Reliance- Future deal: ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಫ್ಯೂಚರ್ ರೀಟೇಲ್ಗೆ ನಿರಾಳ
ಭಾರತದ ಅತಿ ದೊಡ್ಡ ರೀಟೇಲ್ ವ್ಯವಹಾರವಾದ ಫ್ಯೂಚರ್ ರೀಟೇಲ್ ಅನ್ನು ರಿಲಯನ್ಸ್ ಖರೀದಿಸುವುದಕ್ಕೆ ಸಂಬಂಧಿಸಿದಂತೆ ದೆಹಲಿ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ಬಂದಿದೆ.
ಫ್ಯೂಚರ್ ರೀಟೇಲ್ ಆಸ್ತಿಯನ್ನು ರಿಲಯನ್ಸ್ಗೆ ಮಾರಾಟ ಮಾಡುವುದರ ಸಂಬಂಧವಾಗಿ ದೆಹಲಿಯ ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ನ ವಿಭಾಗೀಯ ಪೀಠದ ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ತಡೆ ನೀಡಿದ್ದಾರೆ. ಹತ್ತಿರಹತ್ತಿರ 25,000 ಕೋಟಿ ರೂಪಾಯಿಗೆ ಫ್ಯೂಚರ್ ರೀಟೇಲ್ ಆಸ್ತಿಯನ್ನು ರಿಲಯನ್ಸ್ಗೆ ಮಾರಾಟ ಮಾಡಲು ಮುಂದಾಗಿದ್ದ ವ್ಯವಹಾರಕ್ಕೆ ಸಿಂಗಾಪೂರ್ನಲ್ಲಿನ ನ್ಯಾಯಾಧೀಕರಣದಿಂದ ಕಳೆದ ವರ್ಷದ ಅಕ್ಟೋಬರ್ನಲ್ಲಿ ತುರ್ತು ತಡೆ ನೀಡಲಾಗಿತ್ತು. ಆ ನಂತರ ಅದೇ ಆದೇಶವನ್ನು ದೆಹಲಿಯ ಏಕಸದಸ್ಯ ಪೀಠ ಸಹ ಎತ್ತಿಹಿಡಿತ್ತು.
ಫ್ಯೂಚರ್ ರೀಟೇಲ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಿದ್ದು, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು. ಅಷ್ಟೇ ಅಲ್ಲ, ಏಕಸದಸ್ಯ ಪೀಠವು ಫ್ಯೂಚರ್ ಸಮೂಹ ಹಾಗೂ ಅದರ ಪ್ರವರ್ತಕರಾದ ಕಿಶೋರ್ ಬಿಯಾನಿ ಮತ್ತು ಇತರರಿಗೆ ರೂ. 20 ಲಕ್ಷ ವೆಚ್ಚ ವಿಧಿಸಿತ್ತು. ಹರೀಶ್ ಸಾಳ್ವೆ ಹೇಳಿದಂತೆ, ಫ್ಯೂಚರ್- ರಿಲಯನ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಯಥಾಸ್ಥಿತಿ ಆದೇಶಕ್ಕೆ ಈ ಹಿಂದೆ ವಿಭಾಗೀಯ ಪೀಠವು ನೀಡಿದ್ದ ತಡೆಯನ್ನು ಪ್ರಶ್ನಿಸಿ ಅಮೆಜಾನ್ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ಇದೆ.
ಅಮೆಜಾನ್ ಪರ ವಕೀಲರಾದ ಗೋಪಾಲ್ ಸುಬ್ರಮಣಿಯನ್ ಮಾತನಾಡಿ, “ಏಕಸದಸ್ಯ ಪೀಠದ ಆದೇಶವು ಈಗ ಸುಪ್ರೀಂ ಕೋರ್ಟ್ ಆದೇಶದ ಮೇಲೆ ನಿಂತಿದೆ. ಸುಪ್ರೀಂ ಕೋರ್ಟ್ನಿಂದ ಕಳೆದ ಬಾರಿ ನೀಡಿದ ಆದೇಶವು ಮಧ್ಯಂತರ ಎಂಬಂತಿತ್ತು. ಈ ದಿನದ ತನಕ ಈ ಪ್ರಕರಣದಲ್ಲಿ ಒಳಗೊಂಡ ಕಕ್ಷಿದಾರರ ಹಕ್ಕನ್ನು ತಿಳಿಸುತ್ತದೆ,” ಎಂದು ಹೇಳಿದ್ದಾರೆ. ಏಕಸದಸ್ಯ ಪೀಠದ ಆದೇಶ ಚಾಲ್ತಿಯಲ್ಲಿ ಇರಬೇಕು ಎಂದು ಮನವಿ ಮಾಡಿ, ಅಮೆಜಾನ್ ಸುಪ್ರೀಂ ಕೋರ್ಟ್ನ ಮನವಿ ಮಾಡಲಿದೆ ಎಂದಿದ್ದಾರೆ.
