ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಕಾಂಗ್ರೆಸ್‌ಗೆ ಸಲಹೆ ನೀಡುತ್ತಿದ್ದಾರೆ; ಮಲ್ಲಿಕಾರ್ಜುನ ಖರ್ಗೆ ಆರೋಪ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಭಾಷಣ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ರಕ್ಷಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿರುವ ಭಾಷಣದಲ್ಲಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಂಘ ಪರಿವಾರವು ಬ್ರಿಟಿಷರ ಒಡೆದು ಆಳುವ ನೀತಿಯನ್ನು ತನ್ನ ಲಾಭಕ್ಕಾಗಿ ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ. ಇಂದಿನ ಆಡಳಿತಗಾರರು ಒಡೆದು ಆಳುವ ಚಿಂತನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ.
ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ನಮಗೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿತು ಎಂದು ಕೆಲವರು ಅಪಪ್ರಚಾರ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಲಕ್ಷಗಟ್ಟಲೆ ಜನರು ತ್ಯಾಗ- ಬಲಿದಾನ ಮಾಡಿದರು, ಮನೆಗಳನ್ನು ತೊರೆದರು ಮತ್ತು ಶ್ರೀಮಂತ ಕುಟುಂಬದವರೂ ಜೈಲು ವಾಸ ಅನುಭವಿಸಿದರು ಎಂಬುದು ಸತ್ಯ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಈಗ ಕಾಂಗ್ರೆಸ್‌ಗೆ ಸಲಹೆ ನೀಡುತ್ತಾರೆ ಮತ್ತು ಯಾವುದೇ ಕೊಡುಗೆಯಿಲ್ಲದೆ ಹುತಾತ್ಮರ ಪಟ್ಟಿಯಲ್ಲಿ ಸೇರಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Indian Flag: ಭಾರತದ ತ್ರಿವರ್ಣ ಧ್ವಜ ರೂಪುಗೊಂಡಿದ್ದೇ ಒಂದು ರೋಚಕ ಕತೆ!
ನರೇಂದ್ರ ಮೋದಿ ಸರ್ಕಾರವು 2021ರಿಂದ ದೇಶ ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಆಗಸ್ಟ್ 14 ಅನ್ನು ವಿಭಜನೆಯ ಭೀಕರ ಸಂಸ್ಮರಣಾ ದಿನವನ್ನಾಗಿ ಆಚರಿಸುತ್ತಿದೆ.
Watch: On Independence Day celebrations, Congress President Mallikarjun Kharge says, “…Some people today claim that independence was easily achieved, but many sacrificed their lives. Today’s rulers are spreading hatred, and their divisive politics have split the nation in… pic.twitter.com/oXMCcoOSIX
— IANS (@ians_india) August 15, 2024
“ಅವರ ದ್ವೇಷ ತುಂಬಿದ ರಾಜಕಾರಣ ದೇಶ ವಿಭಜನೆಗೆ ಕಾರಣವಾಯಿತು ಎಂಬುದು ಐತಿಹಾಸಿಕ ಸತ್ಯ. ಅವರಿಂದಲೇ ವಿಭಜನೆಯಾಯಿತು. ತಮ್ಮ ಅನುಕೂಲಕ್ಕಾಗಿ ಸಂಘ ಪರಿವಾರದವರು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಪ್ರಚಾರ ಮಾಡಿದ್ದಾರೆ” ಎಂದು ಮಲ್ಲಿಖಾರ್ಜುನ ಖರ್ಗೆ ಆರೋಪಿಸಿದರು. ಸರ್ಕಾರದ ‘ಹರ್ ಘರ್ ತಿರಂಗ’ ಅಭಿಯಾನವನ್ನು ತರಾಟೆಗೆ ತೆಗೆದುಕೊಂಡ ಅವರು, 60 ವರ್ಷಗಳ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು. ಕಚೇರಿ ಮೇಲೆ ಧ್ವಜಾರೋಹಣ ಮಾಡುವುದನ್ನು ತಪ್ಪಿಸುತ್ತಿದ್ದವರು ಈಗ ‘ಹರ್ ಘರ್ ತಿರಂಗ’ ಎಂದು ಮಾತನಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಪದೇ ಪದೇ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ: ಮೋದಿ
ದಶಕಗಳ ಹೋರಾಟ ಮತ್ತು ತ್ಯಾಗದ ನಂತರ ಗುಲಾಮಗಿರಿಯ ಸರಪಳಿಗಳು ಮುರಿದು ಭಾರತ ಸ್ವತಂತ್ರವಾಯಿತು. ಆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೂ ನಮನ. ಸರೋಜಿನಿ ನಾಯ್ಡು ಮತ್ತು ಅವರಂತಹ ಅಸಂಖ್ಯಾತ ವೀರರು ರಾಷ್ಟ್ರ ನಿರ್ಮಾಣದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ ಎಂದು ಖರ್ಗೆ ಹೇಳಿದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ದೇಶವು ಜನರ ಉತ್ಸಾಹ ಮತ್ತು ತ್ರಿವರ್ಣ ಧ್ವಜದ ವೈಭವವನ್ನು ನೋಡಿದೆ ಎಂದು ಖರ್ಗೆ ಹೇಳಿದರು.
ಮೋದಿ ಸರ್ಕಾರ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ ಆದರೆ ಜನರು ಇನ್ನೂ ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ನಲುಗುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿ ಕಾರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