Autobiography : ಆಧುನಿಕ ಶಕುಂತಲಾ ಕಥನ; ಆ ಪುಣ್ಯಭೂಮಿಯ ಸ್ಪರ್ಶವೂ, ಹೆಚ್ಚೇ ಹೊಳಪಿಟ್ಟ ನನ್ನ ಬಾಲ್ಯವೂ

Autobiography : ಆಧುನಿಕ ಶಕುಂತಲಾ ಕಥನ; ಆ ಪುಣ್ಯಭೂಮಿಯ ಸ್ಪರ್ಶವೂ, ಹೆಚ್ಚೇ ಹೊಳಪಿಟ್ಟ ನನ್ನ ಬಾಲ್ಯವೂ

Patriarchy : ಆಗಷ್ಟೇ ಕೊನೇತಂಗಿ ಹುಟ್ಟಿದ್ದಳು. ಅಮ್ಮ ಹೆರಿಗೆರಜೆಯಲ್ಲಿದ್ದರು. ರಜೆಯ ವಿಸ್ತರಣೆಗೆ ಅರ್ಜಿ ಎಂದು ಅಪ್ಪ ಆಕೆಯಿಂದ ರುಜು ಹಾಕಿಸಿಕೊಂಡರು. ಕೆಲ ದಿನಗಳ ನಂತರ ತಾಯಿಗೆ ಬರಸಿಡಿಲು, ಆರೋಗ್ಯ ಇಲಾಖೆಯಿಂದ ರಾಜೀನಾಮೆ ಸ್ವೀಕೃತವಾಗಿದೆ ಎಂಬ ಪತ್ರ ಬಂದಾಗ.

ಶ್ರೀದೇವಿ ಕಳಸದ | Shridevi Kalasad

|

Jun 12, 2022 | 8:00 AM

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ಕೆಜಿಎಫ್ ಹೇಗೆ ನನ್ನನ್ನು ಚಿಕ್ಕವಯಸಿನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ, ಬೆಂಗಳೂರಿಗೆ, ಅಭಿವೃದ್ಧಿಗೆ ಒಡ್ಡಿದ್ದನ್ನು ಕಳೆದ ಅಂಕಣದಲ್ಲಿ ಹೇಳಿದೆ. ಹಳ್ಳಿಯಲ್ಲಿ ಹುಟ್ಟಿ ಏಳೆಂಟು ವರ್ಷ ಕಳೆದಿದ್ದರೂ, ನನ್ನನ್ನು ಒಂದು ಬಗೆಯ ‘Cosmopolitan’ ಹೇಗೆ ಮಾಡಿತೋ ಅದೇ ರೀತಿ ಕೋಲಾರದ ಮಣ್ಣು ನನ್ನಲ್ಲಿ ಗುರಿ ಸಾಧಿಸುವ ಛಲವನ್ನೂ ಬಿತ್ತಿತ್ತು ಎನ್ನಿಸುತ್ತದೆ. ನಮ್ಮ ಮನೆಗಳಲ್ಲಿ ಅದುವರೆಗೂ ಯಾವ ಹೆಣ್ಣುಮಗಳೂ ಕಾಲೇಜು ಮೆಟ್ಟಲೇರಲಿಲ್ಲ. ಪಿಎಚ್.​ಡಿ ಮಾಡಿರಲಿಲ್ಲ. ವಿದೇಶಗಳಲ್ಲಿ ಮಾನ್ಯತೆ ಪಡೆದಿರಲಿಲ್ಲ. ನನಗಿದೆಲ್ಲ ಸಾಧ್ಯವಾಯಿತು ಎಂದರೆ, ಆ ಜಿಲ್ಲೆಯ ಮಣ್ಣಿನ ಗುಣವೋ, ಗಾಳಿಯ ಪ್ರಭಾವವೋ ಅಥವಾ ಅಲ್ಲಿನ ಜನರಲ್ಲಡಗಿದ್ದ ಛಲ ಸಾಧಿಸುವ ವಂಶವಾಹಿನಿಗಳೋ ಕಾರಣವಾಗಿರಬೇಕು. ಕರ್ನಾಟಕದ ಇತರೆ ಜಿಲ್ಲೆಗಳೊಂದಿಗೆ ಹೋಲಿಸಿದರೆ ಕೋಲಾರದ ವಿಶಿಷ್ಟಗಳನ್ನು ನಿಮಗೆ ಸುಲಭವಾಗಿ ಮನದಟ್ಟು ಮಾಡಬಲ್ಲೆ; ದೈವದತ್ತವಾದ ಭಾರತದಲ್ಲಿ ಎಲ್ಲೂ ಇಲ್ಲದ ಇಲ್ಲಿಯ ಚಿನ್ನದ ನಿಕ್ಷೇಪದ ಬಗ್ಗೆ ಗೊತ್ತಿರುವುದೇ. ಇನ್ನು ಭೂಮಿ ಫಲವತ್ತಾಗಿಲ್ಲದಿದ್ದರೂ ಮಳೆ ಸಾಕಷ್ಟು ಬೀಳದಿದ್ದರೂ ಆತ್ಮಹತ್ಯೆಗೆ ಶರಣಾಗದ ಕೋಲಾರದ ರೈತರು ಮಣ್ಣಿಂದ ಬೇರೆಯದೆ ಬಗೆಯ ಚಿನ್ನ ಹೊರತೆಗೆಯುತ್ತ ಬಂದ ಪ್ರಜ್ಞಾವಂತರು. ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 4)

