Kavach: ಹೈಸ್ಪೀಡ್ನಲ್ಲಿ 2 ರೈಲುಗಳ ಮುಖಾಮುಖಿಯಾದರೂ ತೊಂದರೆಯಿಲ್ಲ; ಕವಚ್ ತಂತ್ರಜ್ಞಾನದಿಂದ ರೈಲು ಪ್ರಯಾಣವೀಗ ಇನ್ನೂ ಸೇಫ್!
Indian Railways: ನಿಗದಿತ ದೂರದಲ್ಲಿ ಅದೇ ಮಾರ್ಗದಲ್ಲಿ ಮತ್ತೊಂದು ರೈಲನ್ನು ಗಮನಿಸಿದಾಗ ರೈಲನ್ನು ಸ್ವಯಂಚಾಲಿತವಾಗಿ ನಿಲುಗಡೆಗೆ ತರಲು ಕವಚವನ್ನು ವಿನ್ಯಾಸಗೊಳಿಸಲಾಗಿದೆ. ಈ ರಕ್ಷಾ ಕವಚದ ಪರಿಣಾಮವಾಗಿ ರೈಲುಗಳು ಡಿಕ್ಕಿಯಾಗುವುದಿಲ್ಲ.
ನವದೆಹಲಿ: ಇಂದು ಸಿಕಂದರಾಬಾದ್‌ನಲ್ಲಿ ಎರಡು ರೈಲುಗಳು ಪೂರ್ಣ ವೇಗದಲ್ಲಿ ಒಂದಕ್ಕೊಂದು ಮುಖಾಮುಖಿಯಾಗಿ ಚಲಿಸಲಿವೆ. ಅವುಗಳಲ್ಲಿ ಒಂದು ರೈಲಿನಲ್ಲಿ ರೈಲ್ವೇ ಸಚಿವರು (Railway Minister Ashwini Vaishnaw) ಮತ್ತು ಇನ್ನೊಂದು ರೈಲ್ವೇ ಮಂಡಳಿಯ ಅಧ್ಯಕ್ಷರು ಪ್ರಯಾಣಿಸಲಿದ್ದಾರೆ. ಎದುರುಬದುರಾಗಿ ಹೋದರೂ ಆ ಎರಡು ರೈಲುಗಳು ಡಿಕ್ಕಿಯಾಗುವುದಿಲ್ಲ. ಈ ರೀತಿಯ ವಿಶೇಷವಾದ ರಕ್ಷಣಾ ತಂತ್ರಜ್ಞಾನವನ್ನು ಭಾರತೀಯ ರೈಲ್ವೆ ಇಲಾಖೆ ಅಳವಡಿಸಿದ್ದು, ಅದಕ್ಕೆ ‘ಕವಚ’ (Kavach) ಎಂದು ಹೆಸರಿಡಲಾಗಿದೆ. ಇದು ವಿಶ್ವದ ಅತ್ಯಂತ ಅಗ್ಗದ ಸ್ವಯಂಚಾಲಿತ ರೈಲು ಘರ್ಷಣೆ ರಕ್ಷಣೆ ವ್ಯವಸ್ಥೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಭಾರತೀಯ ರೈಲ್ವೆ ಇಲಾಖೆಯ ಪಾಲಿಗೆ ಐತಿಹಾಸಿಕ ದಿನವಾಗಲಿದೆ.
