ಮನೆ ನೆಲಸಮ ಮಾಡುವುದು ಈಗ ಫ್ಯಾಶನ್ ಆಗಿದೆ: ಬುಲ್ಡೋಜರ್ ಕ್ರಮ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಟೀಕೆ

ರಾಹುಲ್ ಲಾಂಗ್ರಿ ಅವರ ಮನೆ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿ ವಿಚಾರಣೆ ನಡೆಸಿದ ಇಂದೋರ್ ಪೀಠವು ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ನೈಸರ್ಗಿಕ ನ್ಯಾಯವನ್ನೂ ಪಾಲಿಸದೆ ಕಾನೂನು ಕ್ರಮಗಳನ್ನು ರೂಪಿಸಿ ಯಾವುದೇ ಮನೆಯನ್ನು ಕೆಡವುವುದು ಮತ್ತು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುವುದು ಈಗ ಫ್ಯಾಶನ್ ಆಗಿದೆ ಎಂದಿದೆ.

ಮನೆ ನೆಲಸಮ ಮಾಡುವುದು ಈಗ ಫ್ಯಾಶನ್ ಆಗಿದೆ: ಬುಲ್ಡೋಜರ್ ಕ್ರಮ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಟೀಕೆ
ಮಧ್ಯ ಪ್ರದೇಶ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 12, 2024 | 3:44 PM

ಭೋಪಾಲ್ ಫೆಬ್ರುವರಿ 12 : ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮದ (bulldozer action) ಬಗ್ಗೆ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿರುವ ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court), ನಾಗರಿಕ ಸಂಸ್ಥೆಯ ಅಧಿಕಾರಿಗಳು ಸರಿಯಾದ ಕಾರ್ಯವಿಧಾನವನ್ನು ಅನುಸರಿಸದೆ ಮನೆಗಳನ್ನು ಕೆಡವುವುದು “ಫ್ಯಾಶನ್” ಆಗಿಬಿಟ್ಟಿದೆ ಎಂದು ಹೇಳಿದೆ. ಸ್ವಇಚ್ಛೆಯಿಂದ ಆಸ್ತಿಯನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ರಾಹುಲ್ ಲಾಂಗ್ರಿ ಅವರ ಮನೆ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌ನ ಇಂದೋರ್ ಪೀಠವು (Indore bench) ಈ ತಿಂಗಳ ಆರಂಭದಲ್ಲಿ ಅವಲೋಕನಗಳನ್ನು ಮಾಡಿತು.ಲಾಂಗ್ರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ನಂತರ ಪೊಲೀಸರು ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಜತೆ ಸೇರಿ ಉಜ್ಜಯಿನಿಯಲ್ಲಿ ಅವರ ಎರಡು ಅಂತಸ್ತಿನ ಮನೆಯನ್ನು ಧ್ವಂಸಗೊಳಿಸಲಾಯಿತು. ಅಲ್ಲಿ  ನೆಲೆಸಿದ್ದ ರಾಧಾ ಮತ್ತು ವಿಮಲಾ ನಿರಾಶ್ರಿತರರಾಗಿದ್ದರು.

ಲಾಂಗ್ರಿ ಅವರ ಪತ್ನಿ ರಾಧಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹಿಂದಿನ ಮಾಲೀಕರಾದ ರೈಸಾ ಬಿ ಹೆಸರಿನಲ್ಲಿ ನೋಟಿಸ್ ನೀಡಲಾಗಿದ್ದು, ಮರುದಿನ ಅವರ ಮಾತನ್ನು ಕೇಳದೆ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಇವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮನೆ ಅಕ್ರಮವಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಮನೆಯನ್ನು ಹೌಸಿಂಗ್ ಬೋರ್ಡ್‌ನಲ್ಲಿ ನೋಂದಾಯಿಸಲಾಗಿದ್ದು, ಮನೆ ನಿರ್ಮಾಣಕ್ಕೆ ಅವರು ಬ್ಯಾಂಕ್ ಸಾಲ ಪಡೆದಿದ್ದಾರೆ ಎಂದಿದ್ದಾರೆ.

