
ನವದೆಹಲಿ, ನವೆಂಬರ್ 3: ದೆಹಲಿಯ ರಾಮಲೀಲಾ ಮೈದಾನ ಮತ್ತು ಜಂತರ್ ಮಂತರ್‌ನಲ್ಲಿ ಪ್ರತಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಸುದೀರ್ಘ ಪ್ರತಿಭಟನೆಗಳ ವಿರುದ್ಧ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ನಿಲುವು ತಳೆದಿದೆ. “ಪ್ರತಿಭಟನೆಯ ಹೆಸರಿನಲ್ಲಿ ಯಾವುದೇ ಸಾರ್ವಜನಿಕ ಸ್ಥಳವನ್ನು ಯಾರೂ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ಇಂದು (ನವೆಂಬರ್ 3) ಮಹತ್ವದ ಆದೇಶ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲೇ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ದೆಹಲಿಯ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳು ಸ್ತಬ್ಧಗೊಂಡು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸುತ್ತಿದೆ ಎಂದು ವ್ಯಾಪಾರಿಗಳ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ವಿಚಾರಣೆ ನಡೆಸಿತು.
ಸಾರ್ವಜನಿಕರಿಗೆ ತೊಂದರೆ ನೀಡುವಂತಿಲ್ಲ:
“ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಆದರೆ, ಆ ಹಕ್ಕು ಇತರ ನಾಗರಿಕರ, ವ್ಯಾಪಾರಿಗಳ ಮತ್ತು ಪಾದಚಾರಿಗಳ ಸಂಚಾರ ಹಾಗೂ ಜೀವನಾಧಾರದ ಹಕ್ಕನ್ನು ಕಸಿದುಕೊಳ್ಳುವಂತಿರಬಾರದು. ನಿರ್ದಿಷ್ಟ ಅವಧಿಗೆ ಮತ್ತು ನಿಗದಿತ ಸ್ಥಳಕ್ಕೆ ಮಾತ್ರ ಪ್ರತಿಭಟನೆ ಸೀಮಿತವಾಗಿರಬೇಕು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೇಂದ್ರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್:
ಪ್ರತಿಭಟನೆಗಳಿಂದಾಗಿ ದೆಹಲಿಯ ಮುಖ್ಯ ಭಾಗದಲ್ಲಿ ಸಾರಿಗೆ ವ್ಯತ್ಯಯ, ಮೆಟ್ರೋ ನಿಲ್ದಾಣಗಳ ಬಂದ್ ಹಾಗೂ ವ್ಯಾಪಾರ ವಹಿವಾಟಿಗೆ ಉಂಟಾಗಿರುವ ತೊಂದರೆಗಳನ್ನು ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ? ಎಂಬುದರ ಕುರಿತು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಆಯುಕ್ತರು ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ರಾಮಲೀಲಾ ಮೈದಾನ ಪ್ರತಿಭಟನೆಗೆ ವ್ಯಾಪಾರಿಗಳ ವಿರೋಧ, ರಾಹುಲ್ ಗಾಂಧಿಗೆ ಪ್ರತಿಭಟನೆ ಮುಂದೂಡಲು ದೆಹಲಿ ವರ್ತಕರ ಮನವಿ
ವ್ಯಾಪಾರಿಗಳ ನಷ್ಟಕ್ಕೆ ಕಾರಣವಾಗಿರುವ ರ‍್ಯಾಲಿಗಳನ್ನು ಸಂಘಟಿಸಿದ ರಾಜಕೀಯ ಪಕ್ಷಗಳನ್ನು (ಇಂಡಿಯಾ ಮೈತ್ರಿಕೂಟದ ಪಕ್ಷಗಳು) ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರ್ಪಡೆಗೊಳಿಸುವಂತೆ ಅರ್ಜಿದಾರರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ದೆಹಲಿ ಕಿರಾಣಿ ಕಮಿಟಿ ಹಾಗೂ ‘ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ’ (CTI) ಕೋರ್ಟ್‌ಗೆ ಸಲ್ಲಿಸಿರುವ ವಿವರಗಳ ಪ್ರಕಾರ, ದೀಪಾವಳಿಗೂ ಮುನ್ನ ದೆಹಲಿಯ ಪ್ರಮುಖ 25 ಮಾರುಕಟ್ಟೆಗಳ ಸುಮಾರು 2.5 ಲಕ್ಷ ಅಂಗಡಿಗಳು ಬಂದ್ ಆಗಿದ್ದರಿಂದ ಸರಿಸುಮಾರು 10,000 ದಿಂದ 12,000 ಕೋಟಿ ರೂ. ಆರ್ಥಿಕ ನಷ್ಟವಾಗಿದೆ. ದೆಹಲಿಯ ಕನೆಕ್ಟ್ ಪ್ಲೇಸ್, ಚಾಂದ್ನಿ ಚೌಕ್, ಸೌತ್ ಬಜಾರ್ ಹಾಗೂ ಕ್ಯಾರೋಲ್ ಬಾಗ್ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿಯಂತ್ರಣ ತಪ್ಪಿದ್ದು, ಸುಮಾರು 50 ಲಕ್ಷ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸಿದ್ದಾರೆ.
ದೀಪಾವಳಿ ಹಬ್ಬದ ಗರಿಷ್ಠ ಖರೀದಿ ಸಮಯದಲ್ಲಿ ‘ಇಂಡಿಯಾ’ ಮೈತ್ರಿಕೂಟ ನವೆಂಬರ್ 1ರಂದು ನಡೆಸಿದ ರಾಮಲೀಲಾ ಮೈದಾನ ರ‍್ಯಾಲಿಯಿಂದಾಗಿ ದೆಹಲಿಯಲ್ಲಿ ಸಾರಿಗೆ ಹಾಗೂ ವ್ಯಾಪಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ದೆಹಲಿಯ 25 ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳ 3 ಲಕ್ಷ ಅಂಗಡಿಗಳ ಪೈಕಿ ಬರೋಬ್ಬರಿ 2.5 ಲಕ್ಷ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಪ್ರಮುಖವಾಗಿ ಚಾಂದ್ನಿ ಚೌಕ್, ಸೌತ್ ಬಜಾರ್, ಕನೆಕ್ಟ್ ಪ್ಲೇಸ್, ಕ್ಯಾರೋಲ್ ಬಾಗ್ ಮತ್ತು ಕಾಶ್ಮೀರಿ ಗೇಟ್ ಮಾರುಕಟ್ಟೆಗಳು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದವು.
ನವೆಂಬರ್ 1ರ ರ‍್ಯಾಲಿಯನ್ನು ದೀಪಾವಳಿ ಮುಗಿಯುವವರೆಗೆ ಮುಂದೂಡುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮುಂಚಿತವಾಗಿಯೇ 4 ಬಾರಿ ಮನವಿ ಪತ್ರ ಬರೆದಿದ್ದರೂ, ರ‍್ಯಾಲಿ ನಡೆಸಿದ್ದರಿಂದ ವರ್ತಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೂ ಮನವಿ ಮಾಡಲಾಗಿತ್ತು. ಆದರೆ ಈ ಮನವಿಗಳನ್ನು ಲೆಕ್ಕಿಸದೆ ರ‍್ಯಾಲಿ ನಡೆಸಿದ್ದಕ್ಕೆ ದೆಹಲಿಯ ವ್ಯಾಪಾರಿ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Tue, 3 November 26