ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್ ರೈಸ್: ಸಚಿವ ಪ್ರಲ್ಹಾದ್ ಜೋಶಿ ಘೋಷಣೆ
ಕರ್ನಾಟಕ ಸೇರಿದಂತೆ ಐದು ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಬೆಲೆ ಸ್ಥಿರತೆ ಹಾಗೂ ಪೂರೈಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೆಚ್ಚುವರಿ ಭಾರತ್ ರೈಸ್ ಹಂಚಿಕೆ ಮಾಡಿದೆ. ಜತೆಗೆ 2027ರ ಜನವರಿ 31ರವರೆಗೆ ಅಕ್ಕಿ ಮತ್ತು ಭತ್ತದ ದಾಸ್ತಾನು ಮಿತಿ ವಿಧಿಸಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ.

ಮುಖ್ಯಾಂಶಗಳು
- ಅಕ್ಕಿ ಮಾರಾಟ ಗುರಿ 50 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಳ
- 3 ತಿಂಗಳ ಕಾಲ ಅಕ್ಕಿ-ಭತ್ತ ದಾಸ್ತಾನು ಮಿತಿ ವಿಧಿಸಲು ರಾಜ್ಯಗಳಿಗೆ ಅನುಮತಿ
- ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ
ನವದೆಹಲಿ, ನವೆಂಬರ್ 7: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಅನ್ನು ಹೆಚ್ಚುವರಿ ಹಂಚಿಕೆ ಮಾಡಿದ್ದು, ಜತೆಗೆ ಮೂರು ತಿಂಗಳ ಕಾಲ ಅಕ್ಕಿ ಮತ್ತು ಭತ್ತದ ದಾಸ್ತಾನು ಮಿತಿ ವಿಧಿಸಲು ರಾಜ್ಯಗಳಿಗೆ ಅನುಮತಿ ಸಹ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಅಗತ್ಯವಿರುವ ಕಡೆ 2027ರ ಜನವರಿ 31ರ ವರೆಗೆ ಅಕ್ಕಿ ಮತ್ತು ಭತ್ತದ ಮೇಲೆ ದಾಸ್ತಾನು ಮಿತಿ ವಿಧಿಸಲು ದಕ್ಷಿಣದ 5 ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಆಹಾರ ಧಾನ್ಯಗಳ, ವಿಶೇಷವಾಗಿ ಅಕ್ಕಿ ಬೆಲೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇಶೀಯವಾಗಿ ಸಾಕಷ್ಟು ಪೂರೈಕೆ ಇರುವಿಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು, ಅಕ್ರಮ ದಾಸ್ತಾನು ತಡೆಯಲು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತ್ ರೈಸ್ ಹೆಚ್ಚುವರಿ ಹಂಚಿಕೆ
ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆ ಹೆಚ್ಚಿಸಲು NAFED, NCCF ಮತ್ತು ಕೇಂದ್ರೀಯ ಭಂಡಾರ್‌ಗೆ ‘ಭಾರತ್ ರೈಸ್’ ಅನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಸುಲಭವಾಗಿ ಭಾರತ್ ಅಕ್ಕಿ ಕೈ ಸೇರುವಂತೆ ಮಾಡಲು ಹಾಗೂ ವಿತರಣಾ ವ್ಯವಸ್ಥೆ ವಿಸ್ತರಿಸಲು ಈ ಮೂರೂ ಸಂಸ್ಥೆಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಕ್ಕಿ ಮಾರಾಟ ದ್ವಿಗುಣ 50 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಳ
2026-27ನೇ ಸಾಲಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS-D) ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು ಕೇಂದ್ರ ಸರ್ಕಾರ ದ್ವಿಗುಣಗೊಳಿಸಿದೆ. 25 ಲಕ್ಷ ಮೆಟ್ರಿಕ್ ಟನ್ ಇದ್ದುದನ್ನು ಇದೀಗ 50 LMT ಗೆ ಹೆಚ್ಚಿಸಿದೆ. 2026ರ ಅಕ್ಟೋಬರ್ 31ರವರೆಗೆ ಇ-ಹರಾಜಿನ ಮೂಲಕ ಈಗಾಗಲೇ 25 LMT ಅಕ್ಕಿ ಮಾರಾಟ ಮಾಡಲಾಗಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದ್ದಾರೆ.
