ಬ್ರಹ್ಮ ಮುಹೂರ್ತದಲ್ಲಿ ಏಳುವ ಅಭ್ಯಾಸದಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?
ರಾತ್ರಿ ಬೇಗ ಮಲಗುವುದು ಮತ್ತು ಬೆಳಗ್ಗೆ ಬೇಗ ಏಳುವುದು ಮನುಷ್ಯನನ್ನು ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೌದು ಬೆಳಿಗ್ಗೆ ಬೇಗನೆ ಏಳುವುದರಿಂದ ದೇಹ ಮತ್ತು ಮನಸ್ಸು ತಾಜಾವಾಗಿರುತ್ತದೆ. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನೀವು ಕೂಡ ರಾತ್ರಿ ಬೇಗ ಮಲಗಿ ಬ್ರಹ್ಮ ಮುಹೂರ್ತದಲ್ಲಿ ಏಳುವ ಅಭ್ಯಾಸವನ್ನು ಬೆಳೆಸಿಕೊಂಡು, ಈ ಅದ್ಭುತ ಪ್ರಯೋಜನಗಳನ್ನೆಲ್ಲಾ ಪಡೆದುಕೊಳ್ಳಿ.

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು (waking up) ತುಂಬಾನೇ ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್, ವಿಡಿಯೋಗಳನ್ನು ನೋಡ್ತಾ ಅನೇಕರು ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವುದಿಲ್ಲ, ಜೊತೆಗೆ ಬೆಳಗ್ಗೆ ತಡವಾಗಿ ಎದ್ದು, ಹರಿಬರಿಯಲ್ಲಿ ಕೆಲಸ, ಕಾಲೇಜುಗಳಿಗೆ ಹೊರಟುಬಿಡುತ್ತಾರೆ. ಈ ಅಭ್ಯಾಸ ಖಂಡಿತವಾಗಿಯೂ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ರಾತ್ರಿ ಬೇಗ ಮಲಗಿ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವ ಅಭ್ಯಾಸ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹೌದು ಬೆಳಗ್ಗೆ ಬೇಗನೇ ಏಳುವುದರಿಂದ ಮನಸ್ಸು ಸಂತೋಷದಿಂದಿರುತ್ತದೆ ಜೊತೆಗೆ ದಿನವನ್ನು ಉತ್ಸಾಹಭರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸದಿಂದ ಏನೆಲ್ಲಾ ಲಾಭಗಳಿವೆ ನೋಡೋಣ ಬನ್ನಿ.
ಬ್ರಹ್ಮ ಮುಹೂರ್ತದಲ್ಲಿ ಏಳುವುದು ಏಕೆ ಮುಖ್ಯ?
ಸೂರ್ಯೋದಯಕ್ಕೆ ಮುಂಚಿನ ಸಮಯವನ್ನು ಸಾಮಾನ್ಯವಾಗಿ ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯವನ್ನು ಧ್ಯಾನ, ಪ್ರಾಣಾಯಾಮ, ಯೋಗ ಮತ್ತು ಅಧ್ಯಯನದಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಮುಂಜಾನೆಯ ಶಾಂತ ವಾತಾವರಣವು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಮಾನಸಿಕ ಶಾಂತಿಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಬೆಳಗ್ಗೆ ಬೇಗ ಏಳುವುದರಿಂದ ಒತ್ತಡ ಕಡಿಮೆಯಾಗುತ್ತದೆ:
ಬೆಳಗಿನ ಸಮಯ ಶಾಂತ ಮತ್ತು ಒತ್ತಡ ರಹಿತ ಸಮಯ. ಈ ಸಮಯದಲ್ಲಿ ಏಳುವುದರಿಂದ ನಿಮ್ಮ ದಿನದ ಬಗ್ಗೆ ಯೋಚಿಸಲು ಸಾಕಷ್ಟು ಸಮಯ ಸಿಗುತ್ತದೆ. ನೀವು ಆರಾಮವಾಗಿ ಕುಳಿತು ನಿಮ್ಮ ದಿನವನ್ನು ಯೋಜಿಸಬಹುದು. ಬೆಳಿಗ್ಗೆ ಹವಾಮಾನವೂ ಆಹ್ಲಾದಕರವಾಗಿರುತ್ತದೆ. ಸ್ವಲ್ಪ ಹೊತ್ತು ತೆರೆದ ಗಾಳಿಯಲ್ಲಿ ಕುಳಿತು ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಮಾನಸಿಕ ಶಾಂತಿ ದೊರೆಯುತ್ತದೆ.
