Toxic Friendship: ಪದೇ ಪದೇ ನಿಂದನೆ ಮಾಡುವ ಸ್ನೇಹಿತರೊಂದಿಗೆ ಎಚ್ಚರ? ಆ ಸಮಯದಲ್ಲಿ ಏನು ಮಾಡಬೇಕು?
ಮೊದ ಮೊದಲು ಚೆನ್ನಾಗಿದ್ದ ಸ್ನೇಹ ಈಗ ಅಷ್ಟಕಷ್ಟೆ ಆಗಿಬಿಟ್ಟಿದೆ. ಇದಕ್ಕೆ ಕಾರಣ ನೀವು ಸ್ನೇಹಿತರು ಎಂದುಕೊಂಡವರು ನಿಮ್ಮನ್ನು ಮನ್ಸೋ ಇಚ್ಛೆಯಂತೆ ನಿಂದಿಸುತ್ತಿದ್ದಾರೆ. ಹಾಗಾಗಿ ನಿಮಗೆ ಎಷ್ಟೇ ಸಹಿಸಿಕೊಂಡರು ಅವರು ಬದಲಾಗುವುದಿಲ್ಲ ಎಂಬ ಭಾವನೆ ಬಂದು ಬಿಟ್ಟಿದೆ. ಹಾಗಾದರೆ ಏನು ಮಾಡಬೇಕು? ಅವರೊಂದಿಗೆ ಎಚ್ಚರಿಕೆಯಿಂದ ಇರುವುದು ಹೇಗೆ? ಇಲ್ಲಿದೆ ಮಾಹಿತಿ.
ಸ್ನೇಹಿತರು ಎಂದರೆ ಅದೊಂದು ಬೆಂಬಲದ ಖಜಾನೆ ಇದ್ದಂತೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಬೆನ್ನ ಹಿಂದೆ ನಿಂತು ಸಹಾಯ ಮಾಡುತ್ತಾರೆ. ಸಂತೋಷ, ದುಃಖ ಹಂಚಿಕೊಳ್ಳಲು ಮೊದಲಿಗರಾಗಿರುತ್ತಾರೆ. ಆದರೆ ಸ್ನೇಹ ಇನ್ನೊಂದು ಬದಿಯಲ್ಲಿ ನಿಂದನಾತ್ಮಕವೂ ಆಗಿರಬಹುದು ಎಲ್ಲ ಗೆಳೆತನ ಹಾಗೇ ಇರುತ್ತದೆ ಎಂದಲ್ಲ. ಕೆಲವು ಗೆಳೆಯರು ನಿಮಗೆ ನಿಂದನೆ ಮಾಡುತ್ತಲೇ ಇರುತ್ತಾರೆ. ಮತ್ತು ನೀವು ಇದನ್ನು ಆರಂಭದಲ್ಲಿ ಅರಿತುಕೊಳ್ಳದಿದ್ದರೂ, ಬರುತ್ತಾ ಬರುತ್ತಾ ಮಾನಸಿಕ ಆರೋಗ್ಯವನ್ನು ಹಾಳು ಮಾಡುವಷ್ಟು ಸಂಬಂಧ ಹಾಳಾಗಿರಬಹುದು. ಇದರಿಂದ ನಿಮ್ಮ ಬುದ್ಧಿವಂತಿಕೆಯನ್ನು ಅನುಮಾನಿಸುವಂತೆ ಮಾಡಿಬಿಟ್ಟಿರುತ್ತೆ. ನಿಮ್ಮ ಜೀವನದ ಎಲ್ಲಾ ಅಂಶಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ, ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವ ಅಥವಾ ಅವರ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ತಪ್ಪಿಗೂ (ನೇರವಾಗಿ ಅಥವಾ ಪರೋಕ್ಷವಾಗಿ) ನಿಮ್ಮನ್ನು ದೂಷಿಸುವ ಯಾರೊಂದಿಗಾದರೂ ಆಳವಾದ ಸ್ನೇಹವನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ.