ಯಾರು ಹೇಳಿದರು ಮಳೆ ಸಾಕಷ್ಟು ಇದ್ದರೆ, ನೀರಾವರಿ ಇದ್ದರೆ ಮಾತ್ರ ವ್ಯವಸಾಯ ಲಾಭದಾಯಕ ಎಂದು? ಕೋಲಾರಕ್ಕೆ ಬಂದು ನೋಡಿ. ಅದು ಸುಳ್ಳು ಅಂತ ಇಲ್ಲಿಯ ರೈತರು ಸಾಬೀತು ಮಾಡಿದ್ದಾರೆ. ಕಡಿಮೆ ಮಳೆ ಪ್ರದೇಶದಲ್ಲಿ ಲಾಭದಾಯಕ ಕೃಷಿ ಸಾಧ್ಯ ಎನ್ನುವುದನ್ನು ನೋಡಲು ನೀವು ಇಸ್ರೇಲಿಗೆ ಹೋಗಬೇಕಾಗಿಲ್ಲ. ಇಲ್ಲಿ ಸಾಕಷ್ಟು ಮಳೆಯಿಲ್ಲದ, ದೊಡ್ಡ ನದಿಗಳಿಲ್ಲದ ನಾಡಿನಲ್ಲಿ ಕೆರೆಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹಿಸಿದರು. ಇಡೀ ದೇಶದಲ್ಲೇ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳಾದವು. ಕೆರೆಗಳು ಬತ್ತಿ ಹೋದಲ್ಲಿ ಬೋರವೆಲ್​ಗಳನ್ನು ಅಳವಡಿಸಿದರು. ನೀರು ಸಾಕಾಗಲಿಲ್ಲವೂ ಅದೇ ಬಾವಿಗೆ ಇನ್ನೊಂದು ಬೋರ್ ಕೂಡಿಸಿದರು. ಹೀಗೆ ನೀರಿನ ಸಮಸ್ಯೆ ಪರಿಹರಿಸಿಕೊಂಡ ಮೇಲೆ ವರ್ಷಕ್ಕೆ ಮೂರು ಫಸಲು ತೆಗೆದರು. ಎಲ್ಲಿ ಇಷ್ಟು ನೀರು ಸಿಕ್ಕಲಿಲ್ಲವೋ ಅಲ್ಲಿ ಮಾವು, ಸೀಬೆ ನೆಟ್ಟರು, ರೇಷ್ಮೆ ಹುಳು ಸಾಕಿದರು, ಹೈನುಗಾರಿಕೆಯನ್ನು ಕೈಗೆತ್ತಿಕೊಂಡರು. ಕೋಲಾರ ಈ ದಿನ ಇಡೀ ಕರ್ನಾಟಕದಲ್ಲೇ ತರಕಾರಿ, ಮಾವು ಬೆಳೆಯುವುದರಲ್ಲಿ ಮುಂದಿದೆ. ಇಲ್ಲಿನ ಒಂದೊಂದು ಸೀಬೆಹಣ್ಣು ಅರ್ಧ ಕೇಜಿಗಿಂತ ಹೆಚ್ಚಾಗಿ ತೂಗುತ್ತದೆ. ಇಲ್ಲಿರುವ ವ್ಯವಸಾಯೋತ್ಪನ್ನ ಮಾರುಕಟ್ಟೆ ಇಡೀ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡದು ಮತ್ತು ದಕ್ಷಿಣ ಭಾರತದಲ್ಲೇ ಅತಿ ದೊಡ್ಡದು.

ಇಂಥ ಜಿಲ್ಲೆಯಲ್ಲಿ ಕೇವಲ ಕಷ್ಟಸಹಿಷ್ಣು, ಪ್ರಯೋಗಶೀಲ ರೈತ ಮಾತ್ರ ಹುಟ್ಟಲಿಲ್ಲ. ಕೇವಲ ಸೈನಿಕನೊಬ್ಬನ ಮಗನಾಗಿದ್ದ ಹೈದರ್ ಅಲಿ, ಇಡೀ ಕರ್ನಾಟಕವನ್ನೇ ಆಳಿದ. ಅವನ ಮಗ ಟಿಪ್ಪು ಮೈಸೂರು ರಾಜ್ಯವನ್ನು ಸುತ್ತಮುತ್ತಲೂ ವಿಸ್ತರಿಸಿ, ಬ್ರಿಟಿಷರನ್ನೇ ನಡುಗಿಸಿದ. ಸರ್ ವಿಶ್ವೇಶ್ವರಯ್ಯನಂಥವರ ಮೇಧಾವಿ ಎಂಜಿನಿಯರ್ ಹಾಗೂ ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿ ಸಾಧಿಸಿದ ಆಡಳಿತಗಾರ, ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಬಿ.ವಿ.ಕೆ. ಅಯ್ಯಂಗಾರ್, ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಮತ್ತು ಸಾಫ್ಟ್​ವೇರ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸಾಧಿಸಿದ ಎನ್.ಆರ್. ನಾರಾಯಣಮೂರ್ತಿ ಈ ಮಣ್ಣಿನವರು. ಈಗಲೂ ವಿಧಾನಸೌಧದ ಕಾರಿಡಾರುಗಲ್ಲಿ ಕೆಎಎಸ್ ಅಂದರೆ ‘ಕೋಲಾರ ಅಡ್ಮಿನಿಸ್ಟ್ರೇಟಿವ್ ಸರ್ವಿಸ್’ ಎಂದೇ ಪ್ರಚಲಿತ. ಅಷ್ಟು ಸಂಖ್ಯೆಯಲ್ಲಿ ರಾಜ್ಯದಲ್ಲಿ ಕೋಲಾರ ಮೂಲ ಕೆಎಎಸ್ ಅಧಿಕಾರಿಗಳು ಇದ್ದಾರೆ.

