ರೈತ ಸಂಘಟನೆಗಳು ಮಧ್ಯರಾತ್ರಿ ಮಾತುಕತೆಗೆ ಬಂದರೂ ಸರ್ಕಾರ ಸಿದ್ಧವಿದೆ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕಳೆದ ನವೆಂಬರ್ ತಿಂಗಳಿಂದ ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಮುಷ್ಕರದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೊಸ ಕೃಷಿ ಕಾನೂನುಗಳನ್ನು ವಾಪಸ್ಸು ತೆಗೆದುಕೊಳ್ಳುವ ಜೊತೆಗೆ ಕಾನೂನು ಬೆಂಬಲಿತ ಕನಿಷ್ಟ ಬೆಂಬಲ ಬೆಲೆಯನ್ನು (ಎಮ್ಎಸ್ಪಿ) ರೈತರು ಆಗ್ರಹಿಸುತ್ತಿದ್ದಾರೆ.
ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಲವು ತಿಂಗಳುಗಳಿಂದ ಮುಷ್ಕರ ನಡೆಸುತ್ತಿರುವ ರೈತ ಒಕ್ಕೂಟಗಳೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಕೇಂದ್ರ ಸಿದ್ಧವಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ಹೇಳಿದರಾದರೂ ಅವುಗಳನ್ನು ಹಿಂಪಡೆಯುವ ಸಾಧ್ಯತೆಯನ್ನು ಅಲ್ಲಗಳೆದರು. ‘ಹೊಸ ಕೃಷಿ ಕಾಯ್ದೆಯ ಪ್ರಯೋಜನಗಳ ಬಗ್ಗೆ ಯಾವುದೇ ರೈತ ಸಂಘಟನೆಯೊಂದಿಗೆ ಚರ್ಚಿಸಲು ಭಾರತ ಸರ್ಕಾರ ತಯಾರಿದೆ, ಮಾತುಕತೆಗೆ ನಾವು ಅವರನ್ನು ಸ್ವಾಗತಿಸುತ್ತೇವೆ,’ ಎಂದು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ತೋಮರ್ ಹೇಳಿದ್ದಾರೆ.
‘ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಾತನ್ನು ಬಿಟ್ಟು ಅದರ ಪ್ರಯೋಜನಗಳ ಕುರಿತು ಮಾತಾಡಲು ಮಧ್ಯರಾತ್ರಿ ಸಮಯದಲ್ಲಿ ಯಾವುದಾದರು ರೈತ ಸಂಘಟನೆ ಬಂದರೂ ನಾವು ಸಿದ್ಧರಿದ್ದೇವೆ,’ ಎಂದು ತೋಮರ್ ತಮ್ಮ ಟ್ವೀಟ್ಗೆ ಅಟ್ಯಾಚ್ ಮಾಡಿರುವ ವಿಡಿಯೋ ಕ್ಲಿಪ್ಪಿಂಗ್ನಲ್ಲಿ ಹೇಳಿದ್ದಾರೆ. ವಿಡಿಯೋನಲ್ಲಿ ಅವರು ಒಬ್ಬ ವರದಿಗಾರ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ.
भारत सरकार नए कृषि कानूनों से संबंधित प्रावधानों पर किसी भी किसान संगठन से और कभी भी बात करने को तैयार है…हम उनका स्वागत करते हैं… pic.twitter.com/gv1FF9zU8i
— Narendra Singh Tomar (@nstomar) June 18, 2021
ಜನವರಿ 22 ರಂದು ಎರಡು ಪಕ್ಷಗಳ ನಡುವೆ ಮಾತುಕತೆ ನಡೆದ ನಂತರ ಅದು ಸ್ಥಗಿತಗೊಂಡಿದೆ. ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಇದುವರಗೆ 11 ಬಾರಿ ಮಾತುಕತೆಗಳು ನಡೆದಿವೆ. ಜನೆವರಿ 22ರಂದ ನಡೆದ ಸಭೆಯಲ್ಲಿ ಸರ್ಕಾರವು ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಬದಲು, 18 ತಿಂಗಳ ಅವಧಿಯವರೆಗೆ ಹಿಡಿದಿಡುವ ಕುರಿತು ಮಾಡಿದ ಪ್ರಸ್ತಾವವನೆಯನ್ನು ರೈತ ಸಂಘಟನೆಗಳು ತಿಸ್ಕರಿಸಿದವು. ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಅವು ಪಟ್ಟು ಹಿಡಿದವು. ಕಾಯ್ದೆಗಳನ್ನು ತಡೆಹಿಡಿಯುವ ಪ್ರಸ್ತಾವನೆಯನ್ನು ಸರ್ಕಾರ 10 ನೇ ಸುತ್ತಿನ ಮತುಕತೆಯಿಂದ ಮಾಡುತ್ತಿದೆ. ಅದರೆ ಅವುಗಳನ್ನು ರೋಲ್ಬ್ಯಾಕ್ ಮಾಡುವುದು ಸಾಧ್ಯವೇ ಇಲ್ಲವೆಂದು ಪದೇಪದೆ ಹೇಳುತ್ತಿದೆ.
