Amit Shah: ಅಮಿತ್ ಶಾರನ್ನೇ ಕೇಂದ್ರ ಸಹಕಾರ ಮಂತ್ರಿ ಮಾಡಿದ್ದೇಕೆ? ಸಹಕಾರ ಸಚಿವರಾಗಿ ಅಮಿತ್ ಶಾ ಟಾರ್ಗೆಟ್ ಏನು?
ಈ ಬಾರಿಯ ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೂ ಮುನ್ನ ಕೇಂದ್ರ ಸರ್ಕಾರದಲ್ಲಿ ಹೊಸದಾಗಿ ಸಹಕಾರ ಇಲಾಖೆಯನ್ನು ಸೃಷ್ಟಿಸಲಾಗಿದೆ. ಕೇಂದ್ರದ ಹೊಸ ಸಹಕಾರ ಇಲಾಖೆಗೆ ಸಚಿವರನ್ನಾಗಿ ಗೃಹ ಸಚಿವ ಅಮಿತ್ ಶಾರನ್ನೇ ನೇಮಿಸಲಾಗಿದೆ.
ದೆಹಲಿ: ಕೇಂದ್ರದಲ್ಲಿ ಹೊಸದಾಗಿ ಸಹಕಾರ ಇಲಾಖೆಯನ್ನು ಸೃಷ್ಟಿ ಮಾಡಿ, ಅದರ ಸಚಿವ ಸ್ಥಾನವನ್ನು ಅಮಿತ್ ಶಾಗೆ ನೀಡಲಾಗಿದೆ. ಅಮಿತ್ ಶಾ ಅವರನ್ನೇ ಕೇಂದ್ರದ ಸಹಕಾರ ಇಲಾಖೆಯ ಸಚಿವರನ್ನಾಗಿ ಮಾಡಿರುವುದರ ಹಿಂದೆಯೂ ರಾಜಕೀಯ ಕಾರಣಗಳಿವೆ. ಗುಜರಾತ್‌ನಲ್ಲಿ ಅಮಿತ್ ಶಾ ಸಹಕಾರ ರಂಗವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗ ಸಹಕಾರ ರಂಗದ ಮೂಲಕ ದೇಶದ ರಾಜಕೀಯ ರಂಗದ ಮೇಲೆ ಪ್ರಭಾವ ಬೀರುವ ಕಸರತ್ತುನ್ನು ಅಮಿತ್ ಶಾ ನಡೆಸುವ ನಿರೀಕ್ಷೆ ಇದೆ. ಕೇಂದ್ರದಲ್ಲಿ ಸಹಕಾರ ಇಲಾಖೆ ಸೃಷ್ಟಿಸಿರುವುದಕ್ಕೆ ಕೇರಳ ಕಾಂಗ್ರೆಸ್ ಘಟಕ ತೀವ್ರವಾಗಿ ವಿರೋಧಿಸುತ್ತಿದೆ. ಆದರೆ, ಅಮಿತ್ ಶಾ ಗುರಿ ಬೇರೆಯೇ ಇದೆ.