ಸೋಮಾರಿತನ, ಆಲಸ್ಯ ದೂರವಾಗುತ್ತದೆ:
ಬೆಳಿಗ್ಗೆ ಬೇಗನೆ ಏಳುವುದರಿಂದ ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಾಗುತ್ತದೆ. ಇದರಿಂದ ಸೋಮಾರಿತನ ಕೂಡ ದೂರವಾಗುತ್ತದೆ. ಬೇಗನೆ ಏಳುವ ಜನರು ಉತ್ತಮ ಚಿಂತನಾ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಹೊಂದಿರುತ್ತಾರೆ. ಅವರು ಹೆಚ್ಚು ಸೃಜನಶೀಲರು, ಉತ್ತಮ ಏಕಾಗ್ರತೆ ಮತ್ತು ಸ್ಮರಣೆಯನ್ನು ಹೊಂದಿರುತ್ತಾರೆ.
ಮಾನಸಿಕ ಆರೋಗ್ಯ ಸುಧಾರಣೆ:
ಬೇಗನೆ ಏಳುವುದು ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಬೆಳಗಿನ ಸಮಯವು ಹೆಚ್ಚಾಗಿ ಆಹ್ಲಾದಕರ ಮತ್ತು ಹೆಚ್ಚು ಶಾಂತಿಯುತವಾಗಿರುತ್ತದೆ, ಇದು ಆತ್ಮಾವಲೋಕನ ಮತ್ತು ವಿಶ್ರಾಂತಿಗೆ ಸಮಯವನ್ನು ಒದಗಿಸುತ್ತದೆ. ಇದರಿಂದ ಚಿಂತೆ, ಒತ್ತಡಗಳೆಲ್ಲಾ ದೂರವಾಗುತ್ತದೆ.
ಉತ್ಪಾದಕತೆ ಹೆಚ್ಚಾಗುತ್ತದೆ:
ಬೆಳಗ್ಗೆ ಬೇಗನೆ ಎದ್ದೇಳುವ ಜನರಿಗೆ ಕೆಲಸ ಮಾಡಿ ಮುಗಿಸಿಲು ಹೆಚ್ಚಿನ ಸಮಯವಿರುತ್ತದೆ. ಅವರು ತಮ್ಮ ದಿನವನ್ನು ಇತರರಿಗಿಂತ ಮೊದಲೇ ಪ್ರಾರಂಭಿಸುತ್ತಾರೆ, ಇದು ಅವರಿಗೆ ತಮ್ಮ ಕೆಲಸಗಳನ್ನು ಉತ್ತಮವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಅವರು ಯಾವುದೇ ಆತುರ, ಒತ್ತಡವಿಲ್ಲದೆ ಆರಾಮದಾಯಕವಾಗಿ ಕೆಲಸ ಮಾಡಿ ಮುಗಿಸಲು ಸಹಾಯ ಮಾಡುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಒತ್ತಡಮುಕ್ತ ಜೀವನ ನಿಮ್ಮದಾಗಲೂ ಈ ಸರಳ ಸೂತ್ರವನ್ನು ಅಳವಡಿಸಿಕೊಳ್ಳಿ
ದೈಹಿಕ ಚಟುವಟಿಕೆಗೆ ಸಮಯ ಸಿಗುತ್ತದೆ:
ಬೇಗನೆ ಏಳುವುದರಿಂದ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗೆ ಸಮಯ ಸಿಗುತ್ತದೆ. ನಿಯಮಿತ ವ್ಯಾಯಾಮವು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಮಯ ನಿರ್ವಹಣೆಗೆ ಅವಕಾಶ ಸಿಗುತ್ತದೆ:
ಬೇಗನೆ ಏಳುವ ಜನರಿಗೆ ತಮ್ಮ ದಿನವನ್ನು ಯೋಜಿಸಲು ಸಾಕಷ್ಟು ಸಮಯವಿರುತ್ತದೆ. ನೀವು ನಿಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಮಾಡಿ ಆದ್ಯತೆಯ ಪ್ರಕಾರ ಅವುಗಳನ್ನು ಪೂರ್ಣಗೊಳಿಸಬಹುದು. ಇದು ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಮಾಡಲು ಮತ್ತು ಯಾವುದೇ ವಿಳಂಬವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




