ಸಿಗರೇಟ್ ಶೇರಿಂಗ್ ಮಾಡುವ ಮುನ್ನ ಎಚ್ಚರ.. ಈ ರೋಗ ಕೂಡ ಶೇರ್ ಆಗುತ್ತೆ!
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಸಿಗರೇಟ್ ಸೇದುವ ಅಭ್ಯಾಸವು ಹೆಚ್ಚಾಗುತ್ತಿದೆ. ಕಾಲೇಜಿಗೆ ಹೋಗುವ ಯುವಕರಿಗಂತೂ ಸಿಗರೇಟ್ ಸೇದುವುದು ಫ್ಯಾಷನ್ ಎನ್ನುವಂತಾಗಿದೆ. ಸಾಮಾನ್ಯವಾಗಿ ಶಾಲಾ ಕಾಲೇಜಿನ ಸ್ನೇಹಿತರ ಜೊತೆ ಸೇರಿ, ಒಂದೇ ಸಿಗರೇಟ್ ಅನ್ನು ನಾಲ್ಕೈದು ಜನರು ಶೇರ್ ಮಾಡಿಕೊಳ್ಳುವುದನ್ನು ನೋಡಿರಬಹುದು. ಆದರೆ ಸಿಗರೇಟ್ ಸೇದುವುದೇ ಆರೋಗ್ಯಕ್ಕೆ ಹಾನಿಕಾರಕ, ಈ ಸಿಗರೇಟ್ ಶೇರಿಂಗ್ ಮತ್ತೊಂದಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ದಿನ ಕಳೆದಂತೆ ಸಿಗರೇಟ್ ಚಟಕ್ಕೆ ದಾಸರಾಗುತ್ತಿರುವವರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ಮೊದ ಮೊದಲು ಶಾಲಾ ಕಾಲೇಜಿನಲ್ಲಿ ಗೆಳೆಯರು ಸೇದುತ್ತಾರೆ, ಒಂದು ಧಮ್ ಹೊಡೆಯೋಣ ಎಂದು ಆರಂಭವಾಗುವ ಈ ಅಭ್ಯಾಸವು ಬರುಬರುತ್ತಾ ಸಿಗರೇಟ್ ಸೇದದೇ ಇರಲು ಆಗುವುದೇ ಇಲ್ಲ ಎನ್ನುವ ಹಂತಕ್ಕೆ ಬಂದು ತಲುಪುತ್ತದೆ. ಅದರಲ್ಲಿ ಒಬ್ಬರು ಸೇದಿದ ಸಿಗರೇಟನ್ನೇ ಮತ್ತೊಬ್ಬರು ಸೇದುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈ ದುರಾಭ್ಯಾಸವು ಗಂಭೀರ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.
* ಬಾಯಿಯ ಸೋಂಕುಗಳು ಹರಡುವ ಸಾಧ್ಯತೆ: ಸಿಗರೇಟ್ ಶೇರ್ ಮಾಡುವ ಅಭ್ಯಾಸವಿದ್ದರೆ, ಒಬ್ಬರಿಗೆ ಬಾಯಿಯಲ್ಲಿ ಸೋಂಕುಗಳಿದ್ದರೆ ಅದು ಇನ್ನೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
* ಮೆನಿಂಜೈಟಿಸ್ ಕಾಯಿಲೆ ಬರುವ ಅಪಾಯವು ಹೆಚ್ಚು : ಮೆನಿಂಜೈಟಿಸ್ ಕಾಯಿಲೆಯಿರುವ ವ್ಯಕ್ತಿಯು ಸೇದಿದ ಸಿಗರೇಟ್ ಅನ್ನು ಮತ್ತೊಬ್ಬರು ಸೇದುವುದರಿಂದ ಈ ಕಾಯಿಲೆ ಬರುವ ಸಂಭವವು ಹೆಚ್ಚು. ಈ ಕಾಯಿಲೆಯು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೆದುಳು ಮತ್ತು ಬೆನ್ನುಹುರಿಯಲ್ಲಿ ದ್ರವ ಮತ್ತು ಪೊರೆಗಳಿದ್ದು, ಇದು ಊತಕ್ಕೆ ಕಾರಣವಾಗಬಹುದು. ಈ ಉರಿಯೂತವು ಹೆಚ್ಚಾದರೆ ತಲೆನೋವು, ಜ್ವರ ಮತ್ತು ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