ಸ್ನೇಹದಲ್ಲಿ ನಿಂದನೆಯನ್ನು ಎಂದಿಗೂ ಕಡೆಗಣಿಸಬಾರದು ಅಥವಾ ನಿರ್ಲಕ್ಷಿಸಬಾರದು. ದುರದೃಷ್ಟವಶಾತ್, ಅನೇಕ ಜನರು ಇದರ ಬಗ್ಗೆ ಯೋಚಿಸುವುದೇ ಇಲ್ಲ. ಸ್ನೇಹದಲ್ಲಿ ನಿಂದನೆಯ ಕಟು ವಾಸ್ತವವನ್ನು ಹೋಗಲಿ ಎಂದು ಬಿಟ್ಟುಬಿಡುತ್ತಾರೆ. ಕೆಲವೊಮ್ಮೆ ಇದನ್ನು ಗುರುತಿಸುವುದು ಕಷ್ಟ ಅದಕ್ಕಿಂತ ಎದುರಿಸಲು ಇನ್ನಷ್ಟು ಜಟಿಲ.
ಈ ಬಗ್ಗೆ ತಜ್ಞರು ಕೆಲವು ಅಭಿಪ್ರಾಯಗಳನ್ನು ಹೊಂದಿದ್ದು ಈ ಬಗ್ಗೆ ಇಲ್ಲಿದೆ ಮಾಹಿತಿ
ದೂಷಣೆ: ನಿಂದಿಸುವವನು ನಿರಂತರವಾಗಿ ತಮ್ಮ ಸ್ನೇಹಿತರು ಅಥವಾ ಪ್ರೀತಿಪಾತ್ರರನ್ನು ಅವರ ವೈಫಲ್ಯಗಳು, ನ್ಯೂನತೆಗಳನ್ನು ದೂಷಿಸುತ್ತಾನೆ. ಇನ್ನು ಕೆಲವರು ಇತರ ವ್ಯಕ್ತಿಯ ಆತ್ಮಗೌರವಕ್ಕೆ ಕುಂದು ತರುವ ಅನಪೇಕ್ಷಿತ ಟೀಕೆಗಳನ್ನು ಸಹ ಮಾಡಬಹುದು.
ನಿಯಂತ್ರಣ: ನಿಂದಿಸುವವರು ಆಗಾಗ್ಗೆ ತಮ್ಮ ಸ್ನೇಹಿತನ ಜೀವನದ ಪ್ರತಿಯೊಂದು ಅಂಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಅವರು ಯಾರೊಂದಿಗೆ ಸಮಯ ಕಳೆಯುತ್ತಾರೆ ಎಂಬುದರಿಂದ ಹಿಡಿದು ಅವರು ಧರಿಸುವ ಬಟ್ಟೆಗಳವರೆಗೆ. ಅಲ್ಲದೆ ತಮ್ಮ ನಡವಳಿಕೆಯನ್ನು ಸಮರ್ಥನೀಯ ಮತ್ತು ಅರ್ಹವೆಂದು ನಂಬುವಂತೆ ತಮ್ಮ ಸ್ನೇಹಿತನನ್ನು ಕುಶಲತೆಯಿಂದ ಬಳಸಿಕೊಳ್ಳಬಹುದು.
ಇದನ್ನೂ ಓದಿ:This friendship is divine: ಇದು ತೋತಾ-ಮೈನಾ ಕಿ ಕಹಾನಿ ಅಲ್ಲ, ಪಶ್ಚಿಮ ಬಂಗಾಳದ ಅಂಕಿತಾ-ಮೈನಾ ಕಿ ಕಹಾನಿ!
ಪ್ರತ್ಯೇಕಿಸುವಿಕೆ; ನಿಂದಿಸುವವರು ತಮ್ಮ ಸ್ನೇಹಿತರ ಮೇಲೆ ಹೆಚ್ಚಿನ ಅಧಿಕಾರ ಚಲಾಯಿಸಲು ಅವರನ್ನು ಮತ್ತೊಬ್ಬರಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಾರೆ. ಇತರರೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಕಟ್ಟಿಕೊಳ್ಳುವುದನ್ನು ತಡೆಯುತ್ತಾರೆ.
ಬೆದರಿಕೆ: ನಿಂದಿಸುವವರು ತಮ್ಮ ಸ್ನೇಹಿತರು ಎಂದು ಅಂದುಕೊಂಡವರ ಮೇಲೆ ನಿಯಂತ್ರಣ ಪಡೆಯಲು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ಹಾನಿ ಮಾಡಿ, ಬೆದರಿಕೆಯನ್ನು ಅಸ್ತ್ರವಾಗಿ ಬಳಸಬಹುದು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅವರು ಸ್ವಯಂ ಹಾನಿ ಅಥವಾ ಆತ್ಮಹತ್ಯೆಯ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಬಹುದು.
