂದರೆ ಇದಕ್ಕೆ ಬೇಕಾದ ಪರಿಕರಗಳನ್ನು ಬೆಂಗಳೂರಿನಲ್ಲಿರುವ ತಮ್ಮದೇ ಉತ್ಪಾದನಾ ಘಟಕದಲ್ಲಿ ವಿನ್ಯಾಸಗೊಳಿಸಿ ತಯಾರಿಸುತ್ತಿದೆ.

ಇದನ್ನೂ ಓದಿ: 6ಜಿ ನೆಟ್ವರ್ಕ್ ಅಭಿವೃದ್ಧಿಪಡಿಸಲು ಅಮೆರಿಕ ನೇತೃತ್ವದ 25 ರಾಷ್ಟ್ರಗಳ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

ಏನಿದು ತಂತ್ರಜ್ಞಾನ?

ಈ ಯುವಕರು ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಸುಲಭವಾಗಿ 4G ಕರೆ ಹಾಗೂ ಇಂಟರ್ನೆಟ್ ಬಳಸಬಹುದು.

ಮೈಕ್ರೋ ಸೆಲ್: ಮೊಬೈಲ್ ಟವರ್ ಇಲ್ಲದ, ಸಿಗ್ನಲ್ ಸಂಪೂರ್ಣವಾಗಿ ಬರದ ಕಾಡು ಅಥವಾ ಗ್ರಾಮೀಣ ಭಾಗಗಳಲ್ಲಿ ದೊಡ್ಡ ಟವರ್ ಹಾಕುವ ಅಗತ್ಯವಿಲ್ಲದೇ ಈ ಸಾಧನವನ್ನು ಅಳವಡಿಸಿ 4G ಇಂಟರ್ನೆಟ್ ಪಡೆಯಬಹುದು.

ಫೆಮ್ಟೋಸೆಲ್ : ಟವರ್ ಇದ್ದರೂ ಮನೆಗಳ ಒಳಗೆ ಅಥವಾ ಕಟ್ಟಡಗಳ ಒಳಗಡೆ ನೆಟ್‌ವರ್ಕ್ ಸಿಗದ ಜಾಗಗಳಲ್ಲಿ ಈ ಸಾಧನವನ್ನು ಬಳಸಿ ನೆಟ್ವರ್ಕ್ ಬಳಸಬಹುದು. ಪ್ರಯೋಜನಗಳು: ಇದರಿಂದ ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳು, ಸಹಕಾರ ಸಂಘಗಳು, ಆನ್‌ಲೈನ್ ಶಿಕ್ಷಣ, ವರ್ಕ್​ ಫ್ರಮ್ ಹೋಂಗೆ ನೆಟ್‌ವರ್ಕ್ ಸಮಸ್ಯೆ ಎದುರಾಗುವುದಿಲ್ಲ. ಇಕೆವೈಸಿ ರೀತಿಯ ಪ್ರಕ್ರಿಯೆಗೆ ಸುಲಭದಲ್ಲಿ ಒಟಿಪಿ ಪಡೆಯಬಹುದು.

ಕೇಂದ್ರ ಸರ್ಕಾರದ ಮೆಚ್ಚುಗೆ ಹಾಗೂ ಯಶಸ್ವಿ ಪರೀಕ್ಷೆ

ಯುವಕರ ಈ ಆವಿಷ್ಕಾರವನ್ನು ಕೇಂದ್ರ ದೂರಸಂಪರ್ಕ ಸಚಿವಾಲಯಕ್ಕೆ ಸಲ್ಲಿಸಿದಾಗ, ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ BSNL ಸಹಯೋಗದೊಂದಿಗೆ ಪರೀಕ್ಷಿಸಲು ಅವಕಾಶ ನೀಡಿದರು.

ಉತ್ತರ ಪ್ರದೇಶದ ಆಗ್ರಾ: ಜನನಿಬಿಡ ಪ್ರದೇಶಗಳಲ್ಲಿ ‘ಫೆಮ್ಟೋಸೆಲ್’ ಪರೀಕ್ಷೆ ನಡೆಯುತ್ತಿದೆ. ಉತ್ತರ ಕನ್ನಡದ ಯಲ್ಲಾಪುರ (ಆನಗೋಡ): ಇಲ್ಲಿ ನಡೆಸಿದ ‘ಮೈಕ್ರೋ ಸೆಲ್’ ಪ್ರಾಯೋಗಿಕ ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿದೆ. ಸಿಗ್ನಲ್ ಇರದ ಜಾಗದಲ್ಲೂ ಜನರು ನೆಟ್ವರ್ಕ್ ಪಡೆದು, ಇಂಟರ್​​ನೆಟ್ ಬಳಸಿ ಕೆಲಸ ನಿರ್ವಹಿಸುತ್ತಿದ್ದಾರೆ.

ಆನಗೋಡು ಭಾಗದಲ್ಲಿ ಅಳವಡಿಸಲಾದ ಉಪಕರಣ

ಆನಗೋಡು ಭಾಗದಲ್ಲಿ ಅಳವಡಿಸಲಾದ ಉಪಕರಣ

‘ಆತ್ಮನಿರ್ಭರ ಭಾರತ’ ಹಾಗೂ ಸ್ಥಳೀಯ ಉದ್ಯೋಗಾವಕಾಶ

ಒಂದೊಮ್ಮೆ ಇದು ಎಲ್ಲ ಕಡೆಗಳಲ್ಲಿ ಜಾರಿಗೆ ಬಂದರೆ ಸುಲಭದಲ್ಲಿ ನೆಟ್ವರ್ಕ್​ ಸಿಗಲಿದೆ. ಈ ಬಗ್ಗೆ ಮಾತನಾಡಿರುವ ಲೇಖಾ ವೈರ್‌ಲೆಸ್ ಸಂಸ್ಥಾಪಕ ರಾಮು, ‘ಭಾರತದಲ್ಲೇ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ತಯಾರಿಸಲಾದ ಈ 4G ಮತ್ತು 5G ರೇಡಿಯೋ ಉತ್ಪನ್ನಗಳು ಟೆಲಿಕಾಂ ಕ್ಷೇತ್ರದಲ್ಲಿ ಆತ್ಮನಿರ್ಭರತೆ ತರಲು ನೆರವಾಗಲಿವೆ’ ಎಂದಿದ್ದಾರೆ. ನೆಕ್ಸಸ್ ಸ್ಪೆರಿಕಲ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಸುದರ್ಶನ್ ಹೆಚ್.ಎನ್ ಮಾತನಾಡಿ, ‘ಗ್ರಾಮೀಣ ಭಾಗಕ್ಕೆ ನೆಟ್‌ವರ್ಕ್ ವಿಸ್ತರಿಸುವುದರಿಂದ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಜನರ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ’ ಎಂದು ತಿಳಿಸಿದ್ದಾರೆ.

ಪ್ರಸ್ತುತ ಬಿಎಸ್​ಎನ್​ಎಲ್​ ಜೊತೆ ಸೇರಿ ಈ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಅತಿ ಕಡಿಮೆ ಬೆಲೆಯಲ್ಲಿ ಈ ಸಾಧನಗಳನ್ನು ಸಾರ್ವಜನಿಕರಿಗೆ ತಲುಪಿಸುವ ಗುರಿಯನ್ನು ಈ ಯುವಕರ ತಂಡ ಹೊಂದಿದೆ.

ಮತ್ತಷ್ಟು ರಾಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More