ಶ್ರೀನಗರ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ (Pakistan Drone) ಹಾರಾಟ ನಡೆಸಿದೆ. ಇಲ್ಲಿನ ಅರ್ನಿಯಾ ಸೆಕ್ಟರ್‌ನಲ್ಲಿ ಡ್ರೋನ್ ಹಾರಾಟ ನಡೆಸಿದ್ದು, ಡ್ರೋನ್ ಮೇಲೆ ಬಿಎಸ್ಎಫ್ (BSF) ಯೋಧರಿಂದ ಗುಂಡಿನ ದಾಳಿ ನಡೆಸಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಯೋಧರಿಂದ ಗುಂಡಿನ ದಾಳಿಯ ಬೆನ್ನಲ್ಲೇ ಗಡಿಯಿಂದ ಡ್ರೋನ್ ಹಿಂತಿರುಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗೆ ಇಂದು ಮುಂಜಾನೆ ಆಕಾಶದಲ್ಲಿ ಪ್ರಖರವಾದ ಬೆಳಕು ಕಾಣಿಸಿತ್ತು. ಆ ಬೆಳಕು ಪಾಕಿಸ್ತಾನದ ಡ್ರೋನ್‌ನಿಂದ ಹೊಮ್ಮಿದ ಬೆಳಕು ಎಂಬುದು ಗೊತ್ತಾದ ಕೂಡಲೆ ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿ ಅದರತ್ತ ಗುಂಡಿನ ದಾಳಿ ನಡೆಸಲಾಯಿತು.
ಇಂದು ಮುಂಜಾನೆ 4.15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿಎಸ್ಎಫ್ ಪಡೆಗಳು ಡ್ರೋನ್ ಮೇಲೆ ಗುಂಡು ಹಾರಿಸಿದ ನಂತರ ಡ್ರೋನ್ ಹಿಂತಿರುಗಿತು. ಗಡಿ ಪ್ರದೇಶಗಳ ಬಳಿ ಹಲವಾರು ಡ್ರೋನ್ ಪತ್ತೆಯಾದ ವರದಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಗಡಿ ಪ್ರದೇಶಗಳಲ್ಲಿ ಡ್ರೋನ್‌ಗಳು ಸುಳಿದಾಡುತ್ತಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: ಜಮ್ಮುವಿನ ಹೀರಾನಗರ ಸೆಕ್ಟರ್‌ನಲ್ಲಿ ಸ್ಫೋಟಕ ಹೊಂದಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಮಂಗಳವಾರ ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ ಪಾಕಿಸ್ತಾನದ ಡ್ರೋನ್‌ನಿಂದ ಡ್ರಗ್ಸ್ ಬೀಳಿಸಿದ ನಾಲ್ವರನ್ನು ಬಂಧಿಸಲಾಗಿದೆ. ಆ ಸ್ಥಳದಲ್ಲಿ 3 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ. ಬಿಎಸ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ 3.6 ಕೆಜಿ ತೂಕದ ಹೆರಾಯಿನ್ ಹೊಂದಿರುವ ನಾಲ್ಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಂಜಾಬ್ ಮೂಲದ ಆರೋಪಿಗಳು ಡ್ರೋನ್ ಮೂಲಕ ಮಾದಕ ದ್ರವ್ಯವನ್ನು ತಲುಪಿಸಲು ಬಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್‌ನ ಅಮೃತಸರದಲ್ಲಿ ಹೆರಾಯಿನ್ ಸಾಗಿಸಲು ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