Positive Energy Plants for Home: ಸಕಾರಾತ್ಮಕತೆಯನ್ನು ಹರಡುವ ಈ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು
ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯಂಗಳ ಹಾಗೂ ಮನೆಯ ಒಳಗೆ ಗುಲಾಬಿ, ದಾಸವಾಳ, ಮನಿಪ್ಲಾಂಟ್, ಸ್ನೇಕ್ ಪ್ಲಾಂಟ್ ಅಂತೆಲ್ಲಾ ಒಂದಷ್ಟು ಗಿಡಗಳನ್ನು ನೆಡುತ್ತೇವೆ. ಈ ಪೈಕಿ ಈ ಕೆಲವೊಂದು ಗಿಡಗಳನ್ನು ನೆಡುವುದರಿಂದ ಮನೆಯ ಅಂದ ಹೆಚ್ಚಾಗುವುದಲ್ಲದೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ವೃದ್ಧಿಯಾಗುತ್ತಂತೆ. ನಿಮ್ಮ ಮನೆಯ ನಾಕಾರತ್ಮಕ ಶಕ್ತಿ ನಾಶವಾಗಿ ಧನಾತ್ಮಕ ಶಕ್ತಿ ವೃದ್ಧಿಯಾಗಬೇಕೆಂದರೆ ನೀವು ಕೂಡ ನಿಮ್ಮ ಮನೆಯಲ್ಲಿ ತಪ್ಪದೇ ಈ ಕೆಲವೊಂದು ಗಿಡಗಳನ್ನು ನೆಡಿ.

ಮುಖ್ಯಾಂಶಗಳು
- ಹಚ್ಚ ಹಸಿರಿನ ಗಿಡಗಳು ಮನಸ್ಸಿಗೆ ಖುಷಿಯನ್ನು ನೀಡುತ್ತದೆ
- ಕೆಲವು ಗಿಡಗಳು ಶುದ್ಧ ಗಾಳಿಯನ್ನು ನೀಡುವುದರ ಜೊತೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚಾಗಲು ತುಳಸಿ, ಮಲ್ಲಿಗೆ, ಪೀಸ್ ಲಿಲ್ಲಿಯಂತಹ ಗಿಡಗಳನ್ನು ನೆಡುವುದು ಉತ್ತಮ
ಹಚ್ಚ ಹಸಿರಿನ ಮರಗಿಡಗಳು ಶುದ್ಧ ಗಾಳಿಯನ್ನು ನೀಡುವುದು ಮಾತ್ರವಲ್ಲದೆ, ಮನಸ್ಸಿಗೆ ಖುಷಿಯನ್ನು ನೀಡುತ್ತವೆ. ಮನಸ್ಸಿನ ನೆಮ್ಮದಿಗಾಗಿ, ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸಲು ಎಲ್ಲರೂ ತಮ್ಮ ಮನೆಗಳಲ್ಲಿ ಹಲವು ಬಗೆಯ ಗಿಡಗಳನ್ನು (plants) ನೆಡುತ್ತಾರೆ. ಇದರಲ್ಲಿ ಕೆಲವು ಸಸ್ಯಗಳನ್ನು ಸಕಾರಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಮತ್ತು ಮಾನಸಿಕ ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ಅಥವಾ ಅಂಗಳದಲ್ಲಿ ನೆಡುವುದರಿಂದ ಮನೆಯ ಅಂದ ಹೆಚ್ಚುವುದಲ್ಲದೆ ಮನೆಯ ತುಂಬೆಲ್ಲಾ ಧನಾತ್ಮಕ ಶಕ್ತಿಯನ್ನು ಹರಡುತ್ತವೆ, ವಾತಾವರಣವನ್ನೂ ಕೂಡ ರಿಫ್ರೆಶ್ ಮಾಡುತ್ತವೆ. ಹಾಗಿದ್ದರೆ ಮನೆಯಲ್ಲಿ ನೆಡಲೇಬೇಕಾದಂತಹ ಗಿಡಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಈ ಗಿಡಗಳು:
ತುಳಸಿ ಗಿಡ: ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕತೆಯನ್ನು ಹರಡುತ್ತದೆ. ಅಲ್ಲದೆ ತುಳಸಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಶಾಂತಿ, ಸಂತೋಷ ನೆಲೆಸುತ್ತದೆ, ವಾತಾರವಣವೂ ಪರಿಶುದ್ಧವಾಗಿರುತ್ತದೆ. ಹಾಗಾಗಿ ತುಳಸಿ ಗಿಡವನ್ನು ನೆಡುವುದು ತುಂಬಾನೇ ಒಳ್ಳೆಯದು.