ನ್ಯಾಯಮೂರ್ತಿ ವಿವೇಕ್ ರುಷಿಯಾ ಅವರು ಕೆಡವಿರುವುದು ಕಾನೂನುಬಾಹಿರ ಎಂದು ತೀರ್ಪು ನೀಡಿದ್ದು, ರಾಧಾ ಲಾಂಗ್ರಿ ಮತ್ತು ಅವರ ಅತ್ತೆ ವಿಮ್ಲಾ ಗುರ್ಜರ್‌ಗೆ ತಲಾ ₹ 1 ಲಕ್ಷ ಪರಿಹಾರವನ್ನು ನೀಡಿದರು. ಧ್ವಂಸ ಮಾಡಿದ ನಾಗರಿಕ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರು ಇದೀಗ ಹೆಚ್ಚಿನ ಪರಿಹಾರಕ್ಕಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

“ಈ ನ್ಯಾಯಾಲಯವು ಗಮನಿಸಿದಂತೆ, ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ನೈಸರ್ಗಿಕ ನ್ಯಾಯವನ್ನೂ ಪಾಲಿಸದೆ ಕಾನೂನು ಕ್ರಮಗಳನ್ನು ರೂಪಿಸಿ ಯಾವುದೇ ಮನೆಯನ್ನು ಕೆಡವುವುದು ಮತ್ತು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುವುದು ಈಗ ಫ್ಯಾಶನ್ ಆಗಿದೆ. ಈ ಪ್ರಕರಣದಲ್ಲಿಯೂ ಸಹ ಅರ್ಜಿದಾರರ ಕುಟುಂಬದ ಸದಸ್ಯರೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮನೆ ನೆಲಸಮ ಕಾರ್ಯ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮನೆಗಳನ್ನು ನೆಲಸಮ ಮಾಡುವ ಬದಲು, ನಿರ್ಮಾಣವನ್ನು ಕ್ರಮಬದ್ಧಗೊಳಿಸುವಂತೆ ಅರ್ಜಿದಾರರಿಗೆ ಕೇಳಬೇಕಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಮನೆಯ ಮಾಲೀಕರಿಗೆ ಅದನ್ನು ಕ್ರಮಬದ್ಧಗೊಳಿಸಲು ಸರಿಯಾದ ಅವಕಾಶವನ್ನು ನೀಡಿದ ನಂತರ ನೆಲಸಮ ಮಾಡುವುದು ಕೊನೆಯ ಮಾರ್ಗವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:ಪ್ರತಿಭಟನೆಗೆಂದು ದಿಲ್ಲಿಗೆ ಹೊರಟಿದ್ದ ಹುಬ್ಬಳ್ಳಿ ರೈತರ ಸೆರೆ: ಮಧ್ಯಪ್ರದೇಶ ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಕಿಡಿ 

ನನ್ನ ಪತಿಯನ್ನು ಸುಳ್ಳು ಆರೋಪದ ಮೇಲೆ ಜೈಲಿಗೆ ಹಾಕಲಾಗಿದೆ ಮತ್ತು ಅವರ ಮನೆಯನ್ನು ಕೆಡವಲಾಗಿದೆ ಎಂದು ಅರ್ಜಿದಾರರಾದ ರಾಧಾ ಲಾಂಗ್ರಿ ಆರೋಪಿಸಿದ್ದಾರೆ. ಒಂದು ದಿನದ ನೋಟಿಸ್ ನೀಡಿ ನಂತರ ನಮ್ಮ ಮನೆಯನ್ನು ಧ್ವಂಸಗೊಳಿಸಿದರು, ನಾವು ಅವರಿಗೆ ಆಸ್ತಿ ಪತ್ರಗಳನ್ನು ತೋರಿಸಲು ಪ್ರಯತ್ನಿಸಿದ್ದೇವೆ, ಆದರೆ ಅವರು ಕೇಳಲಿಲ್ಲ, ಈಗ ನಮಗೆ ನ್ಯಾಯ ಸಿಕ್ಕಿದೆ” ಎಂದು ಅವರು ಹೇಳಿದರು. ಅಪರಾಧವನ್ನು ಒಬ್ಬ ವ್ಯಕ್ತಿಯಿಂದ ಮಾಡಲಾಗುತ್ತದೆ, ಕುಟುಂಬದಿಂದ ಅಲ್ಲ. ಅದಕ್ಕೆ ಈ ರೀತಿ ಬುಲ್ಡೋಜರ್ ಕ್ರಮ ಕೈಗೊಳ್ಳಬಾರದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿದಾರರ ವಕೀಲ ತೆಹಜೀಬ್ ಖಾನ್, “ಅಪರಾಧಿ ಮನೆಯಲ್ಲಿದ್ದರೆ, ಆ ಮನೆಯ ಪ್ರತಿಯೊಬ್ಬ ವ್ಯಕ್ತಿಯೂ ಅಪರಾಧಿ ಎಂದು ಅರ್ಥವಲ್ಲ, ಅವನ ಮನೆಯನ್ನು ನೆಲಸಮ ಮಾಡುವುದರಿಂದ ಅಮಾಯಕರಿಗೂ ಶಿಕ್ಷೆಯಾಗುತ್ತದೆ” ಎಂದು ವಾದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 12 February 24