ಚಾರಿತ್ರಿಕವಾಗಿ ಈ ಜಿಲ್ಲೆ ಬೆಂಗಳೂರಿಗಿಂತಲೂ ಪುರಾತನವಾದದ್ದು. ಪಶ್ಚಿಮ ಗಂಗರು ಕೋಲಾರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದ ಮೈಸೂರು, ಕೊಯಮತ್ತೂರು, ತಿರುವನನಂತಪುರಗಳನ್ನು  ಆಳಿದರು. ಆಮೇಲೆ ಈ ಭಾಗ ಚೋಳ ಮತ್ತು ವಿಜಯನಗರದ ಅರಸರ ಕೈಕೆಳಗಿತ್ತು. ಇಲ್ಲಿ ಪ್ರೇಕ್ಷಣೀಯ ಸ್ಥಳಗಳೆಂದರೆ ಕೋಲಾರಮ್ಮನ ದೇವಸ್ಥಾನ, ಅಂತರಗಂಗೆ, ಶತಶೃಂಗಾ ಬೆಟ್ಟಗಳು, ಸೋಮೇಶ್ವರ ದೇವಸ್ಥಾನ, ಕೋಟೆ ಮುಂತಾದವು. ಇತ್ತೀಚಿಗೆ ಕೋಟಿಲಿಂಗೇಶ್ವರ ದೇವಸ್ಥಾನವೂ ಸೇರಿದೆ. ಸುಮಾರು 1954 ರಲ್ಲಿ ನನ್ನ ಸಂಬಂಧ ಕ್ಯಾಸಂಬಳ್ಳಿಯೊಂದಿಗೆ, ಬಹುಪಾಲು ಕೆಜಿಎಫ್​ನೊಂದಿಗೆ ಕಡಿದುಹೋಯಿತು. ಅಲ್ಲಿಯವರಿಗೆ ನನ್ನ ತಂದೆ, ನನ್ನ ತಾಯಿಯೊಂದಿಗೆ ನಾವು ಐವರು ಮಕ್ಕಳನ್ನೂ ಸೇರಿಸಿ ತನ್ನ ಒಟ್ಟು ಕುಟುಂಬದೊಂದಿಗೆ ಕೋಲಾರದಲ್ಲಿ ವಾಸಿಸುವಂತೆ ಮಾಡಿರಲಿಲ್ಲ. ನನ್ನ ತಾಯಿ ಬೇರೆ ಜಾತಿ ಎಂಬ ಕಾರಣಕ್ಕೆ ಸೊಸೆಯೆಂದು ಒಪ್ಪಿಕೊಂಡಿರಲಿಲ್ಲ. ಜೊತೆಗೆ ತಂದೆಯ ತಮ್ಮಂದಿರು ನಮ್ಮೆಲ್ಲರನ್ನೂ ದೂರವಿಟ್ಟಿದ್ದರು. ಆದರೆ ತನ್ನ ಇಬ್ಬರು ತಮ್ಮಂದಿರು ಮತ್ತು ತಾಯಿಯನ್ನು ಸಾಕುವ ಜವಾಬ್ದಾರಿ ನನ್ನ ತಂದೆಯದೇ ಆಗಿತ್ತು.

ಇದನ್ನೂ ಓದಿ : Autobiography: ಆಧುನಿಕ ಶಕುಂತಲಾ ಕಥನ; ಅಷ್ಟು ದೇಶಗಳನ್ನು ಸುತ್ತಲು ಧೈರ್ಯ ತುಂಬಿದ್ದೇ ನನ್ನ ಬಾಲ್ಯದ ‘ಕೆಜಿಎಫ್​ ಸಂಸ್ಕೃತಿ’

ಹೀಗಿರುವಾಗ ಇದ್ದಕ್ಕಿಂದಂತೆ ಅವರ ಪ್ರಪಂಚವೇ ಬದಲಿಸಿಹೋಯಿತು. ಅವರ ಕೊನೆಯ ತಮ್ಮನಿಗೆ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಹುದ್ದೆ ಸಿಕ್ಕು, ಅವರೊಂದಿಗೆ ನನ್ನ ಅಜ್ಜಿ ಹೊರಟುಹೋದರು. ದೊಡ್ಡ ತಮ್ಮ ಬೇರೆ ಸಂಸಾರ ಹೂಡಿದರು. ಇದ್ದಕ್ಕಿದ್ದಂತೆ ನನ್ನ ತಂದೆ ಒಬ್ಬಂಟಿಯಾದರು, ಸ್ವಾರ್ಥವೋ ಅನಿವಾರ್ಯವೋ ನಮ್ಮಮ್ಮ ಮತ್ತು ನಾವು ಐವರೂ ಕೋಲಾರದಲ್ಲಿ ವಾಸಿಸುವುದು ಎಂಬ ನಿಶ್ಚಯಕ್ಕೆ ಬಂದರು. ಆದರೆ ನಿಜ ಹೇಳಿದರೆ ಸರ್ಕಾರಿ ನೌಕರಿಯಲ್ಲಿದ್ದ ಅಮ್ಮ ನೌಕರಿ ಬಿಟ್ಟು, ನನ್ನ ತಂದೆಯನ್ನು ನಂಬಿ ಕೆಲಸ ಬಿಡಲಾರಳೆಂದು ನನ್ನ ತಂದೆಗೆ ಗೊತ್ತಿತ್ತು ಅಂತ ಕಾಣುತ್ತದೆ. ಯಾಕೆಂದರೆ, ಇದುವರೆಗೆ ಐದು ಮಕ್ಕಳಾದರೂ ಅವರು ತಮ್ಮ ಕುಟುಂಬದಿಂದ ನಮ್ಮನ್ನು ದೂರ ಇಟ್ಟು, ಅವರ ಕುಟುಂಬದವರು ನಮ್ಮನ್ನು ವಿರೋಧಿಸಿದರೂ ಅವರನ್ನು ಎದುರು ಹಾಕಿಕೊಳ್ಳದೆ ಹಳ್ಳಿಯಲ್ಲೇ  ಇಟ್ಟಿದ್ದರು. ಇಂಥ ಗಂಡನನ್ನ ನಂಬಿ ನನ್ನ ತಾಯಿ ಅದು ಹೇಗೆ ತಾನೇ ಕೆಲಸ ಬಿಟ್ಟು ಕೋಲಾರಕ್ಕೆ ಬಂದಾಳು?

