Statewise Covid Advisory: ಕೋವಿಡ್ ರೋಗ ಹರಡದಂತೆ ವಿವಿಧ ರಾಜ್ಯಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು?
ಭಾರತ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದು ಕೊರೊನಾವೈರಸ್ ಪ್ರಕರಣಗಳ ಉಲ್ಬಣದ ಆತಂಕದ ದೃಷ್ಟಿಯಿಂದ ಸನ್ನದ್ಧತೆಯನ್ನು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದು, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವಂತೆ ಒತ್ತಾಯಿಸಿದರು.
ಚೀನಾದಲ್ಲಿನ (China) ಕೋವಿಡ್ -19 (Covid 19) ಪರಿಸ್ಥಿತಿಯು ಪ್ರಪಂಚದಾದ್ಯಂತ ಕಳವಳವನ್ನುಂಟು ಮಾಡಿದೆ. ಸಂಶೋಧಕರು ಲಕ್ಷಾಂತರ ಜನರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವನ್ನು ಊಹಿಸಿದ್ದಾರೆ. ಅದೇ ವೇಳೆ ಹೊಸ ಮ್ಯೂಟೆಂಟ್ ಸೋಂಕುಗಳ ಹೊಸ ಅಲೆಗೆ ಕಾರಣವಾಗಬಹುದು ಎಂಬ ಆತಂಕವೂ ಇದೆ. ಭಾರತ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದು ಕೊರೊನಾವೈರಸ್ (Coronavirus) ಪ್ರಕರಣಗಳ ಉಲ್ಬಣದ ಆತಂಕದ ದೃಷ್ಟಿಯಿಂದ ಸನ್ನದ್ಧತೆಯನ್ನು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದು, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವಂತೆ ಒತ್ತಾಯಿಸಿದರು.ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಕಣ್ಗಾವಲು ವಹಿಸುವಂತೆ ಅವರು ಹೇಳಿದ್ದು ರಾಜ್ಯಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಕೋವಿಡ್-19 ವಿರುದ್ಧ ಹೋರಾಟಕ್ಕೆ ವಿವಿಧ ರಾಜ್ಯಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು
ಕರ್ನಾಟಕ: ರಾಜ್ಯದಲ್ಲಿ ಇನ್ಫ್ಲುಯೆನ್ಜಾ ಲೈಕ್ ಇಲ್ನೆಸ್ (ILI) ಮತ್ತು ತೀವ್ರ ಉಸಿರಾಟದ ಕಾಯಿಲೆ (SARI) ಹೊಂದಿರುವವರಿಗೆ ಕಡ್ಡಾಯವಾದ ಕೋವಿಡ್ -19 ಪರೀಕ್ಷೆಯನ್ನು ನಡೆಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ANI ವರದಿ ಮಾಡಿದೆ. ಪ್ರತಿದಿನ ಸುಮಾರು 2,000-3,000 ಜನರನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಒಳಾಂಗಣ, ಮುಚ್ಚಿದ ಮತ್ತು ಹವಾನಿಯಂತ್ರಿತ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಸಲಹೆಯನ್ನು ನೀಡಲಾಗಿದೆ. ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಅವು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತೇವೆ. ಕೋವಿಡ್‌ಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಹಾಸಿಗೆಗಳನ್ನು ಕಾಯ್ದಿರಿಸಲು ನಾವು ನಿರ್ಧರಿಸಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆ ಕಾಯ್ದಿರಿಸುವಂತೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಹರಿಯಾಣ: ಕೋವಿಡ್ -19 ಅನ್ನು ನಿಭಾಯಿಸಲು ಬಂದಾಗ ಕೇಂದ್ರ ಸರ್ಕಾರ ನೀಡುವ ಎಲ್ಲಾ ಸೂಚನೆಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಕೋವಿಡ್‌ನ ಹಿಂದಿನ ಮೂರು ಅಲೆಗಳಲ್ಲಿ ನಾವು ನಮ್ಮನ್ನು ಉತ್ತಮವಾಗಿ ಸಜ್ಜುಗೊಳಿಸಿದ್ದೇವೆ. ನಾವು ಎಲ್ಲಾ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ಸೌಲಭ್ಯಗಳನ್ನು ಹೊಂದಿದ್ದೇವೆ ಜೊತೆಗೆ ಘಟಕಗಳ ಸಾಕಷ್ಟು ಆಮ್ಲಜನಕದ ಪೂರೈಕೆಯನ್ನು ಹೊಂದಿದ್ದೇವೆ. ಜನರು ಭಯಭೀತರಾಗುವ ಅಗತ್ಯವಿಲ್ಲ. ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸಚಿವರು ಹೇಳಿದ್ದಾರೆ
ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರೋಗ ಪತ್ತೆ ಹಚ್ಚಿದ ಮೇಲೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋವಿಡ್ ಪೀಡಿತ ದೇಶಗಳಿಂದ ಹಿಂದಿರುಗುವ ಜನರನ್ನು ಪರೀಕ್ಷಿಸಲಾಗುವುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. 14 ದಿನಗಳ ಕಾಲ ವಿದೇಶಿ ಪ್ರಯಾಣಿಕರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ ಮತ್ತು ಮಾಸ್ಕ್ ಧರಿಸಿ ಎಂದು ಸಿಎಂ ಜನರಿಗೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ: ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪರೀಕ್ಷೆ, ಟ್ರ್ಯಾಕ್, ಚಿಕಿತ್ಸೆ, ಲಸಿಕೆ ಮತ್ತು (ಖಾತ್ರಿಪಡಿಸಿಕೊಳ್ಳಲು) ಕೋವಿಡ್-19 ಸೂಕ್ತ ನಡವಳಿಕೆಯನ್ನು ಅನುಸರಿಸಲು ಜಿಲ್ಲೆಗಳನ್ನು ಕೇಳಲಾಗಿದೆ. ರಾಜ್ಯವು ಎಲ್ಲಾ ಕೋವಿಡ್-ಪಾಸಿಟಿವ್ ಮಾದರಿಗಳನ್ನು ಮುಂಬೈ ಮತ್ತು ಪುಣೆಯ ಪ್ರಯೋಗಾಲಯಗಳಿಗೆ ಕಳುಹಿಸಲಿದೆ. ಅವುಗಳ ಫಲಿತಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಕೋವಿಡ್ ಮಾನದಂಡಗಳನ್ನು ನಿರ್ಧರಿಸುತ್ತದೆ. ಅಂದಹಾಗೆ ಈಗ ಸಾಮೂಹಿಕ ಪರೀಕ್ಷೆಯನ್ನು ನಡೆಸುವ ಯಾವುದೇ ಯೋಜನೆಗಳಿಲ್ಲ ಎಂದು ಅದು ಹೇಳಿದೆ.
ದೆಹಲಿ: ವೈರಸ್ ಸೋಂಕು ಮತ್ತೆ ಹರಡಿದರೆ ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸಲು ದೆಹಲಿ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕೋವಿಡ್ ರೋಗವನ್ನು ಪರಿಶೀಲಿಸಲು ದೆಹಲಿಯಲ್ಲಿ ಎನ್‌ಸಿಡಿಸಿ ಪರೀಕ್ಷೆಯ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ: ಚೀನಾ, ಜಪಾನ್, ಯುಎಸ್, ದಕ್ಷಿಣ ಕೊರಿಯಾ ಮತ್ತು ಬ್ರೆಜಿಲ್‌ನಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳ ಸ್ಫೋಟ ಮತ್ತು ನಾಲ್ಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಒಡಿಶಾ ಸರ್ಕಾರವು ಕೋವಿಡ್ -19 ನಿರ್ವಹಣೆಗಾಗಿ ಕಣ್ಗಾವಲು ಮತ್ತು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (ಡಬ್ಲ್ಯೂಜಿಎಸ್) ಗೆ ಸೂಚನೆಗಳನ್ನು ನೀಡಿದೆ. ಒಡಿಶಾ ಸೇರಿದಂತೆ ನಾಲ್ಕು ಭಾರತೀಯ ರಾಜ್ಯಗಳಲ್ಲಿ ಹೊಸ Omicron BF.7 ತಳಿ ಪತ್ತೆಯಾಗಿದೆ. ಭಾರತೀಯ SARS CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನೆಟ್‌ವರ್ಕ್ ಮೂಲಕ ರೂಪಾಂತರವನ್ನು ಪತ್ತೆಹಚ್ಚಲು ರೋಗದ ಕಣ್ಗಾವಲು ಮತ್ತು ಸಕಾರಾತ್ಮಕ ಪ್ರಕರಣಗಳ ಮಾದರಿಗಳ WGS ಅನ್ನು ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡಿತ್ ಹೇಳಿದ್ದಾರೆ.
