ವಿವಾಹದ ವಯಸ್ಸನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ; ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಮುಗಿಬಿದ್ದ ಪೋಷಕರು

ವಿವಾಹದ ವಯಸ್ಸನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ; ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಮುಗಿಬಿದ್ದ ಪೋಷಕರು
ಪ್ರಾತಿನಿಧಿಕ ಚಿತ್ರ

ಕೇಂದ್ರ ಸರ್ಕಾರದ ಉದ್ದೇಶಿತ ಬಾಲ್ಯ ವಿವಾಹ ತಡೆ ಕಾಯಿದೆಯ ತಿದ್ದುಪಡಿ ಮಸೂದೆ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಮಸೂದೆಯಿಂದಾಗಿ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಿದ್ದಾರೆ.

S Chandramohan

| Edited By: Sushma Chakre

Dec 30, 2021 | 4:52 PM

ನವದೆಹಲಿ: ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18ರಿಂದ 21ಕ್ಕೆ ಏರಿಸಲು ನಿರ್ಧರಿಸಿದೆ. ಈ ಬಗ್ಗೆ ಮಸೂದೆ ಸಿದ್ಧಪಡಿಸಿದ್ದು, ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗಾಗಿ ಕಳಿಸಲಾಗಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ಮಸೂದೆ ಸಂಸತ್‌ನ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ. ಆದರೆ, ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿ ಏರಿಕೆ ಜಾರಿಗೂ ಮುನ್ನ ತೆಲಂಗಾಣದ ಹೈದರಾಬಾದ್‌ನಲ್ಲಿ ಈಗ ತಕ್ಷಣವೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸಲು ಪೋಷಕರು ಮುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣಗಳೇನು? ಎನ್ನುವುದರ ಮಾಹಿತಿ ಇಲ್ಲಿದೆ.

ನಮ್ಮ ದೇಶದ ಮುತ್ತಿನ ನಗರಿ, ಚಾರ್ ಮಿನಾರ್‌ ನಗರಿ ಎಂದೇ ಖ್ಯಾತವಾಗಿರುವ ಹೈದರಾಬಾದ್‌ ನಗರದಲ್ಲೀಗ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಹೈದರಾಬಾದ್‌ ಮಸೀದಿಗಳಲ್ಲಿ ಬಿಡುವಿಲ್ಲದೆ ಮದುವೆಗಳು ನಡೆಯುತ್ತಿವೆ. ಹೈದರಾಬಾದ್​ನಲ್ಲಿ ಪೋಷಕರು ಮಕ್ಕಳಿಗೆ ಮದುವೆ ಮಾಡಲು ಈಗ ಪೋಷಕರು ತರಾತುರಿಯಲ್ಲಿದ್ದಾರೆ. ಪೋಷಕರ ಈ ತರಾತುರಿಗೆ ಕಾರಣವಾಗಿರುವುದು ಕೇಂದ್ರ ಸರ್ಕಾರದ ಉದ್ದೇಶಿತ ಬಾಲ್ಯ ವಿವಾಹ ತಡೆ ಕಾಯಿದೆಯ ತಿದ್ದುಪಡಿ ಮಸೂದೆ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಮಸೂದೆಯಾಗಿದೆ. ಹೆಣ್ಣು ಮಕ್ಕಳ ವಿವಾಹ ವಯಸ್ಸು ಏರಿಕೆಯು ಎಲ್ಲ ಧರ್ಮದವರಿಗೂ ಅನ್ವಯವಾಗಲಿದೆ. ಹೀಗಾಗಿ ಹೈದರಾಬಾದ್‌ನ ಓಲ್ಡ್ ಸಿಟಿಯ ಮಸೀದಿಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಮುಗಿ ಬಿದ್ದಿದ್ದಾರೆ.