ಈ ಬಾರಿಯ ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೂ ಮುನ್ನ ಕೇಂದ್ರ ಸರ್ಕಾರದಲ್ಲಿ ಹೊಸದಾಗಿ ಸಹಕಾರ ಇಲಾಖೆಯನ್ನು ಸೃಷ್ಟಿಸಲಾಗಿದೆ. ಕೇಂದ್ರದ ಹೊಸ ಸಹಕಾರ ಇಲಾಖೆಗೆ ಸಚಿವರನ್ನಾಗಿ ಗೃಹ ಸಚಿವ ಅಮಿತ್ ಶಾರನ್ನೇ ನೇಮಿಸಲಾಗಿದೆ. ಇದರ ಹಿಂದೆ ರಾಜಕೀಯ ಕಾರಣಗಳೂ ಇವೆ. ಮುಖ್ಯವಾಗಿ ಸಹಕಾರ ಸೊಸೈಟಿಗಳ ವಿಷಯ ಕೇಂದ್ರ ಪಟ್ಟಿಯಲ್ಲಿ ಬರುವುದಿಲ್ಲ. ಸಹಕಾರ ವಿಷಯವು ರಾಜ್ಯ ಪಟ್ಟಿಯಲ್ಲಿ ಬರುವ ವಿಷಯ. ಹೀಗಾಗಿ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಸೃಷ್ಟಿ ಮಾಡಿರುವುದೇ ಸರಿಯಲ್ಲ ಎಂದು ಕೇರಳದ ಕಾಂಗ್ರೆಸ್, ಎಡಪಕ್ಷಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ. ಸಹಕಾರ ಇಲಾಖೆಯನ್ನು ಸೃಷ್ಟಿಸಿ, ಅದರ ಹೊಣೆಯನ್ನು ಅಮಿತ್ ಶಾಗೆ ವಹಿಸಿರುವುದು ದೇಶದ ಸಹಕಾರ, ರಾಜಕೀಯ ವಲಯದಲ್ಲಿ ಅನೇಕರ ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ, ಅಮಿತ್ ಶಾ ಗುಜರಾತ್‌ನ ಸಹಕಾರ ರಂಗದಲ್ಲಿ ಈಗಾಗಲೇ ನಿರ್ವಹಿಸಿರುವ ಪಾತ್ರ ಪ್ರಮುಖ ಕಾರಣ.
ಅಮಿತ್ ಶಾ ಸಹಕಾರ ರಂಗಕ್ಕೆ ಹೊಸಬರಲ್ಲ. ದೇಶದಲ್ಲಿ ಸಹಕಾರ ರಂಗ ಪ್ರಬಲವಾಗಿರುವುದು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ. ಈ ರಾಜ್ಯಗಳಲ್ಲಿ ಸಹಕಾರ ಚಳವಳಿಗೆ ಅನೇಕ ನಾಯಕರ ಕೊಡುಗೆಯೂ ಇದೆ. ಗುಜರಾತ್ ನಲ್ಲಿ ಅಮಿತ್ ಶಾ ಮೊದಲಿಗೆ ಸಹಕಾರ ರಂಗದ ಮೂಲಕವೇ ಸಾರ್ವಜನಿಕ ಬದುಕುನ್ನು ಪ್ರವೇಶ ಮಾಡಿದ್ದಾರೆ. ಸಹಕಾರ ರಂಗವೇ ಅಮಿತ್ ಶಾಗೆ ಅನೇಕ ರಾಜಕೀಯ ಕಾರ್ಯತಂತ್ರವನ್ನು ಕಲಿಸಿಕೊಟ್ಟಿದೆ. ಜೊತೆಗೆ ಸಹಕಾರ ರಂಗದ ಬಲ, ಪ್ರಭಾವ ಎಂಥದ್ದು ಎನ್ನುವುದು ಅಮಿತ್ ಶಾಗೆ ರಾಜಕೀಯ ಪ್ರವೇಶಕ್ಕೂ ಮುನ್ನವೇ ಅರ್ಥವಾಗಿದೆ.
ಅಮಿತ್ ಶಾ ತಮ್ಮ 36ನೇ ವಯಸ್ಸಿಗೆ ಗುಜರಾತ್‌ನ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಚುನಾವಣೆ ಮೂಲಕ ಆಯ್ಕೆಯಾಗಿದ್ದರು. 90ರ ದಶಕದ ಮಧ್ಯಭಾಗದಲ್ಲಿ ಅತಿ ಕಿರಿಯ ವಯಸ್ಸಿಗೆ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೀರ್ತಿ ಅಮಿತ್ ಶಾಗೆ ಇದೆ. ಆಗ ಘನಶ್ಯಾಮ್ ಅಮೀನ್ ಎಂಬುವವರನ್ನು ಸೋಲಿಸಿ ಅಮಿತ್ ಶಾ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದರು. ಘನಶ್ಯಾಮ್ ಅಮೀನ್, ಮಾಜಿ ಮುಖ್ಯಮಂತ್ರಿ ಚಿಮ್ಮನ್ ಭಾಯಿ ಪಟೇಲ್ ಅವರ ಆಪ್ತರಾಗಿದ್ದ ನರಹರಿ ಅಮೀನ್ ಅವರ ಹಿರಿಯ ಅಣ್ಣ. ಇಂಥ ಘಟಾನುಘಟಿಯನ್ನೇ ಮಣಿಸಿ ಆಯ್ಕೆಯಾದ ಅಮಿತ್ ಶಾಗೆ ಸವಾಲುಗಳು ಇದ್ದವು.
