ಹಾಸ್ಯ ನಾಟಕ ‘ಅಕಸ್ಮಾತ್ ಹೀಗಾದ್ರೆ’..! ಕೌರವರು ವನವಾಸಕ್ಕೆ ಹೋದ್ರೆ? ಅವರಿಗೆ ವೀರಪ್ಪನ್​ ಸಿಕ್ಕರೆ?

ಜೂಜಿನಲ್ಲಿ ಸೋತು ಕಾಡಿಗೆ ಹೋಗುವ ಕೌರವರಿಗೆ ತ್ರೇತಾಯುಗದ ಶ್ರವಣಕುಮಾರ ಹಾಗೂ ಕಲಿಯುಗದ ವೀರಪ್ಪನ್ ಭೇಟಿಯಾಗುತ್ತಾರೆ. ಇನ್ನು ಅಚ್ಚರಿಯ ಸಂಗತಿ ಅಂದರೆ ನಾಟಕದಲ್ಲಿ ದ್ರೌಪದಿಯ ಸ್ವಯಂವರದಲ್ಲಿ ರಾವಣ ಪಾಲ್ಗೊಳ್ಳುತ್ತಾನೆ.

ಹಾಸ್ಯ ನಾಟಕ ‘ಅಕಸ್ಮಾತ್ ಹೀಗಾದ್ರೆ’..! ಕೌರವರು ವನವಾಸಕ್ಕೆ ಹೋದ್ರೆ? ಅವರಿಗೆ ವೀರಪ್ಪನ್​ ಸಿಕ್ಕರೆ?
ನಾಟಕದ ನಿರ್ದೇಶಕ ಯಶವಂತ ಸರದೇಶಪಾಂಡೆ
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 23, 2021 | 6:16 PM

ಧಾರವಾಡ: ಧಾರವಾಡದ ರಂಗಾಯಣದಲ್ಲಿ ಇದೀಗ ಮತ್ತೊಮ್ಮೆ ನಾಟಕಗಳ ಕಲರವ ಕೇಳಿ ಬರುತ್ತಿದೆ. ಕಳೆದ ಹಲವಾರು ತಿಂಗಳಿನಿಂದ ಕೊರೊನಾ ಮಹಾಮಾರಿಯಿಂದಾಗಿ ರಂಗ ಚಟುವಟಿಕೆಗಳು ನಿಂತೇ ಹೋಗಿದ್ದವು. ಆದರೆ ಇದೀಗ ನಿಧಾನವಾಗಿ ರಂಗಾಯಣದ ಆವರಣದಲ್ಲಿ ನಾಟಕಗಳ ಸದ್ದು ಶುರುವಾಗಿದ್ದು, ಜನರನ್ನು ಮತ್ತೆ ಸಾಂಸ್ಕೃತಿಕ ಚಟುವಟಿಕೆಗಳತ್ತ ಹೊರಳುವಂತೆ ಮಾಡಿದೆ.

ಇತ್ತೀಚಿಗಷ್ಟೇ ಪ್ರದರ್ಶನಗೊಂಡ ಸಾಮ್ರಾಟ್ ಅಶೋಕ ನಂತರ ಇದೀಗ ಹಾಸ್ಯ ನಾಟಕವೊಂದು ಸಿದ್ಧವಾಗುತ್ತಿದೆ. ಮರಾಠಿ ಮೂಲದ ಈ ನಾಟಕವನ್ನು ರಂಗಾಯಣದ ಕಲಾವಿದರು ಪ್ರಸ್ತುತಪಡಿಸಲು ತಯಾರಾಗಿದ್ದಾರೆ. ಸಂತಸದ ಸಂಗತಿ ಅಂದರೆ ಈ ನಾಟಕವನ್ನು ನಿರ್ದೇಶಿಸುತ್ತಿರುವವರು ಖ್ಯಾತ ರಂಗ ಕಲಾವಿದ ಯಶವಂತ ಸರದೇಶಪಾಂಡೆ.