ಫ್ಯೂಚರ್ ಕೂಪನ್ಸ್ ಲಿಮಿಟೆಡ್ ಪರವಾಗಿ ಹಿರಿಯ ವಕೀಲ ಇಕ್ಬಾಲ್ ಚಗ್ಲಾ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಏಕಸದಸ್ಯ ಪೀಠದ ಆದೇಶ ಬದ್ಧವಾಗಿಲ್ಲ ಎಂದಿದ್ದಾರೆ.
ಏನಿದು ರಿಲಯನ್ಸ್- ಫ್ಯೂಚರ್ ರೀಟೇಲ್ ಸಮೂಹದ ಖರೀದಿ ಕಾನೂನು ವ್ಯಾಜ್ಯ? 2020ರ ಆಗಸ್ಟ್ನಲ್ಲಿ ಫ್ಯೂಚರ್ ಸಮೂಹದ ರೀಟೇಲ್ ಆಸ್ತಿಯನ್ನು 340 ಕೋಟಿ ಅಮೆರಿಕನ್ ಡಾಲರ್ಗೆ ಖರೀದಿ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ನ ಮುಕೇಶ್ ಅಂಬಾನಿ ಘೋಷಣೆ ಮಾಡಿದರು. ಆ ವ್ಯವಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೆಜಾನ್, ಫ್ಯೂಚರ್ ಸಮೂಹದಿಂದ ಪಾಲುದಾರಿಕೆ ಒಪ್ಪಂದದ ಉಲ್ಲಂಘನೆ ಆಗುತ್ತಿದೆ. ಈಗ ಸಮೂಹದ ಆಸ್ತಿಯನ್ನು ಪ್ರತಿಸ್ಪರ್ಧಿ ಕಂಪೆನಿಗೆ ಮಾರುತ್ತಿದೆ ಎಂದಿತ್ತು. ಅದಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ಫ್ಯೂಚರ್ ಸಮೂಹ, ಒಂದು ವೇಳೆ ರಿಲಯನ್ಸ್ ಜತೆಗಿನ ಈ ವ್ಯವಹಾರ ಪೂರ್ತಿ ಆಗದಿದ್ದಲ್ಲಿ ಕಂಪೆನಿ ಕುಸಿದುಹೋಗುತ್ತದೆ ಎಂದಿತ್ತು.
ಫ್ಯೂಚರ್ ಸಮೂಹ ಆಸ್ತಿ ಮಾರಾಟ ಮಾಡುವಂತಿಲ್ಲ ಎಂದು ಕಳೆದ ಅಕ್ಟೋಬರ್ನಲ್ಲಿ ಸಿಂಗಾಪೂರ್ನ ಮಧ್ಯಸ್ಥಿಕೆ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಫ್ಯೂಚರ್ ಮತ್ತು ಅದರ ಸ್ಥಾಪಕ ಕಿಶೋರ್ ಬಿಯಾನಿ ಮೀರಿದ್ದಾರೆ ಎಂದು ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್ ಆರೋಪ ಮಾಡಿದೆ. ಅಷ್ಟೇ ಅಲ್ಲ, ಕಿಶೋರ್ ಬಿಯಾನಿಯನ್ನು ಜೈಲಿಗೆ ಕಳಿಸಬೇಕು ಮತ್ತು ಮಧ್ಯಸ್ಥಿಕೆ ನಡೆಯುತ್ತಿರುವುದರಿಂದ ಫ್ಯೂಚರ್ ಹಾಗೂ ರಿಲಯನ್ಸ್ ವ್ಯವಹಾರಕ್ಕೆ ಅನುಮತಿ ನೀಡಬಾರದು ಎಂದು ಭಾರತದ ಸ್ಥಳೀಯ ನಿಯಂತ್ರಕರಿಗೆ ಅರ್ಜಿ ಹಾಕಿಕೊಂಡಿತು.