ಆಗ ಮಾಧವಪುರ ಮಾರ್ಕಟೈಲ್ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿತ್ತು. ಮಾಧವಪುರ ಮಾರ್ಕಟೈಲ್ ಬ್ಯಾಂಕ್ ಮುಚ್ಚಿ ಹೋಗಿದ್ದರೇ, ಗುಜರಾತ್ ನ ನಗರ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಬಾರಿ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಆದರೆ, ಅಮಿತ್ ಶಾ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಬಾರಿ ಗುಜರಾತ್ ನಿಂದ ದೆಹಲಿಗೆ ಹೋಗಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಹಣಕಾಸು ಸಚಿವ ಯಶವಂತ್ ಸಿನ್ಹಾರನ್ನು ಭೇಟಿಯಾಗಿ ಕೆಲ ನೀತಿಗಳನ್ನು ಬದಲಾವಣೆ ಮಾಡುವಂತೆ ಮನವೊಲಿಸಿದರು. ಈ ಮೂಲಕ ಮಾಧವಪುರ ಮಾರ್ಕಟೈಲ್ ಬ್ಯಾಂಕ್ ಅನ್ನು ಉಳಿಸುವ ಕೆಲಸವನ್ನು ಅಮಿತ್ ಶಾ ಮಾಡಿದ್ದರು ಎಂದು ಗುಜರಾತ್ ಬಿಜೆಪಿ ವಕ್ತಾರ ಯಮಾಲ್ ವ್ಯಾಸ್ ಹೇಳ್ತಾರೆ.
ಅಮಿತ್ ಶಾ ಸಹಕಾರ ರಂಗದಲ್ಲಿ ಕಾರ್ಯನಿರ್ವಹಿಸುತ್ತಾ, ಅದರ ಮೂಲಕ ರಾಜಕೀಯವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರ ಮೇಲೆ ಹೇಗೆ ಪ್ರಭಾವ ಬೀರಬಹುದು ಹಾಗೂ ಜನರನ್ನು ಹೇಗೆ ತಮ್ಮ ವಿಶ್ವಾಸಕ್ಕೆ ಪಡೆಯಬಹುದು ಎಂಬುದನ್ನು ಬೇಗ ಅರ್ಥ ಮಾಡಿಕೊಂಡಿದ್ದರು. ಸಹಕಾರ ಬ್ಯಾಂಕ್‌ಗಳ ಮೂಲಕ ಜನರಿಗೆ ಸಾಲ ನೀಡುವುದರಿಂದ ಜನರು ಬ್ಯಾಂಕ್ ಸಂಪರ್ಕಕ್ಕೆ ಬರುತ್ತಾರೆ. ಹೀಗಾಗಿ ಸಹಕಾರ ಬ್ಯಾಂಕ್ ಯಾರ ನಿಯಂತ್ರಣದಲ್ಲಿ ಇರುತ್ತೋ ಅಂಥವರು, ಜನರನ್ನು ವಿಶ್ವಾಸಕ್ಕೆ ಪಡೆದು ರಾಜಕೀಯವಾಗಿ ಪ್ರಭಾವ ಬೀರಲು ಸಾಧ್ಯವಾಗುತ್ತೆ. ಬ್ಯಾಂಕ್ ನಿಂದ ಹಣ ಸಾಲ ನೀಡಿದವರ ಪರ ಜನರು ಕೂಡ ಚುನಾವಣೆಗಳಲ್ಲಿ ಜೈ ಅಂತ ವೋಟ್ ಹಾಕ್ತಾರೆ. ಹೀಗಾಗಿ ಸಹಕಾರ ರಂಗವನ್ನು ತಮ್ಮ ತೆಕ್ಕೆಗೆ ಪಡೆದರೆ, ಅದರ ಮೂಲಕ ರಾಜಕೀಯ ಅಧಿಕಾರವನ್ನ ಪಡೆಯುವುದು ಸುಲಭ ಅಂತ ಅಮಿತ್ ಶಾಗೆ ಬೇಗನೇ ಅರ್ಥ ಆಗಿತ್ತು.
