New Novel : ಅಚ್ಚಿಗೂ ಮೊದಲು ; ಡಾ. ಬೈರಮಂಗಲ ರಾಮೇಗೌಡರ ‘ಮಾಯಾಕಿನ್ನರಿ‘ ಈ ವಾರಾಂತ್ಯ ಬಿಡುಗಡೆ

Kannada Novel : ‘ಹತ್ತು ಹನ್ನೆರಡರ ವಯೋಮಾನದ ಬಾಲಕರನ್ನು ಮಠಗಳಿಗೆ ತಳ್ಳಿ ದೀಕ್ಷೆ ಕೊಡಿಸಿ, ಆಟವಾಡಿಕೊಂಡಿರಬೇಕಾದ ವಯೋಮಾನದಲ್ಲಿ, ನವಿರು ಭಾವನೆಗಳು ಅರಳುತ್ತಿರುವ ಸಂದರ್ಭದಲ್ಲಿ ಶರೀರಧರ್ಮ ವಿರೋಧಿಯಾದ ವೈರಾಗ್ಯವನ್ನು ಆವಾಹಿಸಿಕೊಳ್ಳುವಂತೆ ಮಾಡುತ್ತಿರುವುದರಿಂದ ಅಂಥವರ ಮನಸ್ಸು-ದೇಹದ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವುದನ್ನೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ.’ ಬೈರಮಂಗಲ ರಾಮೇಗೌಡ

New Novel : ಅಚ್ಚಿಗೂ ಮೊದಲು ; ಡಾ. ಬೈರಮಂಗಲ ರಾಮೇಗೌಡರ ‘ಮಾಯಾಕಿನ್ನರಿ‘ ಈ ವಾರಾಂತ್ಯ ಬಿಡುಗಡೆ
ಲೇಖಕ ಬೈರಮಂಗಲ ರಾಮೇಗೌಡ
Follow us
ಶ್ರೀದೇವಿ ಕಳಸದ
|

Updated on:Oct 01, 2021 | 4:42 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಮಾಯಾಕಿನ್ನರಿ (ಕಾದಂಬರಿ) ಲೇಖಕರು : ಡಾ. ಬೈರಮಂಗಲ ರಾಮೇಗೌಡ ಪುಟ : 136 ಬೆಲೆ : ರೂ. 150 ಮುಖಪುಟ ವಿನ್ಯಾಸ : ಹಾದಿಮನಿ ಟಿ. ಎಫ್. ಪ್ರಕಾಶನ : ಡಾ. ಬೈರಮಂಗಲ ರಾಮೇಗೌಡ ಪ್ರತಿಷ್ಠಾನ, ಬೆಂಗಳೂರು 

ಇದೇ ಭಾನುವಾರ (ಅ.3) ಡಾ. ಬೈರಮಂಗಲ ರಾಮೇಗೌಡ ಅವರ ಮಾಯಾಕಿನ್ನರಿ ಕಾದಂಬರಿಯನ್ನು ಬೆಂಗಳೂರಿನ ನರಸಿಂಹರಾಜು ಕಾಲೊನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಬೆಳಗ್ಗೆ 10.30ಕ್ಕೆ ಡಾ. ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ.

