AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಬೇಸ್ಮೆಂಟ್ ಮಾರ್ಪಾಡು ದುರ್ಘಟನೆಗೆ ಕಾರಣವಾ?

ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ 5 ಅಂತಸ್ತಿನ ಬಾಯ್ಸ್ ಪಿಜಿ ಹಾಸ್ಟೆಲ್ ಕಟ್ಟಡ ಕುಸಿತವಾಗಿದೆ. ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸಂತಾಪ ಸೂಚಿಸಿದ್ದಾರೆ. ಇನ್ನು, ಈ ಕಟ್ಟಡಕ್ಕೆ ಬೇಸ್ಮೆಂಟ್ ರಚನೆಯ ಮಾರ್ಪಾಡು ಮಾಡಲಾಗುತ್ತಿತ್ತು. ಇದರಿಂದ ಫೌಂಡೇಶನ್​ಗೆ ಹಾನಿಯಾಗಿ ಕಟ್ಟಡ ಕುಸಿದಿರುವ ಶಂಕೆ ಇದೆ.

ದೆಹಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಬೇಸ್ಮೆಂಟ್ ಮಾರ್ಪಾಡು ದುರ್ಘಟನೆಗೆ ಕಾರಣವಾ?
ದೆಹಲಿ ಕಟ್ಟಡ ಕುಸಿತImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 06, 2026 | 9:26 PM

Share

ನವದೆಹಲಿ, ಸೆಪ್ಟೆಂಬರ್ 6: ಇಲ್ಲಿಯ ಸತ್ಯನಿಕೇತನ ಪ್ರದೇಶದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. ಈಗ ಬಂದಿರುವ ವರದಿಗಳ ಪ್ರಕಾರ, ಸಾವಿನ ಸಂಖ್ಯೆ 3ಕ್ಕೆ ಏರಿದೆ. ಕಟ್ಟಡ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರುವ ಭೀತಿ ಇದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಜೆಸಿಬಿ ಮತ್ತು ನೂತನ ಶೋಧನಾ ಉಪಕರಣಗಳನ್ನು ಬಳಸಲಾಗುತ್ತಿದೆ. ಗಾಯಗೊಂಡ ಕೆಲವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುತ್ತಮುತ್ತಲಿನ ಕಟ್ಟಡಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಹಾಗು ಇತರರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ, ದೆಹಲಿ ಪೊಲೀಸ್ ಆಯುಕ್ತ, ಎನ್​ಡಿಆರ್​ಎಫ್ ಡಿಜಿ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದೇನೆ. ಗಾಯಗೊಂಡವರಿಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಅವರ ಟ್ವೀಟ್

ಇದನ್ನೂ ಓದಿ: ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ

ಬೇಸ್ಮೆಂಟ್ ಮಾರ್ಪಡಿಸಲು ಹೋಗಿದ್ದೇ ಕುಸಿತಕ್ಕೆ ಕಾರಣವಾ?

ಕುಸಿದಿರುವ ಕಟ್ಟಡವು ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಪಿಜಿ ಬಾಯ್ಸ್ ಹಾಸ್ಟೆಲ್ ಆಗಿದ್ದ ಐದು ಮಹಡಿಯ ಈ ಕಟ್ಟಡದಲ್ಲಿ ನೆಲಮಹಡಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಹಳೆಯ ಫೌಂಡೇಶನ್ ಪಿಲ್ಲರ್​ಗಳನ್ನೇ ಬದಲಿಸುವ ಪ್ರಯತ್ನವಾಗಿದೆ. ಇದರಿಂದ ಇಡೀ ಕಟ್ಟಡವೇ ಕುಸಿದಿರಬಹುದು ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ದೆಹಲಿ ಸಿಎಂ ರೇಖಾ ಗುಪ್ತಾ ಅವರು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಎದುರಾಗುವ ಭಾರಿ ಅಪಾಯಗಳು

  • ತಳಪಾಯದ ಅಸ್ಥಿರತೆ: ಮೇಲಿನ ಮಹಡಿಗಳ ಭಾರವನ್ನು ಹೊತ್ತು ನಿಂತಿರುವ ‘ಫೌಂಡೇಶನ್’ ಪಕ್ಕದಲ್ಲೇ ಮಣ್ಣು ಅಗೆಯುವುದರಿಂದ, ಕಟ್ಟಡದ ತಳಪಾಯದ ಹಿಡಿತ ಸಡಿಲಗೊಂಡು (Loss of Structural Stability) ಇಡೀ ಕಟ್ಟಡ ತಕ್ಷಣವೇ ಕುಸಿಯುತ್ತದೆ.
  • ಪಕ್ಕದ ಕಟ್ಟಡಗಳಿಗೆ ಧಕ್ಕೆ: ದೆಹಲಿಯಂತಹ ದಟ್ಟ ಜನಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಹೀಗೆ ಮಾಡುವುದರಿಂದ, ಪಕ್ಕದ ಕಟ್ಟಡಗಳ ತಳಪಾಯಕ್ಕೂ ಹಾನಿಯಾಗಿ ಅವುಗಳಿಗೂ ಅಪಾಯ ಎದುರಾಗುತ್ತದೆ.
  • ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಸೂಕ್ತ ಇಂಜಿನಿಯರಿಂಗ್ ಮೇಲ್ವಿಚಾರಣೆ ಹಾಗೂ ಮಣ್ಣಿನ ಸಾಮರ್ಥ್ಯದ ಪರೀಕ್ಷೆ (Soil Testing) ಇಲ್ಲದೆ ಮಾಡುವ ಇಂತಹ ಅಕ್ರಮ ಕಾಮಗಾರಿಗಳು ಜೀವಕ್ಕೆ ನೇರ ಕಂಠಕವಾಗಿವೆ.

ಇದನ್ನೂ ಓದಿ: ಕೇಂದ್ರ ಸಚಿವರ ಪ್ರಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಅಖಾಡಕ್ಕೆ: ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಒತ್ತು, ಸೋಮವಾರ ಮಹತ್ವದ ಸಭೆ

ನಿರ್ಮಾಣವಾಗಿರುವ ಕಟ್ಟಡಕ್ಕೆ ಬೇಸ್ಮೆಂಟ್ ಅಗೆಯಲು ಕಾನೂನಿನಲ್ಲಿ ಅವಕಾಶ ಇದೆಯಾ?

ಯಾವುದೇ ಕಟ್ಟಡ ನಿರ್ಮಾಣ ನಿಯಮಗಳ (Building Bye-laws) ಪ್ರಕಾರ, ಮೇಲ್ಭಾಗದ ರಚನೆ ಪೂರ್ಣಗೊಂಡ ನಂತರ ಕೆಳಭಾಗದಲ್ಲಿ ಬೇಸ್‌ಮೆಂಟ್ ಅಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೇಸ್‌ಮೆಂಟ್ ನಿರ್ಮಾಣವನ್ನು ಕಟ್ಟಡದ ತಳಪಾಯ (Foundation) ಹಾಕುವ ಆರಂಭಿಕ ಹಂತದಲ್ಲೇ ಮಾಡಬೇಕು ಮತ್ತು ಅದಕ್ಕೆ ಸ್ಥಳೀಯ ಮಹಾನಗರ ಪಾಲಿಕೆಯಿಂದ ಮುಂಚಿತವಾಗಿಯೇ ಅನುಮೋದಿತ ನಕ್ಷೆ (Approved Plan) ಪಡೆಯುವುದು ಕಡ್ಡಾಯ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರರ ವಿರುದ್ಧ ದೆಹಲಿ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Sun, 6 September 26

Follow Us