ಮಹಾಭಾರತದ ಕಥೆಗೆ ಹಾಸ್ಯದ ರೂಪ ಮಹಾಭಾರತವೊಂದು ಮಹಾ ಗ್ರಂಥ. ಈ ಕಥೆಗೆ ನವಿರು ಹಾಸ್ಯದ ಲೇಪ ಹಚ್ಚಿ ‘ಅಕಸ್ಮಾತ್ ಹೀಗಾದ್ರೆ’ ನಾಟಕವನ್ನು ರಚಿಸಲಾಗಿದೆ. ಒಂದು ವೇಳೆ ಪಾಂಡವರ ಬದಲು ಕೌರವರು ವನವಾಸಕ್ಕೆ ಹೋದರೆ ಹೇಗಿರಬಹುದು? ರಣರಂಗದಲ್ಲಿ ಹೋರಾಡಲು ದುರ್ಯೋಧನ ಹಿಂಜರಿದರೆ ಏನಾಗಬಹುದು? ಅರ್ಜುನನ ಬದಲಿಗೆ ಶ್ರೀಕೃಷ್ಣ ದುರ್ಯೋಧನನಿಗೆ ಸಾರಥಿಯಾಗಿ, ಧರ್ಮ ಬೋಧನೆ ಮಾಡಿದರೆ ಹೇಗಾಗಬಹುದು? ಎನ್ನುವುದನ್ನು ಈ ನಾಟಕದಲ್ಲಿ ಹಾಸ್ಯ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಥೆಗಳನ್ನು ಮಹಾಭಾರತದ ಕಥೆ ಜೊತೆಗೆ ಸೇರಿಸಿ ರಂಗದ ಮೇಲೆ ಪ್ರದರ್ಶಿಸಲು ‘ಅಕಸ್ಮಾತ್ ಹೀಗಾದ್ರೆ’ ನಾಟಕ ಸಜ್ಜಾಗುತ್ತಿದೆ.

ಮರಾಠಿ ನಾಟಕಕಾರ ಸಂತೋಷ ಪಾಠಕ್ ಅವರ ಈ ಕಥೆ ಈ ನಾಟಕ ಮೂಲತಃ ಮರಾಠಿ ಭಾಷೆಯಲ್ಲಿದ್ದು, ನಾಟಕಕಾರ ಸಂತೋಷ ಪಾಠಕ್ ಇದನ್ನು ರಚಿಸಿದ್ದಾರೆ. ಮರಾಠಿಯಲ್ಲಿ ಅದಾಗಲೇ ಸುಮಾರು 10 ಸಾವಿರ ಪ್ರದರ್ಶನ ಕಂಡಿರುವ ಈ ನಾಟಕವನ್ನು 10 ವರ್ಷಗಳ ಹಿಂದೆಯೇ ಯಶವಂತ ಸರದೇಶಪಾಂಡೆ ‘ಹಿಂಗಾದ್ರೆ ಡಾಟ್‌ ಕಾಮಿಡಿ’ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ್ದರು. ಅದೇ ನಾಟಕವನ್ನು ಇಂದಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಿ ‘ಅಕಸ್ಮಾತ್ ಹೀಗಾದ್ರೆ’ ಎಂದು ಮಾಡಿದ್ದಾರೆ. ವಿಶೇಷವೆಂದರೆ ಈ ಬಾರಿ ನಾಟಕವು ಮರಾಠಿಯ ‘ತಮಾಷಾ’ ಶೈಲಿಯಲ್ಲಿ ಸಿದ್ಧಗೊಳ್ಳುತ್ತಿದೆ.

ತಮಾಷಾ ಜನರ ನಡುವೆ ಬೆಳೆದಿರುವಂಥ ಕಲೆಯಾಗಿದ್ದು, ನಮ್ಮಲ್ಲಿ ದೊಡ್ಡಾಟ, ಯಕ್ಷಗಾನ ಇದ್ದಂತೆ ಮರಾಠಿಯಲ್ಲಿ ತಮಾಷಾ ತುಂಬಾನೇ ಪ್ರಸಿದ್ಧ ಶೈಲಿ. ಮರಾಠಿಯ ತಮಾಷಾ ಶೈಲಿಯಲ್ಲಿಯೇ ಕನ್ನಡದ ಈ ನಾಟಕವನ್ನು ಸಿದ್ಧಗೊಳಿಸುತ್ತಿರೋದು ವಿಶೇಷ.