*

ಹತ್ತು ಹನ್ನೆರಡರ ವಯೋಮಾನದ ಬಾಲಕರನ್ನು ಮಠಗಳಿಗೆ ತಳ್ಳಿ ದೀಕ್ಷೆ ಕೊಡಿಸಿ, ಆಟವಾಡಿಕೊಂಡಿರಬೇಕಾದ ವಯೋಮಾನದಲ್ಲಿ, ನವಿರು ಭಾವನೆಗಳು ಅರಳುತ್ತಿರುವ ಸಂದರ್ಭದಲ್ಲಿ ಶರೀರಧರ್ಮ ವಿರೋಧಿಯಾದ ವೈರಾಗ್ಯವನ್ನು ಆವಾಹಿಸಿಕೊಳ್ಳುವಂತೆ ಮಾಡುತ್ತಿರುವುದರಿಂದ ಅಂಥವರ ಮನಸ್ಸು-ದೇಹದ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವುದನ್ನೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಪದವಿ, ಸ್ನಾತಕೋತ್ತರ ಪದವಿ ಪಡೆದುಕೊಂಡವರು, ಡಾಕ್ಟರೇಟ್ ಗಳಿಸಿಕೊಂಡವರು ಇತ್ತೀಚಿನ ದಿನಗಳಲ್ಲಿ ಸನ್ಯಾಸತ್ವದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ಪೀಠಾಧಿಕಾರಿಗಳೂ ಆಗುತ್ತಿದ್ದಾರೆ. ಅವರಲ್ಲಿ ಬರೆಯಲು ಆಸಕ್ತಿ ಇರುವವರು ಪತ್ರಿಕೆಗಳಲ್ಲಿ ಲೇಖನಗಳನ್ನು, ಅಂಕಣಗಳನ್ನು ಬರೆಯುತ್ತಿದ್ದಾರೆ. ಪುಸ್ತಕಗಳನ್ನೂ ಹೊರತರುತ್ತಿದ್ದಾರೆ. ಅಂಥವರು ಆತ್ಮಕಥನಗಳನ್ನು ಬರೆದಿರುವುದು, ಪೂರ್ವಾಶ್ರಮ ಕುರಿತಂತೆ ನಿರ್ಮಮವಾಗಿ ಹೇಳಿಕೊಂಡಿರುವುದು ಕಡಿಮೆ. ಆತ್ಮಕಥನಗಳು ಕೂಡ ಹೇಳಬೇಕಾದ್ದನ್ನು ಮುಚ್ಚಿಟ್ಟು, ಎಲ್ಲರಿಗೂ ಗೊತ್ತಿರುವುದನ್ನು ವೈಭವೀಕರಿಸಿ ಉತ್ಪ್ರೇಕ್ಷಿಸಿ ಹೇಳುತ್ತಿರುವ ಆತ್ಮವಂಚನೆಯ ಕಥನಗಳಾಗಿರುವುದರಿಂದ ಸ್ವಾಮೀಜಿಗಳಿಂದಲೂ ಅಂಥ ಆತ್ಮವಿಮರ್ಶೆಯ ವಿವರಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲವೇನೋ?

ಸಸಿಯನ್ನು ದಟ್ಟ ಅರಣ್ಯದಂತೆ, ಗುಡ್ಡವನ್ನು ಪರ್ವತದಂತೆ ವರ್ಣಿಸುವುದನ್ನು ಬಿಟ್ಟು, ಪ್ರಶಸ್ತಿ-ಸನ್ಮಾನಗಳ ಮೇಲೆ ಗುರಿಯಿಟ್ಟುಕೊಂಡು ಸುಳ್ಳಿನ ಮಹಲುಗಳನ್ನು ನಿರ್ಮಿಸಿ ಹೊಗಳಿ ಹೊನ್ನಶೂಲಕ್ಕೇರಿಸುವುದನ್ನು ಬಿಟ್ಟು, ಸಮಾಜಕ್ಕೆ ಒಂದು ಉತ್ತಮ ಸಂದೇಶಹೋಗುತ್ತಿದೆ ಎನ್ನುವುದನ್ನು ಖಾತ್ರಿಯಾಗಿಸಿಕೊಂಡು ಮಠದ ಒಳಗು-ಹೊರಗು ಮತ್ತು ಮಠಾಧೀಶರ ಅಂತರಂಗ-ಬಹಿರಂಗ ಕುರಿತು ನೈಜ ಅಂದರೆ ಪ್ರಾಮಾಣಿಕ ಚರಿತ್ರೆಯನ್ನು ಕಟ್ಟಿಕೊಡುವುದರಿಂದ ಮಾತ್ರ ಮಠದ ಹಾಗೂ ಸ್ವಾಮೀಜಿಗಳ ಘನತೆ, ಗೌರವ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೇನೆ. ಚರಿತ್ರೆಯಲ್ಲಿ ಉಲ್ಲೇಖಿಸುವ ಸಂಗತಿಗಳು ಸ್ವಾಮೀಜಿಗಳನ್ನು ಮುಜುಗರ, ಸಂಕೋಚ, ಸಂಕಟಗಳಿಗೆ ಈಡುಮಾಡುವಂತಿದ್ದರೆ ಅದನ್ನು ನಿರಾಳವಾಗಿಯೂ ನಿರ್ಭಿಡೆಯಿಂದಲೂ ಬಣ್ಣಿಸುವುದಕ್ಕೆ ಕಥೆ ಕಾದಂಬರಿಗಳ ಸುಂದರ, ಜನಪ್ರಿಯ ಕಥನ ಮಾರ್ಗ ಇದ್ದೇ ಇದೆ. ಅಂಥ ಮಾರ್ಗದಲ್ಲಿ ನಾನು ಕೈಗೊಂಡ ಸಂತೋಷ ವಿಹಾರದ ಫಲವೇ ‘ಮಾಯಾ ಕಿನ್ನರಿ’ ಕಾದಂಬರಿ. ಡಾ. ಬೈರಮಂಗಲ ರಾಮೇಗೌಡ, ಹಿರಿಯ ಲೇಖಕರು

