ವೇಗದ ಬೌಲರ್ಗಳ ಬೌಲ್ ಮಾಡುವ ಎಸೆತಗಳ ವೇಗವನ್ನು ನಿಖರವಾಗಿ ದಾಖಲಿಸುವ ಸ್ಪಿಡೊಮೀಟರ್ಗಳು ಬಳಕೆಗೆ ಬಂದಿದ್ದು 1990ರ ಕೊನೆಭಾಗದಲ್ಲಿ ಅಂತ ಹೇಳುತ್ತಾರೆ. ಅದಕ್ಕೂ ಮೊದಲು ವೇಗವನ್ನು ಅಳೆಯುವ ಸಾಧನಗಳಿದ್ದವಾದರೂ ಅವು ವಿಶ್ವಾಸಾರ್ಹವಾಗಿರಲಿಲ್ಲ ಅನ್ನುವುದು ಕ್ರಿಕೆಟ್ ಪರಿಣಿತರ ಅಭಿಪ್ರಾಯ. 1930 ರಿಂದ 1970ರ ದಶಕದವರೆಗೆ, ಒಬ್ಬ ಮತ್ತೊಬ್ಬನಿಗಿಂತ ವೇಗವಾಗಿ ಬೌಲ್ ಮಾಡುತ್ತಿದ್ದ ಅಂತೆಲ್ಲ ಚರ್ಚೆಗಳಾಗುತ್ತಿದ್ದವು. ಖ್ಯಾತ ಕ್ರಿಕೆಟ್ ಅಂಕಾಣಕಾರ ಡೇವಿಡ್ ಫ್ರಿತ್, ಇಂಗ್ಲೆಂಡಿನ ಲಾರ್ವುಡ್ (30 ಮತ್ತು 40 ರ ದಶಕದ ವೇಗದ ಬೌಲರ್) 96 ಮೈಲಿ/ಗಂಟೆ (154.5 ಕಿ.ಮೀ/ಗಂಟೆ) ವೇಗದಲ್ಲಿ ಬೌಲ್ ಮಾಡಿದ್ದರು ಅಂತ ಒಮ್ಮೆ ಬರೆದಿದ್ದರು. ಮೊದಲೇ ಹೇಳಿದಂತೆ ಆಗಿನ ಸ್ಪೀಡ್ಗನ್ಗಳು ವಿಶ್ವಾಸಾರ್ಹವಾಗಿರಲಿಲ್ಲ.
1975ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿರುವ ಡಬ್ಲ್ಯುಎಸಿಎ ಮೈದಾನದಲ್ಲಿ ನಡೆದ ವೇಗದ ಬೌಲಿಂಗ್ ಸ್ಫರ್ಧೆಯಲ್ಲಿ ಅದೇ ದೇಶದ ಜೆಫ್ ಥಾಮ್ಸನ್ 99.7 ಮೈಲಿ/ಗಂ (160.4 ಕಿ.ಮೀ/ಗಂ) ವೇಗದ ಎರಡು ಎಸೆತಗಳನ್ನು ಬೌಲ್ ಮಾಡಿದರು ಅಂತ ಖುದ್ದು ಒಬ್ಬ ವೇಗದ ಬೌಲರ್ ಆಗಿದ್ದ ಡೆನಿಸ್ ಲಿಲ್ಲೀ ತಮ್ಮ ‘ಆರ್ಟ್ ಆಫ್ ಪಾಸ್ಟ್ ಬೌಲಿಂಗ್’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ಌಂಡಿ ರಾಬರ್ಟ್ಸ್ 99.1 ಮೈಲಿ/ಗಂಟೆ (159.5 ಕಿಮೀ/ಗಂಟೆ) ವೇಗದಲ್ಲಿ ಚೆಂಡೆಸೆದಿದ್ದರಂತೆ. ಮರುವರ್ಷವೂ ಆದೇ ಮೈದಾನದಲ್ಲಿ ಸ್ಪರ್ಧೆ ಏರ್ಪಡಿಸಿದಾಗ ಥಾಮ್ಸನ್ 99.8 ಕಿ.ಮೀ/ಗಂಟೆ (160.6 ಕಿಮೀ/ಗಂಟೆ) ವೇಗದಲ್ಲಿ ಬೌಲ್ ಮಾಡಿದರು ಅಂತ ಲಿಲ್ಲೀ ಹೇಳಿದ್ದಾರೆ.