‘ಅಕಸ್ಮಾತ್ ಹೀಗಾದ್ರೆ’ ನಾಟಕದಲ್ಲಿ ಏನೇನಿದೆ? ಈ ನಾಟಕದಲ್ಲಿ ಸಂಗೀತ, ನೃತ್ಯ ರೂಪಕಗಳಿವೆ. ಊಹೆಯನ್ನೂ ಮಾಡಲು ಸಾಧ್ಯವಿರದಂತೆ ಪಾತ್ರಗಳು ಬದಲಾಗುತ್ತವೆ. ಇಲ್ಲಿ ಶಕುನಿ ಬದಲು ದ್ರೌಪದಿಯೇ ಜೂಜಿಗೆ ಕೌರವರನ್ನು ಆಹ್ವಾನಿಸುತ್ತಾಳೆ. ಆಕೆಯೇ ದಾಳವನ್ನು ಉರುಳಿಸುತ್ತಾಳೆ. ಜೂಜಿನಲ್ಲಿ ಸೋತು ಕಾಡಿಗೆ ಹೋಗುವ ಕೌರವರಿಗೆ ತ್ರೇತಾಯುಗದ ಶ್ರವಣಕುಮಾರ ಹಾಗೂ ಕಲಿಯುಗದ ವೀರಪ್ಪನ್ ಭೇಟಿಯಾಗುತ್ತಾರೆ. ಇನ್ನು ಅಚ್ಚರಿಯ ಸಂಗತಿ ಅಂದರೆ ನಾಟಕದಲ್ಲಿ ದ್ರೌಪದಿಯ ಸ್ವಯಂವರದಲ್ಲಿ ರಾವಣ ಪಾಲ್ಗೊಳ್ಳುತ್ತಾನೆ. ದುರ್ಯೋಧನನಿಗೆ ಕೃಷ್ಣನೇ ಸಾರಥಿಯಾಗುತ್ತಾನೆ. ಅಷ್ಟೇ ಅಲ್ಲ, ದುರ್ಯೋಧನನಿಗೆ ಕೃಷ್ಣ ಗೀತೋಪದೇಶವನ್ನೂ ಮಾಡುತ್ತಾನೆ. ನಾಟಕದುದ್ದಕ್ಕೂ ಇಂಥ ಅನೇಕ ಹಾಗೂ ವಿಭಿನ್ನ ಬಗೆಯ ಹಾಸ್ಯಗಳು ಬೆರೆತಿವೆ.

