AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ; ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಮಿತ್ ಶಾ

ಲೋಕಸಭೆಯಲ್ಲಿ ಇಂದು (ಗುರುವಾರ) ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆಯಿತು. ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಮುಂದಿನ 3 ದಿನಗಳಲ್ಲಿ ಭಾರತದ ಸಂಸತ್ತಿನಲ್ಲಿ 3 ಪ್ರಮುಖ ಮಸೂದೆಗಳ ಚರ್ಚೆ ನಡೆಯಲಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ನಿಮ್ಮ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ; ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಮಿತ್ ಶಾ
Amit Shah In Parliament Session
ಸುಷ್ಮಾ ಚಕ್ರೆ
|

Updated on:Apr 16, 2026 | 3:15 PM

Share

ನವದೆಹಲಿ, ಏಪ್ರಿಲ್ 16: ಮಹಿಳಾ ಮೀಸಲಾತಿ ಕಾಯ್ದೆಗೆ (Women’s Reservation Bill) ತಿದ್ದುಪಡಿಗಳನ್ನು ಅಂಗೀಕರಿಸಲು ನಡೆಯುತ್ತಿರುವ ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನದ ಮೊದಲ ದಿನವಾದ ಇಂದು ಕೇಂದ್ರ ಸರ್ಕಾರ 3 ಮಸೂದೆಗಳನ್ನು ಮಂಡಿಸಿತು. ಆದರೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಈ ಮಸೂದೆಗಳನ್ನು ವಿರೋಧಿಸಿದವು. ಪ್ರಸ್ತಾವನೆಗಳನ್ನು ಬೆಂಬಲಿಸಿ ಮತ ಚಲಾಯಿಸಿದ ನಂತರ, ಸದನವು ತನ್ನ ಚರ್ಚೆಯನ್ನು ಮುಂದುವರೆಸಿದೆ. ಈ ವೇಳೆ ಬಿಜೆಪಿ ಸಂಸದ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆಯಿತು. ನಿಮ್ಮ ಪಕ್ಷದಿಂದ ಎಷ್ಟು ಮಹಿಳಾ ಸಂಸದರಿದ್ದಾರೆ? ಎಷ್ಟು ಮಹಿಳೆಯರು ಮುಖ್ಯಮಂತ್ರಿಯಾಗಿದ್ದಾರೆ? ಎಂದು ಅಖಿಲೇಶ್ ಯಾದವ್ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಮಿತ್ ಶಾ, ನೀವು ಬೇಕಾದರೆ ನಿಮ್ಮ ಪಕ್ಷದ ಎಲ್ಲ ಟಿಕೆಟ್​​ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ, ನಮ್ಮ ತಕರಾರಿಲ್ಲ ಎಂದಿದ್ದಾರೆ.

ಇಂದು ನಡೆದ ಸಂಸತ್ತಿನ ಕಲಾಪದಲ್ಲಿ ಲೋಕಸಭೆಯಲ್ಲಿ ಸೀಮಾ ನಿರ್ಣಯ ಮತ್ತು ಮಹಿಳಾ ಕೋಟಾಕ್ಕೆ ಸಂಬಂಧಿಸಿದ ಮಸೂದೆಗಳನ್ನು ಪರಿಚಯಿಸಿದಾಗ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ರಾಜಕೀಯ ವಾಗ್ವಾದ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿ, ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗಳ ಚರ್ಚೆಯ ವೇಳೆ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಲ್ಲಿ ಕೇಂದ್ರ ಸರ್ಕಾರದ ಆತುರವನ್ನು ಪ್ರಶ್ನಿಸಿದರು. ಸೀಮಾ ನಿರ್ಣಯಕ್ಕೆ ಸಂಬಂಧಿಸಿದ ಪ್ರಸ್ತಾಪಗಳೊಂದಿಗೆ ಮುಂದುವರಿಯುವ ಮೊದಲು ಜನಗಣತಿಯನ್ನು ಪೂರ್ಣಗೊಳಿಸಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ನಮ್ಮ ವಿರೋಧ ಮಹಿಳಾ ಮೀಸಲಾತಿಗಲ್ಲ; ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