ತೆಲಂಗಾಣ: ,ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ರಾಜ್ಯದ ಜನರು ಭಯಭೀತರಾಗಬೇಡಿ ಮತ್ತು ಎಚ್ಚರದಿಂದಿರಿ ಎಂದು ಹೇಳಿದ್ದಾರೆ. “ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆಯ ಅಗತ್ಯವಿದೆ. ಪ್ರತಿಯೊಬ್ಬರೂ ವೈಯಕ್ತಿಕ ನೈರ್ಮಲ್ಯವನ್ನು ಗಮನಿಸಲು ಸೂಚಿಸಲಾಗಿದೆ. ಕೋವಿಡ್ ಲಸಿಕೆ ತೆಗೆದುಕೊಳ್ಳದಿರುವವರು ತಕ್ಷಣ ಅದನ್ನು ತೆಗೆದುಕೊಳ್ಳಬೇಕು. ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು, ”ಎಂದು ಸಚಿವರು ಹೇಳಿದರು.
ಗೋವಾ: ವಿಶ್ವದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಕುರಿತು ಗೋವಾ ಸರ್ಕಾರವು ಶುಕ್ರವಾರ ವಿವಿಧ ಇಲಾಖೆಗಳ ಸಭೆಯನ್ನು ನಡೆಸಲಿದೆ. ಇದರಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರವಾಸಿ ಋತುವಿನ ಮಧ್ಯೆ ಸೋಂಕುಗಳ ಸಂಭವನೀಯ ಉಲ್ಬಣಕ್ಕೆ ಅದರ ಸಿದ್ಧತೆಯನ್ನು ಚರ್ಚಿಸಲಿದೆ. ಚೀನಾದಂತಹ ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಬಿಹಾರ: ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ರಾಜ್ಯ ಸರ್ಕಾರವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರತಿಪಾದಿಸಿದ್ದಾರೆ. ಕೊರೊನಾವೈರಸ್ ಹೊಸ ರೂಪಾಂತರದಿಂದ ರೋಗ ಹರಡದಂತೆ ತಡೆಗಟ್ಟಲು ರಾಜ್ಯವನ್ನು ಸಜ್ಜುಗೊಳಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಹೇಳಲಾಗಿದೆ. ಆಸ್ಪತ್ರೆಗಳು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಪರೀಕ್ಷೆ ಮತ್ತು ಲಸಿಕೆಯನ್ನು ನೀಡಗುತ್ತಿದೆ. ವೈದ್ಯಕೀಯ ಸಂಸ್ಥೆಗಳು ಔಷಧಿಗಳು ಮತ್ತು ಸಾಕಷ್ಟು ಆಮ್ಲಜನಕ ಪೂರೈಕೆಯೊಂದಿಗೆ ಸಜ್ಜುಗೊಂಡಿವೆ. ಕೋವಿಡ್ -19 ಹರಡುವುದನ್ನು ತಡೆಯಲು ಜನರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹೇಳಿದರು. ಏತನ್ಮಧ್ಯೆ, ಮದುವೆಗಳು, ರಾಜಕೀಯ ಅಥವಾ ಸಾಮಾಜಿಕ ಸಭೆಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣದಂತಹ ಸಾರ್ವಜನಿಕ ಸಭೆಗಳನ್ನು ತಪ್ಪಿಸುವಂತೆ ಭಾರತೀಯ ವೈದ್ಯಕೀಯ ಸಂಘವು ನಾಗರಿಕರಿಗೆ ಸಲಹೆ ನೀಡಿದೆ.
“ಸನ್ನಿಹಿತವಾಗಿರುವ ಕೋವಿಡ್ ಬಿಕ್ಕಟ್ಟಿನಿಂದ ಹೊರಬರಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಅವರು ನಾಗರಿಕರನ್ನು ಕೇಳಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Fri, 23 December 22