ಅನಿರೀಕ್ಷಿತತೆ: ಪೀಡಕನ ಅಂದರೆ ಸ್ನೇಹಿತ ಎಂದುಕೊಂಡವರ ನಡವಳಿಕೆಯು ಅನಿರೀಕ್ಷಿತವಾಗಿರಬಹುದು, ಇದರಿಂದಾಗಿ ಅವರ ಸ್ನೇಹಿತನಿಗೆ ಅವರು ಯಾವ ರೀತಿಯ ಸಾಮರ್ಥ್ಯ ಹೊಂದಿದ್ದಾರೆ ಅಥವಾ ಯಾವಾಗ ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಈ ನಿರಂತರ ಭಯ ಮತ್ತು ಆತಂಕವು ವ್ಯಕ್ತಿಯ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ. ಇವೆಲ್ಲವನ್ನು ನೀವು ನಿಮ್ಮ ಸ್ನೇಹದಲ್ಲಿ ಗುರುತಿಸಿದರೆ ಈಗಲೇ ಜಾಗೃತರಾಗಿ.
ವೃತ್ತಿಪರರ ಸಹಾಯ ತೆಗೆದುಕೊಳ್ಳಿ: ನೀವು ನಿಂದನಾತ್ಮಕ ಸ್ನೇಹ ಅಥವಾ ಸಂಬಂಧದಲ್ಲಿದ್ದರೆ ವೃತ್ತಿಪರ ಸಹಾಯವನ್ನು ಪಡೆಯುವುದು ಅತ್ಯಗತ್ಯ. ನಿಮಗೆ ಅಗತ್ಯವಿರುವ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆಯಲು ನೀವು ಚಿಕಿತ್ಸಕರನ್ನು ಸಂಪರ್ಕಿಸಬಹುದು.
ಸುರಕ್ಷತಾ ಯೋಜನೆಯನ್ನು ರಚಿಸಿ: ನಿಮ್ಮ ಸ್ನೇಹಿತ ನಿಂದಿಸಿದರೆ ಏನು ಮಾಡಬೇಕೆಂದು ವಿವರಿಸುವ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಇದು ನಿಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಇದಕ್ಕೆ ನೀವು ವೃತ್ತಿಪರ ಸಹಾಯವನ್ನೂ ಪಡೆಯಬಹುದು.
ತಕ್ಕಮಟ್ಟಿನ ಸಲುಗೆ ಒಳ್ಳೆಯದು: ನಿಮ್ಮ ಸ್ನೇಹಿತರೊಂದಿಗೆ ಗೆಳೆತನದಲ್ಲಿ ಸ್ಪಷ್ಟ ಗಡಿ ಅಥವಾ ತಕ್ಕಮಟ್ಟಿನ ಸಲುಗೆ ಇದ್ದರೆ ಒಳ್ಳೆಯದು. ಆಗ ಅವರು ನಿಮ್ಮ ಮೇಲೆ ಅತಿಯಾಗಿ ಅಧಿಕಾರ ಚಲಾಯಿಸಲು ಬರುವುದಿಲ್ಲ. ಕೆಲವೊಮ್ಮೆ ಅವರ ವರ್ತನೆ ನಮಗೆ ಇಷ್ಟವಾಗುವುದಿಲ್ಲ. ಆಗ ಕೆಲವೊಂದು ಕಟ್ಟಲೆಗಳು ನಿಮ್ಮನ್ನು ಅವರಿಂದ ರಕ್ಷಿಸುತ್ತದೆ.
ಸ್ವಯಂ ಆರೈಕೆಯನ್ನು ಅಭ್ಯಾಸ ಮಾಡಿಕೊಳ್ಳಿ: ನಿಂದನಾತ್ಮಕ ಸಂಬಂಧದಿಂದ ಚೇತರಿಸಿಕೊಳ್ಳಲು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ನೀವು ನೋಡಿಕೊಳ್ಳುವುದು ಅತ್ಯಗತ್ಯ. ನಿಮಗೆ ಸಂತೋಷ, ಶಾಂತಿ ಮತ್ತು ವಿಶ್ರಾಂತಿಯನ್ನು ತರುವ ಚಟುವಟಿಕೆಗಳಿಗೆ ನೀವು ಆದ್ಯತೆ ನೀಡಿ. ಜೊತೆಗೆ ಕಷ್ಟದ ಸಮಯದಲ್ಲಿ ಬೆಂಬಲ ನೀಡಬಲ್ಲ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರುವುದು ಸಹ ಮುಖ್ಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:14 pm, Fri, 28 April 23