ಆದರೆ 100ಮೈಲಿ/ಗಂಟೆಗೆ ಬೌಲ್ ಮಾಡುವ ಪ್ರಯತ್ನ ಮರೀಚಿಕೆಯಾಗೇ ಉಳಿಯಿತು.
ಥಾಮ್ಸನ್, ರಾಬರ್ಟ್ಸ್ ಅವರ ನಂತರ ಅತಿ ವೇಗದಲ್ಲಿ ಬೌಲ್ ಮಾಡಿ ಹೆಸರಾದವರು ಪಾಕಿಸ್ತಾನದ ಶೋಯೆಬ್ ಅಖ್ತರ್ ಮತ್ತು ಆಸ್ಟ್ರೇಲಿಯಾದ ಬ್ರೆಟ್ ಲೀ. ಇವರಿಬ್ಬರು ಮಿಂಚಿನ ಗತಿಯಲ್ಲಿ ಬೌಲ್ ಮಾಡುತ್ತಿದ್ದನ್ನು ಕಂಡ ಪರಿಣಿತರು ಮತ್ತು ಕಾಮೆಂಟೇಟರ್ಗಳು ಅವರು 100 ಮೈಲಿ/ಗಂಟೆ ಬ್ಯಾರಿಯರ್ ಮುರಿಯಲಿದ್ದಾರೆ ಎಂದು ಹೇಳಿದರು. 2001-02 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ಲೀ, 100.5 ಮೈಲಿ/ಗಂಟೆ (161.8 ಕಿ.ಮೀ/ಗಂಟೆ) ವೇಗದಲ್ಲಿ ಒಂದು ಎಸೆತವನ್ನು ಬೌಲ್ ಮಾಡಿದ್ದರು. ಆದರೆ, ಚ್ಯಾನೆಲ್9, ವೇಗ ಅಳೆಯುವುದರಲ್ಲಿ ಪ್ರಮಾದವಾಗಿದೆ ಅಂತ ಹೇಳಿದ್ದರಿಂದ ಅವರ ಎಸೆತವನ್ನು ಕ್ರಿಕೆಟ್ ಇತಿಹಾಸದ ಅತಿ ವೇಗದ ಎಸೆತ ಎಂದು ಪಟ್ಟಿ ಮಾಡಲಿಲ್ಲ. ಅಖ್ತರ್ 2002ರಲ್ಲಿ 100ಮೈಲಿ/ಗಂಟೆ ವೇಗದ ಎಸೆತವೊಂದನ್ನು ಬೌಲ್ ಮಾಡಿದರು. ಆಗಲೂ ಸ್ಪೀಡ್ಗನ್ ವಿಶ್ವಸಾರ್ಹವಾಗಿರಲಿಲ್ಲ ಅಂತ ಹೇಳಲಾಯಿತು.
ಶೋಯೆಬ್ ಅಖ್ತರ್ ಮತ್ತು ಬ್ರೆಟ್ ಲೀ
ಹಾಗಾಗಿ, 100 ಮೈಲಿ/ಗಂಟೆ ವೇಗದಲ್ಲಿ ಬೌಲ್ ಮಾಡುವ ವೇಗದ ಬೌಲರ್ನೊಬ್ಬನ ಶೋಧ ಮುಂದುವರೆಯಿತು.
ಥಾಮ್ಸನ್ ತಮ್ಮ ಆತ್ಮಚರಿತ್ರೆಯಲ್ಲಿ ತಾವು ಅಖ್ತರ್ ಜೊತೆ ನಡೆಸಿದ ಸಂವಾದವನ್ನು ಉಲ್ಲೇಖಿಸಿದ್ದಾರೆ.
‘ನನ್ನ ದಾಖಲೆಯನ್ನು ಉತ್ತಮಪಡಿಸುವ ಪ್ರಯತ್ನ ಮಾಡುತ್ತೀರಾ,’ ಎಂದು ಥಾಮ್ಸನ್ ಕೇಳಿದ ಪ್ರಶ್ನೆಗೆ, ಅಖ್ತರ್, ‘ಅದೇನೂ ಅಷ್ಟು ಸುಲಭವಲ್ಲ. ಆದರೆ ನಾನು ಬಲವಂತನಾಗಿದ್ದೇನೆ, ಆ ಸಾಮರ್ಥ್ಯ ನನ್ನಲ್ಲಿ ಇದೆ ಎಂಬ ಭಾವನೆ ಹುಟ್ಟಿದಾಗ ಖಂಡಿತವಾಗಿಯೂ ಪ್ರಯತ್ನಿಸುವೆ,’ ಎಂದು ಹೇಳಿದ್ದನ್ನು ಥಾಮ್ಸನ್ ಉಲ್ಲೇಖಿಸಿದ್ದಾರೆ.