2002 ರಲ್ಲಿ ನರೇಂದ್ರಮೋದಿ ಗುಜರಾತ್ ಸಿಎಂ ಆದ ಬಳಿಕ ಅಮಿತ್ ಶಾ ಗುಜರಾತ್ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗ್ತಾರೆ. ಆಗ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನು ಅಜಯ್ ಪಟೇಲ್ ಅವರಿಗೆ ಬಿಟ್ಟುಕೊಟ್ಟರು. ಆದರೆ, ಸಹಕಾರ ರಂಗದ ಸಂಪರ್ಕವನ್ನು ಅಮಿತ್ ಶಾ ಕಳೆದುಕೊಳ್ಳಲಿಲ್ಲ. ಕಾಂಗ್ರೆಸ್ ನಾಯಕರ ನಿಯಂತ್ರಣದಲ್ಲಿದ್ದ ಬೇರೆ ಜಿಲ್ಲಾ ಸಹಕಾರ ಬ್ಯಾಂಕ್ ಗಳತ್ತ ಅಮಿತ್ ಶಾ ಕಣ್ಣು ಹಾಯಿಸಿದರು. ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ನಾಯಕರ ನಿಯಂತ್ರಣದಲ್ಲಿದ್ದ ಜಿಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಬಿಜೆಪಿಯ ನಾಯಕರು ಅಧ್ಯಕ್ಷರಾಗಿ ಪ್ರತಿಷ್ಠಾಪನೆಯಾಗುವಂತೆ ಮಾಡಿದ್ದರು.
ಸಹಕಾರ ಬ್ಯಾಂಕ್ ಮೂಲಕ ರಾಜಕೀಯವಾಗಿ ಜನರ ಮೇಲೆ ಪ್ರಭಾವ ಮತ್ತು ನಿಯಂತ್ರಣ ಸಾಧಿಸಬಹುದು ಎಂಬುದು ಮನವರಿಕೆ ಆಗುತ್ತಿದ್ದಂತೆ, ಅಮಿತ್ ಶಾ, ಹಾಲಿನ ಡೈರಿ ರಂಗದತ್ತ ಗಮನ ಹರಿಸಿದರು. 2006ರ ವೇಳೆಗೆ ದೇಶದಲ್ಲಿ ಕ್ಷೀರಕ್ರಾಂತಿಗೆ ಕಾರಣವಾದ ಕುರಿಯನ್ ವರ್ಗೀಸ್, ಗುಜರಾತ್ ಕೋ ಅಪರೇಟೀವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ಗೆ ರಾಜೀನಾಮೆ ನೀಡಿದರು. ಇದಾಗುತ್ತಿದ್ದಂತೆ, ಬಿಜೆಪಿಯ ಪಾರ್ಥಿ ಭಟೋಲ್ ಅಧ್ಯಕ್ಷರಾದರು.
