‘ಸಾಲ ಮಾಡಿದ್ದೇನೆ ಮರು ಪಾವತಿಗೆ ದಾರಿ ತೋರಿಸು’: ಯಲಗೂರಿನ ಆಂಜನೇಯನಿಗೆ ಪತ್ರ ಬರೆದ ಭಕ್ತ
ಜಾಗೃತ ದೇವರೆಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರಿನ ಶ್ರೀ ಆಂಜನೇಯ ಸ್ವಾಮೀ ದೇವಸ್ಥಾನದ ಹುಂಡಿ ಎಣಿಕಾ ಕಾರ್ಯ ಇಂದು ಆರಂಭವಾಗಿದೆ. ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆಯುತ್ತಿದೆ.
ವಿಜಯಪುರ: ‘ಮಾತನಾಡುವ ಹನುಮಂತ’ ಎಂದು ಖ್ಯಾತಿಗಳಿಸಿರುವ ಯಲಗೂರೇಶ್ವರ ಅತ್ಯಂತ ಶಕ್ತಿಶಾಲಿ ಮತ್ತು ನಾಡಿನಾದ್ಯಂತ ಸಾಕಷ್ಟು ಜನಪ್ರಿಯ. ಭಕ್ತರು (Devotees) ಮಾತ್ರ ಪ್ರೀತಿಯಿಂದ ‘ಯಲಗೂರು ಹನುಮಪ್ಪ’ ಎಂದೇ ಕರೆಯುತ್ತಾರೆ. ಜಾಗೃತ ದೇವರೆಂದೇ ಹೆಸರು ಪಡೆದಿರುವ ಈ ದೇವಾಯಲ ಇರುವುದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರು ಎಂಬ ಪುಟ್ಟ ಗ್ರಾಮದಲ್ಲಿ. ಈ ದೇವಾಯಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಹನುಮಂತನ ವಿಗ್ರಹವು ದೈವಿಕವಾಗಿದೆ. ಸದ್ಯ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ಆರಂಭವಾಗಿದ್ದು, ಹಣದೊಂದಿಗೆ ಬೇಡಿಕೆಗಳ ಈಡೇರಿಕೆಗೆ ಭಕ್ತರು ಬರೆದ ಸ್ವಾರಸ್ಯಕರ ಪತ್ರಗಳೂ ಲಭ್ಯವಾಗಿವೆ.
ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಆಧಿಕಾರಿಗಳು ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹುಂಡಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಷ್ಟು ಚಿನ್ನ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ ಎಂಬುದು ಇಂದು ತಡರಾತ್ರಿ ತಿಳಿದು ಬರಲಿದೆ.
ಇದನ್ನೂ ಓದಿ: ವಿಜಯಪುರದ ಮಹಿಳಾ ವಿವಿಯಲ್ಲಿ ಕೆಲಸ ಕೊಡಿಸೋ ಆಮಿಷ; ಉದ್ಯೋಗದ ಆಸೆಯಿಂದ ಯಾರೂ ಮೋಸ ಹೋಗಬಾರದೆಂದು ಪ್ರಕಟಣೆ
ಇದರ ಮಧ್ಯೆ ಹುಂಡಿಯಲ್ಲಿ ನೆರೆಯ ನೇಪಾಳ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಭಕ್ತರು ನೆರೆ ದೇಶದ ಹಣವನ್ನು ಹುಂಡಿ ಹಾಕಿದ್ದಾರೆ. ಅನ್ಯ ದೇಶದ ಕೆರೆನ್ಸಿ ಜೊತೆಗೆ ಹಲವಾರು ಪತ್ರಗಳು ಸಹ ಹುಂಡಿಯಲ್ಲಿ ಸಿಕ್ಕಿವೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರಗಳ ಮೂಲಕ ಭಕ್ತರು ಶ್ರೀ ಆಂಜನೇಯ ಸ್ವಾಮಿಯನ್ನು ಬೇಡಿಕೊಂಡಿದ್ದಾರೆ.
ನಾನು ಪಿಎಸ್ಐ ಆಗಬೇಕೆಂದು ಓರ್ವ ಭಕ್ತ ಪತ್ರ ಬರೆದರೆ, ನನಗೆ ಎಫ್ಡಿಎ ಹುದ್ದೆ ಸಿಗಬೇಕು ಎಂದು ಮತ್ತೋರ್ವ ಬರೆದಿದ್ದಾರೆ. ಸಾಲ ಮಾಡಿದ್ದೇನೆ ಸಾಲ ಮರು ಪಾವತಿಗೆ ದಾರಿ ತೋರಿಸು ಎಂಬಿತ್ಯಾದಿ ಪತ್ರಗಳು ಅಧಿಕಾರಿಗಳ ಗಮನ ಸೆಳೆದಿವೆ. ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ಮರಾಠಿ ಭಾಷೆಯಲ್ಲೂ ಬರೆದಿರುವ ಪತ್ರಗಳು ಹುಂಡಿಯಲ್ಲಿ ಕಂಡು ಬಂದಿವೆ.
ಇದನ್ನೂ ಓದಿ: Achievement: ಮೂಕಪ್ರಾಣಿಗಳ ಸಾಧನೆ! ಬೆಳಗ್ಗೆ 5 ರಿಂದ ಸಂಜೆ 5 ಗಂಟೆವರೆಗೆ ಜಮೀನು ಉಳುಮೆ ಮಾಡಿದ ಮಧ್ಯ ವಯಸ್ಸಿನ ಜೋಡೆತ್ತು!
ಯಲಗೂರೇಶ್ವರ ಹುಂಡಿ ಎಣಿಕಾ ಕಾರ್ಯವನ್ನು ಸಿಸಿ ಕೆಮೆರಾಗಳ ಸಮ್ಮುಖದಲ್ಲಿ ಮಾಡಲಾಗುತ್ತಿದ್ದು ಸೂಕ್ತ ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:42 pm, Sun, 16 July 23