2003 ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯವೊಂದರಲ್ಲಿ ಅಖ್ತರ್ 100 ಮೈಲಿ/ಗಂಟೆ ವೇಗದಲ್ಲಿ ಬೌಲ್ ಮಾಡಿದ್ದು ದಾಖಲಾಗಿದೆ.
ಆ ನಿರ್ದಿಷ್ಟ ಮ್ಯಾಚ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ನಾಸ್ಸೆರ್ ಹುಸ್ಸೇನ್ ಬ್ಯಾಟಿಂಗ್ ಆಯ್ದುಕೊಂಡರು. ಪಾಕಿಸ್ತಾನದ ನಾಯಕನಾಗಿದ್ದ ವಕಾರ್ ಯೂನಿಸ್ ಮೊದಲ ಓವರನ್ನು ಎಡಗೈ ವೇಗದ ಬೌಲರ್ ವಾಸಿಮ್ ಅಕ್ರಮ್ ಅವರಿಂದ ಬೌಲ್ ಮಾಡಿಸಿದ ನಂತರ ಅವರೊಂದಿಗೆ ಹೊಸ ಬಾಲನ್ನು ಹಂಚಿಕೊಳ್ಳುವ ಅವಕಾಶವನ್ನು ಅಖ್ತರ್ಗೆ ನೀಡಿದರು.
ಅಕ್ರಮ್ ತಮ್ಮ ಎರಡನೇ ಓವರಿನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಅವರನ್ನು ಔಟ್ ಮಾಡಿದರು. ನಂತರ ಅಖ್ತರ್ ಅವರ ಎರಡನೇ ಓವರಿನ ಮೊದಲ 5ಎಸೆತಗಳಲ್ಲಿ ನಿಕ್ ನೈಟ್ ಯಾವುದೇ ರನ್ ಗಳಿಸಲಿಲ್ಲ. ನೈಟ್ಗೆ ಎಸೆದ ಅವರ ಆರನೆ ಎಸೆತದಲ್ಲಿ ಅಂಥ ವಿಶೇಷತೆಯೇನೂ ಇರಲಿಲ್ಲ. ಲೆಗ್ ಸ್ಟಂಪ್ ಮೇಲೆ ಶಾರ್ಟ್ ಪಿಚ್ ಆಗಿ ಬಂದ ಎಸೆತವನ್ನು ನೈಟ್ ಲೆಗ್ ಸೈಡ್ಗೆ ಗ್ಲಾನ್ಸ್ ಮಾಡಿದರು. ಆದರೆ, ಕೇಪ್ಟೌನ್ ನಗರದ ನ್ಯೂಲ್ಯಾಂಡ್ಸ್ ಮೈದಾನದಲ್ಲಿದ್ದ ದೈತ್ಯ ಸ್ಕೋರ್ ಬೋರ್ಡ್ ಆ ಎಸೆತದ ವೇಗ 100.2 ಮೈಲಿ/ಗಂಟೆ (161.3 ಕಿಮೀ/ಗಂಟೆ) ಎಂದು ತೋರಿಸಿತು!