ಮೊದಲ ಬಾರಿಗೆ ಗಂಡಸೊಬ್ಬನ ಸ್ವಾರ್ಥ ಹೇಗೆ ಕೆಲಸ ಮಾಡಿತೆಂದು ನನಗೆ ಎಂಟರ ವಯಸ್ಸಿನಲ್ಲೇ ಅರಿವಾಯಿತು. ಅದಾಗ ತಾನೇ ನನ್ನ ಕೊನೆಯ ತಂಗಿ ಹುಟ್ಟಿದ್ದಳು. ಅಮ್ಮ ಹೆರಿಗೆ ರಜೆಯಲ್ಲಿದ್ದರು. ಅಪ್ಪ ಬಂದು ರಜೆಯ ವಿಸ್ತರಣೆಗೆ ಅರ್ಜಿ ಎಂದು ತಾಯಿಯಿಂದ ರುಜು ಮಾಡಿಸಿಕೊಂಡರು. ಕೆಲ ದಿನಗಳ ನಂತರ ತಾಯಿಗೆ ಸಿಡಿಲು ಬಡಿದಂತೆ, ಸರ್ಕಾರದ ಆರೋಗ್ಯ ಇಲಾಖೆಯಿಂದ ರಾಜೀನಾಮೆ ಸ್ವೀಕರಿಸಿರುವುದಾಗಿ ಪತ್ರ ಬಂದಿತು. ಆಗಲೇ ನನ್ನ ತಂದೆ ಮೋಸ ಮಾಡಿದ್ದು ಆಕೆಗೆ ಗೊತ್ತಾಯಿತು. ಅತ್ತು ಕರೆದು, ಜಗಳ ಮಾಡಿಯಾದ ಮೇಲೆ  ಕೋಲಾರಕ್ಕೆ ಬಂದು ನೆಲೆಸದೆ ಬೇರೆ ದಾರಿಯೇ ಇರಲಿಲ್ಲ. ಐದು ಮಕ್ಕಳೊಂದಿಗೆ ಯಾವ ಆದಾಯವೂ ಇಲ್ಲದೆ ಆಕೆ ಹೇಗೆ ಬದುಕಿಯಾಳು?

ಆಗಿನ ಬಾಲಕರ ಸರಕಾರಿ ಹೈಸ್ಕೂಲ್ ಎದುರಿಗೆ ಅಪ್ಪ ಮನೆ ಮಾಡಿದ್ದರು. ನಮ್ಮ ಮನೆ ಮುಂದೆ ವಿಶಾಲವಾದ ಆಟದ ಮೈದಾನ, ಅದಕ್ಕೆ ಹೊಂದಿಕೊಂಡಂತೆ ಬಾಲಕರ ಪ್ರೌಢಶಾಲೆ. ನಮ್ಮ ಮನೆಗೆ ಎರಡು ಭಾಗಗಳಿದ್ದವು. ಮುಂದಿನ ಭಾಗದಲ್ಲಿ ತಾಯಿ, ಮಗನ ಕ್ರಿಶ್ಚಿಯನ್ ಕುಟುಂಬ ಇತ್ತು. ಅದರ ಹಿಂದೆ, ಅದಕ್ಕೆ ಅಂಟಿಕೊಂಡ ಹಾಗೆ ನಮ್ಮ ಮನೆಯಿತ್ತು. ಒಂದು ಪ್ಯಾಸೇಜ್ ಮೂಲಕ ನಾವು ನಮ್ಮ ಮನೆ ತಲುಪಬೇಕಾಗಿತ್ತು. ಹಿಂದಿದ್ದರೂ ಮನೆ ವಿಶಾಲವಾಗಿತ್ತು. ದೊಡ್ಡದಾದ ಹಾಲ್, ದೇವರಮನೆ, ಅದು ಊಟದಮನೆಯೂ ಆಗಿತ್ತು. ವಿಶಾಲವಾದ ಅಡುಗೆಮನೆ, ಹಿತ್ತಲು, ಮಹಡಿ ಮೇಲೆ ಹೋಗುವುದಕ್ಕೆ ಮೆಟ್ಟಿಲು. ಅಲ್ಲಿ ಬಟ್ಟೆ, ಸಂಡಿಗೆ ಮುಂತಾದವನ್ನು ಒಣಗಿಸಲು ಜಾಗವಿತ್ತು. ಬಂದ ವರ್ಷವೇ ಹತ್ತಿರದಲ್ಲೇ ಇದ್ದ ಮಿಷನ್​ ಸ್ಕೂಲಿಗೆ ನನ್ನನ್ನು ಮೂರನೇ ತರಗತಿಗೆ, ತಂಗಿ ಕಸ್ತೂರಿಯನ್ನು ಒಂದನೇ ತರಗತಿಗೆ ಸೇರಿಸಿದರು. ಅದು ಕ್ರಿಶ್ಚಿಯನ್ ಸ್ಕೂಲ್ ಆಗಿದ್ದರೂ ಯಾವ ರೀತಿಯ ಧರ್ಮಬೋಧನೆ ಅಲ್ಲಿರಲಿಲ್ಲ. ಶಾಲೆಯ ಆವರಣ ವಿಸ್ತಾರವಾಗಿದ್ದು ಬೇಕಾದಷ್ಟು ಹುಣಸೆಮರಗಳಿದ್ದವು. ಇಡೀ ಕೋಲಾರ ಜಿಲ್ಲೆಯಲ್ಲಿ ಆಗ ಹುಣಸೆಮರಗಳು ಎಲ್ಲಾ ಕಡೆ ಇದ್ದವು. ರಸ್ತೆಯ ಸಾಲುಮರಗಳಾಗಿ, ಹಳ್ಳಿಗಳಲ್ಲಿ ಊರೊಳಗಿದ್ದ ಖಾಲಿ ಜಾಗಗಳಲ್ಲಿ, ಸರ್ಕಾರಿ ಕಚೇರಿಯ ಕಾಂಪೌಂಡಿನೊಳಗೆಲ್ಲ.