ಹಾಗೆ ನೋಡಿದರೆ ಸಿಂಗಾಪೂರ್ ಕೋರ್ಟ್ನಲ್ಲಿ ನೀಡಿದ ಆದೇಶದಲ್ಲಿ ಅಮೆಜಾನ್ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ಭಾರತದ ಕೋರ್ಟ್ನಲ್ಲಿ ಫ್ಯೂಚರ್ಗೆ ಅನುಕೂಲವಾಗಿದ್ದು, ವ್ಯವಹಾರ ಮುಂದುವರಿಸಲು ಅನುಮತಿ ಸಿಕ್ಕಿದೆ. ಅಮೆಜಾನ್ನಿಂದ ಕಾನೂನು ಹೋರಾಟವನ್ನು ಸುಪ್ರೀಂ ಕೋರ್ಟ್ನಲ್ಲಿ ಮುಂದುವರಿದಿದೆ. ಆದರೆ ಈ ಕಾನೂನು ಹೋರಾಟದ ತಾರ್ಕಿಕ ಅಂತ್ಯ ಏನಾಗಬಹುದು ಎಂಬ ಕುತೂಹಲದಲ್ಲಿ ಭಾರತದ ಅತಿ ದೊಡ್ಡ ರೀಟೇಲ್ ಖರೀದಿ ವ್ಯವಹಾರ ಡೋಲಾಯಮಾನ ಸ್ಥಿತಿಯಲ್ಲಿದೆ.
ತಿಕ್ಕಾಟಕ್ಕೆ ಕಾರಣವಾಗಿದ್ದು ಏನು? ರಿಲಯನ್ಸ್ಗೆ ಆಸ್ತಿ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ ಪಾರ್ಟನರ್ ಫ್ಯೂಚರ್ ಸಮೂಹದಿಂದ ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಎಂಬುದು ಅಮೆಜಾನ್ ಆರೋಪ. ಫ್ಯೂಚರ್ನ ಲಿಸ್ಟ್ ಆಗದ ಸಂಸ್ಥೆಯೊಂದರಲ್ಲಿ ಅಮೆಜಾನ್ ಶೇ 49ರಷ್ಟು ಷೇರಿನ ಪಾಲು ಖರೀದಿಸಿದೆ. ಕೆಲವರ್ಷಗಳ ನಂತರ ಫ್ಯೂಚರ್ ರೀಟೇಲ್ ಲಿಮಿಟೆಡ್ ಅನ್ನು ಖರೀದಿಸುವ ಹಕ್ಕಿನೊಂದಿಗೆ ಆ ವ್ಯವಹಾರ ಆಗಿತ್ತು. ಆದರೆ ಭಾರತದಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಾಗ ಫ್ಯೂಚರ್ ಸಮೂಹದಲ್ಲಿ ಗಂಭೀರವಾದ ಹಣದ ಕೊರತೆ ಕಾಣಿಸಿಕೊಂಡಿತು.
ಕಳೆದ ವರ್ಷ ಮೇ ತಿಂಗಳಲ್ಲಿ ಫ್ಯೂಚರ್ ರೀಟೇಲ್ನಲ್ಲಿ ಷೇರಿನ ಪಾಲು ಹೆಚ್ಚಿಸಿಕೊಳ್ಳುವ ಕಡೆಗೆ ಅಮೆಜಾನ್ ಚಿಂತನೆ ನಡೆಸಿತು ಎಂದು ಆ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳು ತಿಳಿಸುತ್ತಾರೆ. ಆದರೆ ಅಂಥ ಯಾವ ವ್ಯವಹಾರವೂ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಆಗ ರಿಲಯನ್ಸ್ ಜತೆಗೆ ವ್ಯವಹಾರ ಕುದುರಿಸಿತು ಫ್ಯೂಚರ್, ಇದರಿಂದ ಅಮೆಜಾನ್ ಕುದ್ದು ಹೋಯಿತು. ಫ್ಯೂಚರ್ನ ಘಟಕವೊಂದರ ಜತೆಗೆ ತನ್ನ ಒಪ್ಪಂದ ಇರುವುದರಿಂದ ಮುಕೇಶ್ ಅಂಬಾನಿ ಮತ್ತು ರಿಲಯನ್ಸ್ ಹೀಗೆ ಯಾವ ವ್ಯಕ್ತಿ ಅಥವಾ ಕಂಪೆನಿ ಜತೆಗೂ ಫ್ಯೂಚರ್ ರೀಟೇಲ್ನಿಂದ ವ್ಯವಹಾರ ನಡೆಸುವುದಕ್ಕೆ ಬರಲ್ಲ ಎಂದು ಪ್ರಬಲವಾದ ಆಕ್ಷೇಪ ಮಾಡಿತು ಅಮೆಜಾನ್.
