ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ರೈಲು ದರೋಡೆ ನಡೆಸಿದ ಅಶ್ಫಾಕ್ ಉಲ್ಲಾ ಖಾನ್ ತಮ್ಮ ಪ್ರಾಣ ಸ್ನೇಹಿತನೊಂದಿಗೆ ಗಲ್ಲಿಗೇರಿದರು!
ಕುಟುಂಬದಲ್ಲಿ ಎಲ್ಲರಿಗಿಂತ ಅಶ್ಫಾಕ್ ಬಾಲ್ಯದಿಂದಲೇ ಕವನ ರಚಿಸುವ ಗೀಳು ಹಚ್ಚಿಕೊಂಡಿದ್ದರು. ದೇಶಭಕ್ತಿಯ ತಿರುಳು ಅವರ ಕವನಗಳಲ್ಲಿ ಪದೇಪದೆ ವ್ಯಕ್ತವಾಗುತಿತ್ತು.
Azadi Ka Amrit Mahotsav | ಇನ್ನಾದರೂ ಪಣತೊಡೋಣ, ಏನನ್ನಾದರೂ ಮಾಡಿ ತೋರಿಸುವ ಗುರಿ ಇಟ್ಟುಕೊಳ್ಳೋಣ; ಸ್ವತಂತ್ರರಾಗಿ ಬದುಕುವ, ಇಲ್ಲವೇ ನಮ್ಮ ತಲೆಗಳನ್ನು ಕತ್ತರಿಸಿಕೊಂಡು ಬಿಡುವ!’ ಅಶ್ಫಾಕ್ ಉಲ್ಲಾಖಾನ್ರ ಕವಿತೆ ಅವರಲ್ಲಿ ಹುದುಗಿದ್ದ ದೇಶಪ್ರೇಮ ಮತ್ತು ದೇಶವನ್ನು ಸ್ವತಂತ್ರಗೊಳಿಸಿಕೊಳ್ಳುವ ಅವರ ಕನಸಿನ ಬಗ್ಗೆ ಹೇಳುತ್ತದೆ. ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡ ಬಳಿಕ ಅಸಮಾಧಾನಗೊಂಡ ಸಾವಿರಾರು ಯುವಕರಲ್ಲಿ ಅಶ್ಫಾಕ್ ಕೂಡ ಒಬ್ಬರಾಗಿದ್ದರು ಬರಿ ಬಾಯಿ ಮಾತಿಂದ ಕೇಳಿದರೆ ಸ್ವಾತಂತ್ರ್ಯ ಪಡೆದುಕೊಳ್ಳಲಾಗದು ಅಂತ ಈ ಯುವಕರು ಬಲವಾಗಿ ನಂಬಿದ್ದರು… ಅದಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಅಂತ ಅವರಿಗೆ ಮನವರಿಕೆಯಾಗಿತ್ತು.
ಅಶ್ಫಾಕ್ ಅವರು ರಾಮ್ ಪ್ರಸಾದ್ ಬಿಸ್ಮಿಲ್ ರೊಂದಿಗೆ ಗಾಢವಾದ ಸ್ನೇಹ ಹೊಂದಿದ್ದರು. ಸಶಸ್ತ್ರ ಕ್ರಾಂತಿ ನಡೆಯುವ ಮೊದಲು ಇಬ್ಬರೂ ಒಟ್ಟಿಗೆ ಮುಷೈರಾಗಳಿಗೆ ಹೋಗುತ್ತಿದ್ದರು. ಸ್ವಾತಂತ್ರ್ಯದ ಕಹಳೆ ಊದಿದ ನಂತರ, ಕಾಕೋರಿ ರೈಲು ದರೋಡೆ ಪ್ರಕರಣದ ಪ್ರಮುಖ ಸಂಚುಕೋರರಲ್ಲಿ ಇವರಿಬ್ಬರ ಹೆಸರುಗಳು ಉಳಿದವರಿಗಿಂತ ಮುಂಚೆ ದಾಖಲಾಗಿದ್ದವು. Tv9 ಆಜಾದಿ ಕಾ ಅಮೃತ್ ಮಹೋತ್ಸವ ವಿಶೇಷ ಸರಣಿಯಲ್ಲಿ, ಇಂದು ನಾವು ನಿಮಗೆ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕ್ ಉಲ್ಲಾ ಖಾನ್ ಬಗ್ಗೆ ಹೇಳಲಿದ್ದೇವೆ.
