ಸಣ್ಣ ಜಗಳ, ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತ ಸಹೋದರರು
ಜಾರ್ಖಂಡ್‌ನ ಗುಮ್ಲಾದಲ್ಲಿ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನು ಹತ್ಯೆ ಮಾಡಿ, ಶವಗಳನ್ನು ಪಕ್ಕದ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿದ್ದಾರೆ. ಸಣ್ಣ ಜಗಳವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಆಂಬ್ಯುಲೆನ್ಸ್ ಚಾಲಕನಾದ ಶಿವಶಂಕರ್ ಸಾಹು, ತಮ್ಮ ವಾಹನವನ್ನೇ ಶವ ಸಾಗಿಸಲು ಬಳಸಿದ್ದಾನೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಜಾರ್ಖಂಡ್, ನವೆಂಬರ್ 27: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನು ಹತ್ಯೆ ಮಾಡಿ, ಮೃತದೇಹಗಳನ್ನು ಪಕ್ಕದ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರ ನಡುವಿನ ದೀರ್ಘಕಾಲದ ಮನಸ್ತಾಪವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಬ್ಯುಲೆನ್ಸ್‌ನಲ್ಲಿ ಶವ ಸಾಗಿಸಿ ಕಾಡಿನಲ್ಲಿ ಹೂತು ಹಾಕಿದರು ಆರೋಪಿಗಳನ್ನು ಶಿವಶಂಕರ್ ಸಾಹು ಮತ್ತು ಅವರ ಸಹೋದರ ನವೀನ್ ಸಾಹು ಎಂದು ಗುರುತಿಸಲಾಗಿದೆ. ಶಿವಶಂಕರ್ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರೂ ತಮ್ಮ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಅವರನ್ನು ಸೋಮವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮೃತದೇಹಗಳನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಿ, ನೆರೆಯ ಸಿಮ್ಡೆಗಾ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಗರ್ಭಿಣಿ ಮಗಳನ್ನೇ ಕೊಂದ ಪೋಷಕರು, ಇರಾನ್‌ನಲ್ಲಿ ಮರ್ಯಾದಾ ಹತ್ಯೆ
ಪತ್ನಿಯರ ನಡುವಿನ ಮನಸ್ತಾಪವೇ ಕಾರಣ? ಪೊಲೀಸರ ಪ್ರಕಾರ, ಇಬ್ಬರು ಮಹಿಳೆಯರ ನಡುವೆ ಬಹಳ ದಿನಗಳಿಂದ ವಿವಾದವಿತ್ತು. ಈ ವಿಚಾರದಿಂದ ಸಹೋದರರು ಕೋಪಗೊಂಡಿದ್ದರು ಎನ್ನಲಾಗಿದೆ. ಆದರೆ, ಹತ್ಯೆ ನಡೆದ ಎರಡು ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರು ಪರಸ್ಪರ ರಾಜಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮಹಿಳೆಯರ ಕುಟುಂಬದವರು ಅವರೊಂದಿಗೆ ಮಾತನಾಡಿದ್ದರು. ಆಗ ಎಲ್ಲವೂ ಸಹಜವಾಗಿಯೇ ಇತ್ತು ಎಂದು ಗುಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಸ್ ಬಿನ್ ಜಮಾ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಬಯಲಾದ ಘಟನೆ ಮಹಿಳೆಯರು ಕಾಣೆಯಾಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ, ಆರಂಭದಲ್ಲಿ ಸಹೋದರರು ತಮ್ಮ ಪತ್ನಿಯರು ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋಗಿದ್ದಾರೆ ಎಂದು ಹೇಳಿದ್ದರು. ಆದರೆ, ನಿರಂತರ ವಿಚಾರಣೆಯ ಬಳಿಕ ಇಬ್ಬರೂ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಮತ್ತು ಮೃತದೇಹಗಳನ್ನು ಸಾಗಿಸಲು ಬಳಸಿದ ಆಂಬ್ಯುಲೆನ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಇಬ್ಬರು ಸಹೋದರರ ಜೊತೆಗೆ ಅವರ ತಂದೆ ಸಮೇಶ್ವರ ಸಾಹು ಮತ್ತು ತಾಯಿ ತಿಲೇಶ್ವರಿ ದೇವಿಯನ್ನೂ ಬಂಧಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಹತ್ಯೆಯ ನಿಖರ ಕಾರಣ ಮತ್ತು ಇತರರ ಪಾತ್ರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




