Chanakya Niti: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಷಯಗಳನ್ನು ನೆನಪಿಡಿ
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮಂತಿಕೆ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಸಂಬಂಧಿಕರ ಮನೆಗೆ ಭೇಟಿ ನೀಡುವಾಗ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದ್ದಾರೆ. ಸಂಬಂಧಿಕರ ಮನೆಗೆ ಹೋಗುವಾಗ ನಾವು ಮಾಡುವ ಒಂದು ಸಣ್ಣ ತಪ್ಪು ಸಹ ನಮ್ಮ ಗೌರವ ಮತ್ತು ಸಂಬಂಧ ಎರಡನ್ನೂ ಹಾಳು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಂಬಂಧಿಕರ ಮನೆಗೆ ಹೋದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ನೋಡೋಣ.

ಬಾಂಧವ್ಯವನ್ನು ಗಟ್ಟಿಗೊಳಿಸಲು, ಎಲ್ಲರೂ ಜೊತೆಗೂಡಿ ಒಂದೊಳ್ಳೆ ಸಮಯವನ್ನು ಕಳೆಯಲು ನಾವೆಲ್ಲರೂ ಸಹ ಸಂಬಂಧಿಕರ (relatives) ಮನೆಗೆ ಭೇಟಿ ನೀಡುತ್ತೇವೆ. ಹೀಗೆ ರಿಲೆಟಿವ್ಸ್ ಮನೆಗೆ ಹೋಗುವಂತಹ ಸಂದರ್ಭದಲ್ಲಿ ಕೆಲವೊಮ್ಮೆ, ನಾವು ತಿಳಿಯದೆ ಒಂದಷ್ಟು ತಪ್ಪುಗಳನ್ನು ಮಾಡುತ್ತೇವೆ ಅದು ನಮ್ಮ ಇಮೇಜ್ ಅನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ, ನಮ್ಮ ಮೇಲಿನ ಗೌರವವನ್ನು ಕುಗ್ಗಿಸುತ್ತದೆ. ಆದ್ದರಿಂದ ಸಂಬಂಧಿಕರ ಮನೆಗೆ ಹೋಗುವಾಗ ಈ ಕೆಲವೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಗೌರವ, ಸಂಬಂಧ ಎರಡೂ ಹಾಳಾಗಬಾರದೆಂದರೆ ಸಂಬಂಧಿಕರ ಮನೆಗೆ ಹೋಗುವಾಗ ಯಾವ ಸಂಗತಿಗಳ ಬಗ್ಗೆ ಮುಖ್ಯವಾಗಿ ಗೊತ್ತಿರಬೇಕು ಎಂಬುದನ್ನು ನೋಡೋಣ ಬನ್ನಿ.
ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಚಾರಗಳು ತಿಳಿದಿರಲಿ:
ತಿಳಿಸದೆ ಅಥವಾ ಆಹ್ವಾನಿಸದೆ ಎಂದಿಗೂ ಹೋಗಬೇಡಿ:
ಆಚಾರ್ಯ ಚಾಣಕ್ಯರ ಪ್ರಕಾರ, ನೀವು ನಿಮ್ಮ ಸಂಬಂಧಿಕರ ಮನೆಗಳಿಗೆ ಅವರಿಗೆ ತಿಳಿಸದೆ ಅಥವಾ ಅನಿರೀಕ್ಷಿತವಾಗಿ ಹೋಗಬಾರದು. ಏಕೆಂದರೆ ಆ ಮನೆಯವರು ಯಾವುದಾದರೂ ಪ್ರಮುಖ ಕೆಲಸಗಳಲ್ಲಿ ನಿರತರಾಗಿರಬಹುದು ಅಥವಾ ಕೆಲಸದ ಮೇಲೆ ಹೊರಗೆ ಹೋಗಲು ತಯಾರಿ ನಡೆಸುತ್ತಿರಬಹುದು. ಹೀಗಿರುವಾಗ ನೀವು ಅನಿರೀಕ್ಷಿತವಾಗಿ ಅವರ ಮನೆಗೆ ಹೋದ್ರೆ, ಅದು ಅವರ ಕೆಲಸಕ್ಕೆ ಅಡ್ಡಿಪಡಿಸಿದಂತಾಗಬಹುದು ಮತ್ತು ಅವರನ್ನು ಅಸಮಾಧಾನಗೊಳಿಸಬಹುದು. ಆದ್ದರಿಂದ, ನೀವು ಯಾರ ಮನೆಗೆ ಹೋಗುತ್ತಿದ್ದರೂ ಅವರಿಗೆ ಮುಂಚಿತವಾಗಿ ತಿಳಿಸಿಬಿಡಿ, ಇಲ್ಲದೆ ಕರೆಯದೆ ಯಾವ ಸಂಬಂಧಿಕ ಮನೆಗೂ ತೆರಳಬೇಡಿ. ಕರೆಯದೆ ಇನ್ನೊಬ್ಬರ ಮನೆಗೆ ಹೋದ್ರೆ ಕೆಲವರು ನಿಮ್ಮನ್ನು ಕೀಳಾಗಿ ಕಾಣುವ ಸಾಧ್ಯತೆಯೂ ಇರುತ್ತದೆ.
