AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿಯ ಗುರುಸಣಗಿ ಸಿದ್ದಲಿಂಗೇಶ್ವರ ದೇವಸ್ಥಾನದ ಜಾತ್ರೆ ವೇಳೆ ದಲಿತ ಕುಟುಂಬಗಳ ಮೇಲೆ ಸವರ್ಣೀಯರಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಬಳಿಕ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಸದ್ಯ ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಜನರನ್ನು ಬಂಧಿಸಿಲಾಗಿದೆ.

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ
ಎರಡು ಗುಂಪುಗಳ ಮಧ್ಯೆ ಗಲಾಟೆImage Credit source: tv9 kannada
ಅಮೀನ್​ ಸಾಬ್​
| Edited By: |

Updated on: Sep 14, 2026 | 3:59 PM

Share

ಯಾದಗಿರಿ, ಸೆಪ್ಟೆಂಬರ್​​ 14: ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆಂದು ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ವಡಗೇರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಹಾಗೂ ಹಲ್ಲೆ ಆರೋಪದಡಿ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈಗಾಗಲೇ ಪ್ರಮುಖ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಅಮಾವಾಸ್ಯೆಯ ಜಾತ್ರಾ ಮಹೋತ್ಸವ ಹಿನ್ನೆಲೆ ಶಹಾಪುರ ತಾಲೂಕಿನ ಚಾಮನಾಳ್ (ಚಾಮನಹಳ್ಳಿ) ಹಾಗೂ ಪಗಲಾಪುರ ಗ್ರಾಮದ ದಲಿತ ಕುಟುಂಬಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಜಾತ್ರೆ ಮುಗಿದ ಬಳಿಕ ದೇವಸ್ಥಾನದ ಆವರಣದಲ್ಲೇ ಉಳಿದುಕೊಂಡಿದ್ದ ಭಕ್ತರು ಮರುದಿನ ಊರಿಗೆ ವಾಪಸಾಗುವ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ.

ಇದನ್ನೂ ಓದಿ: ಯಾದಗಿರಿ: ನವಿಲುಗಳನ್ನ ಬೇಟೆಯಾಡಿದ್ದ 7 ಜನರ ಬಂಧನ; 6 ನಾಡ ಬಂದೂಕು ವಶಕ್ಕೆ

ಭಕ್ತರು ತಮ್ಮ ಊರಿಗೆ ತೆರಳಲು ಆಟೋ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ಸ್ಥಳೀಯ ಬಾಲಕನೊಬ್ಬನಿಗೆ ಆಟೋ ತಗುಲಿದೆ. ಈ ಸಣ್ಣ ಕಾರಣಕ್ಕಾಗಿ ಸ್ಥಳೀಯರು ಹಾಗೂ ಭಕ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸ್ಥಳೀಯ ಸವರ್ಣೀಯರು ದಲಿತ ಕುಟುಂಬಗಳ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.

ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ: ಯುವತಿ ಆರೋಪ

ಸ್ಥಳೀಯರು ಮತ್ತು ಭಕ್ತರ ನಡುವೆ ನಡೆದ ಈ ಸಂಘರ್ಷದಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿದ್ದು, ಐದು ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ‘ನಮ್ಮ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ’ ಎಂದು ಹಲ್ಲೆಗೊಳಗಾದ ಯುವತಿ ಆರೋಪಿಸಿದ್ದಾರೆ.

LIVE TV

ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದ್ದಿಷ್ಟು 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರತಿಕ್ರಿಯಿಸಿದ್ದು, ‘​ಚಾಮನಹಳ್ಳಿ ಗ್ರಾಮದಿಂದ ದೇವಸ್ಥಾನದ ದರ್ಶನಕ್ಕೆಂದು ಬಂದಿದ್ದರು. ಭಕ್ತರ ಆಟೋ ರಿವರ್ಸ್ ವೇಳೆ ಸ್ಥಳೀಯ ಬಾಲಕನಿಗೆ ತಗುಲಿದೆ. ಈ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪ್ರಕರಣ ಸಂಬಂಧ 6 ಜನರನ್ನು ಬಂಧಿಸಲಾಗಿದೆ’ ಎಂದರು.

ಇದನ್ನೂ ಓದಿ: 40 ಕಿಮೀ ಚೇಸಿಂಗ್​​​: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ​​ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು!​​

‘ಗಲಾಟೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ. ಸಂತ್ರಸ್ತರ ದೂರಿನನ್ವಯ ಅಟ್ರಾಸಿಟಿ ಮತ್ತು ಹಲ್ಲೆ ಕೇಸ್ ದಾಖಲಾಗಿದ್ದು, ಘಟನೆ ಸಂಬಂಧ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ’ ಎಂದು ಪೃಥ್ವಿಕ್ ಶಂಕರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us