ಉತ್ತರ ಗುಜರಾತ್ ಡೈರಿ ಮೂಲಕ ಬಿಜೆಪಿ ಹಿಡಿತಕ್ಕೆ ಗುಜರಾತ್‌ನಲ್ಲಿ ಡೈರಿ ಸಹಕಾರ ರಂಗಕ್ಕೆ ಬಿಜೆಪಿ ಎಂಟ್ರಿಯಾಗಿದ್ದು, ಉತ್ತರ ಗುಜರಾತ್‌ನಲ್ಲಿ ಬಿಜೆಪಿಗೆ ರಾಜಕೀಯವಾಗಿ ಲಾಭ ತಂದುಕೊಟ್ಟಿತ್ತು. ಉತ್ತರ ಗುಜರಾತ್ ಸಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಅಲ್ಲಿ ಬಿಜೆಪಿ ನೆಲೆಯೂರಲು ಹಾಗೂ ಅಧಿಕಾರದ ಗದ್ದುಗೆ ಹಿಡಿಯಲು ಡೈರಿ ಸಹಕಾರ ರಂಗವನ್ನ ಬಿಜೆಪಿ ಹಿಡಿತಕ್ಕೆ ತೆಗೆದುಕೊಂಡಿದ್ದು ಸಹಾಯ ಮಾಡಿತ್ತು. ಗುಜರಾತ್‌ನ ಸಹಕಾರ ರಂಗದಲ್ಲಿ ಕಲಿತ ಪಾಠಗಳನ್ನೇ ಅಮಿತ್ ಶಾ, 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಳಸಿದರು. ಗುಜರಾತ್ ನಲ್ಲಿ ಬಳಸಿದ ತಂತ್ರಗಳನ್ನೇ ಉತ್ತರ ಪ್ರದೇಶದಲ್ಲಿ ಬಳಸಿದರು ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರು ಹೇಳುತ್ತಾರೆ.
ಆ ತಂತ್ರಗಳನ್ನೇ ಬಳಸಿ ಉತ್ತರ ಪ್ರದೇಶದಲ್ಲಿ ಬಿಜೆಪಿ 80 ಲೋಕಸಭಾ ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದನ್ನು ಯಾರೂ ಮರೆತಿಲ್ಲ. ಇವೆಲ್ಲವನ್ನೂ ಪರಾಮರ್ಶೆ ಮಾಡಿದ ಬಳಿಕ ಅಮಿತ್ ಶಾರನ್ನು ಸಹಕಾರ ಇಲಾಖೆಯ ಮಂತ್ರಿ ಮಾಡಿದ್ದೇಕೆ ಎಂಬ ಪ್ರಶ್ನೆಗೆ ವಿಪಕ್ಷಗಳ ನಾಯಕರಿಗೂ ಉತ್ತರ ಸಿಕ್ಕಿದೆ.
ಮಹಾರಾಷ್ಟ್ರ, ಕೇರಳದಲ್ಲಿ ಗದ್ದುಗೆಗೆ ಶಾ ಪ್ಲ್ಯಾನ್? ಈಗ ಅಮಿತ್ ಶಾ ಕೇಂದ್ರ ಸಹಕಾರ ಮಂತ್ರಿ. ಅಮಿತ್ ಶಾ ಟಾರ್ಗೆಟ್ ಈಗ ಮಹಾರಾಷ್ಟ್ರ ಮತ್ತು ಕೇರಳ. ಸಹಕಾರ ರಂಗದಲ್ಲಿ ಅಮಿತ್ ಶಾ ಹೊಂದಿರುವ ಅನುಭವ, ಬಳಸಿದ ತಂತ್ರಗಳು ಮಹಾರಾಷ್ಟ್ರ ಹಾಗೂ ಉಳಿದ ರಾಜ್ಯಗಳಲ್ಲಿ ಬಿಜೆಪಿ ಪಾಲಿಗೆ ಗೇಮ್ ಚೇಂಜರ್ ಆಗಲಿವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಅಮಿತ್ ಶಾ ಬಯಸಿದ್ದರು. ಶಿವಸೇನೆ ಕೈ ಕೊಟ್ಟಾಗ ಎನ್‌ಸಿಪಿ ಬೆಂಬಲ ಪಡೆದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಅಮಿತ್ ಶಾ ಬಯಸಿದ್ದರು. ಆದರೆ, ಇದಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಒಪ್ಪಲಿಲ್ಲ. ಮಹಾರಾಷ್ಟ್ರದಲ್ಲಿ ಸಹಕಾರ ರಂಗದ ಮೇಲೆ ಶರದ್ ಪವಾರ್ ಹಾಗೂ ಎನ್‌ಸಿಪಿ ನಾಯಕರ ಹಿಡಿತ ಇದೆ. ಈಗ ಅಮಿತ್ ಶಾ ಕೇಂದ್ರ ಸಹಕಾರ ಮಂತ್ರಿಯಾಗಿ ಮಹಾರಾಷ್ಟ್ರದಲ್ಲಿ ಸಹಕಾರ ರಂಗವನ್ನು ಬಿಜೆಪಿ ನಾಯಕರ ಹಿಡಿತಕ್ಕೆ ಬರುವಂತೆ ಯತ್ನಿಸಬಹುದು.
ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮಹಾರಾಷ್ಟ್ರ ರಾಜಕೀಯ ರಂಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗುವಂತೆ ಮಾಡುವ ಪ್ಲ್ಯಾನ್ ಅಮಿತ್ ಶಾಗೆ ಇದೆ. ಮಹಾರಾಷ್ಟ್ರ ಮಾತ್ರವಲ್ಲ, ಕೇರಳ, ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಪಕ್ಷದ ಬಲವರ್ಧನೆಗೆ ಸಹಕಾರ ರಂಗವನ್ನ ಅಮಿತ್ ಶಾ ಬಳಕೆ ಮಾಡಿಕೊಳ್ಳಬಹುದು ಎಂಬ ಭೀತಿ ವಿಪಕ್ಷಗಳಿಗೆ ಇದೆ. ಕರ್ನಾಟಕದಲ್ಲಿ ಈಗ ಅಪೆಕ್ಸ್ ಬ್ಯಾಂಕ್ ಬಿಜೆಪಿ ನಾಯಕರ ತೆಕ್ಕೆಯಲ್ಲೇ ಇದೆ. ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಈ ಅಪೆಕ್ಸ್ ಬ್ಯಾಂಕ್ ಅಧೀನದಲ್ಲೇ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಗಳು ಇವೆ. ಇನ್ನೂ ಹಾಲಿನ ಸಹಕಾರ ಕ್ಷೇತ್ರವಾದ ಕೆಎಂಎಫ್ ಕೂಡ ಬಿಜೆಪಿ ನಾಯಕರ ತೆಕ್ಕೆಯಲ್ಲೇ ಇದೆ. ಬೆಳಗಾವಿಯ ಅರಭಾವಿ ಬಿಜೆಪಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ.
ಕಾಂಗ್ರೆಸ್, ಎಡಪಕ್ಷದ ವಿರೋಧ ಕೇಂದ್ರ ಸರ್ಕಾರವು ಸಹಕಾರ ಇಲಾಖೆಯನ್ನು ಸೃಷ್ಟಿಸಿರುವುದಕ್ಕೆ ಕೇರಳದ ಕಾಂಗ್ರೆಸ್ ನಾಯಕರು, ಎಡಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧ ಎಂದು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳನ್ನು ಲೂಟಿ ಮಾಡಿದ ಬಳಿಕ ಸಹಕಾರ ಬ್ಯಾಂಕ್‌ಗಳಲ್ಲಿ ಜನರು ಇಟ್ಟಿರುವ ಠೇವಣಿ ಹಣವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಸೀತಾರಾಮ ಯೆಚೂರಿ ಹೇಳಿದ್ದಾರೆ. ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಾಲ ಮೊದಲಿಗೆ ಕೇಂದ್ರ ಸರ್ಕಾರ ಸಹಕಾರ ಇಲಾಖೆ ಸ್ಥಾಪಿಸಿದ್ದಕ್ಕೆ ಆಕ್ಷೇಪ ಎತ್ತಿದ್ದಾರೆ. ತಮ್ಮ ಪಕ್ಷದ ಹೈಕಮ್ಯಾಂಡ್ ನಾಯಕರು ಕೂಡ ಇದರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ದನಿ ಎತ್ತಬೇಕೆಂದು ಆಗ್ರಹಿಸಿದ್ದಾರೆ. ಸಹಕಾರ ರಂಗದಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುವ ಆಯ್ಕೆ ಬಗ್ಗೆ ಪರಿಶೀಲನೆ ನಡೆಸಬೇಕೇಂದು ರಮೇಶ್ ಚೆನ್ನಿತ್ತಾಲ ಹೇಳಿದ್ದಾರೆ. ಕೇಂದ್ರ ಸರ್ಕಾರ ಸಹಕಾರ ಇಲಾಖೆ ಸೃಷ್ಟಿಸಿರುವ ಬಗ್ಗೆ ಚರ್ಚೆಗೆ ಕೇರಳದಲ್ಲಿ ಸದ್ಯದಲ್ಲೇ ಸರ್ವ ಪಕ್ಷ ಸಭೆಯನ್ನು ಕರೆಯುವ ಸಾಧ್ಯತೆ ಇದೆ.