ನನಗೆ ಚಿಕ್ಕ ವಯಸ್ಸಿನಿಂದಲೂ ಹುಣಸೆಯ ಎಲ್ಲಾ ಭಾಗಗಳನ್ನೂ ತಿಂದು ಅಭ್ಯಾಸವಿತ್ತು. ಅದರ ಚಿಗುರು, ಬೀಜವಿಲ್ಲದ ಎಳೆಯಕಾಯಿ, ದೋರುಗಾಯಿ, ಬಲಿತಹಣ್ಣು ಎಲ್ಲವೂ ನನಗೆ ಬಹಳ ಇಷ್ಟ. ನನ್ನ ಅದೃಷ್ಟಕ್ಕೆ ಈ ನನ್ನ ಹೊಸ ಶಾಲೆಯಲ್ಲಿ ಸುಮಾರು ಹುಣಸೆ ಮರಗಳಿದ್ದವು. ಶಾಲೆ ಮುಗಿದನಂತರ ನಾನು ನನ್ನ ತಂಗಿ ಹುಣಸೆಕಾಯಿ, ಹಣ್ಣುಗಳನ್ನ ಸಾಕಷ್ಟು ತಿಂದು ಬ್ಯಾಗಿನೊಳಗೂ ಒಂದಷ್ಟು ಹಾಕಿಕೊಂಡು ಮನೆಗೆ ಬರುತಿದ್ದೆವು. ಇಷ್ಟೊಂದು ಹುಣಸೆಕಾಯಿ ಹಣ್ಣು ತಿಂದಾಗೆಲ್ಲ ನಮಗೆ ಭೇದಿ ಆಗುತ್ತಿತ್ತು. ಈಗ ನಮಗೆ ಅಪ್ಪನ ಇನ್ನೊಂದು ಮುಖ ಗೊತ್ತಾಯಿತು. ವಾರವಾರಕ್ಕೆ ಸಿಹಿತಿಂಡಿಯೊಂದಿಗೆ ಕ್ಯಾಸಂಬಳ್ಳಿಗೆ ಬಂದು, ನಮ್ಮನ್ನ ಊರಾಚೆ ಪಿಕ್​ನಿಕ್​ಗೆ ಕರೆದುಕೊಂಡು ಹೋಗಿ, ಆಟ ಆಡಿಸಿಕೊಂಡು ಬರುತ್ತಿದ್ದ ಅಪ್ಪ ಕೋಲಾರದಲ್ಲಿ ಮಾಯವಾಗಿಬಿಟ್ಟಿದ್ದರು. ಇದೀಗ ಅವರು ಆಫೀಸಿಗೆ ಬೆಳಿಗ್ಗೆ ಹೋದರೆ ಮನೆಗೆ ಬರುತಿದ್ದದ್ದು ರಾತ್ರಿಗೆ. ಏಕೆಂದರೆ ಆಫೀಸಿನ ನಂತರ ಅವರು ಅದೇ ಆಫೀಸಿನ ರೆಕ್ರಿಯೇಷನ್ ಕ್ಲಬ್​ನಲ್ಲಿ ಇಸ್ಪೀಟ್ ಆಡುತ್ತಿದ್ದರು. ನಮ್ಮೊಂದಿಗೆ ಅವರು ಕಾಲ ಕಳೆಯುತ್ತಿದುದೇ ಅಪರೂಪವಾಯಿತು. ಅಪ್ಪ ನಮ್ಮನ್ನು ಎರಡು ಕಾರಣಕ್ಕೆ ಶಿಕ್ಷಿಸುತ್ತಿದ್ದರು. ಒಂದು ಹುಣಸೆಕಾಯಿ ತಿನ್ನುತ್ತಿದ್ದುದಕ್ಕೆ. ಇನ್ನೊಂದು ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದುದಕ್ಕೆ. ಅವರಿಗೆ ಮಾತೃಭಾಷೆ ತೆಲುಗಿನ ಮೇಲೆ ಮಹಾ ಅಭಿಮಾನ. ಈ ಎರಡು ತಪ್ಪು ಮಾಡಿದಾಗೆಲ್ಲ ನಮ್ಮನ್ನು ಅವರು ಕುರ್ಚಿ ಕೂರಿಸುತ್ತಿದ್ದರು. ಈ ಶಿಕ್ಷೆ ಈಗಿನವರಿಗೆ ತಿಳಿದಿರಲಾರದು. ಗೋಡೆಗೆ ಒರಗಿಕೊಂಡು, ಮೊಣಕಾಲನ್ನು ಮಡಿಚಿ ಆದರೆ ಕಾಲುಗಳನ್ನ ನೆಟ್ಟಗಿಟ್ಟುಕೊಂಡು ಕುರ್ಚಿಯಂತೆ ಕೂರುವುದು.

ಇದನ್ನೂ ಓದಿ : Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು

ನಮ್ಮ ಮನೆಯಿದ್ದ ಕಡೆ ಯಾವ ಸಾಂಸ್ಕೃತಿಕ ಸಮಾರಂಭಗಳೂ, ಕೆಜಿಎಫ್​ನ ಕ್ರಿಸ್ಮಸ್​​ನಂತೆ ಊರೆಲ್ಲ ಸೇರಿ ಮಾಡುವ ಯಾವ ಹಬ್ಬಗಳನ್ನೂ ಆಚರಿಸುತ್ತಿರಲಿಲ್ಲ. ಅಕ್ಕಪಕ್ಕದವರು ಯಾರೊಂದಿಗೂ ಹೆಚ್ಚಿಗೆ ಸೇರುತ್ತಿರಲಿಲ್ಲ. ಎಲ್ಲೋ ನಡೆಯುತಿದ್ದ ಸಮಾರಂಭಗಳಲ್ಲಿ ಹಿಂದಿ ಚಿತ್ರದ ಹಾಡುಗಳನ್ನು ಧ್ವನಿವರ್ಧಕಗಳ ಮೂಲಕ ಜೋರಾಗಿ ಹಾಕುತ್ತಿದ್ದರು. ನನಗೆ ನೆನಪಿರುವಂತೆ ನಾಗಿನ್ ಚಿತ್ರದ “ಮನ ಡೋಲೆ ಮೇರಾ ತನ ಡೋಲೆ”, ಅನಾರ್ಕಲಿ ಚಿತ್ರದ “ಏಹ್ ಜಿಂದಗಿ ಉಸೀಕೀ ಹೈ”, ಮಧುಮತಿ ಚಿತ್ರದ ‘‘ಆಜಾರೆ ಪರದೇಸಿ’’ ಯಾವಾಗಲೂ ಕೇಳುಸುತ್ತಿತ್ತು. ಅಮ್ಮನಿಗೆ ಇಂಗ್ಲಿಷ್, ತಮಿಳು ಬಿಟ್ಟರೆ ಕನ್ನಡ ಬರುತ್ತಿರಲಿಲ್ಲ ಮನೆಗೆಲಸದ ಜೊತೆಗೆ. ಐದು ಮಕ್ಕಳನ್ನು ಸಾಕುವ ಜವಾಬ್ದಾರಿ. ನಮಗೆ ಕಥೆ ಹೇಳಲೋ, ಮಾತಾಡಲೋ ಆಕೆಗೆ ಪುರುಸೊತ್ತು ದೊರಕುತ್ತಿರಲಿಲ್ಲ. ಸಾಮಾನ್ಯವಾಗಿ ಹಿಂದೂಗಳ ಮನೆಯಲ್ಲಿ ಇದ್ದಂತೆ ರಾಮಾಯಣ, ಮಹಾಭಾರತ ಹೇಳುವ ಅಜ್ಜಿಯೋ, ತಾತನೋ ನಮಗಿರಲಿಲ್ಲ.