“ಶೂನ್ಯ ಅಪಘಾತಗಳ” (ಜೀರೋ ಆ್ಯಕ್ಸಿಡೆಂಟ್) ಗುರಿಯನ್ನು ಸಾಧಿಸಲು ಭಾರತೀಯ ರೈಲ್ವೆಗೆ ಸಹಾಯ ಮಾಡಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ನಿಗದಿತ ದೂರದಲ್ಲಿ ಅದೇ ಮಾರ್ಗದಲ್ಲಿ ಮತ್ತೊಂದು ರೈಲನ್ನು ಗಮನಿಸಿದಾಗ ರೈಲನ್ನು ಸ್ವಯಂಚಾಲಿತವಾಗಿ ನಿಲುಗಡೆಗೆ ತರಲು ಕವಚವನ್ನು ವಿನ್ಯಾಸಗೊಳಿಸಲಾಗಿದೆ. ಈ ರಕ್ಷಾ ಕವಚದ ಪರಿಣಾಮವಾಗಿ ರೈಲುಗಳು ಡಿಕ್ಕಿಯಾಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಖುದ್ದು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಈ ಕುರಿತು ಟ್ವೀಟ್ ಮಾಡಿದ್ದು, ತಾವು ಕವಚ್- ಆಟೋಮ್ಯಾಟಿಕ್ ರೈಲು ಸುರಕ್ಷತೆಯನ್ನು ಹೊಂದಿದ ರೈಲಿನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
On #NationalSafetyDay.. heading for LIVE testing of Kavach- automatic train protection technology. pic.twitter.com/M76DUBfcux
— Ashwini Vaishnaw (@AshwiniVaishnaw) March 4, 2022
ಈ ಕುರಿತು ಹಲವು ವರ್ಷಗಳ ಸಂಶೋಧನೆ ನಡೆಸಲಾಗಿತ್ತು. ಅದರ ಫಲವಾಗಿ ಇದೀಗ ಕವಚವನ್ನು ಲೋಕಾರ್ಪಣೆ ಮಾಡಲಾಗಿದೆ. ರೆಡ್ ಸಿಗ್ನಲ್‌ನ “ಜಂಪಿಂಗ್” ಅಥವಾ ಯಾವುದೇ ದೋಷವನ್ನು ಡಿಜಿಟಲ್ ಸಿಸ್ಟಮ್ ಗಮನಿಸಿದಾಗ ರೈಲುಗಳು ತಾವಾಗಿಯೇ ನಿಲ್ಲುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಪ್ರತಿ ಕಿಲೋಮೀಟರ್‌ಗೆ ಕಾರ್ಯನಿರ್ವಹಿಸಲು 50 ಲಕ್ಷ ರೂ. ವೆಚ್ಚವಾಗಲಿದೆ, ವಿಶ್ವಾದ್ಯಂತ ಸುಮಾರು 2 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದರು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಿಕಂದರಾಬಾದ್‌ನಲ್ಲಿ ಸನತ್‌ನಗರ-ಶಂಕರಪಲ್ಲಿ ವಿಭಾಗದ ವ್ಯವಸ್ಥೆಯ ಪ್ರಯೋಗದ ಭಾಗವಾಗಲಿದ್ದಾರೆ.
ಆತ್ಮನಿರ್ಭರ್ ಭಾರತ್ ಉಪಕ್ರಮದ ಭಾಗವಾಗಿ 2022ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿಮೀ ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ‘ಕವಚ್’ ಅಡಿಯಲ್ಲಿ ತರಲು ಯೋಜಿಸಲಾಗಿದೆ.
Indigenous train collision protection system ‘Kavach’ to be tested with Railway Minister on board.@EconomicTimes @AshwiniVaishnawhttps://t.co/qlKtZzdUQp
— South Western Railway (@SWRRLY) March 3, 2022
ಈ ತಂತ್ರಜ್ಞಾನವು ಝೀರೋ ಆಕ್ಸಿಡೆಂಟ್ ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯ ಪ್ರಕಾರ ರೆಡ್ ಸಿಗ್ನಲ್ ದಾಟಿದ ತಕ್ಷಣ ಸ್ವಯಂಚಾಲಿತವಾಗಿ ರೈಲಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ. ಹೀಗಾದಾಗ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೈಲುಗಳು ನಿಲ್ಲುತ್ತವೆ. ಇದಲ್ಲದೆ, ರಕ್ಷಾಕವಚವು ಹಿಂದಿನಿಂದ ಬರುವ ರೈಲನ್ನು ಕೂಡ ರಕ್ಷಿಸುತ್ತದೆ.
ಅಲ್ಲದೆ, ರೈಲು ಚಾಲಕನಿಂದ ಯಾವುದೇ ಲೋಪ ಉಂಟಾದರೆ ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ. ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ ಒಳಗೆ ಅಳವಡಿಸಲಾಗುವುದು. ಜಿಪಿಎಸ್, ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ: Bengaluru Metro: ಮೆಟ್ರೋ ರೈಲು ಬಳಕೆಯಿಂದ ಕಾರ್ಬನ್ ಎಮಿಷನ್ ಕಡಿಮೆ; ಗಾಳಿಯ ಗುಣಮಟ್ಟ ಸುಧಾರಣೆ- ಅಧ್ಯಯನ ವರದಿ
IRCTC Update ಬುಧವಾರ 350 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ
Published On - 1:33 pm, Fri, 4 March 22