* ಬಾಯಿಯ ಆರೋಗ್ಯವು ಹಾಳಾಗುತ್ತದೆ : ಧೂಮಪಾನ ಅಥವಾ ತಂಬಾಕು ಸೇವನೆಯಿಂದ ಹಲ್ಲುಗಳ ಆರೋಗ್ಯವು ಹಾಳಾಗುತ್ತದೆ. ಹಲ್ಲುಗಳ ಬಣ್ಣ ಮಾಸುವುದು, ಹಲ್ಲು ಉದುರುವುದು ಹಾಗೂ ವಸಡಿನ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
* ಶ್ವಾಸಕೋಶಕ್ಕೆ ತೊಂದರೆ : ಧೂಮಪಾನದಂತಹ ಕೆಟ್ಟ ಚಟವು ಶ್ವಾಸಕೋಶದ ಆರೋಗ್ಯವನ್ನು ಕುಂಠಿತಗೊಳಿಸುತ್ತದೆ. ಶ್ವಾಸಕೋಶದಲ್ಲಿನ ಸಣ್ಣ ಗಾಳಿ ಚೀಲಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆಸ್ತಮಾ ರೋಗಿಗಳು ಈ ಸಿಗರೇಟ್ ಸೇದುವ ಅಭ್ಯಾಸ ಹೊಂದಿದ್ದರೆ ಅಂತಹವರುವರು ಈ ಕೆಟ್ಟ ಅಭ್ಯಾಸದಿಂದ ಉಸಿರಾಟದ ಸಮಸ್ಯೆಯು ಉಲ್ಬಣವಾಗಬಹುದು.
* ದೇಹದಲ್ಲಿ ಉರಿಯೂತಕ್ಕೂ ಕಾರಣವಾಗಿದೆ : ಧೂಮಪಾನವು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಹೀಗಾಗಿ ರುಚಿ ಮತ್ತು ವಾಸನೆ ಗ್ರಾಹಕಗಳ ಊತವು ಕಂಡು ಬರುತ್ತದೆ. ಹೀಗಾಗಿ ವಾಸನೆಯ ಗ್ರಹಿಕೆಯು ಕಡಿಮೆಯಾಗಿ ಯಾವುದೇ ಆಹಾರ ಪದಾರ್ಥಗಳ ಪರಿಮಳವನ್ನು ಗ್ರಹಿಸಲು ಕಷ್ಟವಾಗುತ್ತದೆ.
ಇದನ್ನೂ ಓದಿ: ನೊಣಗಳ ಕಾಟದಿಂದ ಬೇಸತ್ತಿದ್ದೀರಾ?; ಹೀಗೆ ಮಾಡಿ ನೋಡಿ
* ದೈಹಿಕ ಚಟುವಟಿಕೆಗಳಿಗೂ ತೊಡಕು : ದೀರ್ಘಕಾಲದಿಂದ ಸಿಗರೇಟ್ ಸೇದುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ, ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳಿಗೆ ಆಮ್ಲಜನಕವು ರವಾನೆಯಾಗುವುದು ಕಡಿಮೆಯಾಗುತ್ತದೆ. ಹೀಗಾಗಿ ದೈಹಿಕ ಸಾಮರ್ಥ್ಯವು ಕುಂಠಿತವಾಗಿ ದೈಹಿಕ ಚಟುವಟಿಕೆಗಳಿಗೂ ತೊಡಕು ಉಂಟಾಗಬಹುದು.
ಧೂಮಪಾನ ಸೇವನೆಯಿಂದ ದೂರವಿರಲು ಈ ಟಿಪ್ಸ್ ಫಾಲೋ ಮಾಡಿ:
* ನಿಮ್ಮ ಸ್ನೇಹಿತರು ಧೂಮಪಾನ ವ್ಯಸನಿಗಳಾಗಿದ್ದರೆ ಆದಷ್ಟು ಅಂತಹವರಿಗೆ ದೂರವಿರಿ.
* ಸಿಗರೇಟ್ ಸೇದಬೇಕು ಎಂದೆನಿಸಿದರೆ ಮನಸ್ಸನ್ನು ಬೇರೆ ಕಡೆಗೆ ವರ್ಗಾಯಿಸಿ ಕೆಲಸದಲ್ಲಿ ಬ್ಯುಸಿಯಾಗಿ.
* ಧೂಮಪಾನ ಚಟವನ್ನು ಬಿಡಬೇಕು ಎನ್ನುವವರು ಕೌನ್ಸಿಲರ್ ನೆರವನ್ನು ಪಡೆಯಬಹುದು.
* ಅಗತ್ಯವೆನಿಸಿದರೆ ನಿಕೋಟಿನ್ ಬಳಕೆಯ ಚಿಕಿತ್ಸೆಯನ್ನು ಪಡೆಯಿರಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