“ಸಮಾಜವಾದಿ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯ ಪರವಾಗಿದೆ. ನಾವು ಹಿಂದಿನಿಂದಲೂ ಮಹಿಳೆಯರನ್ನು ಮುನ್ನಡೆಸಲು ಕೆಲಸ ಮಾಡಿದ್ದೇವೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ. ಇಂದು, ಬಿಜೆಪಿ ಮಹಿಳೆಯರ ಮೀಸಲಾತಿಯನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಸಂಘಟನೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳದವರು ಅವರ ಗೌರವಕ್ಕಾಗಿ ಹೇಗೆ ಕೆಲಸ ಮಾಡುತ್ತಾರೆ? ನೀವು ನಡೆದುಬಂದ ಸಂಘಟನೆಯಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂದು ನಮಗೆ ತಿಳಿಸಿ. ಬಿಜೆಪಿ ಅಧಿಕಾರದಲ್ಲಿರುವ 21 ರಾಜ್ಯಗಳಲ್ಲಿ ಎಷ್ಟು ಮಹಿಳೆಯರು ಮುಖ್ಯಮಂತ್ರಿಯಾಗಿದ್ದಾರೆ? ದೆಹಲಿಯಲ್ಲಿರುವ ಒಬ್ಬರು ಮಹಿಳಾ ಮುಖ್ಯಮಂತ್ರಿಗೆ ಎಷ್ಟು ಅಧಿಕಾರ ಕೊಟ್ಟಿದ್ದೀರಿ? ಲೋಕಸಭೆಯಲ್ಲಿ ಎಷ್ಟು ಮಹಿಳಾ ಬಿಜೆಪಿ ಸದಸ್ಯರಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಅಖಿಲೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಸಮಾಜವಾದಿ ಪಕ್ಷವು ತನ್ನ ಎಲ್ಲಾ ಸ್ಥಾನಗಳ ಅರ್ಧದಷ್ಟು ಮುಸ್ಲಿಂ ಮಹಿಳೆಯರಿಗೆ ನೀಡಬಹುದು. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ” ಎಂದು ಹೇಳಿದರು. ಇದರಿಂದ ಕೋಪಗೊಂಡ ಅಖಿಲೇಶ್ ಯಾದವ್, ಅಮಿತ್ ಶಾ ಅವರು ಅನವಶ್ಯಕವಾಗಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಯಾಕೆ ಮುಸ್ಲಿಂ ಮಹಿಳೆಯರು ಭಾರತೀಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Women Reservation Bill: ಗದ್ದಲದ ನಡುವೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

ಇದಾದ ಬಳಿಕ ಜನಗರಣತಿಯ ಆರೋಪಕ್ಕೆ ಉತ್ತರಿಸಿದ ಅಮಿತ್ ಶಾ, “ಮಹಿಳಾ ಮೀಸಲಾತಿ ಮಸೂದೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈ ಎರಡು ಕಾನೂನುಗಳು ಅವಶ್ಯಕ. ಅದಕ್ಕಾಗಿಯೇ ಸೀಮಾ ನಿರ್ಣಯ ಮತ್ತು ಮಹಿಳಾ ಮೀಸಲಾತಿ ಕಾನೂನುಗಳನ್ನು ಒಟ್ಟಿಗೆ ತರಲಾಗಿದೆ. ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸಲು ನಿರ್ಧರಿಸಿರುವುದರಿಂದ ಈ ಮಸೂದೆಗಳನ್ನು ವಿರೋಧಿಸುತ್ತಿವೆ” ಎಂದು ಹೇಳಿದರು.

“ಜನಗಣತಿಯನ್ನು ಏಕೆ ನಡೆಸುತ್ತಿಲ್ಲ ಎಂದು ಅಖಿಲೇಶ್ ಯಾದವ್ ಕೇಳಿದರು. ಜನಗಣತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ನಾನು ಇಡೀ ದೇಶಕ್ಕೆ ತಿಳಿಸಲು ಬಯಸುತ್ತೇನೆ. ಸರ್ಕಾರವು ಜಾತಿ ಜನಗಣತಿಯನ್ನು ನಡೆಸಲು ನಿರ್ಧಾರ ತೆಗೆದುಕೊಂಡಿದೆ ಮತ್ತು ಎಣಿಕೆಯನ್ನು ಜಾತಿ ದತ್ತಾಂಶದೊಂದಿಗೆ ನಡೆಸಲಾಗುತ್ತಿದೆ” ಎಂದು ಅಮಿತ್ ಶಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:58 pm, Thu, 16 April 26

Follow Us