AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯೇ?: ಅಭಿಜಿತ್ ದೀಪ್ಕೆ ಇದ್ದ ವಿಮಾನದಲ್ಲಿ ‘ಕಾಕ್ರೋಚ್’ ಕಾಟದ ಬಗ್ಗೆ ಸಹಪ್ರಯಾಣಿಕ ಅಸಮಾಧಾನ

ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿಗೆ ಬಂದ ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಅದೇ ವಿಮಾನದಲ್ಲಿದ್ದ ಸಹಪ್ರಯಾಣಿಕರೊಬ್ಬರು ತಮಗಾದ ತೊಂದರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಮಾನ ಇಳಿದ ಬಳಿಕವೂ ಕಾಯಬೇಕಾಯಿತು ಮತ್ತು ಘೋಷಣೆಗಳಿಂದ ಅನಾನುಕೂಲವಾಯಿತು ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯೇ?: ಅಭಿಜಿತ್ ದೀಪ್ಕೆ ಇದ್ದ ವಿಮಾನದಲ್ಲಿ ‘ಕಾಕ್ರೋಚ್’ ಕಾಟದ ಬಗ್ಗೆ ಸಹಪ್ರಯಾಣಿಕ ಅಸಮಾಧಾನ
ಅಭಿಜಿತ್ ದೀಪ್ಕೆ & ಸಹಪ್ರಯಾಣಿಕImage Credit source: ANI
ಗಣಪತಿ ಶರ್ಮಾ
|

Updated on:Oct 10, 2026 | 1:06 PM

Share

ನವದೆಹಲಿ, ಅಕ್ಟೋಬರ್ 10: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿಗೆ ಬಂದ ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ವಿಮಾನದಲ್ಲಿದ್ದ ಸಹಪ್ರಯಾಣಿಕರೊಬ್ಬರ ಹೇಳಿಕೆ ಇದೀಗ ಗಮನ ಸೆಳೆದಿದೆ. ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ಇಳಿದ ಬಳಿಕವೂ ಪ್ರಯಾಣಿಕರು ಕಾಯಬೇಕಾಯಿತು. ಈ ಸಂದರ್ಭದಲ್ಲಿ ವಿಮಾನದ ಮುಂಭಾಗದಿಂದ ‘ಇನ್‌ಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಕೇಳಿಬಂದವು ಎಂದು ಅವರು ಹೇಳಿದ್ದಾರೆ.

ವಿಮಾನ ಇಳಿದ ಬಳಿಕವೂ ಕಾಯಬೇಕಾಯಿತು

“ನಾವು ಮುಂಬೈನಿಂದ ಪ್ರಯಾಣಿಸುತ್ತಿದ್ದೆವು. ವಿಮಾನ ಇಳಿದ ಬಳಿಕವೂ ಕಾಯಬೇಕಾಯಿತು. ವಿಮಾನದ ಮುಂಭಾಗದಿಂದ ‘ಇನ್‌ಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಕೇಳಿಸುತ್ತಿದ್ದವು. ಅಭಿಜೀತ್ ದೀಪ್ಕೆ ಯಾರು ಎಂಬುದೇ ನನಗೆ ಗೊತ್ತಿಲ್ಲ” ಎಂದು ಪ್ರಯಾಣಿಕರೊಬ್ಬರು ಹೇಳಿರುವ ವಿಡಿಯೋವನ್ನು ‘ಎಎನ್​ಐ’ ಸುದ್ದಿಸಂಸ್ಥೆ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.

ಪ್ರಯಾಣಿಕರ ಮಾತಿನ ವಿಡಿಯೋ

ಪ್ರತಿಭಟನಾಕಾರರ ವರ್ತನೆಯಿಂದ ಸಾಮಾನ್ಯ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 36 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಎಲ್ಲೆಡೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಸಮಸ್ಯೆ ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ

ಮತದಾರರ ಪಟ್ಟಿಯಿಂದ ಕೆಲವರ ಹೆಸರುಗಳನ್ನು ತಪ್ಪಾಗಿ ತೆಗೆದುಹಾಕಿದ್ದರೆ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಪರಿಶೀಲಿಸಬಹುದು ಎಂದು ಸಹಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. “ಪ್ರತಿಭಟನಾಕಾರರು ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಸಾರ್ವಜನಿಕರೇ ಎಲ್ಲವನ್ನೂ ಮಾಡಲು ಮುಂದಾದರೆ ನ್ಯಾಯಾಲಯಗಳನ್ನು ಮುಚ್ಚಿಬಿಡಬೇಕೇ? ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ಒಂದು ವ್ಯವಸ್ಥೆ ಇದೆ. ಅದನ್ನು ಅನುಸರಿಸಬೇಕು” ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ: ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಜಿತ್ ದೀಪ್ಕೆ ವಿಮಾನದಲ್ಲೇ ಪೊಲೀಸ್ ವಶಕ್ಕೆ!

ಪ್ರತಿಭಟನೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಜೀತ್ ದೀಪ್ಕೆ ಅವರನ್ನು ವಿಮಾನದಲ್ಲೇ ವಶಕ್ಕೆ ಪಡೆದ ಘಟನೆಯ ಬೆನ್ನಲ್ಲೇ ಸಹಪ್ರಯಾಣಿಕರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Sat, 10 October 26

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More