ವೈದ್ಯಕೀಯ ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ; ಕಾಲೇಜಿನ ಡೀನ್​​​ರನ್ನು ಕೆಲಸದಿಂದ ತೆಗೆದುಹಾಕಿದ ತಮಿಳುನಾಡು ಸರ್ಕಾರ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ತಮಿಳುನಾಡು ಆರೋಗ್ಯ ಸಚಿವ, ಮಾ ಸುಬ್ರಹ್ಮಣಿಯನ್​, ವೈದ್ಯಕೀಯ ಕಾಲೇಜುಗಳು ದೀರ್ಘಕಾಲದಿಂದ ಪಾಲಿಸಿಕೊಂಡು ಬಂದಿದ್ದ ನೀತಿ, ಆಚರಣೆಗಳನ್ನು ಈಗ ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ; ಕಾಲೇಜಿನ ಡೀನ್​​​ರನ್ನು ಕೆಲಸದಿಂದ ತೆಗೆದುಹಾಕಿದ ತಮಿಳುನಾಡು ಸರ್ಕಾರ
ಮದುರೈ ಕಾಲೇಜು
Follow us
TV9 Web
| Updated By: Lakshmi Hegde

Updated on:May 02, 2022 | 10:39 AM

ಸಾಮಾನ್ಯವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್​​ನಲ್ಲಿ ಹಿಪ್ಪೊಕ್ರೆಟಿಕ್​ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಆದರೆ ಮಧುರೈ ಸರ್ಕಾರಿ ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ, ಮಹರ್ಷಿ ಚರಕ ಶಪಥ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ಅಲ್ಲಿನ ಡೀನ್​​ (ಕಾಲೇಜಿನ ಉಸ್ತುವಾರಿ)ರನ್ನು ತೆಗೆದುಹಾಕಲಾಗಿದೆ. ಡೀನ್​​ಗೆ ಈ ಕಾಲೇಜಿನಿಂದ ವರ್ಗಾವಣೆ ಮಾಡಲಾಗಿದ್ದು, ಎಲ್ಲಿಯೂ ಪೋಸ್ಟ್​ ಕೊಟ್ಟಿಲ್ಲ. ಈ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಈಗಾಗಲೇ ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಮೂಡಿಸಿಕೊಂಡಿರುವ ತಮಿಳುನಾಡು ಸರ್ಕಾರ ಈ ಘಟನೆಯಿಂದ ಕೆಂಡಾಮಂಡಲವಾಗಿದೆ. ಇದಕ್ಕೆ ಡೀನ್​ ಎ. ರತ್ನಾವೇಲ್​​ರನ್ನೇ ನೇರವಾಗಿ ಹೊಣೆ ಮಾಡಲಾಗಿದೆ. ವರ್ಗಾವಣೆ ಮಾಡಲಾಗಿದ್ದರೂ, ಎಲ್ಲಿಯೂ ಹುದ್ದೆ ನೀಡಿಲ್ಲ.

ಈ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಮತ್ತು ವಾಣಿಜ್ಯ ತೆರಿಗೆ ಸಚಿವ ಪಿ ಮೂರ್ತಿ ಪಾಲ್ಗೊಂಡಿದ್ದರು.  ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ತಮಿಳುನಾಡು ಆರೋಗ್ಯ ಸಚಿವ, ಮಾ ಸುಬ್ರಹ್ಮಣಿಯನ್​, ವೈದ್ಯಕೀಯ ಕಾಲೇಜುಗಳು ದೀರ್ಘಕಾಲದಿಂದ ಪಾಲಿಸಿಕೊಂಡು ಬಂದಿದ್ದ ನೀತಿ, ಆಚರಣೆಗಳನ್ನು ಈಗ ಉಲ್ಲಂಘಿಸಿದ್ದಾರೆ. ಸಾಂಪ್ರದಾಯಿಕವಾಗಿ ನಡೆದುಕೊಂಡುಬಂದಿರುವ ಹಿಪ್ಪೊಕ್ರೆಟಿಕ್​ ಪ್ರಮಾಣವಚನವನ್ನೇ ಸ್ವೀಕಾರ ಮಾಡಬೇಕು ಎಂದು ನಾವು ಎಲ್ಲ ಕಾಲೇಜುಗಳಿಗೆ ಪತ್ರವನ್ನೂ ಬರೆದಿದ್ದೇವೆ. ಇದನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ. ಅದಕ್ಕೆ ನಮ್ಮ ಸರ್ಕಾರ ಅವಕಾಶವನ್ನೂ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಈಗ ದೇಶದ ವೈದ್ಯಕೀಯ ಶಿಕ್ಷಣದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)  ಇತ್ತೀಚೆಗೆ ಹೀಗೊಂದು ಸಲಹೆ ನೀಡಿತ್ತು. ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿಪ್ಪೊಕ್ರೆಟಿಕ್​ ಪ್ರಮಾಣ ವಚನ ಬೋಧಿಸುವ ಬದಲು ಅವರು ಸಂಸ್ಕೃತದಲ್ಲಿ ಚಕರ್​ ಶಪಥ್​ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿತ್ತು. ಆದರೆ ಇದು ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಸರ್ಕಾರದ ಪ್ರಮುಖ ಅಜೆಂಡಾ ಆಗಿರುವ ಹಿಂದುತ್ವದ ಒಂದು ಭಾಗ ಎಂಬ ಆರೋಪ ಕೇಳಿಬಂದಿತ್ತು. ತಮಿಳುನಾಡು ಸರ್ಕಾರವೂ ಆಗ ಇದನ್ನು ವಿರೋಧಿಸಿದೆ. ತಮಿಳುನಾಡಿನಲ್ಲಿ ಈಗ ಎಂದಲ್ಲ, ಯಾವಾಗಲೂ ಅಲ್ಲಿ ಭಾಷೆ ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇರುತ್ತದೆ.  ಹಿಂದಿ, ಸಂಸ್ಕೃತ ಸೇರಿ ಇನ್ಯಾವುದೇ ಭಾಷೆಯನ್ನು ಹೇರಿಕೆ ಮಾಡುವುದನ್ನು ತಮಿಳಿಗರು ತೀವ್ರವಾಗಿ ಖಂಡಿಸಿ ಹೋರಾಟ ಮಾಡುತ್ತಾರೆ. ತಮಿಳುನಾಡಿನಲ್ಲಿ ತಮಿಳು ಶ್ರೇಷ್ಠ ಎಂಬುದು ಅವರ ಗಟ್ಟಿಯಾದ ವಾದ. ಆದರೆ ಈಗ ಸರ್ಕಾರಿ ಕಾಲೇಜೊಂದರಲ್ಲೇ, ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಚರಕ್​ ಶಪಥ್​ ಎಂಬುದು ಪುರಾಣ ಕಾಲದ ಚರಕ ಮಹರ್ಷಿಯ ಹೆಸರಿನ ಆಧಾರದಲ್ಲಿ ಬಂದಿದ್ದು. ಇದು ಸಂಸ್ಕೃತದಲ್ಲಿ ಇರುತ್ತದೆ. ಚರಕ್​ ಶಪಥಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ, ಚರಕ್​ ಶಪಥ ಎಂಬುದು ಒಂದು ಆಯ್ಕೆಯೇ ಹೊರತು ಕಡ್ಡಾಯವಲ್ಲ. ಯಾರಿಗೂ ನಾವು ಬಲವಂತ ಮಾಡುತ್ತಿಲ್ಲ ಎಂದಿದ್ದರು.

ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಹೊಸ ಪಕ್ಷ: ರಾಜಕೀಯ ಕಾರ್ಯತಂತ್ರ ನಿಪುಣನಿಂದ ಮಹತ್ವದ ನಿರ್ಧಾರ

Published On - 10:30 am, Mon, 2 May 22