ಶಂಖಪುಷ್ಪ: ಮಾನಸಿಕ ಶಾಂತಿಯನ್ನು ವೃದ್ಧಿಸುವ ಸಸ್ಯವಾದ ಶಂಖಪುಷ್ಪವನ್ನು ನೆಡುವುದು ತುಂಬಾನೇ ಒಳ್ಳೆಯದಂತೆ. ಈ ಸಸ್ಯ ಮನಸ್ಸನ್ನು ಚುರುಕುಗೊಳಿಸುತ್ತದೆ, ಏಕಾಗ್ರತೆ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಶಂಖಪುಷ್ಪದ ಸಸ್ಯ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಸಹ ತೆಗೆದುಹಾಕುತ್ತದೆ.
ಪೀಸ್ ಲಿಲ್ಲಿ: ಬಿಳಿ ಹೂವುಳ್ಳ ಪೀಸ್ ಲಿಲ್ಲಿಯನ್ನು ಶಾಂತಿ ಮತ್ತು ಸಮತೋಲನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಒಳಾಂಗಣ ಪರಿಸರವನ್ನು ಶುದ್ಧೀಕರಿಸಿ, ವಾತಾವರಣದಲ್ಲಿ ಸಕಾರಾತ್ಮಕತೆಯನ್ನು ಹಡುತ್ತದೆ.
ಸ್ನೇಕ್ ಪ್ಲಾಂಟ್: ಸ್ನೇಕ್ ಪ್ಲಾಂಟ್ ಕಡಿಮೆ ನಿರ್ವಹಣೆ ಮತ್ತು ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಇದು ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ. ಮನೆಯೊಳಗೆ ಪಾಟ್‌ನಲ್ಲಿ ಸ್ನೇಕ್ ಪ್ಲಾಂಟ್ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.
ಮಲ್ಲಿಗೆ ಗಿಡ: ಪರಿಮಳಯುಕ್ತ ಮಲ್ಲಿಗೆ ಹೂವುಗಳು ನಿಮ್ಮ ಮನೆಗೆ ಆಹ್ಲಾದಕರ ವಾತಾವರಣವನ್ನು ನೀಡುತ್ತದೆ. ಅಲ್ಲದೆ ಅವುಗಳ ಆಹ್ಲಾದಕರ ಪರಿಮಳವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಕಿಟಕಿಯ ಬಳಿ ಅಥವಾ ಸೌಮ್ಯವಾದ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ.
ಇದನ್ನೂ ಓದಿ: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ
ಅಲೋವೆರಾ: ಅಲೋವೆರಾ ಚರ್ಮದ ಕಾಂತಿ ಮತ್ತು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಮನೆಯ ಸಕಾರಾತ್ಮಕತೆಯನ್ನು ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿಯಾಗಿದೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಅನಾರೋಗ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಚೆಂಡು ಹೂವಿನ ಗಿಡ: ಚೆಂಡುಹೂವಿನ ಗಿಡಗಳು ಸಹ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಹಕಾರಿ ಎಂದು ಹೇಳಲಾಗುತ್ತದೆ. ಈ ಗಿಡ ಸಕಾರಾತ್ಮಕ ಶಕ್ತಿಯನ್ನು ಹರಡುವುದಲ್ಲದೆ, ಈ ಹೂವಿನ ವಿಶಿಷ್ಟ ವಾಸನೆ ಸೊಳ್ಳೆ, ಕೀಟ, ಹಾವುಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತವೆ.
ಮನಿ ಪ್ಲಾಂಟ್: ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುವ ಮನಿ ಪ್ಲಾಂಟ್ ಕೂಡ ಮನೆಯ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




