Better Sleep Tips: ಮಲಗುವ ಮುನ್ನ ಈ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು
ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ 7 ರಿಂದ 8 ಗಂಟೆಗಳ ನಿದ್ರೆ ಪಡೆಯುವುದು ತುಂಬಾನೇ ಮುಖ್ಯ. ಆದರೆ ಇಂದಿನ ಒತ್ತಡದ ಜೀವನದಲ್ಲಿ ಅನೇಕರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ನಿತ್ಯ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ಇದು ನಿಮಗೆ ನೆಮ್ಮದಿಯ ನಿದ್ರೆ ಪಡೆಯಲು ತುಂಬಾನೇ ಸಹಾಯ ಮಾಡುತ್ತವೆ.

ಮುಖ್ಯಾಂಶಗಳು
- ನಮ್ಮ ಆರೋಗ್ಯಕ್ಕೆ 7 ರಿಂದ 8 ಗಂಟೆಗಳ ನಿದ್ರೆ ತುಂಬಾನೇ ಅವಶ್ಯಕ
- ಕಳಪೆ ಜೀವನಶೈಲಿ, ಒತ್ತಡ ಇವೆಲ್ಲದರ ಕಾರಣದಿಂದ ಇಂದು ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ
- ರಾತ್ರಿ ಮಲಗುವ ಮುನ್ನ ಧ್ಯಾನ, ಪುಸ್ತಕ ಓದುವುದು, ಸೇರಿದಂತೆ ಒಂದಷ್ಟು ಕೆಲಸ ಮಾಡುವ ಮೂಲಕ ಉತ್ತಮ ನಿದ್ರೆ ಪಡೆಯಬಹುದು
ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ನೀರು ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಲು ನಿತ್ಯ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ (good sleep) ಪಡೆಯುವುದು ಸಹ ಅಷ್ಟೇ ಮುಖ್ಯ. ಹೌದು ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮನಸ್ಥಿತಿಯನ್ನು ಚೆನ್ನಾಗಿಡಲು, ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಇಂದಿನ ಒತ್ತಡದ ಹಾಗೂ ಅನಾರೋಗ್ಯಕರ ಜೀವನಶೈಲಿಯ ಕಾರಣ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ನಿಮಗೂ ಕೂಡ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ರೆ ಪ್ರತಿ ರಾತ್ರಿ ಮಲಗುವ ಮುನ್ನ ತಪ್ಪದೇ ಈ ಒಂದಷ್ಟು ಕೆಲಸಗಳನ್ನು ಮಾಡಿ, ಇವು ನಿಮಗೆ ನೆಮ್ಮದಿಯ ನಿದ್ರೆ ಪಡೆಯಲು ತುಂಬಾನೇ ಸಹಾಯ ಮಾಡುತ್ತವೆ.
ಉತ್ತಮ ನಿದ್ರೆ ಪಡೆಯಲು ರಾತ್ರಿ ಮಲಗುವ ಮುನ್ನ ಏನು ಮಾಡಬೇಕು?
ನಿಮ್ಮ ಮಲಗುವ ಸಮಯವನ್ನು ಸರಿಪಡಿಸಿಕೊಳ್ಳಿ: ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಲು ಮತ್ತು ಎಚ್ಚರಗೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ರಾತ್ರಿ 9 ಗಂಟೆಗೆ ಮಲಗಿ ಬೆಳಗ್ಗೆ 5 ಗಂಟೆಗೆ ಎದ್ದೇಳಿ. ಪ್ರತಿನಿತ್ಯ ಇದೇ ಸಮಯಕ್ಕೆ ಮಲಗಿ. ಇದು ನಿಮ್ಮ ದೇಹದ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ರಿಸಲು ಸಹಾಯ ಮಾಡುತ್ತದೆ.
ಮಲಗುವ ಒಂದು ಗಂಟೆ ಮೊದಲು ಮೊಬೈಲ್‌ನಿಂದ ದೂರವಿರಿ: ಇತ್ತೀಚಿನ ದಿನಗಳಲ್ಲಿ ಅನೇಕರು ಸೋಷಿಯಲ್ ಮೀಡಿಯಾ ನೋಡುತ್ತಾ, ಮೊಬೈಲ್ ಸ್ಕ್ರೋಲ್ ಮಾಡುತ್ತಾ ಕುಳಿತು ಬಿಡುತ್ತಾರೆ ಮತ್ತು ತಡ ರಾತ್ರಿಯವರೆಗೆ ಎಚ್ಚರಗೊಂಡಿರುತ್ತಾರೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಿಂದ ಬರುವ ನೀಲಿ ಬೆಳಕು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಮಲಗುವ ಒಂದು ಗಂಟೆಗೂ ಮುನ್ನ ಮೊಬೈಲ್, ಟಿವಿ ನೋಡುವುದನ್ನು ಸ್ಟಾಪ್ ಮಾಡಿ. ಸಾಧ್ಯವಾದರೆ ಈ ಸಮಯದಲ್ಲಿ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
ಹಗುರವಾದ ಆಹಾರ ಸೇವಿಸಿ: ಮಲಗುವ ಸಮಯಕ್ಕೆ ಕನಿಷ್ಠ 2 ರಿಂದ 3 ಗಂಟೆಗಳ ಮೊದಲು ಊಟ ಮಾಡಿ. ಭಾರವಾದ, ಮಸಾಲೆಯುಕ್ತ ಅಥವಾ ಹುರಿದ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ರಾತ್ರಿ ಹಗುರವಾದ ಊಟ ಮಾಡಿ.
ಇದನ್ನೂ ಓದಿ: ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ
ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ: ಸಂಜೆಯ ಬಳಿಕ ಚಹಾ, ಕಾಫಿ, ಎನರ್ಜಿ ಡ್ರಿಂಕ್ಸ್ ಅಥವಾ ಆಲ್ಕೋಹಾಲ್ ಸೇವಿಸುವುದು ಅಷ್ಟೇನೂ ಒಳ್ಳೆಯದಲ್ಲ. ಏಕೆಂದರೆ ಇವು ನಿದ್ರೆಯ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ನಿದ್ರೆಗೆ ಸಾಕಷ್ಟು ಅಡ್ಡಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ರಾತ್ರಿ ಹೊತ್ತು ಕೆಫೀನ್ ಸೇವನೆಯನ್ನು ತಪ್ಪಿಸಿ.
ಧ್ಯಾನ ಮಾಡಿ: ಉತ್ತಮ ನಿದ್ರೆ ಪಡೆಯಲು ಮಲಗುವ ಮುನ್ನ 5 10 ನಿಮಿಷಗಳ ಧ್ಯಾನ ಮಾಡಿ. ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಅಥವಾ ಲಘು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತಗೊಳ್ಳುತ್ತದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಧ್ಯಾನ ಮಾತ್ರವಲ್ಲದೆ ಪುಸ್ತಕ ಓದುವುದು, ಶಾಂತ ಸಂಗೀತವನ್ನು ಕೇಳುವ ಮೂಲಕವೂ ಉತ್ತಮ ನಿದ್ರೆಯನ್ನು ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