ಹೈದರಾಬಾದ್‌ನಲ್ಲಿ ಈಗ ಮದುವೆಯಾಗುತ್ತಿರುವ ಹುಡುಗಿಯರೆಲ್ಲಾ 18ರಿಂದ 20 ವರ್ಷದೊಳಗಿನವರು ಎಂಬುದು ವಿಶೇಷ. ಇವರೆಲ್ಲರೂ 2022-2023 ರಲ್ಲಿ ಮದುವೆಯಾಗುವ ಪ್ಲ್ಯಾನ್ ಹೊಂದಿದ್ದರು. ಆದರೆ, ಕೇಂದ್ರ ಸರ್ಕಾರವು ವಿವಾಹ ವಯಸ್ಸನ್ನು 21ಕ್ಕೆ ಏರಿಸಿದರೆ, ವಿವಾಹ ಮತ್ತಷ್ಟು ವಿಳಂಬವಾಗುತ್ತದೆ ಎಂಬ ಕಾರಣದಿಂದ ಪೋಷಕರು ಈಗಲೇ ಮದುವೆ ಮಾಡುತ್ತಿದ್ದಾರೆ.

ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೂವರಲ್ಲಿ ಒಬ್ಬಳು ವಿಕಲಚೇತನ ಮಗಳು. ಒಬ್ಬಳನ್ನು ಮದುವೆ ಮಾಡಲು 2 ವರ್ಷದವರೆಗೂ ನಾನು ಹೇಗೆ ಕಾಯಲು ಸಾಧ್ಯ? ಎಂದು ಸಮರುನ್ನುನೀಸಾ ಎಂಬ ತಾಯಿ ಪ್ರಶ್ನಿಸುತ್ತಾರೆ. ಸಮರುನ್ನುನೀಸಾ ಹೈದರಾಬಾದ್‌ ಮಸೀದಿಯಲ್ಲಿ 19 ವರ್ಷದ ಮಗಳ ಮದುವೆಯನ್ನು ಈಗ ಮಾಡುತ್ತಿದ್ದಾರೆ.

ನಾವು ನಮ್ಮ ಮಗಳಿಗೆ 2022ರ ಮಧ್ಯಭಾಗದಲ್ಲಿ ಮದುವೆ ಮಾಡಲು ಬಯಸಿದ್ದೇವು. ನನ್ನ ಪತಿ ಶ್ರೀಲಂಕಾಗೆ ಉದ್ಯೋಗಕ್ಕೆ ಹೋಗಿದ್ದಾರೆ. ಶ್ರೀಲಂಕಾದಲ್ಲಿ ದುಡಿದು ಹಣ ತರುತ್ತಾರೆ, ಅದರಿಂದ ಮಗಳ ಮದುವೆ ಮಾಡೋಣ ಎಂದುಕೊಂಡಿದ್ದೇವು. ಆದರೇ, ಈಗ ವಿವಾಹ ವಯಸ್ಸು ಏರಿಕೆಯ ಕಾರಣದಿಂದ ಈಗಲೇ ಮದುವೆ ಮಾಡಬೇಕಾಗಿದೆ ಎಂದು ಹೈದರಾಬಾದ್‌ನ ಬಾಬಾನಗರದ ಮತ್ತೊಬ್ಬ ಪೋಷಕರಾದ ಸಮೀನಾ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಇದು ಒಂದೆರೆಡು ಕುಟುಂಬ, ಪೋಷಕರ ಕಥೆಯಲ್ಲ. ಅಸಂಖ್ಯಾ ಕುಟುಂಬಗಳು ತಮ್ಮ ಮಕ್ಕಳ ವಿವಾಹವನ್ನು ತಾವು ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿಯೇ ಈಗಲೇ ಮಾಡುತ್ತಿದ್ದಾರೆ. ಆದರೇ, ಮದುವೆ ವೇಳೆ ನೀಡಬೇಕಾದ ಉಡುಗೊರೆಯನ್ನು ಮಾತ್ರ ಹಣಕಾಸಿನ ಕೊರತೆಯ ಕಾರಣದಿಂದ ಮುಂದೂಡುತ್ತಿದ್ದಾರೆ.

ನಮ್ಮ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿ, ಮನೆಯ ಪಾತ್ರೆ, ಫರ್ನೀಚರ್, ಚಿನ್ನ, ಹಣ ನೀಡಿ ಕಳಿಸುವುದು ಕಡ್ಡಾಯ. ಆದರೇ, ಈಗ ಹಣಕಾಸಿನ ಕೊರತೆ ಇದೆ. ನಾವು ಉದ್ಯೋಗವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ವಿದಾಯಿಗೆ ನಾಲ್ಕೈದು ತಿಂಗಳ ಕಾಲಾವಕಾಶ ಪಡೆದಿದ್ದೇವೆ ಎಂದು ಚಾಲಕ ವೃತ್ತಿಯಲ್ಲಿದ್ದ ರೆಹಮಾತ್ ಅಲಿ ಹೇಳಿದ್ದಾರೆ.

