AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಕಿಮೀ ಚೇಸಿಂಗ್​​​: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ​​ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು!​​

Yadgiri News: ಯಾದಗಿರಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ದನಗಳ್ಳರ ಗ್ಯಾಂಗ್​ ಅನ್ನು ಬಂಧಿಸಿದ್ದಾರೆ. ಆ ಮೂಲಕ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು 40 ಕಿಮೀ ಚೇಸ್ ಮಾಡಿ ದನಗಳ್ಳರನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

40 ಕಿಮೀ ಚೇಸಿಂಗ್​​​: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ​​ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು!​​
ಬಂಧಿತರು Image Credit source: tv9 kannada
ಅಮೀನ್​ ಸಾಬ್​
| Edited By: |

Updated on: Aug 23, 2026 | 3:00 PM

Share

ಮುಖ್ಯಾಂಶಗಳು

  • ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ದನಗಳ್ಳರ ಹಿಡಿದ ಪೊಲೀಸರು
  • ಯಾದಗಿರಿ ಜಿಲ್ಲಾ ಪೊಲೀಸರಿಂದ ಅಂತಾರಾಜ್ಯ ದನಗಳ್ಳರ ಬಂಧನ
  • ಪೊಲೀಸರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ

ಯಾದಗಿರಿ, ಆಗಸ್ಟ್​ 23: ಯಾದಗಿರಿ (yadagiri) ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಖತರ್ನಾಕ್ ಗ್ಯಾಂಗ್​​ನ್ನು (Cattle Rustlers) ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ (arrest). ದನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬರೋಬ್ಬರಿ 40 ಕಿ.ಮೀ ಬೆನ್ನಟ್ಟಿ ಖೆಡ್ಡಾ ತೋಡುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಡೆದಿದ್ದೇನು?

ಕಳೆದ ಎರಡು ವರ್ಷಗಳಿಂದ ವಡಗೇರ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಈ ಗ್ಯಾಂಗ್ ನಿರಂತರವಾಗಿ ಕೈಚಳಕ ತೋರುತ್ತಿತ್ತು. ಮನೆಗಳ ಮುಂದೆ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ರಾಸುಗಳಿಗೆ ಅರಿವಳಿಕೆ (ಮತ್ತು ಬರುವ) ಇಂಜೆಕ್ಷನ್ ನೀಡಿ, ಅವು ಪ್ರಜ್ಞೆ ತಪ್ಪುತ್ತಿದ್ದಂತೆ ತಮ್ಮ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದರು. ಕದ್ದ ದನಗಳನ್ನು ನೇರವಾಗಿ ಕಸಾಯಿಖಾನೆಗಳಿಗೆ ಸಾಗಿಸಿ ಮಾರಾಟ ಮಾಡುವುದು ಈ ಗ್ಯಾಂಗ್‌ನ ದಂಧೆಯಾಗಿತ್ತು. ಈ ಕುರಿತು ಯಾದಗಿರಿ ಜಿಲ್ಲೆಯ ವಡಗೇರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಕಲಬುರಗಿಯಲ್ಲಿ ವಾಸವಾಗಿದ್ದ ಗ್ಯಾಂಗ್

ಕಲಬುರಗಿಯಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ ಈ ಗ್ಯಾಂಗ್, ಎಂದಿನಂತೆ ದನ ಕದ್ದು ಕಪ್ಪು ಸ್ಕಾರ್ಪಿಯೋದಲ್ಲಿ ವೇಗವಾಗಿ ಎಸ್ಕೇಪ್ ಆಗಲು ಯತ್ನಿಸಿದೆ. ಖಚಿತ ಮಾಹಿತಿ ಪಡೆದ ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆಗಿಳಿದು ವಾಹನ ಚೇಸ್ ಮಾಡಿದ್ದಾರೆ. ಪೊಲೀಸರು ಬೆನ್ನಟ್ಟುತ್ತಿದ್ದರೂ ಕಳ್ಳರು ವಾಹನ ನಿಲ್ಲಿಸದೆ ಅತಿ ವೇಗವಾಗಿ ಹೆದ್ದಾರಿಯಲ್ಲಿ ಸಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು, ಯಾದಗಿರಿ ತಾಲೂಕಿನ ಯರಗೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರಾಕ್ಟರ್ ಅನ್ನು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ: ಮೂವರು ದುರ್ಮರಣ; 8 ಕೂಲಿ ಕಾರ್ಮಿಕರ ಸ್ಥಿತಿ ಗಂಭೀರ

ವೇಗವಾಗಿ ಬಂದ ಕಳ್ಳರ ಸ್ಕಾರ್ಪಿಯೋ ವಾಹನ ನಿಯಂತ್ರಣ ತಪ್ಪಿ ನೇರವಾಗಿ ಜೆಸಿಬಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಳ್ಳರ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಒಳಗಿದ್ದ ಆರೋಪಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳವನ್ನು ಸುತ್ತುವರಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರು ಜನರ ಬಂಧನ

ಬಂಧಿತರನ್ನು ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್, ಅಜೀಮ್ ಹಾಗೂ ರಾಜಸ್ಥಾನ ಮೂಲದ ನಿತಿನ್ ಎಂದು ಗುರುತಿಸಲಾಗಿದೆ. ಜೀವದ ಹಂಗು ತೊರೆದು ರಸ್ತೆ ಮಧ್ಯೆ ಜೆಸಿಬಿ ನಿಲ್ಲಿಸಿ, ಅಂತರರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us