ಅಶ್ಫಾಕ್ ಜನಿಸಿದ್ದು ಮುಸ್ಲಿಂ ಪಠಾಣ್ ಕುಟುಂಬದಲ್ಲಿ!
ಅಶ್ಫಾಕ್ ಉಲ್ಲಾ ಖಾನ್ 22 ಅಕ್ಟೋಬರ್, 1900 ರಂದು ಷಹಜಹಾನ್‌ಪುರದ ಮುಸ್ಲಿಂ ಪಠಾಣ್ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶಫಿಕುಲ್ಲಾ ಖಾನ್ ಮತ್ತು ತಾಯಿಯ ಹೆಸರು ಮಜರುನ್ನೀಸಾ. ಕುಟುಂಬದಲ್ಲಿ ಎಲ್ಲರಿಗಿಂತ ಅಶ್ಫಾಕ್ ಬಾಲ್ಯದಿಂದಲೇ ಕವನ ರಚಿಸುವ ಗೀಳು ಹಚ್ಚಿಕೊಂಡಿದ್ದರು. ದೇಶಭಕ್ತಿಯ ತಿರುಳು ಅವರ ಕವನಗಳಲ್ಲಿ ಪದೇಪದೆ ವ್ಯಕ್ತವಾಗುತಿತ್ತು.
ಅಶ್ಫಾಕ್ ಮೇಲೆ ರಾಮ್ ಪ್ರಸಾದ್ ಬಿಸ್ಮಿಲ್ ಗಾಢ ಪ್ರಭಾವ ಬೀರಿದ್ದರು!
ಅಶ್ಫಾಕ್ ಉಲ್ಲಾ ಖಾನ್ ಅವರ ಹಿರಿಯ ಸಹೋದರ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಸಹಪಾಠಿಯಾಗಿದ್ದರು. 1918 ರಲ್ಲಿ ಬಿಸ್ಮಿಲ್ ಮೈನ್‌ಪುರಿ ಪಿತೂರಿ ನಡೆಸಿದ್ದು, ಅಶ್ಫಾಕ್ ಉಲ್ಲಾ ಖಾನ್ ಮೇಲೆ ಭಾರೀ ಪ್ರಭಾವ ಬೀರಿತ್ತು. ಬಾಲ್ಯದಿಂದಲೇ ಅಶ್ಫಾಕ್ ತನ್ನ ಸಹೋದರನ ಮೂಲಕ ಬಿಸ್ಮಿಲ್ ಅವರ ಸಾಹಸ ಮತ್ತು ದೇಶಪ್ರೇಮ ಕಥೆಗಳನ್ನು ಕೇಳಿದ್ದರು. ಅವರು ಬಿಸ್ಮಿಲ್ ರನ್ನು ಭೇಟಿಯಾಗಲು ಪ್ರಯತ್ನ ಸಾಕಷ್ಟು ಬಾರಿ ಮಾಡಿದ್ದರೂ ಸಫಲರಾಗಿರಲಿಲ್ಲ. ಆದರೆ 1922ರಲ್ಲಿ ಅದ್ಹೇಗೋ ಅವರಿಗೆ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು ಭೇಟಿಯಾಗುವ ಅವಕಾಶ ಒದಗಿಬಂತು.
ಬಿಸ್ಮಿಲ್ ಎಚ್ ಆರ್ ಎ ಭಾಗವಾಗಿದ್ದರು!