ಆದರೂ ನನಗೆ ನಾಲ್ಕನೇ ತರಗತಿ ಮುಗಿಸುವ ಮೊದಲೇ ಇವೆರಡು ಮಹಾನ್ ಕೃತಿಗಳ ವಿವರವಾದ ಕಥೆ ಚೆನ್ನಾಗಿ ಗೊತ್ತಿತ್ತು. ಅಷ್ಟೇ ಏಕೆ. ವಿಕ್ರಮಾದಿತ್ಯ ಬೇತಾಳರ ಕಥೆಗಳೂ, ಹಿಂದೂ ಜಾನಪದ, ಚಾರಿತ್ರಿಕ ಕಥೆಗಳೂ ಗೊತ್ತಿದ್ದವು. ಹೀಗೆ ನನಗೆ ಕಥೆಗಳ ಹುಚ್ಚು ಹಿಡಿಸಿದ್ದು, ರಾಮಾಯಣ, ಮಹಾಭಾರತವನ್ನು ಕನಸಿನಲ್ಲೂ ಹೇಳುವಂತೆ ಮಾಡಿದ್ದು ಚಂದಮಾಮಾ ಎಂಬ ಮ್ಯಾಜಿಕ್ ಮಾಸಪತ್ರಿಕೆ. ಅದನ್ನು ನಮ್ಮ ಮನೆ ಮುಂದಿದ್ದ ಕುಟುಂಬ ತರಿಸುತ್ತಿತ್ತು. ಮದ್ರಾಸಿನಿಂದ ರಂಗುರಂಗಾದ ಚಿತ್ರಗಳಿಂದ ತುಂಬಿದ್ದ ಚಂದಮಾಮ ಬರುತ್ತಿದ್ದಂತೆ ಬಕಪಕ್ಷಿಯಂತೆ ಕಾಯುತಿದ್ದ ನಾನು ಅದನ್ನು ತಂದು ಓದಿ ಮುಗಿಸುತ್ತಿದ್ದೆ. ಈ ಕಥೆಗಳ ಮೋಹ ನನಗೆ ಕನ್ನಡ ಓದುವುದನ್ನು, ಬರೆಯುವುದನ್ನು ತುಂಬಾ ಸರಾಗವಾಗಿ, ಬೇಗ ಕಲಿಯುವಂತೆ ಮಾಡಿತು. ಇದರ ಜೊತೆಗೆ ನನ್ನ ತಂದೆ Illustrated weekly of India ಎಂಬ ಮಾಸಿಕ ಮತ್ತು Blitz ಇಂಗ್ಲಿಷ್ ವಾರಪತ್ರಿಕೆ ತರಿಸುತ್ತಿದ್ದರು. ಇಂಗ್ಲಿಷ್ ಗೊತ್ತಿಲ್ಲದಿದ್ದರೂ ಅವುಗಳಲ್ಲಿನ ಫೋಟೋಗಳೂ, Blitz ನ ದೊಡ್ಡದೊಡ್ಡ ಅಕ್ಷರಗಳೂ, ತಲೆಬರಹಗಳೂ ನನ್ನನ್ನು ಆಕರ್ಷಿಸುತ್ತಿದ್ದವು. ಆಗ ನನಗೆ ಅಂಟಿದ ಓದುವ ಗೀಳು ಈಗಲೂ ಬಿಟ್ಟಿಲ್ಲ. ಚಂದಮಾಮದ ಕಥೆಗಳಿಂದ ಪ್ರಾರಂಭವಾಗಿ, ನಂತರ ಕನ್ನಡ ಕಾದಂಬರಿಗಳು, ಆಮೇಲೆ ಇಂಗ್ಲಿಷ್ ಕಾದಂಬರಿಗಳು, ಅದಾದ ಮೇಲೆ ಆತ್ಮಚರಿತ್ರೆಗಳು, ಜೀವನ ಚರಿತ್ರೆಗಳವರೆಗೆ ನನ್ನ ಓದಿನ ವ್ಯಾಪ್ತಿ ವಿಸ್ತರಿಸಿತು.

