International Kite Day 2025: ಭಾರತದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಆಕಾಶದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಹಾರಾಡುವುದನ್ನು ನೋಡುತ್ತಿದ್ದರೆ ನಮ್ಮ ಬಾಲ್ಯದ ನೆನಪುಗಳು ತೆರೆದುಕೊಳ್ಳುತ್ತದೆ. ಹೌದು, ಈ ಗಾಳಿಪಟಕ್ಕೂ ಒಂದು ದಿನವನ್ನು ಮೀಸಲಿಡಲಾಗಿದೆ. ಭಾರತದಲ್ಲಿ ಪ್ರತಿ ವರ್ಷ ಜನವರಿ 14 ರಂದು ಅಂತಾರಾಷ್ಟ್ರೀಯ ಗಾಳಿಪಟ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆಯು ಹುಟ್ಟಿಕೊಂಡದ್ದು ಹೇಗೆ? ಏನಿದರ ವಿಶೇಷತೆ ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ
ಬಣ್ಣ ಬಣ್ಣದ ಗಾಳಿಪಟಗಳನ್ನು ಕಂಡಾಗ ಮನಸ್ಸು ಮಕ್ಕಳಂತೆ ಕುಣಿಯುತ್ತದೆ. ಗಾಳಿಪಟ ಹಾರಿಸಿದರೆ ಮನಸ್ಸು ನಿರಾಳವಾಗುತ್ತದೆ. ಈ ಗಾಳಿಪಟಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು, ಜನವರಿ 14 ರಂದು ಗಾಳಿಪಟವನ್ನು ಹಾರಿಸಲಾಗುತ್ತದೆ. ಈ ಗಾಳಿಪಟ ಉತ್ಸವವು ಜನವರಿ 14 ರಂದು ಮಕರ ಸಂಕ್ರಾಂತಿಯ ಸಮಯದಲ್ಲಿ ಪ್ರಾರಂಭವಾಗಿ ಜನವರಿ 15ರಂದು ಕೊನೆಗೊಳ್ಳುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಗಾಳಿಪಟ ಹಾರಿಸುವ ಹಬ್ಬವನ್ನು ಗುಜರಾತ್ನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಗಾಳಿಪಟ ಹಾರಿಸಲೆಂದೇ ವಿಶ್ವದ ವಿವಿಧ ರಾಷ್ಟ್ರಗಳ ಜನರು ಭಾರತಕ್ಕೆ ಆಗಮಿಸುತ್ತಾರೆ. ವಿವಿಧ ಆಕಾರಗಳ ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸುತ್ತಾರೆ.
ಅಂತಾರಾಷ್ಟ್ರೀಯ ಗಾಳಿಪಟ ದಿನದ ಇತಿಹಾಸ ಹಾಗೂ ಮಹತ್ವ
ಗಾಳಿಪಟ ಹಾರಿಸುವುದು ರಾಜವಂಶಸ್ಥರಿಗೆ ಮತ್ತು ಶ್ರೀಮಂತರಿಗೆ ಮೀಸಲಾಗಿದ್ದ ಒಂದು ಹವ್ಯಾಸವಾಗಿತ್ತು, ಆದರೆ ತದನಂತರದಲ್ಲಿ ಮುಕ್ತವಾದ ಉತ್ಸವವಾಗಿ ಬದಲಾಯಿತು. ಅಂತಾರಾಷ್ಟ್ರೀಯ ಗಾಳಿಪಟ ದಿನಾಚರಣೆ ಮೊದಲಿಗೆ ಆರಂಭವಾಗಿದ್ದು ಭಾರತದಲ್ಲಿ. ಇಲ್ಲಿನ ಗುಜರಾತ್ ರಾಜ್ಯದಲ್ಲಿ ಈ ದಿನವನ್ನು ಆಚರಿಸಲಾಯಿತು. ಹಿಂದಿಯಲ್ಲಿ ಈ ಹಬ್ಬವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಇದು ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆ ಮತ್ತು ಮುಂಬರುವ ಚಳಿಗಾಲದ ಬೆಳೆಯ ಕೊಯ್ಲನ್ನು ನೆನಪಿಸುತ್ತದೆ. ಆಚರಣೆಗೆ ಸಂಬಂಧಿಸಿದ ಗಾಳಿಪಟಗಳು ಚಳಿಗಾಲದ ನಿದ್ರೆಯಿಂದ ಎಚ್ಚರಗೊಳ್ಳುವ ದೇವರ ಆತ್ಮಗಳನ್ನ ಪ್ರತಿನಿಧಿಸುತ್ತವೆ ಎನ್ನುವ ನಂಬಿಕೆಯು ಇದೆ. ಈ ವಿಶೇಷ ದಿನವನ್ನು ಗುಜರಾತಿನ ಅಹಮದಾಬಾದ್ ನಗರದಲ್ಲಿ ಹೆಚ್ಚು ಜನಪ್ರಿಯವಾಗಿ ಆಚರಿಸುವುದನ್ನು ಕಾಣಬಹುದು.