ಅಶ್ಫಾಕ್ ಉಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಕೆಲವೇ ದಿನಗಳಲ್ಲಿ ಆತ್ಮೀಯ ಸ್ನೇಹಿತರಾದರು ಮತ್ತು ಅಶ್ಫಾಕ್ ರನ್ನು ಬಿಸ್ಮಿಲ್, ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಹೆಚ್ ಆರ್ ಎ) ಗೆ ಸೇರಿಸಿಕೊಂಡರು. 1924 ರಲ್ಲಿ ಬಿಸ್ಮಿಲ್ ಮತ್ತು ಇತರ ಕ್ರಾಂತಿಕಾರಿಗಳು ರಚಿಸಿದ ಈ ಸಂಘಟನೆಯ ಉದ್ದೇಶವು ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿ ನಡೆಸುವುದಾಗಿತ್ತು. ಚೌರಿ ಚೌರಾ ಘಟನೆಯ ನಂತರ 1922 ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದರು. ಇದು ಕ್ರಮೇಣ ಸ್ವಾತಂತ್ರ್ಯ ಚಳುವಳಿಗೆ ನಾಂದಿಯಾಯಿತು.
ಕಾಕೋರಿ ದರೋಡೆಯನ್ನು ಕಾರ್ಯರೂಪಕ್ಕಿಳಿಸಿದರು!
ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಮಹಾತ್ಮ ಗಾಂಧಿಯವರ ಅಹಿಂಸಾ ಚಳುವಳಿಗಳನ್ನು ವಿರೋಧಿಸುತಿತ್ತು. ಸಶಸ್ತ್ರ ಕ್ರಾಂತಿಗೆ ಆಯುಧಗಳು ಮತ್ತು ಶಸ್ತ್ರಾಸ್ತ್ರ ಕೊಳ್ಳಲು ಅವರಿಗೆ ಹಣದ ಅಗತ್ಯವಿತ್ತು. ಅಂಥ ಪರಿಸ್ಥಿತಿಯಲ್ಲಿ ಹೆಚ್ ಆರ್ ಎ ಕ್ರಾಂತಿಕಾರಿಗಳು ಕಾಕೋರಿ ರೈಲು ದರೋಡೆಗೆ ಯೋಜನೆ ರೂಪಿಸಿದರು. 1925 ರ ಆಗಸ್ಟ್ 8 ರಂದು, ಶಹಜಹಾನ್‌ಪುರದಲ್ಲಿ ಕ್ರಾಂತಿಕಾರಿಗಳ ಸಭೆ ನಡೆಯಿತು. ಇದರಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಷನ್ ಸಿಂಗ್, ಚಂದ್ರಶೇಖರ್ ಆಜಾದ್, ಅಶ್ಫಾಕ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಭಾಗಿಯಾಗಿದ್ದರು. ಅವರಿಗೆಲ್ಲ ರೈಲು ಲೂಟಿಯ ಸಂದರ್ಭದಲ್ಲಿ ನಿಭಾಯಿಸಬೇಕಿದ್ದ ಜವಾಬ್ದಾರಿಗಳನ್ನು ವಿವರಿಸಲಾಯಿತು. ಮರುದಿನವೇ ಕ್ರಾಂತಿಕಾರಿಗಳು ಶಹಜಹಾನ್‌ಪುರದಿಂದ ಲಕ್ನೋಗೆ ಹೊರಟಿದ್ದ ರೈಲು ಹತ್ತಿ ಕಾಕೋರಿ ಬಳಿ ಅದನ್ನು ದೋಚಿದರು.