ಇದು ಧಾರವಾಡ ರಂಗಾಯಣದ ಪ್ರಾಡಕ್ಟ್! ಕೊರೊನಾ ಬಳಿಕ ಧಾರವಾಡದ ರಂಗಾಯಣ ಸಾಮ್ರಾಟ್ ಅಶೋಕ ಅನ್ನುವ ನಾಟಕ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದೆ. ಇದೀಗ ಎರಡನೆಯದ್ದಾಗಿ ಈ ನಾಟಕವನ್ನು ಆಯ್ಕೆ ಮಾಡಿಕೊಂಡಿದೆ. ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ನಾಟಕ ನಿರ್ಮಾಣವಾಗುತ್ತಿದೆ. ನಾಟಕದಲ್ಲಿ 20 ಹಾಡುಗಳಿವೆ ಹಾಗೂ ಸುಮಾರು ಹತ್ತು ಮುದ್ರಿತ ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಕಿರಣ ಗೋಡ್ಖಿಂಡಿ ನಿರ್ವಹಿಸಿದ್ದಾರೆ. ಉಳಿದ ಭಾಗವನ್ನು ಕಲಾವಿದ ರಘು ಅವರು ನಿರ್ವಹಿಸಲಿದ್ದಾರೆ. ನಾಟಕಕ್ಕೆ ರಂಗ ಕಲಾವಿದ ರವಿ ಕುಲಕರ್ಣಿ ಅವರ ಸಹ ನಿರ್ದೇಶನ ಇದೆ. ವಸ್ತ್ರಾಲಂಕಾರವನ್ನು ಮರಾಠಿಯ ಮೂಲ ನಾಟಕದಿಂದಲೇ ಪಡೆಯಲು ನಿರ್ಧರಿಸಲಾಗಿದೆ. ಒಂದು ಹಂತದ ಸಿದ್ಧತೆಯಾದ ಬಳಿಕ ಮರಾಠಿ ನಾಟಕದ ಮೂಲ ಕಲಾವಿದರನ್ನು, ರೆಪರ್ಟರಿ ಕಲಾವಿದರಿಗೆ ಪರಿಚಯಿಸುವ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಗಿದೆ. ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳುವುದೇನು? ಈ ನಾಟಕದ ಬಗ್ಗೆ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು, ನಾಟಕದಲ್ಲಿ ಎಲ್ಲಿಯೂ ಪಾತ್ರಗಳನ್ನು ಲೇವಡಿ ಮಾಡುತ್ತಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಕಥೆಯನ್ನೂ ಬದಲಿಸಿ ನೋಡಿದರೆ ಅದು ಹೇಗೆ ಕಾಣಲಿದೆ ಎಂದು ತೋರಿಸುವ ಪ್ರಯತ್ನವಿದು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರನ್ನು ಮತ್ತೆ ಸಾಮಾನ್ಯ ಬದುಕಿಗೆ ಕರೆ ತರುವ ಪ್ರಯತ್ನವಿದು. ಅದಾಗಲೇ ಮರಾಠಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿರುವ ಈ ನಾಟಕ ಇದೀಗ ಕನ್ನಡ ನೆಲದಲ್ಲಿ, ಕನ್ನಡಿಗರಿಗೆ ಇಷ್ಟವಾಗುವ ರೀತಿಯಲ್ಲಿ ಸಿದ್ಧಗೊಳ್ಳುತ್ತಿದೆ. ಇದಕ್ಕೆ ರಂಗಾಯಣದ ಸಹಕಾರ ಸಿಕ್ಕಿರುವುದು ಸಂತಸದ ಸಂಗತಿ. ಮರಾಠಿಯ ಜನಪದ ಶೈಲಿಯಾಗಿರುವ ತಮಾಷಾ ಶೈಲಿಯಲ್ಲಿಯೇ ಈ ನಾಟಕವನ್ನು ಸಿದ್ಧಗೊಳಿಸಲಾಗುತ್ತಿದೆ. ನಾಟಕದಲ್ಲಿ 18 ರಿಂದ 20 ಕಲಾವಿದರು ಇರುತ್ತಾರೆ. ತುಂಬಾನೇ ವಿಭಿನ್ನವಾಗಿ ಈ ನಾಟಕ ಸಿದ್ಧಗೊಳ್ಳುತ್ತಿದೆ. ಫೆಬ್ರವರಿ 3 ನೇ ವಾರದಲ್ಲಿ ಇದನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಅನ್ನುತ್ತಾರೆ.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಅವರ ಕನಸು ಕೊರೊನಾ ಬಳಿಕ ಇದೀಗ ರಂಗಾಯಣದಲ್ಲಿ ರಂಗ ಚಟುವಟಿಕೆಗಳು ಶುರುವಾಗಿವೆ. ಈ ನಾಟಕದ ಬಗ್ಗೆ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಅವರು, ಒಟ್ಟು ಮೂರು ನಾಟಕಗಳನ್ನು ಸಿದ್ಧಗೊಳಿಸಲು ನಿರ್ಧರಿಸಲಾಗಿತ್ತು. ಅದಾಗಲೇ ಸಾಮ್ರಾಟ್ ಅಶೋಕ ಪ್ರದರ್ಶನಗೊಂಡಿದೆ. ಎರಡನೇ ನಾಟಕ ಇದಾಗಿದೆ. ಇನ್ನೆರಡು ತಿಂಗಳಲ್ಲಿ ಮತ್ತೊಂದು ನಾಟಕವನ್ನು ಸಿದ್ಧಗೊಳಿಸಲು ನಿರ್ಧರಿಸಲಾಗಿದೆ. ರಂಗಾಯಣದ ರೆಪರ್ಟರಿ ಕಲಾವಿದರು ಮೂರು ನಾಟಕಗಳನ್ನು ಸಿದ್ಧಪಡಿಸಿಕೊಂಡರೆ, ಧಾರವಾಡ ರಂಗಾಯಣದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೂರು ದಿನಗಳ ನಾಟಕ ಪ್ರದರ್ಶನವನ್ನು ನೀಡಬಹುದಾಗಿದೆ. ಎಲ್ಲ ಬಗೆಯ ನಾಟಕಗಳು ಇರಲಿ ಅನ್ನುವುದಕ್ಕೆ ತಮಾಷಾ ಶೈಲಿಯ ಈ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಮ್ರಾಟ ಅಶೋಕ ಇಷ್ಟವಾದಂತೆಯೇ ಇದು ಕೂಡ ಜನರಿಗೆ ಇಷ್ಟವಾಗಲಿದೆ. ಕೊರೊನಾ ಹಾವಳಿ ಬಳಿಕ ರಂಗಾಯಣದಲ್ಲಿ ಮತ್ತೆ ಎಂದಿನಂತೆ ಚಟುವಟಿಕೆಗಳು ಶುರುವಾಗಿರುವುದು ಸಮಾಧಾನ ತಂದಿದೆ ಎನ್ನುತ್ತಾರೆ.

ಪ್ರೇಕ್ಷಕ ಮಹಾಶಯರೇ ದಯವಿಟ್ಟು ಗಮನಿಸಿ