ರಾಷ್ಟ್ರಾದ್ಯಂತ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 10 ದಿನಗಳ ಯೋಗ ತರಬೇತಿ ಕಡ್ಡಾಯ; ಸುತ್ತೋಲೆ ಹೊರಡಿಸಿದ ರಾಷ್ಟ್ರೀಯ ವೈದ್ಯಕೀಯ ಮಂಡಳಿ
ಯೋಗಾಭ್ಯಾಸಕ್ಕಾಗಿಯೇ ಒಂದು ಘಟಕವನ್ನು ರಚಿಸಿಕೊಳ್ಳಬೇಕು. ನುರಿತರಿಂದ ತರಬೇತಿ ಕೊಡಿಸಬೇಕು ಎಂದೂ ವೈದ್ಯಕೀಯ ಮಂಡಳಿ ತಿಳಿಸಿದೆ.
ಎಲ್ಲ ರಾಜ್ಯಗಳ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ( ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕಾಲೇಜು ಆಸ್ಪತ್ರೆಗಳು) 10 ದಿನಗಳ ಯೋಗ ತರಬೇತಿಯನ್ನು ಕಡ್ಡಾಯ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ(NMC) ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ. ಅಂದು ಮುಕ್ತಾಯವಾಗುವಂತೆ ತರಬೇತಿ ನೀಡಬೇಕು. ಅಂದರೆ ಪ್ರತಿವರ್ಷ ಜೂನ್ 12ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 1 ತಾಸುಗಳ ಕಾಲವಾದರೂ ಎಂಬಿಬಿಎಸ್ನ ಎಲ್ಲ ಬ್ಯಾಚ್ಗಳ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ ಎಂದು ಎನ್ಎಂಸಿ ಹೇಳಿದೆ. ಅಷ್ಟೇ ಅಲ್ಲ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 2026ರಲ್ಲಿ ಮೊದಲ ರಾಷ್ಟ್ರವ್ಯಾಪಿ ನಿರ್ಗಮನ ಪರೀಕ್ಷೆ (Exit Exam) ನಡೆಸುವುದಾಗಿಯೂ ಇದೇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. (ರಾಷ್ಟ್ರೀಯ ನಿರ್ಗಮನ ಪರೀಕ್ಷೆಯೆಂದರೆ, ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ಅವರು ಪಡೆದ ಅಂಕಗಳ ಆಧಾರದ ಮೇಲೆ ಮಾಡಲು ಇಚ್ಛಿಸುವ ವೈದ್ಯಕೀಯ ಅಭ್ಯಾಸಗಳಿಗೆ ಪರವಾನಗಿ ನೀಡುವ ಕ್ರಮ. ಈ ಪರೀಕ್ಷೆ ಬರೆದೇ ಅವರು ಮುಂದಿನ ಸ್ನಾತಕೋತ್ತರ ಹಂತಕ್ಕೆ ಹೋಗಬೇಕಾಗುತ್ತದೆ).
ದೇಶದ ಎಲ್ಲ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವಂತೆ ಹೇಳಿರುವ ಎನ್ಎಂಸಿ ರಾಷ್ಟ್ರವ್ಯಾಪಿಯಾಗಿ ಒಂದು ಸಾಮಾನ್ಯ ಸ್ವರೂಪದ ಯೋಗದ ವಿಧವನ್ನು ನೀಡಲಿದೆ. ಹಾಗಿದ್ದಾಗ್ಯೂ ಕೂಡ ವೈದ್ಯಕೀಯ ಕಾಲೇಜುಗಳು ಸ್ವಂತವಾಗಿಯೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯೋಗಾಭ್ಯಾಸಕ್ಕಾಗಿಯೇ ಒಂದು ಘಟಕವನ್ನು ರಚಿಸಿಕೊಳ್ಳಬೇಕು. ನುರಿತರಿಂದ ತರಬೇತಿ ಕೊಡಿಸಬೇಕು ಎಂದೂ ವೈದ್ಯಕೀಯ ಮಂಡಳಿ ತಿಳಿಸಿದೆ. ಅಷ್ಟೇ ಅಲ್ಲ, ವೈದ್ಯಕೀಯ ವೃತ್ತಿ ಸ್ವೀಕಾರ ಮಾಡುವವರು ಸಾಮಾನ್ಯವಾಗಿ ಹಿಪೊಕ್ರೆಟಿಕ್ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ಬಾರಿ ಎನ್ಎಂಸಿ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಇನ್ನು ಮುಂದೆ ಚರಕ್ ಶಪಥ್ ಸ್ವೀಕಾರ ಮಾಡುವಂತೆ ಸೂಚಿಸಲಾಗಿದೆ. ಹಾಗಂತ ಹಿಪೊಕ್ರೆಟಿಕ್ ಪ್ರಮಾಣವಚನ ಇನ್ನು ಮುಂದೆ ಇರುವುದಿಲ್ಲ ಎಂದೂ ಹೇಳಿಲ್ಲ.
ಇಲ್ಲಿ ಹಿಪೊಕ್ರೆಟಿಕ್ ಪ್ರಮಾಣವಚನ ಎಂಬುದು ಗ್ರೀಕ್ ಪದ್ಧತಿ. ವೈದ್ಯಕೀಯ ವೃತ್ತಿ ಪ್ರಾರಂಭ ಮಾಡುವವರು, ಈ ವೃತ್ತಿಯ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುತ್ತೇವೆ ಎಂದು ಸ್ವೀಕರಿಸು ವಚನ. ಆದರೆ ಸದ್ಯದ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಎಷ್ಟರ ಮಟ್ಟಿಗೆ ಪ್ರಚಲಿತದಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ. ಇದೀಗ ಸುತ್ತೋಲೆಯಲ್ಲಿ ಚಕರ ಶಪಥ್ ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ಚರಕ ಸಂಹಿತೆ ಎಂಬುದು ಭಾರತೀಯ ಪ್ರಾಚೀನ ಪದ್ಧತಿ ವೈದ್ಯಶಾಸ್ತ್ರ. ಇದೊಂದು ಆಯುರ್ವೇದಿಕ್ ಗ್ರಂಥವಾಗಿದ್ದು ಚರಕ ಮಹರ್ಷಿಗಳಿಂದ ಬರೆಯಲ್ಪಟ್ಟಿದೆ. ಅಂಥ ಚರಕ ಮಹರ್ಷಿಗಳ ಹೆಸರಲ್ಲಿ ಶಪಥ ಸ್ವೀಕಾರ ಮಾಡುವುದು ಚರಕ ಶಪಥ್ ಆಗಿದೆ.
ಇದನ್ನೂ ಓದಿ: Umesh Yadav: ಆಡಿದ ಮೂರೇ ಪಂದ್ಯದಲ್ಲಿ ಉಮೇಶ್ ಯಾದವ್ಗೆ ಸಿಕ್ಕ ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ
Published On - 12:19 pm, Sat, 2 April 22