ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಕೆಲವು ಆಹಾರಗಳನ್ನು ತಿನ್ನಲೇಬೇಡಿ
ಬೆಳಗ್ಗಿನ ಉಪಹಾರ ಸರಿಯಾಗಿದ್ದರೆ, ನಮ್ಮ ದೇಹವು ದಿನವಿಡೀ ಉಲ್ಲಾಸದಾಯಕ ಹಾಗೂ ಚಟುವಟಿಕೆಯಿಂದ ಇರುತ್ತದೆ. ಬೆಳಗಿನ ತಿಂಡಿ ತಿನ್ನುವುದು ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಹೀಗಿದ್ದರೂ ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಒಂದಷ್ಟು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದಂತೆ. ಆ ಆಹಾರಗಳು ಯಾವುವು? ಅವುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಉಂಟಾಗುವ ಪರಿಣಾಮಗಳಾದರೂ ಏನು ಎಂಬುದನ್ನು ನೋಡಿ.

ಬೆಳಗ್ಗಿನ ಉಪಹಾರವು (Morning breakfast) ದಿನದ ಮೊದಲ ಊಟ ಮಾತ್ರವಲ್ಲದೆ ಪ್ರಮುಖ ಊಟವೂ ಆಗಿದೆ. ಅದಕ್ಕಾಗಿಯೇ ಬೆಳಗ್ಗಿನ ಉಪಹಾರ ಸೇವನೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು ಎಂದು ತಜ್ಞರು ಹೇಳುವುದು. ಬೆಳಗಿನ ಉಪಹಾರ ನಮ್ಮನ್ನು ದಿನವಿಡಿ ಚಟುವಟಿಕೆಯಿಂದ ಇರಲು ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ, ಇದು ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮಟ್ಟವನ್ನು ಸ್ಥಿರವಾಗಿಡಲು ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ತಪ್ಪದೆ ಮಾರ್ನಿಂಗ್ ಬ್ರೇಕ್‌ಫಾಸ್ಟ್ ಸೇವನೆ ಮಾಡಬೇಕು. ಉಪಹಾರ ಸೇವನೆ ಮಾಡಬೇಕು ನಿಜ, ಆದರೆ ಉಪಹಾರದ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ಕೆಲವು ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದಂತೆ. ಆ ಆಹಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳಗ್ಗಿನ ಉಪಹಾರಕ್ಕೆ ಈ ಆಹಾರಗಳನ್ನು ತಿನ್ನಬೇಡಿ:
ಸಿಟ್ರಸ್ ಹಣ್ಣುಗಳು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪಹಾರಕ್ಕೆ ಹುಳಿ ರುಚಿಯನ್ನು ಹೊಂದಿರುವ ಸಿಟ್ರಸ್ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಹುಳಿ ಹಣ್ಣುಗಳು ಆಮ್ಲೀಯವಾಗಿರುವುದರಿಂದ ಹೊಟ್ಟೆಯಲ್ಲಿ ಅನಿಲ, ಸುಡುವ ಸಂವೇದನೆ ಮುಂತಾದ ಸಮಸ್ಯೆಗಳನ್ನು ಉಂಟು ಮಾಡಬಹುದು.
ಬ್ರೆಡ್: ಸುಲಭವಾಗಿ ಬ್ರೇಕ್‌ಫಾಸ್ಟ್ ರೆಡಿ ಆಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕೆ ಬ್ರೆಡ್ ತಿನ್ನುತ್ತಾರೆ. ಆದರೆ ಬ್ರೆಡ್ ನಮ್ಮ ಹೊಟ್ಟೆಗೆ ತುಂಬಾ ಹಾನಿಕಾರಕವಾಗಿದೆ. ಹೌದು ಇದು ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಾಗಿರುವುದರಿಂದ, ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬ್ರೆಡ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುವುದಿಲ್ಲ ಬದಲಿಗೆ ಆಲಸ್ಯ ಉಂಟಾಗುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರಗಳು: ಅನೇಕ ಜನರು ಬೆಳಗ್ಗೆ ಉಪಹಾರಕ್ಕೆ ಪೂರಿಯಂತಹ ಕರಿದ ಆಹಾರವನ್ನು ಸೇವಿಸುತ್ತಾರೆ. ಆದರೆ ಎಣ್ಣೆಯಲ್ಲಿ ಕರಿದ ಈ ಆಹಾರಗಳು ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಆರೋಗ್ಯಕರ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಸಿಹಿ ಪದಾರ್ಥಗಳು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಉಪಹಾರದ ಸಮಯದಲ್ಲಿ ಸಿಹಿ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ. ವಿಶೇಷವಾಗಿ ಮಧುಮೇಹ ರೋಗಿಗಳು ಉಪಹಾರದ ಸಮಯದಲ್ಲಿ ಸಿಹಿ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬೆಳಿಗ್ಗೆ ಹೆಚ್ಚು ಸಕ್ಕರೆ ಅಂಶ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಸಿಹಿ ಆಹಾರವನ್ನು ಸೇವಿಸುವ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಕ್ಕರೆ ಪದಾರ್ಥಗಳನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳೂ ಉಂಟಾಗಬಹುದು.
ಇದನ್ನೂ ಓದಿ: ಈ ಒಂದಿಷ್ಟು ಆಹಾರಗಳಿಗೆ ಎಕ್ಸ್‌ಪೈರಿ ಡೇಟ್ ಅನ್ನೋದೇ ಇಲ್ಲವಂತೆ
ಮಸಾಲೆಯುಕ್ತ ಆಹಾರ: ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರ ಮತ್ತು ಹಗುರವಾದ ಆಹಾರವನ್ನು ಸೇವನೆ ಮಾಡಬೇಕು. ಕೆಲವರು ಪಕೋಡಾ, ಸಮೋಸ ಮತ್ತು ಮಸಾಲೆಯುಕ್ತ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಮೊಸರು: ಮೊಸರು ಹೆಚ್ಚಿನ ಕ್ಯಾಲ್ಸಿಯಂ ಪ್ರೋಬಯಾಟಿಕ್ ಅಂಶಕ್ಕೆ ಹೆಸರುವಾಸಿಯಾಗಿದೆ. ಆದರೆ ಇವುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉಬ್ಬರ, ಆಮ್ಲೀಯತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 am, Fri, 1 August 25