(ಆಯ್ದ ಭಾಗ)

“ಎದುರು ಕೂರೋದು ದೂರ ಅನ್ನಿಸುತ್ತದೆ” ಎಂದು ಹೇಳಿ ತನ್ನ ಕುರ್ಚಿಯನ್ನು ಎಳೆದು ಚಂದ್ರಕಾಂತನ ಪಕ್ಕದಲ್ಲೇ ಹಾಕಿಕೊಂಡು ಕುಳಿತು, ಎಡಗೈಯಿಂದ ಅವನ ಕೊರಳು ಬಳಸಿ ಮುದ್ದಿಸಿದಳು. ಅಮಲು ಏರುತ್ತ ಹೋದಂತೆ ತಂದೆ ತಾಯಿ ಕುಟುಂಬ ಬಂಧು ಬಳಗ, ಶ್ರೀಮಂತಿಕೆ, ಅದ್ದೂರಿ ಮದುವೆ, ನಿರ್ಮಾಣವಾಗಬೇಕಾದ ಆಸ್ಪತ್ರೆ, ವೈಭವೋಪೇತ ಜೀವನದ ಬಗೆಗೆ ತಡೆಯಿಲ್ಲದಂತೆ ಮಾತಾಡಿದಳು. ಡ್ರಿಂಕ್ಸ್ ಮುಗಿಯುವ ಹೊತ್ತಿಗೆ ಮಾತಿನಲ್ಲಿ ಲಯ ತಪ್ಪುತ್ತಿರುವ ಅನುಭವ ಚಂದ್ರಕಾಂತನಿಗೂ ಆಗತೊಡಗಿತ್ತು. “ಊಟ ಮಾಡಿಬಿಡೋಣ ಚಂದೂ” ಅಂದ. “ಇಂಥ ಸಮಯ ಅಪರೂಪಕ್ಕೆ ಸಿಕ್ಕಿರುವಾಗ, ಅದನ್ನು ಅನುಭವಿಸಬೇಕು. ನಿನಗೆ ಊಟದ್ದೇ ಚಿಂತೆ, ಆಯ್ತು ಬಿಡಪ್ಪ” ಅಂತ ತೊದಲುತ್ತಲೇ ಮೇಲೆದ್ದ ಚಾಂದಿನಿ, ತಟ್ಟೆಯಲ್ಲಿದ್ದುದನ್ನು ವಿಶೇಷ ಬಟ್ಟಲುಗಳಿಗೆ ಹಾಕಿ, ಓವನ್‍ನಲ್ಲಿಟ್ಟು ಸಮಯ ಗೊತ್ತುಪಡಿಸಿ, ಸ್ವಿಚ್ ಹಾಕಿದಳು. ಸೂಚನೆ ಸಿಕ್ಕಮೇಲೆ, ಬಟ್ಟಲುಗಳನ್ನು ಓವನ್‍ನಿಂದ ತೆಗೆದು ಚಂದ್ರಕಾಂತನ ತಟ್ಟೆಗೊಂದಷ್ಟು ಹಾಕಿ, ಇನ್ನೂ ಬೇಕಾದರೆ ಹಾಕ್ಕೋ ಅಂತ ಹೇಳಿ ತನಗೂ ಬಡಿಸಿಕೊಂಡಳು. ಊಟ ಮಾಡುತ್ತಲೇ “ಅಷ್ಟೊತ್ತಿನಿಂದ ನಾನೇ ಮಾತಾಡ್ತಿದ್ದೀನಿ, ನನ್ನದೆಲ್ಲ ಬಿಚ್ಚಿ ಹೇಳ್ತಿದ್ದೀನಿ, ನೀನು ಹೂಂ ಹೂಂ ಅಂತ ಕೇಳಿಸಿಕೊಳ್ತಿದ್ದಿ, ಏನೂ ಮಾತಾಡ್ತಾನೇ ಇಲ್ಲವಲ್ಲ. ಹೋಗಲಿ ಬಿಡು, ನೀನು ಬಂಗಾರದಂಥ ಹುಡುಗ. ಬುದ್ಧಿವಂತ, ನೋಡಕ್ಕೂ ಲಕ್ಷಣವಾಗಿದ್ದೀಯ, ಎಲ್ಲಕ್ಕಿಂತ ಮಿಗಿಲಾಗಿ ನನ್ನ ಮನಸ್ಸನ್ನು ಗೆದ್ದಿದ್ದೀಯ. ಬೇರೆಯ ವಿಚಾರಗಳನ್ನು ಕಟ್ಕೊಂಡು ಆಗಬೇಕಾದ್ದೇನಿದೆ ಅಲ್ವ?” ಎಂದು ಹೇಳಿ ತನ್ನ ಎಡಪಕ್ಕಕ್ಕಿದ್ದ ಅವನ ಬಲಗೆನ್ನೆಗೆ ಮುತ್ತಿಟ್ಟಳು.