70 ಲಕ್ಷ ಕೋಟಿ ರೂಪಾಯಿಯ ಲೆಕ್ಕಾಚಾರ ಮೇಲ್ನೋಟಕ್ಕೆ ಇದು ಎರಡು ಸಮೂಹದ ಮಧ್ಯ ನಡೆಯುತ್ತಿರುವ ಕಾನೂನು ಸಮರದಂತೆ ಕಂಡರೂ ಇದರ ಹಿಂದಿರುವುದು ಭಾರತದ ಗ್ರಾಹಕ ರೀಟೇಲ್ ಮಾರ್ಕೆಟ್ನ ಅಂದಾಜು 70 ಲಕ್ಷ ಕೋಟಿ ರೂಪಾಯಿ ಮೇಲಿನ ಪಾರಮ್ಯಕ್ಕಾಗಿ ಕಾದಾಟ. ವಿಶ್ವದ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್ ಹಾಗೂ ಏಷ್ಯಾದ ಸಿರಿವಂತ ಮುಕೇಶ್ ಅಂಬಾನಿ ಮಧ್ಯದ ಹೊಯ್ಕೈನಿಂದಾಗಿ ಫ್ಯೂಚರ್ ಸಮೂಹ ಅಪ್ಪಚ್ಚಿ ಆಗುತ್ತಿದೆ. ರಿಲಯನ್ಸ್ ಈಗಾಗಲೇ ದೇಶದ ಪ್ರಮುಖ ರೀಟೇಲರ್. ಫ್ಯೂಚರ್ ರೀಟೇಲ್, ಹೋಲ್ಸೇಲ್, ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಘಟಕವನ್ನು ಖರೀದಿ ಪೂರ್ತಿಗೊಳಿಸಿದಲ್ಲಿ ಅದರ ಶಕ್ತಿ ದುಪ್ಪಟ್ಟು ಆಗುತ್ತದೆ. ಪ್ರತಿಸ್ಪರ್ಧಿಗಳು ಸಮೀಪಕ್ಕೂ ಸುಳಿಯದಂತೆ ರಿಲಯನ್ಸ್ ಬೆಳೆಯುತ್ತದೆ. ಭಾರತದಲ್ಲಿ ಈಗಲೂ ರೀಟೇಲ್ ವ್ಯವಹಾರ ವಿದೇಶೀ ಕಂಪೆನಿಗಳಿಗೆ ಮುಕ್ತವಾಗಿದೆ. ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯ ದೊಡ್ಡ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸುವುದು ಅಮೆಜಾನ್ಗೆ ಬಹಳ ಮುಖ್ಯ. ಇನ್ನು ಭಾರತದಲ್ಲಿ 650 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಅಮೆಜಾನ್ ಭರವಸೆ ನೀಡಿದೆ.
ಆದರೆ, ಈ ಮಧ್ಯೆ ಆರ್ಥಿಕವಾಗಿ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವುದು ಫ್ಯೂಚರ್ ಸಮೂಹ ಮತ್ತು ಅಲ್ಲಿನ ಉದ್ಯೋಗಿಗಳು. ಆದ್ದರಿಂದ ಈ ಪ್ರಕರಣವನ್ನು ಮತ್ತೊಂದು ಮಗ್ಗುಲಿನಿಂದಲೂ ನೋಡಬೇಕು ಎಂಬುದು ಹಲವರ ವಾದ. ಆದರೆ ಕೋರ್ಟ್ ಮುಂದೆ ಇರುವ ವಿಚಾರಕ್ಕೆ ಕಾಯ್ದೆ, ಕಾನೂನುಗಳು ಮುಖ್ಯವಾಗುತ್ತದೆ ಎಂಬುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಅಂಶ.