AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧರ ರಾಜ್ಯವಾಗುತ್ತಿದೆ ದೇವರನಾಡು; ಹಿರಿಯ ನಾಗರಿಕರ ಆರೈಕೆಗೆ ಹೊಸ ಕಾನೂನು ತರಲು ಮುಂದಾದ ಕೇರಳ ಸರ್ಕಾರ

ಕೇರಳದಲ್ಲಿ ಹಿರಿಯ ನಾಗರಿಕರ ಆರೈಕೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನಿಯಂತ್ರಿಸಲು ನೂತನ ಕಾಯ್ದೆಯೊಂದರ ಕರಡು ಸಿದ್ಧಪಡಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ವೃದ್ಧಾಶ್ರಮಗಳನ್ನು ಯಾರು ನಡೆಸಬಹುದು, ಅಲ್ಲಿ ಕೆಲಸ ಮಾಡಲು ಯಾರು ಅರ್ಹರು ಮತ್ತು ಸಂಸ್ಥೆಗಳು ಹಾಗೂ ಸಿಬ್ಬಂದಿ ಯಾವ ಮಾನದಂಡಗಳನ್ನು ಪಾಲಿಸಬೇಕು ಎಂಬುದನ್ನು ಈ ಕಾನೂನು ನಿರ್ಧರಿಸಲಿದೆ. ಏನು ಈ ಹೊಸ ಕಾನೂನು? ಇದರಿಂದ ಏನೆಲ್ಲ ಬದಲಾವಣೆಯಾಗಲಿದೆ? ಎಂಬ ಮಾಹಿತಿ ಇಲ್ಲಿದೆ.

ವೃದ್ಧರ ರಾಜ್ಯವಾಗುತ್ತಿದೆ ದೇವರನಾಡು; ಹಿರಿಯ ನಾಗರಿಕರ ಆರೈಕೆಗೆ ಹೊಸ ಕಾನೂನು ತರಲು ಮುಂದಾದ ಕೇರಳ ಸರ್ಕಾರ
ಕೇರಳದ ಮುಖ್ಯಮಂತ್ರಿ ವಿ. ಡಿ. ಸತೀಶನ್Image Credit source: PTI
ಸುಷ್ಮಾ ಚಕ್ರೆ
|

Updated on: Sep 16, 2026 | 4:04 PM

Share

ತಿರುವನಂತಪುರಂ, ಸೆಪ್ಟೆಂಬರ್ 16: ಒಂದು ಕಾಲದಲ್ಲಿ ಅತಿ ವಿದ್ಯಾವಂತರ ರಾಜ್ಯವೆಂದು ಕರೆಸಿಕೊಳ್ಳುತ್ತಿದ್ದ ಕೇರಳ ಇದೀಗ ದೇಶದಲ್ಲೇ ಅತಿ ಹೆಚ್ಚು ವೃದ್ಧಾಪ್ಯ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವೆಂದು ಗುರುತಿಸಲ್ಪಡುತ್ತಿದೆ. ದೇವರ ನಾಡೆಂದು ಕರೆಸಿಕೊಳ್ಳುವ ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಯುವಕ-ಯುವತಿಯರ ಸಂಖ್ಯೆ ಭಾರೀ ಇಳಿಮುಖವಾಗುತ್ತಿದೆ. ಹೀಗಾಗಿ, ಕೇರಳ ಸರ್ಕಾರವು, ಹಿರಿಯ ನಾಗರಿಕರ ಹಕ್ಕುಗಳು, ಆರೋಗ್ಯ, ಭದ್ರತೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸಲು ‘ಕೇರಳ ರಾಜ್ಯ ಹಿರಿಯ ನಾಗರಿಕರ (ಆರೈಕೆ ಮತ್ತು ಹಕ್ಕುಗಳ ರಕ್ಷಣೆ) ವಿಧೇಯಕ 2026’ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತಿದೆ. ಏನಿದು ಹೊಸ ಕಾನೂನು? ಇದರಿಂದ ಏನೆಲ್ಲ ಬದಲಾವಣೆಯಾಗಲಿದೆ? ಎಂಬ ಮಾಹಿತಿ ಇಲ್ಲಿದೆ.

ತಿರುವನಂತಪುರಂನಲ್ಲಿ ಕೇರಳದ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ‘ಕೇರಳ ರಾಜ್ಯ ಹಿರಿಯ ನಾಗರಿಕರ (ಆರೈಕೆ ಮತ್ತು ಹಕ್ಕುಗಳ ರಕ್ಷಣೆ) ವಿಧೇಯಕ 2026’ ಮತ್ತು ‘ವೃದ್ಧರ ನೀತಿ’ಯನ್ನು ಪರಾಮರ್ಶಿಸಿ, ಶೀಘ್ರವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೇರಳದ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷ ಮೇಲ್ಪಟ್ಟವರ ಪ್ರಮಾಣ ಪ್ರಸ್ತುತ ಶೇ. 18.7ರಷ್ಟಿದ್ದು, ಇದು ಜಾಗತಿಕ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಹೊಸ ಕಾಯ್ದೆಯು ಅತ್ಯಂತ ಮಹತ್ವ ಪಡೆದುಕೊಂಡಿದೆ.

ಪ್ರಸ್ತುತ ಈ ಕರಡು ಮಸೂದೆ ಹಾಗೂ ನೀತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ. ಆದರೆ, ಸರ್ಕಾರ ಇಂತಹ ಕಾನೂನನ್ನು ತರಲು ಕಾರಣಗಳೇನು ಎಂಬುದರ ವಿವರ ಇಲ್ಲಿದೆ.

ಇದನ್ನೂ ಓದಿ: ‘ಕೊನೆಯ ಮುತ್ತು’; ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಬೀಳ್ಕೊಡುಗೆ ನೀಡಿದ ಕೇರಳದ ಚಾಲಕ

ಅಂಕಿ-ಅಂಶಗಳ ಪ್ರಕಾರ, 2011 ಮತ್ತು 2036ರ ನಡುವೆ ರಾಜ್ಯದ 60 ವರ್ಷ ದಾಟಿದವರ ಸಂಖ್ಯೆ 42 ಲಕ್ಷದಿಂದ 84 ಲಕ್ಷಕ್ಕೆ (ಎರಡರಷ್ಟು) ತಲುಪಲಿದೆ. ಭಾರತವು 2030ರ ವೇಳೆಗೆ ತಲುಪಲಿರುವ ವೃದ್ಧಾಪ್ಯದ ಪ್ರಮಾಣವನ್ನು ಕೇರಳವು 2011ರಲ್ಲೇ ತಲುಪಿತ್ತು. ಈ ಲೆಕ್ಕಾಚಾರದ ಪ್ರಕಾರ, ದೇಶದ ಇತರ ರಾಜ್ಯಗಳಿಗಿಂತ ಕೇರಳವು ವೃದ್ಧಾಪ್ಯದ ವಿಷಯದಲ್ಲಿ ಸುಮಾರು 2 ದಶಕಗಳಷ್ಟು ಮುಂದಿದೆ.

ಕೇರಳ, ತಮಿಳುನಾಡಿನಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ:

ಜನವರಿ ತಿಂಗಳಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಾಜ್ಯ ಬಜೆಟ್‌ಗಳ ಕುರಿತ ತನ್ನ ವಾರ್ಷಿಕ ಅಧ್ಯಯನದಲ್ಲಿ ಪ್ರತ್ಯೇಕ ಅಧ್ಯಾಯವನ್ನು ಮೀಸಲಿಟ್ಟು, ರಾಜ್ಯಗಳನ್ನು ವಯಸ್ಸಿನ ರಚನೆಯ ಆಧಾರದ ಮೇಲೆ ವಿಂಗಡಿಸಿತ್ತು. ಯಾವುದೇ ರಾಜ್ಯದಲ್ಲಿ ಶೇ. 15 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಅದನ್ನು “ಏಜಿಂಗ್” (ವೃದ್ಧಾಪ್ಯ ಹೊಂದುತ್ತಿರುವ) ರಾಜ್ಯ ಎಂದು ಪರಿಗಣಿಸಲಾಗುತ್ತದೆ. 2016ರಲ್ಲಿ ಭಾರತದ ಯಾವ ರಾಜ್ಯವೂ ಈ ವರ್ಗಕ್ಕೆ ಸೇರಿರಲಿಲ್ಲ. ಆದರೆ 2016ರ ವೇಳೆಗೆ ಕೇರಳ ಮತ್ತು ತಮಿಳುನಾಡು ಈ ವರ್ಗವನ್ನು ತಲುಪಿವೆ.

2036ರ ವೇಳೆಗೆ ಭಾರತದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಈ ಪಟ್ಟಿಗೆ ಸೇರಲಿದ್ದು, ಯುವ ರಾಜ್ಯಗಳ ಪಟ್ಟಿಯಲ್ಲಿ ಯಾವುದೂ ಉಳಿಯುವುದಿಲ್ಲ. ಆರ್‌ಬಿಐ ಕೇರಳವನ್ನು ಈ ಬದಲಾವಣೆಯ ಮುಂಚೂಣಿಯಲ್ಲಿದೆ ಎಂದು ಗುರುತಿಸಿದೆ. ಕೇರಳದ ದುಡಿಯುವ ವಯಸ್ಸಿನ ಜನಸಂಖ್ಯೆಯು 2026ರಲ್ಲಿ ಶೇ. 62ರಷ್ಟಿದ್ದು, 2036ರ ವೇಳೆಗೆ ಶೇ. 59.5ಕ್ಕೆ ಕುಸಿಯಲಿದೆ. ದುಡಿಯುವ ವರ್ಗದ ಪ್ರಮಾಣ ಶೇ. 60ಕ್ಕಿಂತ ಕಡಿಮೆಯಾಗುವ ದೇಶದ ಏಕೈಕ ರಾಜ್ಯ ಕೇರಳವಾಗಲಿದೆ. ಇದರರ್ಥ ದುಡಿಯುವವರ ಸಂಖ್ಯೆ ಕಡಿಮೆಯಾಗಿ, ಅವಲಂಬಿತರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸರ್ಕಾರದ ಮೇಲಿರುವ ಜವಾಬ್ದಾರಿಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹವು ನಿಧಾನವಾಗಿ ಬೆಳೆಯುತ್ತದೆ.

ಹೊಸ ಕಾಯ್ದೆಯ ಮುಖ್ಯಾಂಶಗಳು:

ಆರೈಕೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿಯಮ:

ವೃದ್ಧಾಶ್ರಮಗಳು, ಹಗಲು ಮನೆಗಳು (ಪಕಲ್ ವೀಡು), ಅಸಿಸ್ಟೆಡ್ ಲಿವಿಂಗ್ ಸೆಂಟರ್‌ಗಳು ಹಾಗೂ ಹೋಮ್ ಕೇರ್ ಏಜೆನ್ಸಿಗಳ ಸೇವಾ ಗುಣಮಟ್ಟ, ಭದ್ರತೆ ಮತ್ತು ಹೊಣೆಗಾರಿಕೆಯನ್ನು ಕಡ್ಡಾಯಗೊಳಿಸಲು ಈ ಕಾಯ್ದೆ ಸ್ಪಷ್ಟ ಮಾನದಂಡಗಳನ್ನು ರೂಪಿಸಲಿದೆ.

ಆರೈಕೆದಾರರಿಗೆ ವೃತ್ತಿಪರ ಪ್ರಮಾಣೀಕರಣ:

ವೃದ್ಧರ ಆರೈಕೆ ಮಾಡುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ, ಹಿನ್ನೆಲೆ ಪರಿಶೀಲನೆ ನಡೆಸಿ, ರಾಜ್ಯಮಟ್ಟದ ನೊಂದಾಯಿತ ಪ್ರಮಾಣಪತ್ರ ನೀಡಲು ‘ಕೇರಳ ಜೆರಿಯಾಟ್ರಿಕ್ ಕೇರ್ ಸರ್ಟಿಫಿಕೇಶನ್ ಫ್ರೇಮ್‌ವರ್ಕ್’ ಜಾರಿಗೆ ತರಲಾಗುವುದು. ಇದರಿಂದ ಗುಣಮಟ್ಟದ ಆರೈಕೆ ಸಿಗುವುದಲ್ಲದೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ: ಬೇಡವಾಯ್ತು ಹೆತ್ತ ಕರುಳು: 5 ಮಕ್ಕಳಿದ್ರೂ ತಾಯಿಗೆ ಸಿಗದ ಆಸರೆ; ವೃದ್ಧಾಶ್ರಮಕ್ಕೆ ದಾಖಲು

ಕುಟುಂಬದಲ್ಲೇ ನೆಮ್ಮದಿಯ ಜೀವನಕ್ಕೆ ಆದ್ಯತೆ:

ಹಿರಿಯ ನಾಗರಿಕರು ತಮ್ಮ ಸ್ವಂತ ಮನೆ ಹಾಗೂ ಕುಟುಂಬಗಳಲ್ಲೇ ಸಾಧ್ಯವಾದಷ್ಟು ಕಾಲ ಸುರಕ್ಷಿತವಾಗಿ ವಾಸಿಸಲು ಅಗತ್ಯವಿರುವ ಸಾಮಾಜಿಕ ಮತ್ತು ಆರೋಗ್ಯ ಬೆಂಬಲ ವ್ಯವಸ್ಥೆಯನ್ನು ಕಲ್ಪಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.

ಡಿಜಿಟಲ್ ಮತ್ತು ಆರ್ಥಿಕ ವಂಚನೆಗಳಿಂದ ರಕ್ಷಣೆ:

ವೃದ್ಧರನ್ನು ಗುರಿಯಾಗಿಸಿಕೊಂಡು ನಡೆಯುವ ಡಿಜಿಟಲ್ ಹಾಗೂ ಆರ್ಥಿಕ ವಂಚನೆಗಳಿಂದ ಅವರನ್ನು ರಕ್ಷಿಸಲು ಮತ್ತು ತಕ್ಷಣದ ಕುಂದುಕೊರತೆ ನಿವಾರಣೆಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗುವುದು.

ಸಿಲ್ವರ್ ಎಕಾನಮಿ ಅಭಿವೃದ್ಧಿ:

ಹಿರಿಯರ ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಆರೋಗ್ಯ ಸೇವೆ, ತಂತ್ರಜ್ಞಾನ ಹಾಗೂ ವೃದ್ಧಸ್ನೇಹಿ ಉತ್ಪನ್ನಗಳ ಕ್ಷೇತ್ರವನ್ನು ಉತ್ತೇಜಿಸಿ ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರ ಯೋಜಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’