ಚಂದ್ರಕಾಂತ ತಟ್ಟೆಯಲ್ಲಿ ಇದ್ದುದನ್ನೆಲ್ಲ ಮುಗಿಸಿದ್ದ. ಚಾಂದಿನಿ ಅರ್ಧ ಭಾಗ ಮಾತ್ರ ತಿಂದಿದ್ದವಳು, “ನನಗೆ ಸಾಕಾಯ್ತಪ್ಪ” ಎಂದು ಎದ್ದುಹೋಗಿ ಕೈ ತೊಳೆದು ಬಂದಳು. ಚಂದ್ರಕಾಂತ ತಟ್ಟೆಗಳನ್ನು ಮೂಲೆಯಲ್ಲಿರಿಸಿ ಕೈ ತೊಳೆದುಕೊಂಡು ಬಂದ. ಮತ್ತೇರಿಸುವಂಥ ಪರಿಮಳವನ್ನು ಕಂಕುಳು ಮತ್ತು ಎದೆಯ ಭಾಗದಲ್ಲಿ ಪೂಸಿಕೊಳ್ಳುತ್ತಿದ್ದ ಚಾಂದಿನಿ ಅದನ್ನು ಚಂದ್ರಕಾಂತನತ್ತಲೂ ಸ್ಪ್ರಿಂಕಲ್ ಮಾಡಿದಳು. “ಎಂಥ ಹಿತವಾದ ಚಳಿ ಅಲ್ಲವಾ? ಈಗ ಬಿಸಿ ಮಾಡಿಕೊಳ್ಳದಿದ್ದರೆ ಬೆಳಗ್ಗೆ ಆಗೋ ಅಷ್ಟು ಹೊತ್ತಿಗೆ ನಾವೂ ಮಂಜುಗಡ್ಡೆಗಳಾಗಿ ಬಿಡುತ್ತೇವೆ ಅಷ್ಟೆ. ಕಮಾನ್ ಕಮಾನ್…” ಎನ್ನುತ್ತ ಅವನನ್ನು ಬಿಗಿದಪ್ಪಿ, ಅಪ್ಪಿದ ಭಂಗಿಯಲ್ಲೇ ಎರಡೆರಡು ಹೆಜ್ಜೆಗಳಲ್ಲಿ ಜೊತೆಯಾಗಿ ಕರೆದೊಯ್ಯುತ್ತ ರೂಮಿನ ಮಂಚದ ಮೇಲಿದ್ದ ಹಂಸತುಪ್ಪುಳಿನ ಮೃದು ಹಾಸಿಗೆಯ ಮೇಲೆ ಅವನನ್ನು ಕೆಡವಿ ಮಾದಕವಾಗಿ ನಕ್ಕಳು.