ಅಂತಾರಾಷ್ಟ್ರೀಯ ಗಾಳಿಪಟ ದಿನದ ಆಚರಣೆ
ಅಂತಾರಾಷ್ಟ್ರೀಯ ಗಾಳಿಪಟ ದಿನವನ್ನು ಗುಜರಾತಿನ ಅಹಮದಾಬಾದ್ ನಗರದಲ್ಲಿ ಗಾಳಿಪಟವನ್ನು ಹಾರಿಸುವ ಮೂಲಕ ಜನರು ಸಂಭ್ರಮಿಸುತ್ತಾರೆ. ಬಣ್ಣ ಬಣ್ಣದ ವಿವಿಧ ಆಕಾರದ ಗಾಳಿಪಟ ನೋಡುವುದೇ ಕಣ್ಣಿಗೆ ಹಬ್ಬ. ಈ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಲು ಜಪಾನ್, ಇಟಲಿ, ಯುನೈಟೆಡ್ ಕಿಂಗ್ಡಮ್, ಕೆನಡಾ, ಚೀನಾ, ಇಂಡೋನೇಷ್ಯಾ, ಸಿಂಗಾಪುರ್, ಯುನೈಟೆಡ್ ಸ್ಟೇಟ್ಸ್, ಮಲೇಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದಲೂ ಜನರು ಆಗಮಿಸುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತದ ವಿವಿದೆಡೆಯಲ್ಲಿ ಈ ದಿನವನ್ನು ಉತ್ಸವದಂತೆ ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಕರ ಸಂಕ್ರಾಂತಿ ಹಬ್ಬದ ದಿನವೇ ಗಾಳಿಪಟ ಹಾರಿಸುವುದು ಏಕೆ?
ಮಕರ ಸಂಕ್ರಾಂತಿಯಂದೇ ಗಾಳಿಪಟವನ್ನು ಹಾರಿಸುವುದು ಏಕೆ?
ಗಾಳಿಪಟಕ್ಕೂ ಭಾರತೀಯ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟಗಳ ಹಾರಿಸುವುದಕ್ಕೂ ಸಂಬಂಧವಿದೆ. ಈ ಗಾಳಿಪಟ ಹಾರಿಸುವ ಸಂಭ್ರಮವು ಉತ್ತರಾಯಣದಾದ್ಯಂತ ಮುಂದುವರಿಯುತ್ತದೆ. ಸಂಕ್ರಾಂತಿ ಹಬ್ಬವು ಸುಗ್ಗಿಯ ಋತುವಿನ ಆಗಮನದೊಂದಿಗೆ ಚಳಿಗಾಲದ ಅಂತ್ಯವನ್ನು ಸೂಚಿಸುವ ದಿನವಾಗಿದೆ. ಚಳಿಗಾಲ ಋತುವಿನಲ್ಲಿ ಆರೋಗ್ಯ ಸಮಸ್ಯೆಗಳೇ ಹೆಚ್ಚು. ಈ ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ದೊರಕುತ್ತದೆ. ಈ ಕಾರಣದಿಂದಲೇ ಸಂಕ್ರಾಂತಿ ದಿನ ಗಾಳಿಪಟವನ್ನು ಹಾರಿಸುವ ಮೂಲಕ ಈ ದಿನವನ್ನು ಸಂಭ್ರಮಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