ಮೂರನೇ ತರಗತಿಯಲ್ಲಿ ನಾನು ತುಂಬಾಮೌನಿ. ಹಳ್ಳಿಯ ಶಾಲೆಯಿಂದ ಬಂದವಳಿಗೆ ಕೋಲಾರದ ವಿಶಾಲವಾದ, ವಿದ್ಯಾರ್ಥಿಗಳು ಹೆಚ್ಚಿದ್ದ ಶಾಲೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಇಲ್ಲಿ ಮೊದಲನೇ ಬಾರಿಗೆ ನಾನು ಸ್ಟೇಜ್ ಮೇಲೆ ಯಾವ ಪಾತ್ರಕ್ಕೆ ಹತ್ತಿದ್ದು ಅಂತ ಕೇಳಿದರೆ ನೀವು ನಂಬಲಾರರಿ. ಈಗಾಗಲೇ ಹೇಳಿದಂತೆ ನನ್ನದು ಕ್ರಿಶ್ಚಿಯನ್ ಶಾಲೆಯಾದ್ದರಿಂದ ಕ್ರಿಸ್ಮಸ್ ಹಬ್ಬಕ್ಕೆ ನಾವು ಯೇಸುಕ್ರಿಸ್ತನ ಜನನದ ಸಂದರ್ಭವನ್ನು ಅಭಿನಯ ಮಾಡಿ ತೋರಿಸುವುದು ಪ್ರತಿ ವರ್ಷದ ಆಚರಣೆ. ರಂಗದ ಮೇಲೆ ತಾಯಿ ಮೇರಿ, ಆಗತಾನೇ ಹುಟ್ಟಿದ ಯೇಸುವನ್ನು ಪ್ರತಿನಿಧಿಸುವ ಒಂದು ಗೊಂಬೆ, ತಂದೆ ಜೋಸೆಫ್ ಗೊಲ್ಲನಂತೆ ಕಂಬಳಿ ಹೊದ್ದು ಮತ್ತು ಕೆಲವು ಜ್ಞಾನಿಗಳು ಮಗು ಯೇಸುವಿನ ಸುತ್ತ ನಿಂತಿರುವುದು ಈ ನಾಟಕದ ಕೇಂದ್ರಬಿಂದು. ಇಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಆದರೆ ಕ್ರಿಸ್ತನ ಜನ್ಮವಾಯಿತೆಂದು ತಿಳಿದ ಯಹೂದಿಗಳಲ್ಲದ ಇಸ್ರೇಲಿಗಳು ತಂಡೋಪತಂಡವಾಗಿ, ಗಂಟುಮೂಟೆ ಕಟ್ಟಿಕೊಂಡು ದೂರದ ಊರುಗಳಿಂದ ತಮ್ಮನ್ನು ಯಹೂದಿಗಳ ಹಿಂಸೆಯಿಂದ ರಕ್ಷಿಸಲು ಹುಟ್ಟಿದ ದೇವಪುತ್ರನನ್ನು ನೋಡಲು ಬರುತ್ತಾರೆ. ಹಾಗೆ ಸಾಲಾಗಿ ಬೆನ್ನ ಮೇಲೆ ಮೂಟೆ ಹೊತ್ತುಕೊಂಡು ಸ್ಟೇಜಿನ ಒಂದು ಕಡೆ ಹತ್ತಿ, ಮಗು ಯೇಸುವನ್ನು ನೋಡಿ ಸ್ಟೇಜಿನ ಆ ಕಡೆ ಇಳಿದುಹೋಗುವ 10-12 ವಿದ್ಯಾರ್ಥಿಗಳಲ್ಲಿ ನಾನೊಬ್ಬಳಾಗಿದ್ದೆ. ಹೀಗೆ ಮಾತಿಲ್ಲದ, ಅಭಿನಯವಿಲ್ಲದ ಪಾತ್ರದಲ್ಲಿ ನನ್ನ ರಂಗಪ್ರವೇಶವಾಯಿತು.

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು’