Acchigoo Modhalu Mayakinnari Byramangala Ramegowda

ರಾಮೇಗೌಡರ ಪುಸ್ತಕಗಳು

ಅಂಗಾತ ಬಿದ್ದಿದ್ದ ಚಂದ್ರಕಾಂತನ ಶರೀರದ ಮೇಲೆ ಕಾಲಿನಿಂದ ಎದೆಯವರೆಗಿನ ಭಾಗವನ್ನು ಊರಿ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, “ನಾನು ಎಷ್ಟೇ ಫಾಸ್ಟ್ ಫಾಸ್ಟ್ ಹುಡುಗಿಯಾದರೂ ಪ್ರಾಯೋಗಿಕವಾಗಿ ಲೈಂಗಿಕ ಸಾಹಸ ಮಾಡಲು ಹೋಗಿಲ್ಲ. ಯಾವ ಪುರುಷನಿಗೂ ನನ್ನನ್ನು ಒಪ್ಪಿಸಿಕೊಂಡಿಲ್ಲ ಅಥವಾ ಕೂಡಬೇಕು ಅನ್ನಿಸಲಿಲ್ಲ. ನಾನೇ ಮೊದಲ ಬಾರಿಗೆ ತೀವ್ರವಾದ ಕಾಮನೆಗಳಿಂದ ನಿನ್ನೊಂದಿಗೆ ಕೂಡುತ್ತಿದ್ದೇನೆ ಅಂದರೆ ನೀನು ಹೆಮ್ಮೆಪಡಬೇಕು, ಅಲ್ಲವಾ?” ಎಂದು ಉತ್ತರವನ್ನು ಅಪೇಕ್ಷಿಸುವಂತೆ ನೋಡಿದಳು. ಚಂದ್ರಕಾಂತನಿಗೆ ಮಾತಾಡಲು ಏನೂ ತೋಚದೆ, ಅಚ್ಚರಿ ವ್ಯಕ್ತಪಡಿಸುತ್ತ ‘ಯೂ ಆರ್ ರಿಯಲಿ ಗ್ರೇಟ್’ ಎಂದು ಶ್ಲಾಘಿಸಿದ. ಚಾಂದಿನಿ ಹೆಮ್ಮೆ ನಟಿಸುತ್ತ, “ನಿನ್ನ ಮೇಲೆ ನನಗೆ ನಂಬಿಕೆ ಇದೆ, ಆದರೂ ಕೇಳ್ತೀನಿ, ನೀನು ಯಾವಾಗಲಾದರೂ ಹುಡುಗಿಯರ ಸಹವಾಸ ಮಾಡಿದ್ದೆಯೋ? ಲೈಂಗಿಕ ಸುಖ ಅನುಭವಿಸಿದ್ದೀಯೋ?” ಎಂದು ಕೆನ್ನೆ ಹಿಂಡುತ್ತ ತುಂಟ ನಗೆ ಬೀರಿದಳು. ಅವಳ ಕೋಮಲ ಶರೀರದ ಹಿತವಾದ ಒತ್ತುವಿಕೆಯಿಂದ ಉಸಿರಾಟ ತೀವ್ರವಾಗುತ್ತಿರುವ, ಭಾವೋದ್ದೀಪನಗೊಳ್ಳುತ್ತಿರುವ ಅನುಭವ ಆಗುತ್ತಿರುವಂತೆಯೇ “ಇಲ್ಲ, ಈವರೆಗಿನ ನನ್ನ ಬದುಕಿನಲ್ಲಿ ಅಂಥ ಸಂದರ್ಭ ಒದಗಲೂ ಇಲ್ಲ, ಅವಕಾಶ ಸಿಗಲೂ ಇಲ್ಲ. ಆದ್ದರಿಂದ ನಾನು ನಿನ್ನ ಪಾಲಿಗೆ ಅನಾಘ್ರಾತ ಕುಸುಮ. ಅಂದರೆ, ಯಾವ ಹುಡುಗಿಯೂ ಮುಟ್ಟಿ ನೋಡದ, ಅನುಭವಿಸದ ಹೂವು ನಾನು” ಎಂದು ನಾಟಕೀಯವಾಗಿ ಹೇಳಿದ. ಅವಳು ಖುಷಿಯಿಂದ ಕೇಕೆ ಹಾಕುತ್ತ “ವಾವ್! ನನ್ನ ಆಯ್ಕೆಯ ಬಗೆಗೆ ನನಗೇ ಹೆಮ್ಮೆ ಎನ್ನಿಸುತ್ತಿದೆ ಗೊತ್ತಾ” ಎಂದು ಹೇಳುತ್ತಾ ಚಂದ್ರಕಾಂತ ಕೊರಳಿನ ಭಾಗವನ್ನು ಕಚ್ಚಿ, ಅವನು ‘ಆಹ್’ ಎಂದು ನರಳಿದಾಗ, ‘ಓಹ್’ ಎಂದು ಸುಖಿಸುತ್ತ “ ಇನ್ನೂ ಮುಂದಿದೆ ಹಬ್ಬ” ಎಂದು ಅವನ ಬಟ್ಟೆಗಳನ್ನು ಒಂದೊಂದಾಗಿ ತೆಗೆದು, ತನ್ನನ್ನೂ ಬೆತ್ತಲಾಗಿಸಿಕೊಂಡು ಅವನನ್ನು ಆವರಿಸಿಕೊಂಡಳು.

ಆಟ ಪ್ರಾರಂಭವಾದ ಮೇಲೆ ಮಾತಿಗೆ ಬ್ರೇಕ್ ಬಿತ್ತು. ಚಾಂದಿನಿ ಓದಿಕೊಂಡಿದ್ದ, ಗೆಳತಿಯರಿಂದ ತಿಳಿದುಕೊಂಡಿದ್ದ, ಬ್ಲೂ ಫಿಲ್ಮ್‍ಗಳನ್ನು ನೋಡಿದ್ದ, ಊಹಿಸಿದ್ದ ಎಲ್ಲವನ್ನು ರತಿಕಲಾ ಪ್ರವೀಣೆಯಂತೆ ಅವನ ಮೇಲೆ ಪ್ರಯೋಗಿಸಿದಳು. ತಾನು ಬಯಸಿದ ಸುಖವನ್ನು ಸೂರೆಗೊಳ್ಳಲು ಸಜ್ಜುಗೊಳಿಸಿ, ಬಳಸಿ, ಅನುಭವಿಸಿ ಹಿಗ್ಗಿದಳು. ಸಮಾನ ಆಸಕ್ತಿ, ಕಾತರ, ಉದ್ವೇಗ, ಉನ್ಮಾದ, ಅನುಭವಗಳಲ್ಲಿ ಒಂದಕ್ಕೊಂದು ಸಾಹಚರ್ಯ ನೀಡುವಂತೆ ಎರಡೂ ದೇಹಗಳು ಉತ್ಸಾಹದಿಂದ ಪುಟಿಪುಟಿದು, ಕೊನೆಗೊಮ್ಮೆ ಬೆವರ ಮಳೆಯಲ್ಲಿ ತೊಯ್ದು ಬಳಲಿದರೂ ನಿಡಿದಾಗಿ ಲಯಬದ್ಧವಾಗಿ ಉಸಿರು ಬಿಡುತ್ತ, ತೆಕ್ಕೆ ಸಡಿಲಿಸದೆ ನಿದ್ದೆಗೆ ಶರಣಾದವು.

ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ (80509 88014)

*

ಪರಿಚಯ : ಬೈರಮಂಗಲ ರಾಮೇಗೌಡ ಜನನ ರಾಮನಗರ ಜಿಲ್ಲೆಯ ಬೈರಮಂಗಲದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ‘ಕುವೆಂಪು ಕಾವ್ಯ’ ಕುರಿತ ಸಂಶೋಧನೆಗೆ ಪಿಎಚ್.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಲ್ಲಿ 35 ವರ್ಷಗಳ ಬೋಧನಾನುಭವ. ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಸಂಪಾದನೆ, ಅಭಿನಂದನೆ ಪ್ರಕಾರಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಸಿವಿಜಿ ಪಬ್ಲಿಕೇಷನ್ಸ್‍ನಿಂದ ‘ಕುವೆಂಪು 108ನೇ ಜನ್ಮ ದಿನಕ್ಕೆ 108 ಕೃತಿಗಳು’ ಮಾಲಿಕೆ ಮತ್ತು ‘ಕುವೆಂಪು ಸಾಹಿತ್ಯ’ ಮಾಲಿಕೆಯ 25 ಕೃತಿಗಳ ಸಂಪಾದಕ.

ಕೆಲವು ಪ್ರಕಟಿತ ಕೃತಿಗಳು : ರಸಸಿದ್ಧಿ, ರಸಗ್ರಹಣ, ರಸಾನುಭೂತಿ, ರಸಲಹರಿ, ರಸಯಾನ, ಸಿಂಧೂರಿ, ಮಾಯಾ ಕಿನ್ನರಿ, ಕೆಂಗಲ್ ಹನುಮಂತಯ್ಯ, ಹಡಪದ ಅಪ್ಪಣ್ಣ, ಈ ಪರಿಯ ಸೊಬಗು, ಜಾನಪದ ದರ್ಶನ, ಜಗತ್ತಿನ ಜನಪದ ಕಥೆಗಳು, ಯೇಸು ಕ್ರಿಸ್ತ, ಮಹಾತ್ಮ ಗಾಂಧಿ, ಬುದ್ಧ, ಸ್ವಾಮಿ ವಿವೇಕಾನಂದ, ನೆಲ್ಸನ್ ಮಂಡೆಲಾ, ಮದರ್ ತೆರೆಸಾ, ಅಲೆಗ್ಸಾಂಡರ್, ಚಾರ್ಲಿ ಚಾಪ್ಲಿನ್.

ಪ್ರಶಸ್ತಿ-ಗೌರವ : ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‍ನಿಂದ ವಿಶ್ವಮಾನವ ಪ್ರಶಸ್ತಿ, ಸಹಕಾರ ರತ್ನ ಬಿ.ಎಲ್. ಲಕ್ಕೇಗೌಡ ಪ್ರಶಸ್ತಿ, ಚಿತ್ರದುರ್ಗ ಮುರುಘಾಮಠದ ಮುರುಘಾಶ್ರೀ ಪ್ರಶಸ್ತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಕರ್ನಾಟಕ ಮಹಾ ವಿಚಾರರತ್ನ ಪ್ರಶಸ್ತಿ, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಜಿ. ನಾರಾಯಣಕುಮಾರ್ ಪ್ರಶಸ್ತಿ, ಎಚ್.ಎ.ಎಲ್. ರಾಜ್ಯೋತ್ಸವ ಪ್ರಶಸ್ತಿ, ಜಿ.ಪಿ. ರಾಜರತ್ನಂ ಸ್ಮರಣಾರ್ಥ ರಾಮನಗರ ರತ್ನ ಪ್ರಶಸ್ತಿ, ಮೈಸೂರಿನ ಬಾಲಚಿಂತನ ಬಳಗದಿಂದ ಕರ್ನಾಟಕ ಸಾಹಿತ್ಯ ಶಿರೋಮಣಿ ಪ್ರಶಸ್ತಿ, ರೋಟರಿ ಮಧುಗಿರಿಯಿಂದ ವೃತ್ತಿ ಸೇವಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಿರಿಗನ್ನಡ ಪ್ರಶಸ್ತಿ. ರಾಮನಗರ ಜಿಲ್ಲಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಗೌರವ. ಒಂದು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ. ಕನ್ನಡ ಜಾಗೃತಿ ಉಪನ್ಯಾಸ ಮತ್ತು ಕುವೆಂಪು ವಿಚಾರಗಳ ಪ್ರಚಾರದಲ್ಲಿ ಆಸಕ್ತ.

ಇದನ್ನೂ ಓದಿ : Covid Diary : ಅಚ್ಚಿಗೂ ಮೊದಲು : ಡಾ. ಎಚ್. ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಇಂದಿನಿಂದ ನಿಮ್ಮ ಓದಿಗೆ

Published On - 4:37 pm, Fri, 1 October 21

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್