ಸರ್ಕಾರೀ ಖಜಾನೆಯಲ್ಲಿ ಇದ್ದಿದ್ದು ರೂ. 4601 ಮತ್ತು ಕೆಲ ಆಣೆಗಳು
ಆಗಸ್ಟ್ 9, 1925 ರಂದು ಕ್ರಾಂತಿಕಾರಿಗಳು ರೈಲಿನಲ್ಲಿ ಲೂಟಿ ಮಾಡಿದ ಸರ್ಕಾರದ ಖಜಾನೆಯಲ್ಲಿ ರೂ 4601 ಮತ್ತು ಕೆಲ ಆಣೆಗಳಷ್ಟು ಹಣವಿತ್ತು. ಕಾಕೋರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇಂದಿಗೂ ಈ ಮೊತ್ತದ ಉಲ್ಲೇಖವಿದೆ. ದರೋಡೆ ನಡೆದು ಬಹಳ ಸಮಯದವರೆಗೆ, ಬ್ರಿಟಿಷರಿಗೆ ಕ್ರಾಂತಿಕಾರಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ತನಿಖೆಯನ್ನು ಜಾರಿಯಲ್ಲಿಡಲಾಯಿತು ಮತ್ತು ಕ್ರಮೇಣ ದರೋಡೆಯ ಬಗ್ಗೆ ಕೆಲ ಸುಳಿವು ಸಿಗಲಾರಂಭಿಸಿದ್ದವು.
ಮೊದಲಿಗೆ ಬಿಸ್ಮಿಲ್ ಸೆರೆಸಿಕ್ಕರು, ಅಶ್ಫಾಕ್ ಮೋಸಹೋದರು
ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (HRA) ಮುಖ್ಯಸ್ಥ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು 26 ಅಕ್ಟೋಬರ್, 1925 ರಂದು ಪೊಲೀಸರು ಬಂಧಿಸಿದರು. ಅವರ ಬಂಧನ ವಿಷಯ ತಿಳಿಯುತ್ತಿದ್ದಂತೆಯೇ ಅಶ್ಫಾಕ್ ನೇಪಾಳಗೆ ಹೋಗಿ ಅಲ್ಲಿಂದ ಬನಾರಸ್ ಕಾನ್ಪುರ ಮಾರ್ಗವಾಗಿ ದೆಹಲಿಗೆ ಬಂದು ಹಳೆಯ ಪಠಾಣ್ ಗೆಳೆಯನೊಬ್ಬನ ಮನೆಯಲ್ಲಿ ಉಳಿದುಕೊಂಡರು. ಆದರೆ, ಆ ಸ್ನೇಹಿತನೇ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಮೋಸ ಮಾಡಿಬಿಟ್ಟ! 17 ಜುಲೈ 1926 ರಂದು, ಪೊಲೀಸರು ಅಶ್ಫಾಕ್ರನ್ನು ಬಂಧಿಸಿದರು.
ಪ್ರಾಣ ಸ್ನೇಹಿತರನ್ನು ಒಂದೇ ದಿನ ಗಲ್ಲಿಗೇರಿಸಲಾಯಿತು!
ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ರಾಜೇಂದ್ರ ಲಾಹಿರಿ ಮತ್ತು ಠಾಕೂರ್ ರೋಷನ್ ಸಿಂಗ್ ಅವರಿಗೆ ಮರಣದಂಡನೆ ಗುರಿ ಮಾಡಲಾಯಿತು. ಘಟನೆಯಲ್ಲಿ ಭಾಗಿಯಾದ್ದ ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಡಿಸೆಂಬರ್ 19, 1927 ರಂದು, ಬಿಸ್ಮಿಲ್ ಮತ್ತು ಅಶ್ಫಾಕ್ ಅವರನ್ನು ಒಂದೇ ದಿನ ಆದರೆ ಬೇರೆ ಬೇರೆ ಸ್ಥಳಗಳಲ್ಲಿ ಗಲ್ಲಿಗೇರಿಸಲಾಯಿತು. ಅಶ್ಫಾಕ್ ಉಲ್ಲಾ ಖಾನ್ ಫೈಜಾಬಾದ್ನಲ್ಲಿ (ಈಗಿನ ಅಯೋಧ್ಯೆ) ನೇಣುಗಂಬ ಏರಿದರೆ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು ಗೋರಖ್ ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.