ಅದಕ್ಕೆ ಮೊದಲು, ಸರ್ವೋಚ್ಛ ನ್ಯಾಯಾಲಯವು ತನ್ನ ಮುಂದಿನ ಆದೇಶದವರೆಗೆ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತರಬಾರದೆಂದು ಹೇಳಿ ಅವುಗಳನ್ನು ತಡೆಹಿಡಿದಿದೆ.
ಕಳೆದ ನವೆಂಬರ್ ತಿಂಗಳಿಂದ ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಮುಷ್ಕರದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೊಸ ಕೃಷಿ ಕಾನೂನುಗಳನ್ನು ವಾಪಸ್ಸು ತೆಗೆದುಕೊಳ್ಳುವ ಜೊತೆಗೆ ಕಾನೂನು ಬೆಂಬಲಿತ ಕನಿಷ್ಟ ಬೆಂಬಲ ಬೆಲೆಯನ್ನು (ಎಮ್ಎಸ್ಪಿ) ರೈತರು ಆಗ್ರಹಿಸುತ್ತಿದ್ದಾರೆ.
ರೈತರ ವ್ಯಾಪಕ ವಿರೋಧದ ನಡುವೆ ಕೇಂದ್ರವು ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ 2020, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ ಮತ್ತು ನೆರವು) ಕಾಯ್ದೆ 2020 ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020- ಈ ಮೂರು ವಿಧೇಯಕಗಳನ್ನು ಕಳೆದ ಸೆಪ್ಟಂಬರ್ನಲ್ಲಿ ಸಂಸತ್ತಿನಲ್ಲಿ ಪಾಸು ಮಾಡಿತು. ಈ ಕಾಯ್ದೆಗಳು ಎಪಿಎಮ್ಸಿ ವ್ಯವಸ್ಥೆ ಮತ್ತು ರೈತರು ತಮ್ಮ ಬೆಳೆಗಳಿಗೆ ಪಡೆಯುವ ಕನಿಷ್ಟ ಬೆಂಬಲ ಬೆಲೆ ಪದ್ಧತಿಯನ್ನು ಕೊನೆಗೊಳಿಸುತ್ತವೆ ಮತ್ತು ತಮ್ಮನ್ನು ದೊಡ್ಡ ಕಾರ್ಪೋರೇಟ್ಗಳ ದಯಾಭಿಕ್ಷೆಗೆ ಈಡು ಮಾಡಲಿವೆ ಎಂದು ರೈತರು ಆರೋಪಿಸುತ್ತಿದ್ದಾರೆ. ಆದರೆ, ರೈತರ ಆತಂಕ ಆಧಾರರಹಿತವಾದದ್ದು ಎಂದು ಸರ್ಕಾರ ಹೇಳುತ್ತಿದೆ.
ಜನೆವರಿ 26 ಗಣರಾಜ್ಯೋತ್ಸವ ದಿನದಂದು ರೈತರು ನವದೆಹಲಿಯಲ್ಲಿ ಟ್ರ್ಯಾಕ್ಟರ್ ಱಲಿ ಆಯೋಜಿಸಿದಾಗ ಅವರ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು.
ಇದನ್ನೂ ಓದಿ: Farmers Protest: ಜೂನ್ 26ರಂದು ದೇಶಾದ್ಯಂತ ರೈತರ ಪ್ರತಿಭಟನೆ; ರಾಜಭವನದ ಮುಂದೆ ಕಪ್ಪು ಬಾವುಟ ಹಿಡಿದು ಧರಣಿ