ದಿನಗಳು ಕಳೆಯುತ್ತಿದ್ದಂತೆ ನಾನು ಜಾಣೆಯೆಂದು ನನಗೆ ಮತ್ತು ನನ್ನ ಉಪಾಧ್ಯಾಯಿನಿಯರಿಗೆ ಅರಿವಾಗತೊಡಗಿತು. ತರಗತಿಯಲ್ಲಿ ಪಾಠ ಹೇಳಿಯಾದ ಮೇಲೆ ಅಧ್ಯಾಪಕಿ ಎರಡು ಕೆಲಸಗಳನ್ನು ಮಾಡಿಸುತ್ತಿದ್ದರು. ಒಂದು, ಮಾಡಿದ ಪಾಠವನ್ನು ಓದಿಸುವುದು. ಎರಡು, ಹೇಳಿಕೊಟ್ಟ ಪಾಠದ ಬಗ್ಗೆ ಪ್ರಶ್ನೆ ಕೇಳುವುದು. ಕನ್ನಡ ಚಂದಮಾಮದ ಪ್ರಭಾವದಿಂದ ನಾನು ಕನ್ನಡವನ್ನು ಸರಾಗವಾಗಿ ಓದಬಲ್ಲವಳಾಗಿದ್ದೆ. ಲೆಕ್ಕ ಬಿಟ್ಟು ಬೇರೆ ಎಲ್ಲಾ ಪಾಠಗಳೂ ನನಗೆ ಕಥೆಗಳಂತೆ ಅನ್ನಿಸುತ್ತಿದ್ದವು. ಚರಿತ್ರೆ, ಭೂಗೋಳ ಎರಡೂ ನನಗೆ ತುಂಬಾ  ಆಕರ್ಷಕವಾಗಿದ್ದವು. ಪ್ರಶ್ನೆ ಕೇಳಿದ ತಕ್ಷಣ ಉತ್ತರ ತಪ್ಪಿಲ್ಲದೇ ನನ್ನಿಂದ ಹೊರಹೊಮ್ಮುತ್ತಿತ್ತು. ಆದರೆ ನನ್ನೊಂದಿಗೆ ಓದುತ್ತಿದ್ದ ಇತರೇ ಮಕ್ಕಳಿಗೆ ಗಮನ ಪಾಠದ ಮೇಲೆ ಇರುತ್ತಿರಲಿಲ್ಲವೋ, ಅರ್ಥವಾಗುತ್ತಿರಲಿಲ್ಲವೋ ಅವರಿಂದ ಉತ್ತರಗಳು ಬರತ್ತಿರಲಿಲ್ಲ. ಆಗ ಉಪಾಧ್ಯಾಯಿನಿಯರು ಅಂಥ ಮಕ್ಕಳನ್ನು ತಾವೇ ಶಿಕ್ಷಸದೆ ನನ್ನ ಕೈಯಿಂದ ಅವರ ಮೂಗು ಹಿಡಿಸಿ ಕಪಾಳಕ್ಕೆ ಹೊಡಿಸುತ್ತಿದ್ದರು. ಆ ವಯಸ್ಸಿನಲ್ಲಿ ಇದು ನನಗೆ ಒಂಥರಾ ಹೆಮ್ಮೆ ಅನ್ನಿಸುವುದು.  ನಾನೇನೋ ಸಾಧಿಸಿಬಿಟ್ಟೆ?! ಎಂಬಂತೆ. ನಾಲ್ಕನೇ ತರಗತಿಗೆ ಬರುವಷ್ಟರಲ್ಲಿ ನಾನೇ ಕ್ಲಾಸಿಗೆ ಫಸ್ಟ್. ಪದ್ಯಗಳನ್ನು ಸ್ಪಷ್ಟವಾಗಿ ಯಾವ ತಪ್ಪು ಇಲ್ಲದೆ ಹೇಳುತ್ತಿದ್ದ ನನ್ನನ್ನು ಒಮ್ಮೆ ಮಕ್ಕಳ ದಿನಾಚರಣೆಯ ದಿನ, ಪ್ರಭಾತ್ ಚಿತ್ರಮಂದಿರದಲ್ಲಿ ನೆರೆದಿದ್ದ ಹಲವಾರು ಶಾಲಾಮಕ್ಕಳೆದುರು ಸ್ಟೇಜ್ ಮೇಲೆ ನಿಲ್ಲಿಸಿ ಕುವೆಂಪು ಅವರ ‘‘ಮೂಡುವನು ರವಿ ಮೂಡುವನು’’ ಪದ್ಯ ಹೇಳುವಂತೆ ಹೇಳಿದರು. ಆದರೆ ನನ್ನಲ್ಲಿ ದೀರ್ಘಕಾಲದ ನೆನಪಿನ ಶಕ್ತಿಯ ಕೊರತೆ ಇತ್ತು. ಅದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ ಪದ್ಯದ ನಾಲ್ಕು ಸಾಲುಗಳಾದ ಮೇಲೆ ನಾನೆಷ್ಟೇ ಕಷ್ಟಪಟ್ಟರೂ ಮುಂದಿನ ಸಾಲುಗಳು ಜ್ಞಾಪಕಕ್ಕೆ ಬರಲೇ ಇಲ್ಲ. ಬೇರೆ ಯಾರಿಗೂ ಅದು ಗೊತ್ತಾಗದಿದ್ದರೂ ನಾನು ಮಾತ್ರ ಅವಮಾನದಿಂದ ಕುದ್ದುಹೋಗಿದ್ದೆ.

ಇದನ್ನೂ ಓದಿ : Reporter’s Diary: ಕೋಲಾರದ ಗಡಿಭಾಗದಿಂದ ‘ನಂಗಾನಾಚ್’ ಎಂಬ ಭೂತವನ್ನು ಓಡಿಸಿದ ಆ ದಿನಗಳು​

ನಾನು ನಾಲ್ಕನೇ ತರಗತಿ ಮುಗಿಸುತ್ತಿದ್ದಂತೆ ನನ್ನ ತಂದೆಗೆ ಬೆಂಗಳೂರಿಗೆ ವರ್ಗ ಆಯಿತು. ಟಿ.ಸಿ ತೆಗೆದುಕೊಳ್ಳಲು ಬಂದ ಅಪ್ಪನಿಗೆ ಕ್ಲಾಸ್ ಟೀಚರ್ ಹೇಳಿದ್ದೇನೆಂದರೆ ನಿಮ್ಮ ಮಗಳು ತುಂಬಾ ಜಾಣೆ. ಅವಳನ್ನು ಚೆನ್ನಾಗಿ ಓದಿಸಿ, ಅವಳು ತುಂಬಾ ಮುಂದೆ ಬರುತ್ತಾಳೆ ಎಂದು. ಮತೊಮ್ಮೆ ನಾನು ಎಲ್ಲರಿಗಿಂತ ಸ್ವಲ್ಪ ಮೇಲಿದ್ದೇನೆಂದು ನನ್ನ ಅರಿವಿಗೆ ಬಂದಿತು. ಇಂದಿಗೂ ಆ ಹೆಸರು ಮರೆತುಹೋಗಿರುವ ಗುರುಗಳಿಗೆ ನನ್ನ ದೊಡ್ಡ ಪ್ರಣಾಮಗಳು. ಹೀಗೆ ಪ್ರೈಮರಿ ಶಾಲೆ ಮುಗಿಸಿ ನಾವು ಬೆಂಗಳೂರೆಂಬ ಮಾಯಾನಗರಿಗೆ ಬಂದೆವು. ಮುಂದಿನ ನಾಲ್ಕುವರ್ಷಗಳಲ್ಲಿ ನಾನು ಹಳೆ ಮೈಸೂರಿನ ಸಾಂಸ್ಕೃತಿಕ ಪ್ರಭಾವಕ್ಕೆ ಇನ್ನಿಲ್ಲದಂತೆ ಒಳಗಾದೆ. ನನ್ನ ಕನ್ನಡ ವೃದ್ಧಿಯಾಯಿತು. ಹಾಗೆ ನನ್ನ ಆತ್ಮವಿಶ್ವಾಸವೂ ಹೆಮ್ಮರವಾಯಿತು. ಆದರೆ ಮನೆಯಲ್ಲಿ ಬಡತನ ಮೆಲ್ಲಗೆ ಕಾಲಿಡಲಾರಂಭಿಸಿತ್ತು.

(ಮುಂದಿನ ಕಥನ : 19.6.2022) 

ಪ್ರತಿಕ್ರಿಯೆಗಾಗಿ : tv9kannadadigital@gmail.com 

ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada