‘ಗ್ರಾಮೀಣ ಪ್ರದೇಶದ ಜನ ದಯವಿಟ್ಟು ದಸರಾಗೆ ಬರಬೇಡಿ’

  • TV9 Web Team
  • Published On - 15:13 PM, 13 Oct 2020
'ಗ್ರಾಮೀಣ ಪ್ರದೇಶದ ಜನ ದಯವಿಟ್ಟು ದಸರಾಗೆ ಬರಬೇಡಿ'

ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ತಯಾರಿ ಶುರುವಾಗಿದ್ದು, ಗ್ರಾಮೀಣ ಪ್ರದೇಶದ ಜನ ದಯವಿಟ್ಟು ದಸರಾಗೆ ಬರಬೇಡಿ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಡಿ. ಭಾರತಿ ಸದುದ್ದೇಶದ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಹಬ್ಬಲು/ಹಬ್ಬಿಸಿಕೊಳ್ಳಲು ಅವಕಾಶ ಕೊಡಬೇಡಿ
ಈ ಬಾರಿ ದಸರಾದಲ್ಲಿ ಜಂಬೂಸವಾರಿ ಮೆರವಣಿಗೆ ಇರಲ್ಲ. ಅರಮನೆಯಲ್ಲಿ ಮಾತ್ರ ಜಂಬೂಸವಾರಿ ಇರುತ್ತೆ. ಅರಮನೆ ಒಳಗೆ 300 ಜನರಿಗೆ ಮಾತ್ರ ಅವಕಾಶ ಇದೆ. ಸಾರ್ವಜನಿಕರಿಗೆ ನೇರವಾಗಿ ಜಂಬೂಸವಾರಿ ನೋಡುವ ಅವಕಾಶ ಇಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬರಬೇಡಿ. ಎಲ್ಲರೂ ಮನೆಯಲ್ಲೇ ಇದ್ದು ಟಿವಿಗಳಲ್ಲಿ ದಸರಾ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಜನರು ನಗರಕ್ಕೆ ಬಂದು ಕೊರೊನಾ ಹಬ್ಬಲು/ಹಬ್ಬಿಸಿಕೊಳ್ಳಲು ಅವಕಾಶ ಮಾಡಿಕೊಡಬೇಡಿ. ಸೋಂಕಿನ ಲಕ್ಷಣ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ. 60 ವರ್ಷ ಮೇಲ್ಪಟ್ಟ ವೃದ್ದರು ಹಾಗೂ ಮಕ್ಕಳು ಅನಾವಶ್ಯಕ ಓಡಾಡುವುದನ್ನ ನಿಲ್ಲಿಸಿ ಎಂದು ಗ್ರಾಮೀಣ ಭಾಗದ ಜನತೆಗೆ ಬಿ.ಭಾರತಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ನರ್ತನ ಇನ್ನೂ ನಿಂತಿಲ್ಲ. ಇಂತಹ ಸಮಯದಲ್ಲಿ ಅನ್ಯ ದೇಶಗಳಿಂದ, ರಾಜ್ಯಗಳಿಂದ ಜನ ಬಂದ್ರೆ ಕೊರೊನಾ ಹಬ್ಬಲು ಸಲೀಸಾಗುತ್ತೆ. ಹಾಗಾಗಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕವಾಗಿ ರಾಜ ವೈಭವದ ದಸರಾ ನೋಡಲು ಈ ಬಾರಿ ಸಾಧ್ಯವಾಗುವುದಿಲ್ಲ.