ಸಂಬಂಧಿಕರ ಮನೆಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ:
ಚಾಣಕ್ಯರ ಪ್ರಕಾರ, ನೀವು ಸಂಬಂಧಿಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ ಅಥವಾ ಅನಗತ್ಯ ಸಲಹೆಯನ್ನು ನೀಡುವ ತಪ್ಪನ್ನು ಮಾಡಬೇಡಿ. ಅವರು ತಮ್ಮ ಮನೆಯನ್ನು ಹೇಗೆ ನಡೆಸುತ್ತಾರೆ, ಅವರು ತಮ್ಮ ಮಕ್ಕಳಿಗೆ ಹೇಗೆ ಶಿಕ್ಷಣ ನೀಡುತ್ತಾರೆ ಅಥವಾ ಅವರು ತಮ್ಮ ಹಣವನ್ನು ಎಲ್ಲಿ ಖರ್ಚು ಮಾಡುತ್ತಾರೆ, ಇದ್ಯಾವುದರ ಬಗ್ಗೆ ನೀವು ಕೇಳಬೇಡಿ ಅಥವಾ ಅವರು ಈ ರೀತಿ ಹೇಳಿದಾಗ ನೀವು ಸಲಹೆಗಳನ್ನು ನೀಡಲು ಹೋಗಬೇಡಿ. ನೀವು ಇತರರ ವೈಯಕ್ತಿಕ ವಿಷಯಗಳಿಂದ ದೂರವಿದ್ದಷ್ಟೂ ನಿಮಗೆ ಒಳ್ಳೆಯದು.
ಎಂದಿಗೂ ಬರಿಗೈಯಲ್ಲಿ ಹೋಗಬೇಡಿ:
ಚಾಣಕ್ಯ ನೀತಿಯ ಪ್ರಕಾರ, ನೀವು ಸಂಬಂಧಿಕರು ಅಥವಾ ಸ್ನೇಹಿತರ ಮನೆಗೆ ಭೇಟಿ ನೀಡಿದಾಗ, ನೀವು ಎಂದಿಗೂ ಬರಿಗೈಯಲ್ಲಿ ಹೋಗಬಾರದು. ನೀವು ಯಾವಾಗಲೂ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನನ್ನಾದರೂ ತೆಗೆದುಕೊಂಡು ಹೋಗುವುದು ಉತ್ತಮ. ಹೌದು ಹಣ್ಣು, ಸಿಹಿ ತಿಂಡಿ ಏನನ್ನಾದರೂ ತೆಗೆದುಕೊಂಡು ಹೋಗಿ, ಇದು ಅವರಿಗೆ ಖುಷಿಯ ಭಾವನೆಯನ್ನು ಮೂಡಿಸುತ್ತದೆ.
ಇದನ್ನೂ ಓದಿ: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ
ಅಗತ್ಯಕ್ಕಿಂತ ಹೆಚ್ಚು ಸಮಯ ಇರಬೇಡಿ:
ನೀವು ಬೇರೆಯವರ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹೊತ್ತು ಇದ್ದರೆ, ಅದರಿಂದ ನಿಮ್ಮ ಗೌರವ ಕುಗ್ಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ಎಷ್ಟೇ ಆಪ್ತ ಸಂಬಂಧಿಯಾಗಿದ್ದರೂ, ಹೆಚ್ಚು ಸಮಯ ಸಂಬಂಧಿಕರ ಮನೆಯಲ್ಲಿ ಇದ್ದರೆ, ಅವರು ನಿಮ್ಮ ಉಪಸ್ಥಿತಿಯಿಂದ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಜೊತೆಗೆ ನಿಮ್ಮ ಮೇಲಿನ ಗೌರವವೂ ಕಳೆದು ಹೋಗುತ್ತದೆ. ಆದ್ದರಿಂದ ಹೆಚ್ಚು ಸಮಯ ಸಂಬಂಧಿಕರ ಮನೆಯಲ್ಲಿ ಕಳೆಯುವುದು ಸೂಕ್ತವಲ್ಲ.
ದಯೆಯಿಂದ ಮಾತನಾಡಿ:
ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಯಾರ ಮನೆಗಾದರೂ ಭೇಟಿ ನೀಡಿದ ಸಂದರ್ಭದಲ್ಲಿ ನಿಮ್ಮ ಅಂತಸ್ತು ಮತ್ತು ಅಹಂಕಾರವನ್ನು ಪ್ರದರ್ಶಿಸಬಾರದು. ಯಾವಾಗಲೂ ಎಲ್ಲರೊಂದಿಗೂ ಸಭ್ಯ ಮತ್ತು ಸೌಜನ್ಯದಿಂದ ಮಾತನಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇತರ ಸಂಬಂಧಿಕರ ಬಗ್ಗೆ ಗಾಸಿಪ್ ಮಾಡುವುದು ಅಥವಾ ಕೆಟ್ಟದಾಗಿ ಮಾತನಾಡುವುದನ್ನು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




