‘ಲರ್ನಿಂಗ್‌ ಫ್ರಮ್‌ ಎನಿವೇರ್‌’ ಕಲಿಕಾ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

‘ಲರ್ನಿಂಗ್‌ ಫ್ರಮ್‌ ಎನಿವೇರ್‌’ ಕಲಿಕಾ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
ಲರ್ನಿಂಗ್ ಮ್ಯಾನೇಜ್​ಮೆಂಟ್ ಸಿಸ್ಟಮ್ (LMS)

ಜಾಗತಿಕ ಮಟ್ಟದಲ್ಲಿ ಬೋಧನೆ-ಕಲಿಕೆಯಲ್ಲಿ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕ, ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ.

TV9kannada Web Team

| Edited By: ganapathi bhat

Apr 06, 2022 | 11:28 PM

ಬೆಂಗಳೂರು: ಸರಕಾರಿ ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಬಲ್ಲ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆ ‘ಕರ್ನಾಟಕ ಎಲ್ಎಂಎಸ್'(ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್)ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ಬೆಂಗಳೂರಿನ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಿದ ಮುಖ್ಯಮಂತ್ರಿ, ವಿದ್ಯಾರ್ಥಿಗಳು ಇದ್ದ ಜಾಗದಿಂದಲೇ ಜ್ಞಾನಾರ್ಜನೆ ಮಾಡಬಹುದು. ಎಲ್ಎಂಎಸ್ ಪರಿಕಲ್ಪನೆ ಇದನ್ನು ಸಾಕಾರಗೊಳಿಸುತ್ತದೆ. ಇದರಿಂದ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಏನಿದು ಕಲಿಕಾ ನಿರ್ವಹಣಾ ವ್ಯವಸ್ಥೆ? ಕೊರೊನಾ ಹಿನ್ನೆಲೆಯಲ್ಲಿ ಡಿಜಿಟಲ್‌ ಕಲಿಕೆಗೆ ಎಲ್ಲಡೆ ಹೆಚ್ಚು ಒತ್ತು ಸಿಗುತ್ತಿದೆ. ಈ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಲ್‌ಎಂಎಸ್ ಆಧಾರಿತ ಡಿಜಿಟಲ್‌ ಕಲಿಕೆಯನ್ನು 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 14 ಸರಕಾರಿ ಇಂಜಿನಿಯರಿಂಗ್ ಮತ್ತು 87 ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದೆ. ಈ ಉಪಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಹಾಗೂ 24,000 ಅಧ್ಯಾಪಕರ ಬೋಧನೆಯಲ್ಲಿ ಬದಲಾವಣೆಗಳು ಉಂಟಾಗಲಿವೆ. ನಮ್ಮ ಶಕ್ತಿ, ನಮ್ಮ ಭವಿಷ್ಯ ಎನ್ನುವುದು ಈ ಪರಿಕಲ್ಪನೆಯ ಟ್ಯಾಗ್‌ಲೈನ್‌ ಆಗಿದೆ.

ದೇಶದಲ್ಲಿಯೇ ಇದು ಮೊದಲ ಪ್ರಯತ್ನ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆಯು, ಕೊವಿಡ್ ಕಾರಣಕ್ಕೆ ಕಲಿಕೆಯಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇಡೀ ದೇಶದಲ್ಲಿಯೇ ಇದು ಹೊಸ ರೀತಿಯ ಹಾಗೂ ಮೊದಲ ಪ್ರಯತ್ನ. ಜಾಗತಿಕ ಮಟ್ಟದಲ್ಲಿ ಬೋಧನೆ- ಕಲಿಕೆಯಲ್ಲಿ ಗುರುತರ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕವೂ ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ. ತಂತ್ರಜ್ಞಾನದ ಮೂಲಕ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

8,000 ತರಗತಿ ಕೊಠಡಿಗಳು ಸ್ಮಾರ್ಟ್‌ಕ್ಲಾಸ್‌ ರೂಮುಗಳಾಗಿ ಪರಿವರ್ತನೆ ರಾಜ್ಯದ ಆಯ್ದ ಕಾಲೇಜುಗಳಲ್ಲಿ ಒಟ್ಟು 8,000 ತರಗತಿ ಕೊಠಡಿಗಳಿವೆ. ಇವುಗಳಲ್ಲಿ 2,500 ಕೊಠಡಿಗಳನ್ನು ಅತ್ಯಂತ ವೇಗದ ವೈಫೈ ವ್ಯವಸ್ಥೆ ಇರುವ ಸ್ಮಾರ್ಟ್‌ಕ್ಲಾಸ್‌ ರೂಮುಗಳನ್ನಾಗಿ ರೂಪಿಸಲಾಗುತ್ತಿದೆ. ಉಳಿದ 5,500 ಕೊಠಡಿಗಳನ್ನು 4ರಿಂದ 5 ತಿಂಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಮುಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಡಿಸಿಎಂ ಹೇಳಿದರು.

ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ವಿಂಡೋಸ್‌, ಆಂಡ್ರಾಯ್ಡ್‌, ಐಒಎಸ್ ಮೂರೂ ಆಪರೇಟಿಂಗ್ ಸಿಸ್ಟಮ್​‌ಗೆ ಪೂರಕವಾಗಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಲಾಗಿದೆ. ಈ ಮೂಲಕ ದಿನನಿತ್ಯದ ಕಂಟೆಂಟ್‌ ನೀಡಿಕೆಯ ಜೊತೆಗೆ, ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಮಾಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹುದು ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಈ ಬಗ್ಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆ

Follow us on

Related Stories

Most Read Stories

Click on your DTH Provider to Add TV9 Kannada