ಈಗಾಗಲೇ ರಾಜಕಾರಣಿಗಳ ಎಂಟ್ರಿಗೆ ನಿರ್ಬಂಧ ಕಳೆದ ತಿಂಗಳ 26 ರಂದು ಟೌನ್ ಕೋ ಅಪರೇಟಿವ್ ಬ್ಯಾಂಕ್ ಗಳ ಸಿಇಓ ಮತ್ತು ನಿರ್ದೇಶಕರಾಗಿ ಸ್ನಾತಕೋತ್ತರ ಪದವಿಧರರು, ಎಂಬಿಎ ಪದವಿಧರರು, ಬ್ಯಾಂಕಿಂಗ್ ವಿಷಯದಲ್ಲಿ ಡಿಪ್ಲೋಮಾ ಪಡೆದವರು ನೇಮಕ, ಆಯ್ಕೆಯಾಗಬೇಕೆಂದು ಆರ್‌ಬಿಐ ಆದೇಶ ಮಾಡಿದೆ. ಎಂಪಿ, ಎಂಎಲ್ಎ ಕಾರ್ಪೋರೇಟರ್ ಗಳು ವ್ಯವಸ್ಥಾಪಕ ನಿರ್ದೇಶಕರು, ಜೀವಿತಾವಧಿ ನಿರ್ದೇಶಕರಾಗದಂತೆ ಆರ್‌ಬಿಐ ಆದೇಶದ ಮೂಲಕ ನಿರ್ಬಂಧ ವಿಧಿಸಲಾಗಿದೆ ಈ ಮೂಲಕ ರಾಜಕಾರಣಿಗಳನ್ನು ಟೌನ್ ಕೋ ಅಪರೇಟಿವ್ ಸೊಸೈಟಿಗಳಿಂದ ದೂರವಿಡುವ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗುವವರು 35 ವರ್ಷಕ್ಕಿಂತ ಕೆಳಗಿರಬಾರದು, 70 ವರ್ಷಕ್ಕಿಂತ ಜಾಸ್ತಿ ಇರಬಾರದೆಂದು ನಿರ್ಬಂಧ ವಿಧಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು, ಜೀವಿತಾವಧಿ ನಿರ್ದೇಶಕರು 15 ವರ್ಷಕ್ಕಿಂತ ಹೆಚ್ಚಿನ ಕಾಲ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ. ಮತ್ತೆ ಆಯ್ಕೆಯಾಗಬೇಕೆಂದರೇ, 3 ವರ್ಷ ಕೂಲಿಂಗ್ ಸಮಯ ಇರಬೇಕು ಎಂದು ಆರ್‌ಬಿಐ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಅಧಿಕಾರ ಕಳೆದುಕೊಂಡ ಮೇಲೂ ನಾನೆಷ್ಟು ಪುಣ್ಯವಂತ ಅನಿಸುತ್ತಿದೆ: ಮಾಜಿ ಕೇಂದ್ರ ಸಚಿವ ಸದಾನಂದಗೌಡ
Published On - 7:28 pm, Sat, 10 July 21