ದಾಸ್ತಾನು ವಿವರ ಸಲ್ಲಿಕೆ ಕಡ್ಡಾಯ
ದೇಶಾದ್ಯಂತ ಅಕ್ಕಿ ಮತ್ತು ಭತ್ತ ಸಂಗ್ರಹಿಸಿಡುವ ಎಲ್ಲಾ ಸಂಸ್ಥೆಗಳಿಗೆ ದಾಸ್ತಾನು ವಿವರ ಸಲ್ಲಿಕೆ ಕಡ್ಡಾಯಗೊಳಿಸಿದ್ದು, ಪ್ರತಿ ಶುಕ್ರವಾರ ದಾಸ್ತಾನು ಪ್ರಮಾಣವನ್ನು ನವೀಕರಿಸಲು ಸೂಚಿಸಿದೆ. ಈ ಸಂಬಂಧ ನವೆಂಬರ್ 6ರಂದು ಆದೇಶ ಸಹ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಚಿಲ್ಲರೆ ಸರಪಳಿ ಸಂಸ್ಥೆಗಳು ಹಾಗೂ ಸಂಸ್ಕರಣಾ ಘಟಕಗಳು/ಅಕ್ಕಿ ಗಿರಣಿದಾರರು ತಮ್ಮ ಬಳಿ ಇರುವ ಅಕ್ಕಿ ಮತ್ತು ಭತ್ತದ ದಾಸ್ತಾನಿನ ವಿವರಗಳನ್ನು ಆರು ವರ್ಗಗಳ ಅಡಿಯಲ್ಲಿ ಘೋಷಿಸಲು ಆದೇಶಿಸಿದ್ದಾಗಿ ತಿಳಿಸಿದ್ದಾರೆ.
ದಾಸ್ತಾನು ಮಿತಿ, ನಿಯಮ ಮೀರಿದರೆ ಕ್ರಮ: ಸಚಿವರ ಎಚ್ಚರಿಕೆ
ಬಾಸುಮತಿ ಅಕ್ಕಿ, ಬಾಸುಮತಿ ಅಲ್ಲದ ಪ್ರೀಮಿಯಂ ಅಕ್ಕಿ, ಬಾಸುಮತಿ ಅಲ್ಲದ ಅಕ್ಕಿ, ಬೇಯಿಸಿದ ಅಕ್ಕಿ, ನುಚ್ಚಕ್ಕಿ ಮತ್ತು ಭತ್ತದ ದಾಸ್ತಾನು ಮಾಹಿತಿ ನೀಡುತ್ತಿರಬೇಕು. ಅಕ್ಕಿ ಮತ್ತು ಭತ್ತ ಸಂಗ್ರಹಿಸಿಡುವ ಎಲ್ಲಾ ಸಂಸ್ಥೆಗಳು ಪ್ರತಿ ಶುಕ್ರವಾರ ‘ಫುಡ್ ಸ್ಟಾಕ್ ಪೋರ್ಟಲ್’ https://foodstock.dfpd.gov.inನಲ್ಲಿ ದಾಸ್ತಾನು ವಿವರವನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಈ ಮಾಹಿತಿ ನಿಖರವಾಗಿದೆಯೇ ಮತ್ತು ನಿಯಮಿತವಾಗಿ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳದಿದ್ದರೆ ಅಥವಾ ನಿಗದಿಪಡಿಸಿದ ದಾಸ್ತಾನು ಮಿತಿ ಉಲ್ಲಂಘಿಸಿದರೆ ಅಂತಹ ಸಂಸ್ಥೆಗಳ ವಿರುದ್ಧ ‘ಅಗತ್ಯ ಸರಕುಗಳ ಕಾಯಿದೆ, 1955’ರ ಸೆಕ್ಷನ್ 6 ಮತ್ತು 7ರಡಿ ಸೂಕ್ತ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರದಿಂದ ಕಟ್ಟುನಿಟ್ಟಿನ ಕ್ರಮ
ದೇಶಾದ್ಯಂತ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ, ಅಕ್ಕಿ ಸಮಂಜಸ ಬೆಲೆಯಲ್ಲಿ ಲಭಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ದಾಸ್ತಾನು ಮಿತಿ ವಿಧಿಸಲು ಅನುಮತಿ ನೀಡಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಭತ್ತ ಮತ್ತು ಅಕ್ಕಿ ಮೇಲೆ ದಾಸ್ತಾನು ಮಿತಿ ವಿಧಿಸಲು ಅನುಮತಿ ನೀಡಿದೆ.
ಮಾರುಕಟ್ಟೆಯಲ್ಲಿ ಸಾಕಷ್ಟು ಅಕ್ಕಿ ಲಭ್ಯತೆ ಖಚಿತಪಡಿಸಿಕೊಳ್ಳಲು ಹಾಗೂ ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ತಡೆಯಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಗಳ ಅನುಷ್ಠಾನ ಕುರಿತು ನಿಕಟ ಮೇಲ್ವಿಚಾರಣೆ ಸಹ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 11 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟ ಮಾಡಲಾಗಿತ್ತು. ಇದೀಗ 25 ಲಕ್ಷ ಮೆಟ್ರಿಕ್ ಟನ್ ಮಾರಾಟ ಕಂಡಿದೆ. ಈ ಕ್ರಮಗಳು ಮಾರುಕಟ್ಟೆಯಲ್ಲಿ ಅಗತ್ಯ ಆಹಾರ ಪದಾರ್ಥಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಿಸುವಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