ಇನ್ನೂ ಹೈದರಾಬಾದ್‌ನ ಚಂದ್ರಯಾನಗುತ್ತ ನಿವಾಸಿಗಳು ತೆಲಂಗಾಣ ಸಿಎಂ ಕೆಸಿಆರ್‌ ಸರ್ಕಾರದ ಶಾದಿ ಮುಬಾರಕ್ ಯೋಜನೆ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಈ ಯೋಜನೆಯಡಿ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡುವ ಆಲೋಚನೆಯಲ್ಲಿದ್ದಾರೆ. 18 ವರ್ಷ ಮೇಲ್ಪಟ್ಟ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ 1 ಲಕ್ಷ ರೂಪಾಯಿ ಹಣಕಾಸು ನೆರವು ನೀಡುವ ಯೋಜನೆಯನ್ನು ಕೆಸಿಆರ್ ಜಾರಿಗೊಳಿಸಿದ್ದಾರೆ. ಕುಟುಂಬಗಳು ಈಗ ಮದುವೆ ಮಾಡುತ್ತಿವೆ. ಬಳಿಕ ಶಾದಿ ಮುಬಾರಕ್ ಯೋಜನೆಯಡಿ ಹಣಕಾಸಿನ ನೆರವಿಗೆ ಅರ್ಜಿ ಸಲ್ಲಿಸುತ್ತಿವೆ. ಹಣಕಾಸು ನೆರವು ಸರ್ಕಾರದಿಂದ ಸಿಕ್ಕ ಬಳಿಕ ವಿದಾಯಿ ನೀಡಿ ಗಂಡನ ಮನೆಗೆ ಹೆಣ್ಣು ಮಕ್ಕಳನ್ನು ಕಳಿಸುತ್ತಿದ್ದಾರೆ ಎಂದು ಫಿರೋಜ್ ಖಾನ್ ಎಂಬುವವರು ಹೇಳಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ 40 ಮದುವೆಗಳು ನಡೆಯಲಿವೆ ಎಂದು ಫಿರೋಜ್ ಖಾನ್ ಮಾಹಿತಿ ನೀಡಿದ್ದಾರೆ.

ಇನ್ನೂ ಮುಸ್ಲಿಂ ಧರ್ಮದ ಮುಖಂಡರು, ಧರ್ಮಗುರುಗಳು ವಿವಾಹ ವಯಸ್ಸಿನ ಮಿತಿಯನ್ನು 21ವರ್ಷಕ್ಕೆ ಏರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸಿದಂತೆ ಆಗುತ್ತೆ. ಹುಡುಗಿಯರು ಕನ್ಯೆಯರಾದ ಮೇಲೆ ಮದುವೆ ಮಾಡುವ ಸಂಪ್ರದಾಯ ಇದೆ. ವಿವಾಹ ವಯಸ್ಸಿನ ಮಿತಿ ಏರಿಸಿ ಕಾಯಿದೆ ಜಾರಿಗೆ ತರುವುದರಿಂದ ಹೆಣ್ಣು ಮಕ್ಕಳ ಭದ್ರತೆ, ಸುರಕ್ಷತೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಮುಸ್ಲಿಂ ಧರ್ಮ ಗುರು ಮೌಲಾನಾ ಜಾಫರ್ ಪಾಷಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮದುವೆ ವಯಸ್ಸು 21ಕ್ಕೆ ಏರಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ; ವಿಪಕ್ಷಗಳಿಂದ ಆಕ್ಷೇಪ

ಮಹಿಳೆಯರ ಮದುವೆ ವಯಸ್ಸಿನ ಮಿತಿ 21ವರ್ಷಕ್ಕೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ

Follow us on

Related Stories

Most Read Stories

Click on your DTH Provider to Add TV9 Kannada