ತಾನು ಆ ವೇಗದಲ್ಲಿ ಬೌಲ್ ಮಾಡಿದ್ದು ಆಕಸ್ಮಿಕವೇನೂ ಆಗಿರಲಿಲ್ಲ ಎಂದು ಅಖ್ತರ್ ಬರೆದುಕೊಂಡಿದ್ದಾರೆ: ಪಂದ್ಯದ ಆರಂಭಿಕ ಹಂತದಲ್ಲಿ ಖದ್ದು ನನಗೆ ಅಸಹಜವೆನಿಸುವಷ್ಟು ವೇಗದಲ್ಲಿ ನಾನು ಬೌಲ್ ಮಾಡುತ್ತಿದ್ದೆ ಮತ್ತು ಬ್ಯಾಟಿಂಗ್ ಕ್ರೀಸಿನಲ್ಲಿ ನಿಕ್ ನೈಟ್ ಇದ್ದರು. ನಾನು 90ಮೈಲಿ/ಗಂಟೆಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುತ್ತಿರುವುದನ್ನು ಗಮನಿಸಿದೆ. ನನ್ನನ್ನು ನಾನು ಹುರಿದುಂಬಿಸಿಕೊಂಡು ಇನ್ನೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವ ಪ್ರಯತ್ನ ಮಾಡಿದೆ. ಮೈದಾನದಲ್ಲಿದ್ದ ಸ್ಪೀಡ್ ಗನ್ ಅಧಿಕೃತವಾಗಿತ್ತು. 94 ರಿಂದ 97 ಮೈಲಿ ವೇಗದಲ್ಲಿ ಬೌಲ್ ಮಾಡುತ್ತಿದ್ದ ನಾನು 99 ಮೈಲಿ ವೇಗವನ್ನು ತಲುಪಿದೆ. ಆಗಲೇ ನಾನು 100 ಮೈಲಿ ವೇಗದಲ್ಲಿ ಬೌಲ್ ಮಾಡಿ ದಾಖಲೆ ನಿರ್ಮಿಸಬಹುದು ಅಂತ ಅಂದುಕೊಂಡೆ. ಆ ಯೋಚನೆ ನನ್ನ ಮನಸ್ಸಿನಲ್ಲಿ ಕುಳಿತುಬಿಟ್ಟಿತು. ನನ್ನ ರನಪ್ ಮತ್ತು ಲ್ಯಾಂಡ್ ಮಾಡುವ ಹಂತದ ಮೇಲೆ ಗಮನವನ್ನು ಕೇದ್ರೀಕರಿಸಿ ಎಲ್ಲಾದರೂ ತಪ್ಪಾಗುತ್ತಿದೆಯಾ ಅಂತ ಯೋಚಿಸಿದೆ. ಕೊನೆಯ ಕೆಲ ಮೊಳಗಳನ್ನು ಓಡುವಾಗ ತಪ್ಪಾಗುತ್ತಿದೆ ಅನ್ನುವುದನ್ನು ಕಂಡುಕೊಂಡೆ. ರನಪ್ನ ಕೊನೆ ಹಂತದವರೆಗೆ ನನ್ನ ಓಟದ ಲಯ ತಪ್ಪಬಾರದೆಂದು ನಿರ್ಧರಿಸಿ ಅದೇ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಚೆಂಡೆಸೆಯುವ ಕ್ಷಣದಲ್ಲಿ ಕೈಯನ್ನು ಜೋರಾಗಿ ತಿರುಗಿಸಿದೆ. ನನ್ನ ಎಸೆತದ ವೇಗ ಸ್ಪೀಡೊಮೀಡರ್ನಲ್ಲಿ 161.3 ಕಿ.ಮೀ/ಗಂಟೆ ದಾಖಲಾಗಿತ್ತು! 100 ಮೈಲಿ/ಗಂಟೆ ಬ್ಯಾರಿಯರ್ ಅನ್ನು ನಾನು ಮುರಿದುಬಿಟ್ಟಿದ್ದೆ!!
ಪಾಕಿಸ್ತಾನ ಆ ಪಂದ್ಯವನ್ನು 112 ರನ್ಗಳಿಂದ ಸೋತಿತು ಎನ್ನುವುದು ಬೇರೆ ವಿಷಯ. ಆದರೆ ಪಂದ್ಯದ ನಂತರ ಅಖ್ತರ್ ತಮ್ಮ ಎಸೆತಗಳನ್ನು ಕುರಿತು ನೈಟ್ರೊಂದಿಗೆ ಚರ್ಚಿಸಿದಾಗ ಅವರು ‘ಪ್ರತಿ ಎಸೆತದ ವೇಗ ಭಯಾನಕವಾಗಿತ್ತು,’ ಎಂದು ಹೇಳಿದ್ದರು.
ಅದಾದ ಮೇಲೆ ಲೀ ಮತ್ತು ಆಸ್ಟ್ರೇಲಿಯಾದವರೇ ಆಗಿರುವ ಶೌನ್ ಟೇಟ್ ಸಹ 101 ಮೈಲಿ/ಗಂಟೆ ವೇಗದಲ್ಲಿ ಬೌಲ್ ಮಾಡಿದರು.
ಇದನ್ನೂ ಓದಿ: India vs England: 100ನೇ ಟೆಸ್ಟ್ ಆಡುವ ತವಕದಲ್ಲಿ ಇಶಾಂತ್ ಶರ್ಮಾ, ಕಪಿಲ್ ದೇವ್ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